ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ಕಲ್ಲಂಗಡಿ ಸುರಿದ ರೋಣದ ರೈತ!

ಹುಬ್ಬಳ್ಳಿ ಎಪಿಎಂಸಿ ದಲ್ಲಾಳಿಗಳಿಂದ ಬೆಲೆಯಲ್ಲಿ ಮೋಸ; ಆಕ್ರೋಶ
Last Updated 19 ಏಪ್ರಿಲ್ 2019, 9:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವನಗರ ಎಪಿಎಂಸಿಯ ದಲ್ಲಾಳಿಯೊಬ್ಬರ ಮಾತು ನಂಬಿ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡಲು ಗದಗದ ಜಿಲ್ಲೆ ರೋಣದಿಂದ ಬಂದಿದ್ದ ರೈತರೊಬ್ಬರು, ಸೂಕ್ತ ಬೆಲೆ ಸಿಗದ ಕಾರಣಕ್ಕೆ ಬೇಸತ್ತು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಹಣ್ಣುಗಳನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ರೋಣದ ರೈತ ತೋಟಪ್ಪ ಅಂದಾನಪ್ಪ ತೋಟಗುಂಟಿ ಎಂಬುವವರು ತಮ್ಮ ಹೊಲದಲ್ಲಿ ಬೆಳೆದ ಸುಮಾರು 6 ಟನ್ ನಾಮಧಾರಿ ತಳಿಯ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುವುದಕ್ಕಾಗಿ ನವನಗರ ಎಪಿಎಂಸಿಗೆ ಟ್ರಾಕ್ಟರ್‌ ಮೂಲಕ ಗುರುವಾರ ತಂದಿದ್ದರು. ಆದರೆ, ದಲ್ಲಾಳಿಗಳು ಬೇಕಾಬಿಟ್ಟಿ ದರಕ್ಕೆ ಹಣ್ಣನ್ನು ಕೇಳಿದ್ದರಿಂದ ಬೇಸರಗೊಂಡ ಅವರು, ಹಣ್ಣನ್ನು ಮಾರಾಟ ಮಾಡದೇ ರಾಣಿ ಚನ್ನಮ್ಮ ವೃತ್ತಕ್ಕೆ ತಂದು ರಸ್ತೆ ಮೇಲೆ ಸುರಿವಿದರು.

ರಸ್ತೆಯಲ್ಲಿ ಸುರಿದ ಹಣ್ಣುಗಳನ್ನು ಆರಿಸಿಕೊಳ್ಳಲು ಜನ ಮುಗಿಬಿದ್ದಿದ್ದರು. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ತಕ್ಷಣ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಬಂದು, ಸರ್ಕಲ್‌ನಲ್ಲಿ ಹಣ್ಣುಗಳನ್ನು ಸುರಿಯದಂತೆ ರೈತನ ಮನವೊಲಿಸಿದರು. ಬಳಿಕ ಅಲ್ಲಿಂದ ತೆರಳಿದರು. ರಸ್ತೆಯಲ್ಲಿ ಸುರಿವಿದ್ದ ಹಣ್ಣಗಳನ್ನು ಜನ ಮನೆಗೆ ತೆಗೆದುಕೊಂಡು ಹೋದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರೈತ ತೋಟಪ್ಪ ತೋಟಗುಂಟಿ, ಬೇಸಿಗೆಯ ಬರದಲ್ಲೂ ಇರುವ ಅಲ್ಪಸ್ವಲ್ಪ ನೀರನ್ನು ಬಳಿಸಿಕೊಂಡು 8 ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕಲ್ಲಂಗಡಿ ಬೆಳೆದಿದ್ದೇನೆ. ನಿರೀಕ್ಷಿತ ಪ್ರಮಾಣದಲ್ಲಿ ಇಳವರಿ ಕೂಡ ಬಂದಿಲ್ಲ. ಕೈಗೆ ಬಂದ ಬೆಳೆಗೆ ಬೆಲೆಯೂ ಲಭಿಸಿಲ್ಲ ಎಂದರು.

ಹುಬ್ಬಳ್ಳಿ ಎಪಿಎಂಸಿಯ ಹಣ್ಣಿನ ವ್ಯಾಪಾರಿಯೊಬ್ಬರು ಕೆ.ಜಿ.ಗೆ ₹ 20 ರಂತೆ ಖರೀದಿಸುವುದಾಗಿ ಹೇಳಿದ ಕಾರಣ ಇಲ್ಲಿಗೆ ಮಾರಾಟ ಮಾಡಲು ತಂದೆ. ಮಾರುಕಟ್ಟೆಗೆ ಬಂದ ಮೇಲೆ ದರ ಕುಸಿತವಾಗಿದ್ದು, ಕೆ.ಜಿಗೆ ₹ 15ರಂತೆ ಖರೀದಿಸುವುದಾಗಿ ಹೇಳಿದರು. ಕೆ.ಜಿಗೆ ₹ 18 ರಂತೆ ನೀಡಲು ನಾನು ಸಿದ್ಧನಿದ್ದೆ. ಆದರೆ, ವ್ಯಾಪಾರಿಗಳು ಕಡಿಮೆ ಹಣಕ್ಕೆ ಕೇಳತೊಡಗಿರು. ಇದರಿಂದ ಬೇಸತ್ತು ರಸ್ತೆ ಮೇಲೆ ಸುರಿವಿದೆ ಎಂದು ಹೇಳಿದರು.

ಇದು ಪ್ರಥಮ ಕೊಯ್ಲು ಆಗಿತ್ತು. ದಲ್ಲಾಳಿ ಬೆಲೆಯಲ್ಲಿ ಮೋಸ ಮಾಡಿದ ಕಾರಣ ಬೇಸರವಾಯಿತು. ಹುಬ್ಬಳ್ಳಿ ಹಣ್ಣು ವ್ಯಾಪಾರಿಗಳು ಮಹಾ ಮೋಸಗಾರರು ಇನ್ನೆಂದು ಇಲ್ಲಿಗೆ ಹಣ್ಣನ್ನು ತರುವುದಿಲ್ಲ. ಈ ಬಗ್ಗೆ ದಲ್ಲಾಳಿಯ ವಿರುದ್ಧ ದೂರು ದಾಖಲಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT