ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ

ಶಾಸಕರು, ಸ್ಥಳೀಯ ಮುಖಂಡರು, ಅಭಿಮಾನಿಗಳಿಂದ ಜೆಡಿಎಸ್‌ ವರಿಷ್ಠರಲ್ಲಿ ಮನವಿ ಸಲ್ಲಿಕೆ
Last Updated 14 ಡಿಸೆಂಬರ್ 2018, 12:42 IST
ಅಕ್ಷರ ಗಾತ್ರ

ಮಂಡ್ಯ: ಸಾರ್ವತ್ರಿಕ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಾದ್ಯಂತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಹೆಸರು ಮುನ್ನೆಲೆಗೆ ಬಂದಿದೆ. ನಿಖಿಲ್‌ ಅವರೇ ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಬೇಕು ಎಂಬ ಒತ್ತಡ ವರಿಷ್ಠರ ಮುಂದೆ ಹೆಚ್ಚಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸ್ಥಳೀಯ ಜೆಡಿಎಸ್‌ ಮುಖಂಡರು, ಯುವಜನರು ಹಾಗೂ ಅಭಿಮಾನಿಗಳು ನಿಖಿಲ್‌ ಸ್ಪರ್ಧೆಗಾಗಿ ಒತ್ತಡ ಹೇರುತ್ತಿರುವುದು ಬೆಳಕಿಗೆ ಬಂದಿದೆ. ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ, ನಾರಾಯಣಗೌಡ ಹಾಗೂ ಸುರೇಶ್‌ಗೌಡ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಮೊಮ್ಮಗನನ್ನು ಕಣಕ್ಕಿಳಿಸುವಂತೆ ಒತ್ತಾಯ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭಗಳಲ್ಲಿ, ನಿಖಿಲ್‌ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಲಿ ಎಂಬ ಕೂಗು ಹೆಚ್ಚಳವಾಗುತ್ತಿದೆ.

ಜೊತೆಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಇನ್ನೊಂದು ತಂಡ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನಿಖಿಲ್‌ ಸ್ಪರ್ಧೆಗೆ ಒತ್ತಡ ಹೇರಿದ್ದಾರೆ. ಇಷ್ಟೇ ಅಲ್ಲದೆ ನಿಖಿಲ್‌ ಅಭಿಮಾನಿಗಳ ಸಂಘದ ಸದಸ್ಯರು, ವಿವಿಧ ಸಂಘಟನೆಗಳ ಯುವಕರು ಕೂಡ ನಿಖಿಲ್‌ ಸ್ಪರ್ಧೆಗಾಗಿ ಒತ್ತಾಯ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಜೆಡಿಎಸ್‌ ಮುಖಂಡರು ಹಾಗೂ ಅಭಿಮಾನಿಗಳು ನಿಖಿಲ್‌ ಜಪ ಮಾಡುತ್ತಿದ್ದು ವರಿಷ್ಠರು ಜಿಲ್ಲೆಗೆ ಬಂದಾಗ ‘ಭಾವಿ ಸಂಸದ ನಿಖಿಲ್‌ ಕುಮಾರಸ್ವಾಮಿಗೆ ಜೈ’ ಎಂದು ಕೂಗುತ್ತಿದ್ದಾರೆ.

‘ನಾವು ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಮನವಿ ಮಾಡಿರುವುದು ನಿಜ. ನಿಖಿಲ್‌ ಬಗ್ಗೆ ಜಿಲ್ಲೆಯ ಜನರಿಗೆ ಅಪಾರ ಪ್ರೀತಿ ಇದೆ. ದೇವೇಗೌಡರ ಕುಟುಂಬದ ಮೇಲೆ ಹಾಸನ, ರಾಮನಗರಕ್ಕಿಂತಲೂ ಮಂಡ್ಯ ಜನರು ಹೆಚ್ಚು ಪ್ರೀತಿ ಹೊಂದಿದ್ದಾರೆ. ನಿಖಿಲ್‌ ಅವರು ತಮ್ಮ ರಾಜಕೀಯ ಜೀವನವನ್ನು ಮಂಡ್ಯ ಜಿಲ್ಲೆಯಿಂದಲೇ ಆರಂಭಿಸಬೇಕು ಎಂಬುದು ನಮ್ಮ ಜನರ ಒತ್ತಾಸೆ. ಹೀಗಾಗಿ ಅವರಿಗೇ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದೇವೆ. ಮುಂದೆ ಜನರೊಂದಿಗೆ ತೆರಳಿ ಒತ್ತಾಯ ಮಾಡುತ್ತೇವೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

ಹಲವು ಬಾರಿ ನಿಖಿಲ್‌ ಭೇಟಿ:‌ಕಳೆದೊಂದು ವರ್ಷದಿಂದ ನಿಖಿಲ್‌ ಕುಮಾರಸ್ವಾಮಿ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಎಲ್ಲಾ ತಾಲ್ಲೂಕುಗಳಿಗೆ ತೆರಳಿ ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಈಚೆಗೆ ಲಾರಿ ಡಿಕ್ಕಿಯಾಗಿ ಮೃತಪಟ್ಟವರ ಮನೆಗೆ ತೆರಳಿ ಅವರೇ ಪರಿಹಾರ ವಿತರಣೆ ಮಾಡಿದ್ದರು. ಜೊತೆಗೆ ಅಂಬರೀಷ್‌ ಮೃತದೇಹವನ್ನು ನಗರಕ್ಕೆ ತಂದಾಗ ಅವರ ಪುತ್ರ ಅಭಿಷೇಕ್‌ ಜೊತೆಗೆ ನಿಂತಿದ್ದರು, ಅಂಬರೀಷ್‌ ಅಭಿಮಾನಿಗಳಿಗೆ ಸಾಂತ್ವನ ಹೇಳಿದ್ದರು.

ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ನಿಖಿಲ್‌ ಅವರೇ ಅಭ್ಯರ್ಥಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆಗಲೂ ಜೆಡಿಎಸ್‌ ಶಾಸಕರ ಗುಂಪು ಅವರ ಪರ ನಿಂತಿದ್ದರು. ಆದರೆ 22 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಎಲ್‌.ಆರ್‌.ಶಿವರಾಮೇಗೌಡರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ಆರು ತಿಂಗಳ ಅವಧಿಗೆ ಟಿಕೆಟ್‌ ನೀಡಲಾಯಿತು. ಇದನ್ನು ಶಿವರಾಮೇಗೌಡರೇ ಹೇಳಿಕೊಂಡಿದ್ದರು.

‘ಮುಂದಿನ ಚುನಾವಣೆಯಲ್ಲಿ ನಿಖಿಲ್‌ ಅಭ್ಯರ್ಥಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಅವರು ಚಿತ್ರರಂಗದಲ್ಲಿ ಇದ್ದುಕೊಂಡೇ ರಾಜಕಾರಣ ಮಾಡುತ್ತಾರೆ’ ಎಂದು ನಿಖಿಲ್‌ ಅಭಿಮಾನಿ ಶಿವಕುಮಾರ್‌ ತಿಳಿಸಿದರು.

ಕಾಂಗ್ರೆಸ್‌ ಮನವೊಲಿಕೆಗೆ ‘ಜಮೀರ್‌’ ಅಸ್ತ್ರ?
ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್‌ ಪಕ್ಷಕ್ಕೆ ಕಾಂಗ್ರೆಸ್‌ ಬೆಂಬಲ ನೀಡಲಿದೆ ಎಂಬ ಅಭಿಪ್ರಾಯ ಜೆಡಿಎಸ್‌ ಮುಖಂಡರಲ್ಲಿದೆ. ಒಂದು ವೇಳೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಮೈತ್ರಿಗೆ ಹಾಗೂ ನಿಖಿಲ್‌ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ನಿಯಂತ್ರಿಸಲು ಸಚಿವ ಜಮೀರ್‌ ಅಹಮದ್‌ಖಾನ್‌ ಅವರನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಜೆಡಿಎಸ್‌ ನಿರ್ಧರಿಸಿದೆ. ನಿಖಿಲ್‌ ಅವರನ್ನು ಕಂಡರೆ ಜಮೀರ್‌ ಅಮಹದ್‌ಗೆ ಅಪಾರ ಪ್ರೀತಿ ಇದೆ. ಮೊದಲಿನಿಂದಲೂ ಇಬ್ಬರೂ ಆತ್ಮೀಯರಾಗಿದ್ದಾರೆ. ಈ ಆತ್ಮೀಯತೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಲ್ಲಿರುವ ಅಸಮಾಧಾನವನ್ನು ನಿಯಂತ್ರಿಸುತ್ತದೆ ಎಂಬುದು ಜೆಡಿಎಸ್‌ ಮುಖಂಡರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT