ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ ಯೋಜನೆ ವಿವರಗಳು ಶೀಘ್ರ ಅಂತಿಮ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯ ಸ್ವರೂಪ ಮತ್ತು ಜಾರಿಗೆ ತರುವ ವಿಧಿವಿಧಾನಗಳ ಕುರಿತು ಹಣಕಾಸು ಮತ್ತು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಶೀಘ್ರದಲ್ಲಿಯೇ ಸಭೆ ಸೇರಿ ಚರ್ಚಿಸಲಿದ್ದಾರೆ.

ಆರೋಗ್ಯ ವಿಮೆಯ ಹಣ ಪಾವತಿಸಲು ಟ್ರಸ್ಟ್‌ ರಚಿಸಬೇಕೆ ಅಥವಾ ಸಾಮಾನ್ಯ ವಿಮೆ ಸಂಸ್ಥೆಗಳನ್ನು ನೆಚ್ಚಿಕೊಳ್ಳಬೇಕೆ ಎನ್ನುವುದನ್ನೂ ಈ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ. ವಿಶ್ವದಲ್ಲಿಯೇ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆ ಇದಾಗಿದೆ.

ಬಡ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ 10 ಕೋಟಿ ಕುಟುಂಬಗಳಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ದೇಶದ ಜನಸಂಖ್ಯೆಯ ಶೇ 40ರಷ್ಟು ಜನರು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.

ಕೆಲವು ರಾಜ್ಯಗಳಲ್ಲಿ ಟ್ರಸ್ಟ್‌ ಆಧಾರಿತ ಆರೋಗ್ಯ ವಿಮೆ ಯೋಜನೆಗಳು ಈಗಾಗಲೇ ಯಶಸ್ವಿಯಾಗಿ ಜಾರಿಯಲ್ಲಿ ಇವೆ. ಸರ್ಕಾರ ರಚಿಸುವ ಟ್ರಸ್ಟ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡುತ್ತಿವೆ. ಯೋಜನೆಯ ಫಲಾನುಭವಿಗಳ ಆಸ್ಪತ್ರೆ ವೆಚ್ಚವನ್ನು ಈ ಟ್ರಸ್ಟ್‌ಗಳೇ ಭರಿಸುತ್ತವೆ.

ರಾಜ್ಯಗಳಲ್ಲಿ ಜಾರಿಯಲ್ಲಿ ಇರುವ ಯೋಜನೆಗಳನ್ನು ‘ಎನ್‌ಎಚ್‌ಪಿಎಸ್‌’ ಜತೆ ವಿಲೀನಗೊಳಿಸಬೇಕೆ ಅಥವಾ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಬೇಕೆ ಎನ್ನುವುದನ್ನು ರಾಜ್ಯಗಳ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಕೇಂದ್ರ ಸರ್ಕಾರವು ಈ ಮೊದಲೇ ಜಾರಿಗೆ ತಂದಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯನ್ನು (ಆರ್‌ಎಸ್‌ಬಿಐ) ‘ಎನ್‌ಎಚ್‌ಪಿಎಸ್‌’ ಜತೆ ವಿಲೀನಗೊಳಿಸಲು ಕೇಂದ್ರ ನಿರ್ಧರಿಸಿದೆ.

ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುವ ಬಡವರ ವೈದ್ಯಕೀಯ ವೆಚ್ಚ ಭರ್ತಿಗೆ ವರ್ಷಕ್ಕೆ ₹ 12 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಬಜೆಟ್‌ನಲ್ಲಿ ₹ 2,000 ಕೋಟಿಗಳನ್ನಷ್ಟೇ ಹಂಚಿಕೆ ಮಾಡಲಾಗಿದೆ. ಅಗತ್ಯ ಬಿದ್ದಾಗ ಹೆಚ್ಚುವರಿ ನೆರವು ಒದಗಿಸುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭರವಸೆ ನೀಡಿದ್ದಾರೆ.

ಸಾಮಾಜಿಕ ಆರ್ಥಿಕ ಜಾತಿ ಗಣತಿಯಲ್ಲಿ ಪರಿಗಣಿಸಿದ ಮಾನದಂಡಗಳ ಆಧಾರದ ಮೇಲೆ ಫಲಾನುಭವಿಗಳನ್ನು ಗುರುತಿಸಲಾಗುವುದು.  ಆರೋಗ್ಯ ಸಚಿವಾಲಯವು ಯೋಜನೆಯ ಕರಡು ಸಿದ್ಧಪಡಿಸುತ್ತಿದೆ. ಇದನ್ನು ಆಗಸ್ಟ್‌ 15 ಅಥವಾ ಅಕ್ಟೋಬರ್‌ 2ರಿಂದ ಜಾರಿಗೆ ತರುವ ನಿರೀಕ್ಷೆ ಇದೆ.

‘ಆರ್‌ಎಸ್‌ಬಿಐ’ಯನ್ನು ಬಡತನ ರೇಖೆಗಿಂತ ಕೆಳಗೆ ಇರುವ (ಬಿಪಿಎಸ್‌) ಕುಟುಂಬಗಳಿಗಾಗಿ ಆರಂಭಿಸಲಾಗಿತ್ತು. ಆನಂತರ ಅದನ್ನು ಅಸಂಘಟಿತ ವಲಯದ ಕಟ್ಟಡ ನಿರ್ಮಾಣ, ಹಮಾಲಿ, ಟ್ಯಾಕ್ಸಿ ಚಾಲಕರು, ಬೀಡಿ ಕಾರ್ಮಿಕರು, ಮನೆಗೆಲಸದವರಿಗೂ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT