ಸವಳು-ಜವಳಿನಿಂದ ಸಮೃದ್ಧಿಯೆಡೆಗೆ...!

7
ನಾಗರಹಳ್ಳಿ ಗ್ರಾಮದ ಪ್ರಗತಿಪರ ರೈತ ನಾನಾಗೌಡ ಪಾಟೀಲರ 12 ಎಕರೆ ಜಮೀನು ಸಂಪೂರ್ಣ ಹಣ್ಣುಮಯ

ಸವಳು-ಜವಳಿನಿಂದ ಸಮೃದ್ಧಿಯೆಡೆಗೆ...!

Published:
Updated:
Deccan Herald

ಸಿಂದಗಿ:  ‘ಪಿಯುಸಿ ಮುಗಿಯುತ್ತಿದ್ದಂತೆ ರಾಜಕೀಯ ಪ್ರವೇಶ. ಗುತ್ತಿಗೆ ಉದ್ಯೋಗವೂ ಆಯ್ತು. ಏನೆಲ್ಲಾ ಕಾರ್ಯಭಾರವೂ ಮುಗಿತು. ಇದಾವುದರಲ್ಲೂ ತೃಪ್ತಿ ಸಿಗಲಿಲ್ಲ. ಕೊನೆಗೆ ಅಣ್ಣ ಬಸವಣ್ಣನ ಸಂದೇಶದಂತೆ ಕಾಯಕ; ಅದರಲ್ಲೂ ಕೃಷಿ ಕಾಯಕ ಕೈ ಬೀಸಿ ಕರೆಯಿತು. ಇದೀಗ ನಾ ಇತರರಿಗೆ ಮಾದರಿಯಾಗಿದ್ದೇನೆ ಎಂಬುದೇ ಹೆಮ್ಮೆ...’

ಸಿಂದಗಿ ತಾಲ್ಲೂಕಿನ ಕುಗ್ರಾಮ ನಾಗರಹಳ್ಳಿ ಗ್ರಾಮದ ಪ್ರಗತಿಪರ ರೈತ ನಾನಾಗೌಡ ಪಾಟೀಲರ ಮನದಾಳದ ಮಾತುಗಳಿವು.

‘ಕೃಷಿ ಆರಂಭಕ್ಕೂ ಮುನ್ನವೇ ಜಮೀನು ಸವಳು–ಜವಳಾಗಿತ್ತು. ಇಂತಹ ಭೂಮಿಯಲ್ಲಿ ಕೃಷಿ ಮಾಡಲು ಮುಂದಾದಾಗ ಅಪಹಾಸ್ಯ ಮಾಡಿ ನಕ್ಕಿದವರೇ ಹೆಚ್ಚು. ಇದನ್ನೇ ಸವಾಲಾಗಿ ಸ್ವೀಕರಿಸಿದೆ. ಕೊನೆಗೂ ಯಶಸ್ವಿಯಾದೆ’ ಎಂದು ನಾನಾಗೌಡ ತಮ್ಮ ಕೃಷಿ ಅನುಭವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

ನಾನಾಗೌಡ ಜಮೀನಿನಲ್ಲಿ ಇಲ್ಲದ ಹಣ್ಣಿನ ಗಿಡಗಳೇ ಇಲ್ಲ. ಇಲ್ಲಿ ಎಲ್ಲವೂ ಇವೆ. ಸಂಪೂರ್ಣ 12 ಎಕರೆ ಜಮೀನನ್ನು ಹಣ್ಣುಗಳನ್ನು ಬೆಳೆಯಲೇ ಬಳಸಿಕೊಂಡಿದ್ದಾರೆ. ಇದೀಗ ಅವರಿಗೆ ಬೇರೆ ಹಣ್ಣು ಬೆಳೆಸಲು ಜಾಗವಿಲ್ಲದಷ್ಟು ಜಮೀನಿನ ಬಾಂದಾರ, ಬದು ಎಲ್ಲ ಕಡೆ ಹಣ್ಣುಗಳೇ ಕಾಣುತ್ತವೆ.

ದ್ರಾಕ್ಷಿ, ದಾಳಿಂಬೆ, ನಾಲ್ಕು ತರಹದ ತೆಂಗು, ಮಾವು, ಪೇರಲ, ಜತೆಗೆ ನಿಂಬೆ, ಚಿಕ್ಕು, ಹಲಸು, ಅಡಿವೆ ಗೆಣಸು, ಅಡಿಕೆ, ಖಾಜು, ಬದಾಮ, ಹೊಸ ತಳಿಯ ಆ್ಯಪಲ್ ಬಾರಿಹಣ್ಣು, ಹನುಮಾನಫಲ, ರಾಮಫಲ, ಸೀತಾಫಲ, ಅಂಜೂರಿ... ಹೀಗೆ ನಾನಾ ನಮೂನೆಯ ಹಣ್ಣುಗಳು ನಾನಾಗೌಡರ ತೋಟದಲ್ಲಿ ವಿಫುಲವಾಗಿವೆ.

ದಾಳಿಂಬೆಯಿಂದ ಪ್ರಥಮ ವರ್ಷ ₹ 33 ಲಕ್ಷ, ಎರಡನೇ ವರ್ಷ ₹ 29 ಲಕ್ಷ, ಮೂರನೇ ಸಲ ₹ 10 ಲಕ್ಷ, ಈ ವರ್ಷ ಈಗಾಗಲೇ ₹ 4 ಲಕ್ಷ ಲಾಭ ಬಂದಿದ್ದರೂ ಇನ್ನೂ ಬರಬೇಕಿದೆ. ಇವರ ಹಣ್ಣಿನ ತೋಟಕ್ಕೆ ಬಸವ ಚೈತನ್ಯ ಫಾರ್ಮ್‌ ಎಂದು ಹೆಸರಿಡಲಾಗಿದೆ. ಈ ತೋಟವೀಗ ವನ ಭೋಜನ ತಾಣವಾಗಿದೆ.

ತೋಟದ ಮುಖ್ಯದ್ವಾರದಲ್ಲಿ ‘ಇದು ನಿಮ್ಮ ತೋಟ. ಹಕ್ಕಿನಿಂದ ತಿನ್ನಿ ಕದ್ದು ತಿನ್ನದಿರಿ’ ಎಂಬ ನಾಮಫಲಕವೂ ರಾರಾಜಿಸುತ್ತಿದೆ. ಆಕಳುಗಳಿವೆ. ‘ದಯವಿರಬೇಕು ಸಕಲ ಜೀವಿಗಳಲ್ಲಿ’ ಎಂಬ ನಾಮಫಲಕದ ಹಿಂದೆ 25 ಮೊಲಗಳಿವೆ. ಇಲ್ಲಿನ ದಾಳಿಂಬೆಗೆ ಕೋಲ್ಕತ್ತಾ, ಚೆನೈ, ಮುಂಬಯಿ ನಗರಗಳಲ್ಲಿ ಭಾರಿ ಬೇಡಿಕೆಯಿದೆ.

‘ಈ ಮೊದಲು ಇದೇ ತೋಟದಲ್ಲಿ ಇಸ್ರೇಲ್ ಮಾದರಿಯಲ್ಲಿ ಕಬ್ಬು ಬೆಳೆದು ಅಗಾಧ ಲಾಭ ಪಡೆದಿರುವೆ. ಸಂಪೂರ್ಣ ಹಣ್ಣಿನ ತೋಟವಾಗಿದ್ದರಿಂದ ಇಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡಿದರೆ ಇನ್ನಷ್ಟು ಸುಧಾರಣೆ ಮಾಡಬಹುದು. ಸರ್ಕಾರ ನನ್ನನ್ನು ಗುರುತಿಸಿ ಇಸ್ರೇಲ್‌ಗೆ ಕಳುಹಿಸಿಕೊಟ್ಟರೇ ತೋಟಗಾರಿಕೆ ಬೆಳೆಯಲ್ಲಿ ಒಂದು ಕ್ರಾಂತಿಯನ್ನೇ ಮಾಡಬಹುದಾಗಿದೆ’ ಎನ್ನುತ್ತಾರೆ ನಾನಾಗೌಡ.

ತಾಲ್ಲೂಕಿನ ಒಬ್ಬ ರೈತ ಮಾದರಿಯ ಹಣ್ಣಿನ ತೋಟ ನಿರ್ಮಾಣ ಮಾಡಿದ್ದರೂ; ನಾನಾಗೌಡರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಳ್ಳಷ್ಟು ಸ್ಪಂದಿಸುತ್ತಿಲ್ಲ ಎಂಬ ದೂರಿದೆ. ತೋಟಗಾರಿಕೆ ಸಚಿವರ ಸ್ವಕ್ಷೇತ್ರದ ಸಾಧಕನನ್ನು ಇಸ್ರೇಲ್‌ಗೆ ಕಳುಹಿಸಿಕೊಟ್ಟು, ಮತ್ತಷ್ಟು ತಂತ್ರಜ್ಞಾನ ಒದಗಿಸಬೇಕು ಎಂಬುದು ಸ್ಥಳೀಯರ ಆಶಯ.

ಸಂಪರ್ಕ ಸಂಖ್ಯೆ: 9972298257

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !