ಸಮಗ್ರ ಕೃಷಿಯಲ್ಲಿ ಜಲಸಿರಿಯ ನೋಟ

ಗುರುವಾರ , ಏಪ್ರಿಲ್ 25, 2019
27 °C

ಸಮಗ್ರ ಕೃಷಿಯಲ್ಲಿ ಜಲಸಿರಿಯ ನೋಟ

Published:
Updated:
Prajavani

ಗುಡ್ಡಗಳ ತಪ್ಪಲಲ್ಲಿ ಐದು ಎಕರೆಯ ತೆಂಗು, ಅಡಿಕೆ, ಹಣ್ಣು, ಕಾಡುಮರಗಳಿರುವ ಮಿಶ್ರಬೆಳೆಗಳ ತೋಟವದು. ಅದರೊಳಗೆ ಸದಾ ನೀರಿನಿಂದ ತುಂಬಿರುವ ಬೃಹತ್ ಹೊಂಡಗಳು. ನೋಡಲು ಕೆರೆಗಳಂತೆ ಕಾಣುತ್ತವೆ. ತೋಟದ ಬದುಗಳ ಮೇಲೆ ಹೈಬ್ರಿಡ್ ಮೇವು, ನಡುವೆ ಮಾವು, ನೇರಳೆ, ಬಾಳೆ, ಬೇಲಿಯಲ್ಲಿ ಸಿಲ್ವರ್‌ ಓಕ್ ಮರಗಳು, ದೂರದಲ್ಲಿ ಹಸು, ಎಮ್ಮೆ, ಕೋಳಿ, ಕುರಿ.. ಒಟ್ಟಾರೆ ಸಮಗ್ರ ಕೃಷಿಯ ಚಟುವಟಿಕೆಗಳ ಅನಾವರಣ..

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಹುಚ್ಚಹನುಮೇಗೌಡರ ಪಾಳ್ಯದಲ್ಲಿರುವ ಅಂಬಿಕಾ–ರಂಗಸ್ವಾಮಿ ಅವರ ಕೃಷಿ ಭೂಮಿಯ ದೃಶ್ಯ ಇದು. ಮಾಗಡಿ ಪಟ್ಟಣದಿಂದ 10 ಕಿ.ಮೀ ದೂರ ಕ್ರಮಿಸಿ ಎಡಕ್ಕೆ ಹೊರಳಿದರೆ ಇವರ ತೋಟ ಕಾಣುತ್ತದೆ. ಈ ದಂಪತಿಯದ್ದು ಮೂರು ಕಡೆ ಜಮೀನಿದೆ. ಆದರೆ, ಐದು ಎಕರೆಯಲ್ಲಿರುವ ತೋಟದಲ್ಲಿ ಜಲಸಂರಕ್ಷಣಾ ರಚನೆಗಳ ಜತೆಗೆ, ಸಮಗ್ರ ಕೃಷಿ ಪದ್ಧತಿಯನ್ನೂ ಅಳವಡಿಸಿದ್ದಾರೆ.

ತೋಟದಲ್ಲಿ ಎರಡು ಸಾವಿರ ಅಡಿಕೆ, ನೂರೈವತ್ತು ತೆಂಗಿನ ಮರಗಳಿವೆ. ಎರಡೂ ಫಸಲು ಕೊಡುತ್ತಿವೆ. ಮಹಡಿ ರೀತಿ ತೋಟದ ವಿನ್ಯಾಸವಿದೆ. ಪ್ರತಿ ತಾಕಿನಲ್ಲೂ ಬೆಳೆಯಿದೆ. ಅಡಿಕೆ ಮರಗಳ ನಡುವೆ ಬೀನ್ಸ್ ತರಕಾರಿ ಬೆಳೆಯುತ್ತಿದ್ದಾರೆ. ಈ ತೋಟದ ನಿರ್ವಹಣೆಗಾಗಿ ಒಂದು ಕೊಳವೆಬಾವಿ ಇದೆ.

ಎರಡು ವರ್ಷಗಳ ಹಿಂದೆ

ಎರಡು ವರ್ಷಗಳ ಹಿಂದೆ ಐಆರ್‌ಡಿಎಸ್‌ ಸ್ವಯಂ ಸೇವಾ ಸಂಸ್ಥೆ, ನಬಾರ್ಡ್‌ ಸಹಯೋಗದಲ್ಲಿ ಮಾಗಡಿ ತಾಲ್ಲೂಕಿ ನಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿತ್ತು. ಈ ಯೋಜನೆಗಾಗಿ ಹುಚ್ಚ ಹನುಮೇಗೌಡನ ಪಾಳ್ಯ ಆಯ್ಕೆ ಮಾಡಿಕೊಂಡಿತು. ಆ ಯೋಜನೆಯಡಿ ರಚನೆಯಾದ ಮಹಿಳಾ ಮತ್ತು ಪುರುಷ ಸ್ವಸಹಾಯ ಸಂಘಕ್ಕೆ ಕ್ರಮವಾಗಿ ಅಂಬಿಕಾ, ರಂಗಸ್ವಾಮಿ ಸದಸ್ಯರಾದರು. ಈ ಸಂಸ್ಥೆ ಆಯೋಜಿಸಿದ್ದ ಜಲಾನಯನ ಅಭಿವೃದ್ಧಿ ಚಟುವಟಿಕೆಗಳ ತರಬೇತಿ, ಯುಶಸ್ವಿ ರೈತರ ಜಮೀನಿಗಳಿಗೆ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ್ದರು. ಅಲ್ಲಿ ಕಲಿತ ಮಾಹಿತಿ, ಚಟುವಟಿಕೆಗಳಿಂದ ಉತ್ತೇಜನಗೊಂಡವರು, ಅದೇ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಿದರು. ತೋಟಗಾರಿಕೆ ಇಲಾಖೆ, ನಬಾರ್ಡ್‌ ಸಂಸ್ಥೆಗಳ ಅನುದಾನ ಹಾಗೂ ತಾವೂ ಒಂದಿಷ್ಟು ಹಣ ತೊಡಗಿಸಿ ಎರಡು ದೊಡ್ಡ ಕೃಷಿ ಹೊಂಡ ಮಾಡಿದರು.  ತೋಟಗಳಲ್ಲಿ ಟ್ರಂಚ್‌ ಕಮ್‌ ಬಂಡ್ (ಹುದಿ–ಬದು) ನಿರ್ಮಿಸಿದರು.

ಬೆಟ್ಟದ ತಪ್ಪಲಲ್ಲಿ ತೋಟವಿರುವುದರಿಂದ, ಬೆಟ್ಟದಲ್ಲಿ ಸುರಿವ ಮಳೆ ನೀರು ನೇರವಾಗಿ ಇವರ ತೋಟಕ್ಕೆ ಬರುವಂತೆ ಕಾಲುವೆ ಮಾಡಿಸಿದ್ದಾರೆ. ಹೀಗಾಗಿ ಅಲ್ಲಿ ಬಿದ್ದ ಮಳೆ ನೀರು ತೋಟಕ್ಕೆ ಹರಿದು, ತೋಟದಲ್ಲಿರುವ ಹುದಿಯಲ್ಲಿ (ಟ್ರಂಚ್) ಇಂಗಿ, ಹೆಚ್ಚಾದ ನೀರು ಕೃಷಿ ಹೊಂಡಗಳಲ್ಲಿ ಸಂಗ್ರಹವಾಗುತ್ತದೆ. ಈ ಎರಡು ವರ್ಷಗಳಲ್ಲಿ ಸುರಿದ ಮಳೆ ನೀರು ತೋಟದಲ್ಲಿ ಇಂಗಿದೆ. ‘ತೋಟದಲ್ಲಿ ಹುದಿ – ಬದು ಹಾಕಿರುವುದರಿಂದ, ಬೃಹತ್ ಪ್ರಮಾಣದಲ್ಲಿ ನೀರು ಇಂಗುತ್ತದೆ. ಹೀಗಾಗಿ ನಾವು ವಾರಕ್ಕೊಮ್ಮೆ ಮಾತ್ರ ಸ್ಪ್ರಿಂಕ್ಲರ್‌ನಲ್ಲಿ ಅಡಿಕೆ, ತೆಂಗಿನ ಮರಗಳಿಗೆ ನೀರು ಪೂರೈಸುತ್ತೇವೆ’ ಎನ್ನುತ್ತಾರೆ ಅಂಬಿಕಾ.

ಕೃಷಿಗೆ ಪೂರಕ ಪಶುಸಂಪತ್ತು

ತರಬೇತಿಯಲ್ಲಿ ನೀರಿಂಗಿಸುವ ವಿಧಾನಗಳ ಜತೆಗೆ ಕಲಿತ ಎರೆಹುಳು ಗೊಬ್ಬರ ತಯಾರಿಕೆ, ಹಸಿರೆಲೆ ಗೊಬ್ಬರದ ಬಳಕೆಯಂತಹ ಚಟುವಟಿಕೆಗಳನ್ನೂ ತೋಟದಲ್ಲಿ ಅಳವಡಿಸಿದ್ದಾರೆ ಅಂಬಿಕಾ. ಸಮಗ್ರ ಕೃಷಿ ಪದ್ಧತಿಯ ಭಾಗವಾಗಿ ನಾಲ್ಕು ಸೀಮೆಹಸುಗಳನ್ನು ಸಾಕಿದ್ದಾರೆ. ಜತೆಗೆ ಎರಡು ಎಮ್ಮೆಗಳಿವೆ. ಎರಡು ಕುರಿ, 12 ನಾಟಿಕೋಳಿಗಳಿವೆ. ನಿತ್ಯ 20ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ. ಜಾನುವಾರಗಳ ಸೆಗಣಿಯನ್ನು ಗೋಬರ್‌ ಗ್ಯಾಸ್‌ಗೆ ಬಳಸುತ್ತಿದ್ದಾರೆ. ಅದೇ ಸ್ಲರಿ, ಕೊಟ್ಟಿಗೆ ತ್ಯಾಜ್ಯವನ್ನು ಎರೆಗೊಬ್ಬರ ತಯಾರಿಕೆಗೆ ಬಳಸುತ್ತಿದ್ದಾರೆ. ಎರೆಗೊಬ್ಬರ ಬಾಳೆ ತೋಟಕ್ಕೆ ಉಪಯೋಗವಾಗುತ್ತಿದೆ.

ತೋಟದ ಬದುವಿನಲ್ಲಿ ಸ್ಟೈಲೊ ಹೆಮಟಾ ಹೈಬ್ರಿಡ್‌ ಮೇವು ಬೆಳೆಸಿದ್ದಾರೆ. ಹಸುಗಳಿಗೆ ಸಮೃದ್ಧ ಮೇವು ಪೂರೈಸುತ್ತಾರೆ. ತೋಟದ ಸಿಗುವ ತ್ಯಾಜ್ಯಗಳನ್ನೇ ಬಳಸಿ ಎರೆಗೊಬ್ಬರ ತಯಾರಿಸುತ್ತಾರೆ. ಅದೇ ಗೊಬ್ಬರವನ್ನು ಬಾಳೆ ತೋಟಕ್ಕೆ ಹಾಕಿದ್ದಾರೆ. ತೆಂಗಿನ ನಡುವೆ ರಾಗಿ, ಭತ್ತ, ಅವರೆ, ತೊಗರಿ, ಹುರುಳಿಯನ್ನೂ ಬೆಳೆಯುತ್ತಾರೆ.

ಅಗತ್ಯಬಿದ್ದಾಗ ತೋಟದ ಕೆಲಸಕ್ಕೆ ಕೃಷಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಅತ್ತೆ ಗಂಗಮ್ಮ ಮಾವ ಕರಿಯಣ್ಣ ಅವರ ಮಾರ್ಗದರ್ಶನದಲ್ಲಿ ಪತಿ ರಂಗಸ್ವಾಮಿ ಅವರೊಂದಿಗೆ ತೋಟದ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ಇಳುವರಿ, ಗುಣಮಟ್ಟ ಹೆಚ್ಚಾಗಿದೆ

‘ಜಲಾನಯನ ಅಭಿವೃದ್ಧಿ ಚಟುವಟಿಕೆಗಳು ಅನುಷ್ಠಾನಗೊಂಡ ನಂತರ, ತೋಟದಲ್ಲಿ ತೆಂಗು, ಅಡಿಕೆಯಲ್ಲಿ ಇಳುವರಿ ಪ್ರಮಾಣ ಹೆಚ್ಚಾಗಿದೆ. ಫಸಲಿನ ಗುಣಮಟ್ಟವೂ ಹೆಚ್ಚಾಗಿದೆ. ಕೊಟ್ಟಿಗೆಗೊಬ್ಬರ ಮತ್ತು ಗಂಜಲ ಬಳಕೆಯಿಂದಾಗಿ ಮಣ್ಣು ಹಸನಾಗಿದೆ. ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿ ಹೆಚ್ಚಾಗಿದ್ದು, ತೇವಾಂಶ ನಿರಂತರವಾಗಿರುತ್ತದೆ’ ಎನ್ನುತ್ತಾರೆ ರಂಗಸ್ವಾಮಿ. 

ಈ ಎಲ್ಲ ಬದಲಾವಣೆಗೆ ನಬಾರ್ಡ್‌ ಸಂಸ್ಥೆಯ ಯೋಜನೆ ನೀಡಿದ ಸಹಕಾರವೇ ಕಾರಣ ಎಂದು ಸ್ಮರಿಸುವ ಅಂಬಿಕಾ, ತಾವು ಕಲಿತಿರುವ ನೆಲ–ಜಲ ಸಂರಕ್ಷಣೆ ಮತ್ತು ಸಮಗ್ರ ಕೃಷಿ ಪದ್ಧತಿಯ ಮಾಹಿತಿಯನ್ನು ತಮ್ಮ ಸಂಘದ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಸಂಘದಲ್ಲಿರದ ರೈತ ಮಹಿಳೆಯರಿಗೂ ಮಳೆನೀರು ಸಂಗ್ರಹದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಂಬಿಕಾ ಅವರ ನೀರಿನ ಸಂರಕ್ಷಣೆ ಮತ್ತು ಸಮಗ್ರ ಕೃಷಿ ಪದ್ಧತಿಯ ಚಟುವಟಿಕೆಗಳನ್ನು ಗುರುತಿಸಿರುವ ನಬಾರ್ಡ್‌, ಈ ಬಾರಿಯ ಮಹಿಳಾ ದಿನಾಚರಣೆಯಲ್ಲಿ ‘ಜಲಸಿರಿ-ಉತ್ತಮ ಸಾಧಕಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬಿಕಾ ರಂಗಸ್ವಾಮಿ ಅವರ ಸಂಪರ್ಕ ಸಂಖ್ಯೆ – 7019426207

 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !