ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಕ್ಷೇತ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿ

ಗೋಕರ್ಣದ ರಸ್ತೆಗಳ ಇಕ್ಕೆಲಗಳಲ್ಲಿ ಕಸದ ರಾಶಿ: ಸ್ಥಳೀಯರ ಅಸಮಾಧಾನ
Last Updated 6 ಜೂನ್ 2018, 12:40 IST
ಅಕ್ಷರ ಗಾತ್ರ

ಗೋಕರ್ಣ: ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಗಿರುವ ಗೋಕರ್ಣವು ಸ್ವಚ್ಛತೆಯ ವಿಷಯದಲ್ಲಿ ಹಿಂದೆ ಉಳಿದಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್, ಕಸಗಳ ರಾಶಿ, ತುಂಬಿ ತುಳುಕುತ್ತಿದೆ. ಓಂ ಮತ್ತು ಕುಡ್ಲೆ ಬೀಚ್‌ಗಳ ರಸ್ತೆಯುದ್ದಕ್ಕೂ ಇದೇ ಸ್ಥಿತಿಯಿದೆ.

ಗ್ರಾಮದಲ್ಲಿ ಕಸ ಸಾಗಿಸಲು ಎರಡು ವಾಹನಗಳಿದ್ದರೂ ಕೆಲವು ಕಡೆ ರಸ್ತೆಯ ಮೇಲೆಯೇ ಕಸ ಚೆಲ್ಲಲಾಗುತ್ತಿದೆ. ಕಡಲತೀರದಲ್ಲಿ ಮಾತ್ರ ಸ್ಥಳೀಯ ಅಂಗಡಿಕಾರರು ಸ್ವಚ್ಛಗೊಳಿಸುತ್ತಿರುವುದು ಕಂಡುಬರುತ್ತದೆ. ಓಂ ಬೀಚ್‌ನಲ್ಲಿ ‘ಓಂ ಬೀಚ್ ಅಸೋಸಿಯೇಶನ್’, ಕುಡ್ಲೆ ಬೀಚ್‌ನಲ್ಲಿ ‘ಉಮಾಮಹೇಶ್ವರ ಸಂಘ’ ಹಾಗೂ ಮೇನ್ ಬೀಚ್‌ನಲ್ಲಿ ‘ಅಂಗಡಿಕಾರರ ಸಂಘ’ ಸ್ವಚ್ಛತೆಗೆ ಆದ್ಯತೆ ನೀಡುತ್ತಿವೆ.

‘ಸಮುದ್ರತೀರ ಸುಂದರವಾಗಿವೆ. ಹಲವಾರು ಬಾರಿ ಭೇಟಿ ನೀಡಿದ್ದೇನೆ. ಈಗ ಮೊದಲಿಗಿಂತಲೂ ಹೆಚ್ಚು ಸ್ವಚ್ಛವಾಗಿ ಕಾಣುತ್ತಿದೆ’ ಎನ್ನುತ್ತಾರೆ ಬೆಂಗಳೂರಿನ ಪ್ರವಾಸಿ ಎಸ್.ರವಿತೇಜ.

ಪ್ರವಾಸಿಗರ ಪಾತ್ರ ಮುಖ್ಯ: ಗೋಕರ್ಣದ ಪರಿಸರದ ನೈರ್ಮಲ್ಯದಲ್ಲಿ ಪ್ರವಾಸಿಗರ ಪಾತ್ರವೂ ಪ್ರಮುಖವಾಗಿದೆ. ಕಂಡಕಂಡಲ್ಲಿ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ಎಸೆಯುವುದು ಸಾಮಾನ್ಯವಾಗಿದೆ. ಸ್ಥಳೀಯರು ಎಷ್ಟೇ ಸ್ವಚ್ಛತೆ ಮಾಡಿದರೂ ಪ್ರವಾಸಿಗರು ಗಲೀಜು ಮಾಡಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ವಿದೇಶಿಯರ ಅನುಕರಣೆಯೂ ಇದಕ್ಕೆ ಕಾರಣ ಎನ್ನುವುದು ಸ್ಥಳೀಯರ ಅನಿಸಿಕೆ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿದು, ಅದನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಸ್ವಚ್ಛತೆಯ ಬಗ್ಗೆ ಕಾಳಜಿ ಪ್ರವಾಸಿಗರಿಗೂ ಇರಬೇಕು ಎನ್ನುತ್ತಾರೆ ಅವರು.

‘ಗ್ರಾಮದ ಸ್ವಚ್ಛತೆಯ ಬಗ್ಗೆ ಸ್ಥಳೀಯ ಆಡಳಿತ ಇನ್ನೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಬಹುದು’ ಎಂದು ಸ್ಥಳೀಯರಾದ ಗಂಜಿಗದ್ದೆ ಮಹಾಬಲೇಶ್ವರ ಭಟ್ ಆತಂಕ ವ್ಯಕ್ತಪಡಿಸುತ್ತಾರೆ.

ಶಂಕರ ಪ್ರಸಾದ ಫೌಂಡೇಶನ್: ಸಮೀಪದ ಬಂಕೊಕೊಡ್ಲದಲ್ಲಿರುವ ಸ್ವಾಮಿ ಯೋಗರತ್ನ ನೇತೃತ್ವದಲ್ಲಿ ನಡೆಯುವ ಶಂಕರ ಪ್ರಸಾದ ಫೌಂಡೇಶನ್ ಊರಿನ ಸ್ವಚ್ಛತೆಯ ಬಗ್ಗೆ ಸ್ವಲ್ಪ ಕಾಳಜಿ ವಹಿಸುತ್ತಿದೆ.

ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲು ಊರಿನ ತುಂಬಾ ವಿದ್ಯುತ್ ಕಂಬಗಳಿಗೆ ವಿಶೇಷ ರೀತಿಯಲ್ಲಿ ಚೀಲಗಳನ್ನು ತೂಗು ಬಿಟ್ಟಿದೆ. ಅವುಗಳು ತುಂಬಿದ ನಂತರ ಅವುಗಳನ್ನು ತೆರವು ಮಾಡುವ ಕಾಯಕ ಮಾಡಲಾಗುತ್ತಿದೆ. ಇದು ಸ್ವಲ್ಪ ಮಟ್ಟಿನ ಪರಿಸರ ಸ್ವಚ್ಛತೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT