ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.80 ಲಕ್ಷ ಹೆಕ್ಟೇರ್‌ನಲ್ಲಿ 33%ಗೂ ಹೆಚ್ಚು ನಷ್ಟ

4.17 ಲಕ್ಷ ಹೆಕ್ಟೇರ್‌ ಹಿಂಗಾರು ಬೆಳೆ ಹಾನಿ; ಸಚಿವ ಸಂಪುಟ ಉಪ ಸಮಿತಿಯಿಂದ ಬರ ಅಧ್ಯಯನ ಇಂದು
Last Updated 7 ಜನವರಿ 2019, 15:25 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಹಿಂಗಾರು ಬೆಳೆ ಹಾನಿಯ ಸಮೀಕ್ಷೆ ನಡೆದಿದ್ದು, ಪ್ರಾಥಮಿಕ ಅಂದಾಜಿನಂತೆ 4.17.696 ಹೆಕ್ಟೇರ್‌ನಲ್ಲಿನ ಬೆಳೆ ನಾಶವಾಗಿದೆ.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳ ಜಂಟಿ ತಂಡ, ಮೂರ್ನಾಲ್ಕು ದಿನಗಳ ಹಿಂದೆಯೇ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಂಡಿದೆ. ಈ ವಾರಾಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

‘ಮುಂಗಾರು ವೈಫಲ್ಯದಿಂದ ಜಿಲ್ಲೆಯಲ್ಲಿ ಹಿಂಗಾರು 6.05.930 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಇದರಲ್ಲಿ 4.17.696 ಹೆಕ್ಟೇರ್‌ನಲ್ಲಿನ ಬೆಳೆ ನಾಶವಾಗಿದೆ. 3.79.701 ಹೆಕ್ಟೇರ್‌ನಲ್ಲಿನ ಬೆಳೆ ಕೇಂದ್ರದ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ 33%ಗೂ ಹೆಚ್ಚು ಹಾನಿಯಾಗಿದೆ.

ಉಳಿದ ಜಮೀನುಗಳಲ್ಲಿನ ಫಸಲಿನ ಸ್ಥಿತಿಯೂ ಭಿನ್ನವಾಗಿಲ್ಲ. ನೀರಾವರಿ ಸೌಲಭ್ಯ ಹೊಂದಿರುವ ಭೂಮಿಗಳಲ್ಲಷ್ಟೇ ಹಸಿರು ನಳನಳಿಸುತ್ತಿದೆ. ರಾಶಿಯ ತನಕ ನೀರಿನ ಸೌಲಭ್ಯವಿದ್ದರೆ, ಎರಡು ಲಕ್ಷ ಹೆಕ್ಟೇರ್‌ನಲ್ಲಿನ ಬೆಳೆ ರೈತರ ಮನೆ ಸೇರಲಿದೆ. ನೀರಿನ ಅಭಾವ ಎದುರಾದರೆ, ಈ ಬೆಳೆಯೂ ರೈತರ ಮನೆ ಸೇರದು’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಕೃಷಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹಿಂಗಾರಿ ಬಿಳಿ ಜೋಳ 1.37.644 ಹೆಕ್ಟೇರ್‌ನಲ್ಲಿ ನಾಶವಾಗಿದ್ದರೆ, 1.23.345 ಹೆಕ್ಟೇರ್‌ನಲ್ಲಿನ ಬೆಳೆ 33%ಗೂ ಹೆಚ್ಚು ನಷ್ಟ ಹೊಂದಿದೆ. ಗೋಧಿ ಸಹ 30137 ಹೆಕ್ಟೇರ್‌ನಲ್ಲಿ ಹಾನಿಯಾಗಿದ್ದು, 24818 ಹೆಕ್ಟೇರ್‌ನಲ್ಲಿ ಬೆಳೆ ಅಪಾರ ನಷ್ಟಕ್ಕೀಡಾಗಿದೆ.

2.31.151 ಹೆಕ್ಟೇರ್‌ನಲ್ಲಿನ ಕಡಲೆ ಬೆಳೆ ಹಾನಿಗೀಡಾಗಿದ್ದು, ಇದರಲ್ಲಿ 2.13.279 ಹೆಕ್ಟೇರ್‌ನಲ್ಲಿನ ಬೆಳೆ 33%ಗೂ ಹೆಚ್ಚಿನ ನಷ್ಟಕ್ಕೀಡಾಗಿದೆ. ಕಬ್ಬು ಸಹ ಇದೇ ಮೊದಲ ಬಾರಿಗೆ 12990 ಹೆಕ್ಟೇರ್‌ನಲ್ಲಿ ನಾಶವಾಗಿದೆ. ಸೂರ್ಯಕಾಂತಿ 3290 ಹೆಕ್ಟೇರ್‌ನಲ್ಲಿ, ಮುಸುಕಿನ ಜೋಳ 921, ಕುಸುಬೆ 1308, ಅಗಸೆ 255 ಹೆಕ್ಟೇರ್‌ನಲ್ಲಿ ನಾಶವಾಗಿದೆ’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

₹ 290 ಕೋಟಿ ಇನ್‌ಪುಟ್‌ ಸಬ್ಸಿಡಿ:

ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿಯ ಸಚಿವರ ತಂಡ, ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಳು ಜಿಲ್ಲೆಯಲ್ಲಿ ಹಿಂಗಾರು ಬೆಳೆ ನಷ್ಟದ ಅಧ್ಯಯನ ನಡೆಸಲಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಈಗಾಗಲೇ ಹಾನಿ ಸಮೀಕ್ಷೆ ಆರಂಭಿಸಿದೆ.

ವಾರದೊಳಗೆ ನಿಖರ ಅಂಕಿ–ಅಂಶ ಸಂಗ್ರಹಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರ ಬರಪೀಡಿತ ಎಲ್ಲ ಜಿಲ್ಲೆಗಳ ವರದಿ ಕ್ರೋಢೀಕರಿಸಿ, ಕೇಂದ್ರಕ್ಕೆ ಸಲ್ಲಿಸಲಿದೆ. ನಂತರ ಕೇಂದ್ರದಿಂದ ಅಧಿಕಾರಿಗಳ ತಂಡ ಬರ ಅಧ್ಯಯನಕ್ಕೆ ಬರಲಿದೆ. ಈ ಸಂದರ್ಭ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತ ನೀಡಲಿದೆ. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ನಷ್ಟಕ್ಕೀಡಾದ ರೈತ ಸಮೂಹಕ್ಕೆ ಇನ್‌ಪುಟ್‌ ಸಬ್ಸಿಡಿ ದೊರಕಲಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಈ ಹಿಂದಿನ ದಾಖಲಾತಿ, ಈಗಿನ ಅಂದಾಜು ಪರಿಗಣಿಸಲಾಗಿದೆ. ನಷ್ಟದ ಅರಿವಿದೆ. ಕೇಂದ್ರದಿಂದ ಜಿಲ್ಲೆಗೆ ಕನಿಷ್ಠ ₹ 290 ಕೋಟಿ ಇನ್‌ಪುಟ್‌ ಸಬ್ಸಿಡಿ ದೊರೆಯುವ ನಿರೀಕ್ಷೆಯಿದೆ. ಈ ಹಣ ಬಿಡುಗಡೆಗೊಳ್ಳುತ್ತಿದ್ದಂತೆ, ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT