ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳವಲದ ಮಡಿಲಲ್ಲಿ...

Last Updated 3 ಜೂನ್ 2019, 19:30 IST
ಅಕ್ಷರ ಗಾತ್ರ

‘ಬೆಳಗೊಳದ ಸಮೀಪದಲ್ಲಿ ನಿವೃತ್ತ ಅಧಿಕಾರಿಯೊಬ್ಬರು ತಮ್ಮ ಪಿಂಚಣಿ ಹಣದಲ್ಲಿ ಸುಸ್ಥಿರ ಕೃಷಿ ತೋಟ ಮಾಡುತ್ತಾ, ರಾಜ್ಯ, ಹೊರ ರಾಜ್ಯಗಳ ರೈತರಿಗೆ ಸುಸ್ಥಿರ ಕೃಷಿಯ ಪಾಠ ಹೇಳಿಕೊಡುತ್ತಿದ್ದಾರೆ, ಗೊತ್ತಾ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು. ಅವರ ಕುತೂಹಲದ ಪ್ರಶ್ನೆ, ನನ್ನನ್ನು ಬೆಳಗೊಳದ ಸಮೀಪವಿರುವ ‘ಬೆಳವಲ’ ಎಂಬ ಸಹಜ, ಸುಸ್ಥಿರ ಕೃಷಿ ತೋಟಕ್ಕೆ ತಂದು ನಿಲ್ಲಿಸಿತು.

ಮೈಸೂರು- ಕೆಆರ್‌ಎಸ್ ರಸ್ತೆಯಲ್ಲಿ ಬೆಳಗೊಳ ಗ್ರಾಮದ ಅಂಬೇಡ್ಕರ್ ನಗರ ಬಸ್‌ಸ್ಟಾಪ್‌ ಇದೆ. ಅಲ್ಲಿಂದ ಬಲಕ್ಕೆ ತಿರುವು ತೆಗೆದುಕೊಂಡು, ಅದೇ ರಸ್ತೆಯಲ್ಲಿ ಒಂದು ಕಿ.ಮೀ. ಕ್ರಮಿಸಿದರೆ ನೇರವಾಗಿ ಬೆಳವಲ ತೋಟ ಸಿಗುತ್ತದೆ. ನಾನು ಅದೇ ದಾರಿಯಲ್ಲಿ ಸಾಗುತ್ತಾ ತೋಟ ತಲುಪಿದಾಗ, ತೋಟದ ಮಾಲೀಕ ಡಾ.ಕೆ. ರಾಮಕೃಷ್ಣಪ್ಪ ಎದುರಾದರು. ಅವರು ತೋಟವನ್ನು ಒಂದು ಸುತ್ತು ಹಾಕಿಸಿದ ಮೇಲೆ ‘ಬೆಳವಲ’ ಎಂಬ ತೋಟ ಒಂದು ತೋಟಗಾರಿಕಾ ವಿವಿಯಂತೆ ಕಂಡಿತು.

14 ಬೆಳೆ ಮಾದರಿಗಳು

ರಾಮಕೃಷ್ಣಪ್ಪ ಅವರು ಸರ್ಕಾರಿ ನೌಕರಿಯಿಂದ ನಿವೃತ್ತರಾದ ನಂತರ, 2010ರಲ್ಲಿ ಇಲ್ಲಿ ಆರೂವರೆ ಎಕರೆ ಜಮೀನು ಖರೀದಿಸಿದರು. ಈ ಜಮೀನಿನಲ್ಲಿ ಹಂತ ಹಂತವಾಗಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಾ, ವಿವಿಧ ಬೆಳೆ ಮಾದರಿಗಳನ್ನು ಸಿದ್ಧಪಡಿಸಿದರು. ಸದ್ಯ ಜಮೀನಿನಲ್ಲಿ 14 ಬೆಳೆ ಮಾದರಿಗಳಿವೆ. ಇವುಗಳಲ್ಲಿ ಸಂಪೂರ್ಣ ಮಳೆ ಆಶ್ರಿತ ಬೆಳೆ ಪದ್ಧತಿ, ಅರೆ ನೀರಾವರಿ ಪದ್ಧತಿ ಮತ್ತು ಸಂಪೂರ್ಣ ನೀರಾವರಿ ಪದ್ಧತಿ ಆಶ್ರಿತವಾಗಿ ಬೆಳೆಯುವ ಬೆಳೆ ಪದ್ಧತಿ – ಇವು ಮೂರು ಪ್ರಮುಖ ಬೆಳೆ ಮಾದರಿಗಳು. ಪ್ರತಿ ಬೆಳೆ ಮಾದರಿಯಲ್ಲೂ ಪೂರಕವಾದ ಉಪ ಮಾದರಿಗಳನ್ನು ಸೃಷ್ಟಿಸಲಾಗಿದೆ. ಮಳೆ ಆಶ್ರಿತ (ಖುಷ್ಕಿ) ಪದ್ಧತಿಯಲ್ಲಿ ಮಾವಿನೊಂದಿಗೆ ಗೋಡಂಬಿ, ರಕ್ತಚಂದನ ಅಥವಾ ಸೀಬೆ, ಸೀತಾಫಲವನ್ನು ಮಿಶ್ರವಾಗಿ ಬೆಳೆಯುವ ಮಾದರಿ. ಅಡಿಕೆ, ಬಾಳೆ ನಡುವೆ ಭತ್ತದ ಕೃಷಿ ಮಾಡುವುದು. ಅರೆ ನೀರಾವರಿಯಲ್ಲಿ ನಿಂಬೆ ಜಾತಿಯ ಬೆಳೆಗಳ ಜತೆಗೆ ಬಾಳೆ, ನೇರಳೆ, ನೋನಿ, ಪಪ್ಪಾಯ, ಸೀಬೆ, ಅಡಿಕೆ, ಸಪೋಟ, ಈರುಳ್ಳಿ, ದ್ವಿದಳ ಧಾನ್ಯ, ತರಕಾರಿ ಬೆಳೆಯುವಂತಹ ಮಾದರಿಗಳು ಇಲ್ಲಿವೆ. 14 ಮಾದರಿಗಳ ವಿವರಣೆ ಬರೆಯುತ್ತಾ ಹೊರಟರೆ, ಪುಟಗಳೇ ಸಾಲದಾಗುತ್ತವೆ!

ಮರ ಆಧಾರಿತ ಕೃಷಿ

ಪರಿಸರಸ್ನೇಹಿ ಕೃಷಿ ಪದ್ಧತಿ ಅನುಸರಿಸುತ್ತಿರುವ ಬೆಳವಲ ತೋಟದಲ್ಲಿ, ಮರ ಆಧಾರಿತ ಕೃಷಿಯೇ ಪ್ರಧಾನವಾಗಿದೆ. ಈ ಕೃಷಿ ಪದ್ಧತಿಯನ್ನು ರಾಮಕೃಷ್ಣಪ್ಪ ಅವರು ‘ವಿಮಾ ಕೃಷಿ’ ಎಂದೂ ಕರೆಯುತ್ತಾರೆ. ತೋಟದಲ್ಲಿರುವ ಶ್ರೀಗಂಧ, ರಕ್ತ ಚಂದನ, ಹಲಸು, ತೇಗ, ಸಿಲ್ವರ್ ಓಕ್, ಬೇವು, ತೆಂಗು ಬೆಳೆಸಿದರೆ, ಇವು ಮುಂದಿನ ಹತ್ತು, ಹನ್ನೆರಡು ವರ್ಷಗಳಲ್ಲಿ ಹಣ ತಂದುಕೊಡುತ್ತವೆ. ‘ಈ ಪದ್ಧತಿಯಲ್ಲಿ ವೈವಿಧ್ಯ ಇರುವುದ ರಿಂದ, ಪೋಷಕಾಂಶ ಹಂಚಿಕೆಯಲ್ಲಿ ಮರಗಳ ನಡುವೆ ಪರಸ್ಪರ ಕೊಡು- ಕೊಳ್ಳುವಿಕೆ ನಡೆಯುತ್ತದೆ. ಇದರಿಂದ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ’ ಎಂಬುದು ರಾಮಕೃಷ್ಣಪ್ಪ ಅವರ ಮಾತು.

ಮರ ಆಧಾರಿತ ಕೃಷಿಯೇ ಪ್ರಧಾನವಾಗಿರುವುದರಿಂದ, ಕಾರ್ಮಿಕರ ಅವಲಂಬನೆಯೂ ಕಡಿಮೆ. ಅಗತ್ಯ ಬಿದ್ದಾಗಷ್ಟೇ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ದೀರ್ಘಕಾಲದಿಂದ ಭೂಮಿ
ಯನ್ನು ಸಹಜ ಕೃಷಿಗೆ ಒಗ್ಗಿಸಿರುವ ಪರಿಣಾಮ ತೋಟದ ಮಣ್ಣು ಫಲವತ್ತಾಗಿದೆ. ಮರಗಳ ಎಲೆ, ಕಾಯಿ, ಹಣ್ಣುಗಳು ಉದುರಿ ಭೂಮಿಗೆ ಸೇರಿ, ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ವೃದ್ಧಿ
ಯಾಗಿದೆ. ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿ ಹೆಚ್ಚಾಗಿದೆ. ಹೀಗಾಗಿ ಜಮೀನಿನಲ್ಲಿ ಇಂಗುವ ಮಳೆ ನೀರಿನ ಜತೆಗೆ, ಇರುವ ಒಂದು ಕೊಳವೆಬಾವಿ ನೀರಿನಲ್ಲೇ ತೋಟ ನಿರ್ವಹಣೆ ಮಾಡುತ್ತಾರೆ.

100 ಹಣ್ಣಿನ ಗಿಡಗಳು, 500 ಮರಗಳು

ಮಿತ ನೀರು, ಕನಿಷ್ಠ ಮಾನವ ಸಂಪನ್ಮೂಲದೊಂದಿಗೆ ಬೆಳವಲದ ಬಯಲಿನಲ್ಲಿ 100ಕ್ಕೂ ಹೆಚ್ಚು ವಿಧದ ಹಣ್ಣಿನ ಗಿಡಗಳು ಬೆಳೆದಿವೆ. ಇದರಲ್ಲಿ ದೇಸಿ ಮತ್ತು ವಿದೇಶಿ ಹಣ್ಣಿನ ತಳಿಗಳೂ ಇವೆ. ಹನ್ನೆರಡು ಜಾತಿಯ ಮಾವು, ಇಪ್ಪತ್ತು ಜಾತಿಯ ಹಲಸು, ಜತೆಗೆ, ಪಪ್ಪಾಯ, ಸೋಲೊ ಪಪ್ಪಾಯದಂತಹ ಹಣ್ಣಿನಗಿಡಗಳಿವೆ. ಜಂಬು ನೇರಳೆ,‌ ನಾಯಿ ನೇರಳೆ, ಹುಣಸೆಯಂತಹ ಕಾಡು ಹಣ್ಣಿನ ಮರಗಳಿವೆ. ತುಳಸಿ, ನಿಂಬೆ ಹುಲ್ಲು, ಸಿಟ್ರೆನಲ್ಲಾ, ಬೇ ಲೀಫ್, ಬೇ ಜಾಸ್ಮಿನ್‌ನಂತಹ ಔಷಧೀಯ ಗಿಡಗಳು, ಕರಿಬೇವು, ಬಸಳೆ ಬಳ್ಳಿಗಳನ್ನು ಬೆಳೆಸಿದ್ದಾರೆ. ತೆಂಗು, ಮಾವು, ನಿಂಬೆ ಪ್ರಧಾನ ಬೆಳೆಯಾಗಿರುವ ತಾಕುಗಳಲ್ಲಿ ಅಂತರ ಬೆಳೆಯಾಗಿ ಗೋಡಂಬಿ, ಸಪೋಟ, ತರಕಾರಿ, ಸೊಪ್ಪುಗಳನ್ನು ಬೆಳೆಯಲಾಗುತ್ತಿದೆ. ಒಟ್ಟು ಆರೂವರೆ ಎಕರೆ ಜಮೀನಿನಲ್ಲಿ 500ಕ್ಕೂ ಹೆಚ್ಚು ಮರಗಳಿವೆ. ಮರ, ಬೆಳೆ ಗಳ ಜತೆಗೆ ಜೇನು ಕೃಷಿಯೂ ಇದೆ.

ಒಂಬತ್ತು ವರ್ಷಗಳ ಹಿಂದೆ ಬಟಾ ಬಯಲಿನಂತಿದ್ದ ಬೆಳವಲದ ಬಯಲು ಈಗ ಬಗೆ ಬಗೆಯ ಹಣ್ಣು, ಕಾಯಿ, ಸೊಪ್ಪುಗಳ ಆಗರವಾಗಿದೆ. ತೋಟದಲ್ಲಿ ವಿವಿಧ ಹಣ್ಣು, ಹೂ, ಬೀಜ, ತರಕಾರಿ, ಜೇನು, ಸಸಿಗಳು, ತೆಂಗು ಆದಾಯ ತರುತ್ತಿವೆ. ಭವಿಷ್ಯದಲ್ಲಿ ಶ್ರೀಗಂಧ, ರಕ್ತಚಂದನದಂತಹ ಮರಗಳು ಇನ್ನೂ ಹೆಚ್ಚು ಆದಾಯ ಕೊಡುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ರಾಮಕೃಷ್ಣಪ್ಪ.

ಥಾಯ್ಲೆಂಡ್‌ನ ಸರಳ ಮತ್ತು ಸಾವಯವ ಕೃಷಿ ತಜ್ಞ ಜಾನ್ ಜಾನ್ಡಾಯ್‌, ಅಮೆರಿಕ ದೇಶದ ಹವಾಯ್ ದ್ವೀಪದ ಹಣ್ಣಿನ ಕೃಷಿಕ ಕೆನ್‌ಲವ್ ಅವರಂತಹ ಅಂತರರಾಷ್ಟ್ರೀಯ ಖ್ಯಾತಿಯ ಕೃಷಿ ತಜ್ಞರು ಬೆಳವಲಕ್ಕೆ ಭೇಟಿ ನೀಡಿ ರೈತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಸ್ಥೆಗಳ ಉದ್ಯೋಗಿಗಳಿಗೆ ತರಬೇತಿ ನೀಡಿದ್ದಾರೆ.

‘ಏಕ ಮಾದರಿ ಬೆಳೆ ಪದ್ಧತಿ ಬಿಟ್ಟು, ಬಹು ಬೆಳೆ ಪದ್ಧತಿ ಅನುಸರಿಸಿದರೆ ರೈತರು 15 ದಿನಗಳಿಗೊಮ್ಮೆ ಹಣ ಸಂಪಾ ದಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯ ಪಡುವ ರಾಮಕೃಷ್ಣಪ‍್ಪ ಅವರು, ‘ಹಣ ಗಳಿಸುವ ಧಾವಂತದಲ್ಲಿ, ಮಣ್ಣು ಮತ್ತು ಅದನ್ನು ನಂಬಿ ಬದುಕುವ ಜೀವಿಗಳ ಆರೋಗ್ಯದ ಬಗ್ಗೆ ಎಚ್ಚರ ವಿರಬೇಕು’ ಎಂದು ತೋಟಕ್ಕೆ ಭೇಟಿ ನೀಡುವವರಿಗೆ ಕಿವಿ ಮಾತನ್ನು ಹೇಳುತ್ತಾರೆ.

ಬೆಳವಲ ಪರಿಸರ ಕೇಂದ್ರ ಸಂಪರ್ಕ ವಿಳಾಸ: ಬೆಳಗೊಳ ಗ್ರಾಮ, ಮೈಸೂರು- ಕೆಆರ್‌ಎಸ್ ರಸ್ತೆ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ. ಮೊ:9620999203

ಕೃಷಿ ತರಬೇತಿ ಕೇಂದ್ರ

ನಾಲ್ಕು ವರ್ಷಗಳ ಹಿಂದೆ ಈ ಫೌಂಡೇಷನ್‌ ಆರಂಭವಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಮತ್ತು ನಿಗದಿತ ಆದಾಯ ಪಡೆಯುವಂತಹ ಕೃಷಿ ಪದ್ಧತಿಗಳನ್ನು ಪರಿಚಯಿಸುವುದು ಈ ಸಂಸ್ಥೆಯ ಉದ್ದೇಶ. ಈಗಾಗಲೇ ರೈತರು, ತೋಟಗಾರಿಕೆ ಅಧಿಕಾರಿಗಳು, ಕೃಷಿ ಪಂಡಿತರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಉದ್ಯೋಗಿಗಳು ಬೆಳವಲಕ್ಕೆ ಭೇಟಿ ನೀಡುತ್ತಿದ್ದಾರೆ. ಇದರಲ್ಲಿ ಕೆಲವರು ತರಬೇತಿ ಪಡೆದು ಹೋಗಿದ್ದಾರೆ. ಇಲ್ಲಿ ಪ್ರಾಯೋಗಿ ತರಬೇತಿ ಜತೆಗೆ, ಶಿಬಿರಾರ್ಥಿಗಳು ಎಲ್ಲ ಕೃಷಿ ಚಟುವಟಿಕೆಗಳನ್ನೂ ತಾವೇ ಮಾಡಿ ನೋಡಿ, ಅನುಭವ ಪಡೆಯಬಹುದು.

ಕೇಂದ್ರದಲ್ಲಿ ಪ್ರತಿ ತಿಂಗಳು ಒಂದು ದಿನ ಉಚಿತ ಕೃಷಿ ತರಬೇತಿ–ಕಾರ್ಯಾಗಾರ ಆಯೋಜಿಸಲಾಗುತ್ತದೆ. ಅದರಲ್ಲಿ ದೇಸಿ ಬೀಜಗಳ ಸಂರಕ್ಷಣೆ ಮತ್ತು ಬಳಕೆ, ನೀರಿನ ಮಿತ ಬಳಕೆ, ಬೆಳೆಗಳಿಗೆ ಬರುವ ರೋಗ ಮತ್ತು ಅವುಗಳ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆ ಮತ್ತು ಮಾರುಕಟ್ಟೆ ಕುರಿತು ತರಬೇತಿ ನೀಡಲಾಗುತ್ತಿದೆ. ಇದಲ್ಲದೇ, ಬೇರೆ ದಿನಗಳಲ್ಲಿ ತರಬೇತಿ ಪಡೆಯಲಿಚ್ಛಿಸಿಸುವವರು ₹1200 ಶುಲ್ಕ ಪಾವತಿಸಿ (ಊಟ – ವಸತಿಗಾಗಿ) ಎರಡು ದಿನ ಫಾರಂನಲ್ಲೇ ಉಳಿದು ತರಬೇತಿ ಪಡೆಯಲೂ ಅವಕಾಶ ಇದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT