ಮಂಡ್ಯದಲ್ಲಿ ಮಹಾತ್ಮಗಾಂಧಿಯ ‘ನಾಲ್ಕು’ ಹೆಜ್ಜೆಗಳು!

7
ರೈಲು ನಿಲ್ದಾಣದಲ್ಲಿ ಇಳಿದು ಜನರ ಸನ್ಮಾನ ಸ್ವೀಕಾರ ಮಾಡುತ್ತಿದ್ದ ರಾಷ್ಟ್ರಪಿತ

ಮಂಡ್ಯದಲ್ಲಿ ಮಹಾತ್ಮಗಾಂಧಿಯ ‘ನಾಲ್ಕು’ ಹೆಜ್ಜೆಗಳು!

Published:
Updated:
Deccan Herald

ಮಂಡ್ಯ: ಜಿಲ್ಲೆಯ ವಿವಿಧೆಡೆ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹೆಜ್ಜೆ ಗುರುತುಗಳಿವೆ. ಅವರು ಕಾಲಿಟ್ಟ ಜಾಗದಲ್ಲಿ ನೆನಪುಗಳು ಹಚ್ಚ ಹಸಿರಾಗಿವೆ. ಅವರನ್ನು ನೋಡಿದವರು ಈಗ ಇಲ್ಲದಿದ್ದರೂ ಗಾಂಧಿ ಭೇಟಿ ಇತಿಹಾಸ ಪುಟಗಳಲ್ಲಿ ದಾಖಲೆಯಾಗಿ ಉಳಿದಿವೆ.

ಮಹಾತ್ಮ ಗಾಂಧೀಜಿ ಜಿಲ್ಲೆಗೆ ನಾಲ್ಕು ಬಾರಿ ಭೇಟಿ ನೀಡಿದ್ದ ಬಗ್ಗೆ ಹಿರಿಯ ಗಾಂಧಿವಾದಿ, ಈಗಲೂ ಗಾಂಧಿ ವೇಷ ಹಾಕಿ ಗಮನ ಸೆಳೆಯುವ ವೇಮಗಲ್‌ ಸೋಮಶೇಖರ್‌ ಅವರು ತಮ್ಮ  ‘ಮೈಸೂರು ರಾಜ್ಯದಲ್ಲಿ ಗಾಂಧಿ’ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ. ಗಾಂಧೀಜಿ ನೇರವಾಗಿ ಮಂಡ್ಯಕ್ಕೆ ಎಂದೂ ಭೇಟಿ ಕೊಟ್ಟಿಲ್ಲ. ಆದರೆ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಜಿಲ್ಲೆಯ ವಿವಿಧೆಡೆ ಕಾಲಿಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಕೆ.ವೀರಣ್ಣಗೌಡರು ಹಾಗೂ ಶಿವಪುರ ಧ್ವಜ ಸತ್ಯಾಗ್ರಹದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಇಲ್ಲಿಯ ಜನರ ಗೌರವ ಸ್ವೀಕರಿಸುತ್ತಿದ್ದರು ಎಂಬ ದಾಖಲೆಗಳಿವೆ.

ಜುಲೈ 22, 1927:
ಜು.22, 1927ರಂದು ಮಹಾತ್ಮರು ಮಂಡ್ಯದ ನೆಲಕ್ಕೆ ಮೊದಲ ಬಾರಿ ಕಾಲಿಟ್ಟಿದ್ದರು. ರೈಲಿನಲ್ಲಿ ಮೈಸೂರಿಗೆ ತೆರಳುತ್ತಿದ್ದ ಅವರು ಇಲ್ಲಿಯ ಹೋರಾಟಗಾರರ ಪ್ರೀತಿ ಸ್ವೀಕರಿಸಲು ರೈಲಿನಿಂದ ಇಳಿದಿದ್ದರು. ಅವರಿಗಾಗಿ ಕಾಯುತ್ತಿದ್ದ ಜನರು ಅವರಿಗೆ ಸನ್ಮಾನ ಮಾಡಿದ್ದರು. ರೈಲು ಕೆಲಕಾಲ ನಿಂತಿದ್ದ ಕಾರಣ ಜನರನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದ್ದರು ಎಂಬ ನೆನಪುಗಳು ಪುಸ್ತಕದಲ್ಲಿ ದಾಖಲಾಗಿವೆ.

 

ಗಾಂಧಿ ಭೇಟಿಯ ನೆನಪಿಗಾಗಿಯೇ ರೈಲು ನಿಲ್ದಾಣ ಸಮೀಪದ ಉದ್ಯಾನಕ್ಕೆ ಗಾಂಧಿ ಉದ್ಯಾನ ಎಂದು ಹೆಸರಿಡಲಾಯಿತು ಎಂದು ಕೆಲವರು ಹೇಳುತ್ತಾರೆ. ಆದರೆ ಈ ಬಗ್ಗೆ ಅಧಿಕೃತ ದಾಖಲೆಗಳು ಇಲ್ಲ. ‘ಗಾಂಧೀಜಿ ಮೈಸೂರಿಗೆ ಬರುತ್ತಾರೆ ಎಂದರೆ ಈ ಭಾಗದ ಹೋರಾಟಗಾರರು ವೇಷ ಬದಲಿಸಿಕೊಂಡು, ಪೊಲೀಸರು ಕಣ್ಣು ತಪ್ಪಿಸಿ ಮೈಸೂರಿಗೆ ತೆರಳುತ್ತಿದ್ದರು. ಗಾಂಧಿ ಬರುವ ಮಾರ್ಗದ ರೈಲು ನಿಲ್ದಾಣಗಳಲ್ಲೂ ಜನರು ಅವರನ್ನು ಕಣ್ಣಾರೆ ಕಾಣಲು ಸೇರುತ್ತಿದ್ದರು. ನಮ್ಮ ಭಾಗದಲ್ಲಿ ಈಗಲೂ ಗಾಂಧೀಜಿಯ ಬಗ್ಗೆ ಅಪಾರ ಪ್ರೀತಿ ಇದೆ’ ಎಂದು ಹಿರಿಯ ಸಾಹಿತಿ ಜಿ.ಟಿ.ವೀರಪ್ಪ ಹೇಳಿದರು.

ಆಗಸ್ಟ್‌ 2, 1927:
ಮೈಸೂರಿನಿಂದ ಹಾಸನಕ್ಕೆ ಹೊರಟಿದ್ದ ಮಹಾತ್ಮಗಾಂಧಿ ಕೆ.ಆರ್‌.ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಈ ವಿಷಯ ಮೊದಲೇ ಅರಿತಿದ್ದ ಜನರು ಹಾರ, ತುರಾಯಿಗಳೊಂದಿಗೆ ಕಾದು ನಿಂತಿದ್ದರು. ರೈಲಿನ ಲೋಕೊ ಪೈಲಟ್‌ ಗಾಂಧೀಜಿಗೆ ಸನ್ಮಾನವಾಗುವವರೆಗೂ,ಒಂದೆರಡು ಮಾತುಗಳನ್ನಾಡುವವರೆಗೂ ಅವಕಾಶ ನೀಡಿದ್ದರು ಎಂಬ ನೆನಪುಗಳು ಹಲವು ಪುಸ್ತಕದಲ್ಲಿ ದಾಖಲಾಗಿವೆ.

ಎಸ್‌.ಎಂ.ಕೃಷ್ಣರ ಕಿವಿಯೋಲೆ ಗಾಂಧೀಜಿಗೆ
ಹಿರಿಯ ಬಿಜೆಪಿ ಮುಖಂಡ ಎಸ್‌.ಎಸ್‌.ಕೃಷ್ಣ ಅವರ ತಂದೆ ಎಸ್‌.ಸಿ.ಮಲ್ಲಯ್ಯ ಸೋಮನಹಳ್ಳಿಯಲ್ಲಿ ಹರಿಜನ ವಿದ್ಯಾರ್ಥಿಗಳಿಗಾಗಿ ವಸತಿನಿಲಯ ನಡೆಸುತ್ತಿದ್ದರು. ಈ ವಿಷಯ ಅರಿತಿದ್ದ ಗಾಂಧಿ ಚನ್ನಪಟ್ಟಣಕ್ಕೆ ತೆರಳುವ ಮಾರ್ಗಮಧ್ಯೆ 1934ರಲ್ಲಿ ಸೋಮನಹಳ್ಳಿಗೆ ಭೇಟಿ ನೀಡಿದ್ದರು. ಮಲ್ಲಯ್ಯ ಅವರ ಸಮಾಜ ಸೇವೆಯನ್ನು ಕಂಡು ಗಾಂಧಿ ಅಪಾರ ಸಂತಸಪಟ್ಟಿದ್ದರು. ವಸತಿ ನಿಲಯದ ಮಕ್ಕಳಿಗೆ ಆಶೀರ್ವಾದ ಮಾಡಿದ್ದರು.

ಆಗ ಎಸ್‌.ಎಂ.ಕೃಷ್ಣ ಅವರು ಎರಡು ವರ್ಷದ ಮಗು. ಅಂದು ಮಲ್ಲಯ್ಯ ಅವರು ಗಾಂಧೀಜಿಗೆ ₹ 300 ಹಣ ನೀಡಿ ಜೊತೆಗೆ ಮಗು ಎಸ್‌.ಎಂ.ಕೃಷ್ಣ ಅವರ ಕಿವಿಯಲ್ಲಿದ್ದ ಓಲೆಗಳನ್ನು ಬಿಚ್ಚಿಕೊಟ್ಟಿದ್ದ ನೆನಪು ಹಲವು ಪುಸ್ತಕಗಳಲ್ಲಿ ದಾಖಲಾಗಿದೆ. ಸೋಮನಹಳ್ಳಿಗೆ ಭೇಟಿ ನೀಡಿದ್ದ ಛಾಯಾಚಿತ್ರ  ಗ್ರಾಮದ ಕೃಷ್ಣ ಅವರ ಮನೆಯಲ್ಲಿ ಈಗಲೂ ಇದ್ದು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿದೆ.

ಅದಾದ ನಂತರ ಅದೇ ವರ್ಷ ಗಾಂಧೀಜಿ ಮಂಡ್ಯ ರೈಲು ನಿಲ್ದಾಣದಲ್ಲಿ ಇಳಿದು ಜನರ ಸನ್ಮಾನ ಸ್ವೀಕರಿಸಿದ ಬಗ್ಗೆ ದಾಖಲೆಗಳಿವೆ.

* ಗಾಂಧೀಜಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ನೋಡಲು ಮೈಸೂರಿಗೆ ಬರುತ್ತಿದ್ದರು. ರೈಲಿನಲ್ಲಿ ಗಾಂಧೀಜಿ ಹೋಗುತ್ತಾರೆ ಎಂದರೆ ಅವರನ್ನು ನೋಡಲು ಅಪಾರ ಸಂಖ್ಯೆಯ ಜನರು ರೈಲು ನಿಲ್ದಾಣದಲ್ಲಿ ಸೇರುತ್ತಿದ್ದರು
–ಜಿ.ಮಾದೇಗೌಡ, ಹಿರಿಯ ಗಾಂಧಿವಾದಿ

* ‘ಗಾಂಧಿಮಾರ್ಗ‘ದಲ್ಲಿ ಕಾಯುತ್ತಿದ್ದ ಅಪಾರ ಸಂಖ್ಯೆಯ ಜನರು

* ಈ ಭಾಗದ ಹೋರಾಟಗಾರರ ಮೇಲೆ ಅವರಿಗೆ ಅಪಾರ ಪ್ರೀತಿ

* ವೇಷ ಬದಲಿಸಿಕೊಂಡು ಗಾಂಧಿ ನೋಡಲು ತೆರಳುತ್ತಿದ್ದ ಜನ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !