ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿ ನಿಯಂತ್ರಣಕ್ಕೆ ಇಲ್ಲಿದೆ ದಾರಿ

Last Updated 22 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಬೆಳೆಗಳಿಗೆ ಇಲಿಕಾಟ ಸಾಮಾನ್ಯ. ಬಿತ್ತನೆಯಿಂದ ಕೊಯ್ಲಿನವರೆಗೆ, ಕೊಯ್ಲಿನಿಂದ ಮಾರುಕಟ್ಟೆಗೆ ಬೆಳೆ ಕೊಂಡೊಯ್ಯುವವರೆಗೆ ಇಲಿಕಾಟ ನಿರಂತರ ವಾಗಿದೆ. ಒಮ್ಮೊಮ್ಮೆ ಅವು ಮಾಡುವ ನಷ್ಟ ಬಲು ದುಬಾರಿ. ಹೀಗಾಗಿ ಇಲಿ ರೈತರ ಆದಾಯಕ್ಕೆ ಕತ್ತರಿ ಹಾಕುತ್ತಿದೆ.

ಇಂಥ ಇಲಿ ನಿಯಂತ್ರಣಕ್ಕೆ ರೈತರು ಪಾಷಾಣ ಇಡುವ ವಿಧಾನ ಅನುಸರಿಸುತ್ತಿದ್ದಾರೆ. ಇದರಿಂದ ತಕ್ಕ ಮಟ್ಟಿಗೆ ಇಲಿ ನಿಯಂತ್ರಣವಾಗಬಹುದು. ಆದರೆ, ಈ ಪಾಷಾಣವನ್ನು ಸಾಕು ಪ್ರಾಣಿಗಳು ತಿಂದರೆ ಅಪಾಯ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ ಪಾಷಣ ಇಡುವುದಕ್ಕೇ ಭಯವಾಗುತ್ತದೆ. ಇಂಥ ಸಂದರ್ಭದಲ್ಲಿ ಕೆಲ ಸಾವಯವ ಕೃಷಿಕರು ಇಲಿ ನಿಯಂತ್ರಿಸಲು ಕೆಲವು ಉಪಾಯಗಳನ್ನು ಕಂಡುಕೊಂಡಿದ್ದಾರೆ. ಅವುಗಳ ಇಲ್ಲಿವೆ.

* ಗೊಬ್ಬರ ಗಿಡ ಗ್ಲಿರಿಸೀಡಿಯಾದ ತೊಗಟೆ ತೆಗೆದುಕೊಳ್ಳಿ. 250 ಗ್ರಾಂ ತೊಗಟೆಯನ್ನು ಒಂದು ಕೆ.ಜಿ ಅಕ್ಕಿಯೊಂದಿಗೆ ಚೆನ್ನಾಗಿ ಕುದಿಸಿ, ಅನ್ನ ತಯಾರಿಸಿ. ಇಲಿಗಳು ಓಡಾಡುವ ಸ್ಥಳದಲ್ಲಿ ಇಡಿ. ಈ ಮಿಶ್ರಣದಿಂದ ಹೊರಡುವ ಪರಿಮಳ ಇಲಿಗಳನ್ನು ಆಕರ್ಷಿಸುತ್ತದೆ. ವಾಸನೆ ಹಿಡಿದು ಬರುವ ಇಲಿಗಳು ಈ ಮಿಶ್ರಣ ತಿಂದು ಸಾಯುತ್ತವೆ. ಇದು ಬೇರೆ ಸಾಕು ಪ್ರಾಣಿಗಳು ತಿಂದರೆ ಅಪಾಯವಾಗುವುದಿಲ್ಲ..

* ಬೀಜ ರಹಿತವಾದ ಮೃದು, ಸ್ವಚ್ಛ, ಶುಭ್ರವಾದ ಹತ್ತಿ ಅರಳೆಯ ಚಿಕ್ಕ-ಚಿಕ್ಕ ತುಂಡುಗಳನ್ನು ಶೇಂಗಾ ತೈಲದಲ್ಲಿ ನೆನೆಸಿ ಇಲಿಗಳು ಓಡಾಡುವ ಸ್ಥಳದಲ್ಲಿ ಇಡಿ. ಈ ಶೇಂಗಾ ತೈಲದ ಮಧುರ ವಾಸನೆಗೆ ಇಲಿಗಳು ಆಕರ್ಷಿತವಾಗಿ ತಿಂದು ಸಾಯುತ್ತವೆ.

* ಸುಣ್ಣ, ಕಡಲೆ ಹಿಟ್ಟು ಮತ್ತು ಶೇಂಗಾ ತೈಲವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಇಲಿಗಳು ಓಡಾಡುವ ಸ್ಥಳದಲ್ಲಿ ಇಡಿ. ಶೇಂಗಾ ಎಣ್ಣೆಯ ವಾಸನಗೆ ಆಕರ್ಷಿತವಾಗುವ ಇಲಿಗಳು, ಈ ಮಿಶ್ರಣವನ್ನು ತಿನ್ನುತ್ತವೆ. ಮಿಶ್ರಣದಲ್ಲಿರುವ ಸುಣ್ಣವು ಇಲಿಯ ಹೊಟ್ಟೆ ಸೇರಿ, ಅರಳುತ್ತದೆ, ಶಾಖವನ್ನು ಬಿಡುಗಡೆಗೊಳಿಸುತ್ತದೆ. ಇದರಿಂದ ಇಲಿಯ ಹೊಟ್ಟೆಯು ಉಬ್ಬಿ ಸಾಯುತ್ತದೆ

* ಚರ್ಮಕ್ಕೆ ತುರಿಕೆ ಉಂಟು ಮಾಡುವ ನಸುಗುನ್ನಿ ಗಿಡದ ತಪ್ಪಲನ್ನು ಇಲಿಯ ಬಿಲದ ಹತ್ತಿರ ಇಡಿ. ಇಲಿಗಳು ಬಿಲದಿಂದ ಹೊರಬರುವಾಗ ಈ ತಪ್ಪಲಿನಲ್ಲಿ ಹಾಯ್ದು ಬರುತ್ತವೆ. ಆಗ, ತಪ್ಪಲು ಇಲಿಗಳ ಚರ್ಮಕ್ಕೆ ತಗಲಿ ತುರಿಕೆ ಉಂಟಾಗುತ್ತದೆ. ಇದರಿಂದ ಇಲಿಗಳಿಗೆ ಹುಚ್ಚು ಹಿಡಿದಂತಾಗಿ ಒಂದಕ್ಕೊಂದು ಕಚ್ಚಾಡಿ ಸಾಯುತ್ತವೆ.

* ತೆಂಗು ಹಾಗೂ ಅಡಿಕೆ ಮರಗಳಿಗೆ ಕಬ್ಬಿಣದ ತಗಡನ್ನು ಸುತ್ತಬೇಕು. ಇದರಿಂದ ಇಲಿಗಳಿಗೆ ಮೇಲೇರಲು ಸಾಧ್ಯವಾಗದೇ ಕಾಲು ಜರಿದು ನೆಲಕ್ಕೆ ಬೀಳುತ್ತವೆ.

* ಜಮೀನಿನಲ್ಲಿ ಬೆಕ್ಕು ಸಾಕುವ ಹವ್ಯಾಸವಿಟ್ಟುಕೊಂಡರೆ, ಇಲಿಗಳನ್ನು ನಿಯಂತ್ರಿಸಬಹುದು.

* ಇಲಿಗಳ ನಿಯಂತ್ರಿಸಲು ಮಾನವ ನಿರ್ಮಿತ ಹಲವಾರು ಬಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವನ್ನು ಜಾಗೃತಿಯಿಂದ ಬಳಸಬಹುದು.

‘ಇಲಿಗಳ ನಿಯಂತ್ರಣಕ್ಕಾಗಿ ರೈತರು ಕೇವಲ ವಿಷ-ಪ್ರಾಷಣದಂಥಹ ಒಂದೇ ಮಾರ್ಗ ಅವಲಂಬಿಸುವುದನ್ನು ಬಿಟ್ಟು, ಇಂಥ ಪ್ರಯೋಗಗಳನ್ನು ಜಾಣ್ಮೆಯಿಂದ ಜಾರಿಗೊಳಿಸಿದರೆ, ಜೈವಿಕವಾಗಿ ಇಲಿಗಳ ಹಾವಳಿ ನಿಯಂತ್ರಿಸಬಹುದಾಗಿದೆ’ ಎನ್ನುತ್ತಾರೆ ಸಾವಯವ ಕೃಷಿಕ ರುದ್ರಪ್ಪ ಜುಲಪಿ.

ಈ ಕ್ರಮಗಳನ್ನು ಮುಧೋಳ, ಜಮಖಂಡಿ, ಬೀಳಗಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ರೈತರು ತಮ್ಮ ಬೆಳೆಗಳಿಗೆ ಅಳವಡಿಸಿ ನೋಡಿದ್ದಾರೆ. ಕೆಲವು ಕಡೆ ಇಲಿಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎನ್ನುತ್ತಾರೆ. ಆದರೆ, ಪ್ರದೇಶವಾರು ಹವಾಗುಣ, ಮಣ್ಣು, ಬೆಳೆ ಪದ್ಧತಿ ಬದಲಾಗುತ್ತವೆ. ಹಾಗಾಗಿ ಈ ಕ್ರಮಗಳನ್ನು ಅನುಸರಿಸುವ ಅಥವಾ ಅಳವಡಿಸಿಕೊಳ್ಳುವ ಮುನ್ನ ರೈತರು ಕೃಷಿ ಇಲಾಖೆ ತಜ್ಞರ ಮಾರ್ಗದರ್ಶನ ಪಡೆಯುವುದು ಅವಶ್ಯವಾಗಿದೆ.

ಮೇಲೆ ಹೇಳಿರುವ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ: 9945220660 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT