ಭಾನುವಾರ, ಸೆಪ್ಟೆಂಬರ್ 20, 2020
21 °C
ಕೃಷಿ ಮೇಳ ಇಂದಿನಿಂದ * ಜಿಕೆವಿಕೆ ಪ್ರಾಂಗಣದಲ್ಲಿ ತರಹೇವಾರಿ ಪ್ರಾತ್ಯಕ್ಷಿಕೆ

ಲಾಭ ಹೆಚ್ಚಿಸಲಿದೆ ‘ರಸಾವರಿ’

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳ ಬಳಕೆಯಿಂದ ರೈತರು ಲಾಭ ಪಡೆಯಬಹುದಾಗಿದ್ದು, ಇದನ್ನು ತೋರಿಸುವ ಸಲುವಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಪ್ರಾಂಗಣದಲ್ಲಿ ಗುರುವಾರದಿಂದ ನಡೆಯುವ ಕೃಷಿ ಮೇಳದಲ್ಲಿ ತರಹೇವಾರಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ‘ರಸಾವರಿ’ ಕೃಷಿ ಪದ್ಧತಿಯೂ ಒಂದು. ಈ ಪದ್ಧತಿಯ ಪ್ರಯೋಜನಗಳ ಬಗ್ಗೆ ಇಲ್ಲಿನ ಕೃಷಿ ಭೂಮಿಯಲ್ಲೇ ಮಾಹಿತಿ ಪಡೆಯಬಹುದು.

ಇದೇ 24ರಿಂದ 27ರವರೆಗೆ ನಡೆಯಲಿರುವ ಈ ಬಾರಿಯ ಕೃಷಿ ಮೇಳವು ‘ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ’ಯ ಆಶಯವನ್ನು ಹೊಂದಿದೆ. ರೈತರಿಗೆ ಕೃಷಿ ವಿಧಾನಗಳ ಬಗ್ಗೆ ನಿಖರ ಮಾಹಿತಿ ನೀಡುವುದು. ಅವರಿಗೆ ವೈಜ್ಞಾನಿಕ ವಿಧಾನಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾಲಯದಲ್ಲೇ ಬೆಳೆಗಳನ್ನು ಬೆಳೆಯಲಾಗಿದ್ದು, ರೈತರಿಗೆ ಬೇಸಾಯ ಪದ್ಧತಿಗಳ ಬಗ್ಗೆ ತೋಟದಲ್ಲೇ ಮಾಹಿತಿ ಸಿಗಲಿದೆ.

‘ರಸಾವರಿ ಬೇಸಾಯ ಪದ್ಧತಿಯ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇದೆ. ರಸಾವರಿ ಪದ್ಧತಿಯ ಮೂಲಕ ಹನಿ ನೀರಾವರಿಯ ಜೊತೆ ಜೊತೆಗೆ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ನೇರವಾಗಿ ಬೆಳೆಗಳಿಗೆ ಸಿಂಪಡಿಸಬಹುದು. ಕೃಷಿಯಲ್ಲಿ ಈ ವಿಧಾನ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವ ಜತೆಗೆ ಗೊಬ್ಬರ ಪೋಲಾಗುವುದನ್ನು ತಡೆಯಬ ಹುದು’ ಎಂದು ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಹನುಮಂತಪ್ಪ ತಿಳಿಸಿದರು.

‘ಸಾಂಪ್ರದಾಯಿಕ ಕೃಷಿ ಮಾಡುವವರು ಗೊಬ್ಬರವನ್ನು ಬೆಳೆಗಳ ಜತೆಗೆ ಖಾಲಿ ಜಾಗದ ಮೇಲೆಲ್ಲಾ ಸಿಂಪಡಿಸುತ್ತಾರೆ. ಆಗ ಅದು ಪೂರ್ಣಪ್ರಮಾಣದಲ್ಲಿ ಬೆಳೆಗಳಿಗೆ ಲಭಿಸುವುದಿಲ್ಲ. ಇದರಿಂದ ಮಣ್ಣಿನ ಸಾಂದ್ರತೆಯೂ ಹಾಳಾಗುತ್ತದೆ. ಉದಾಹರಣೆಗೆ ಒಂದು ಎಕರೆಗೆ 100 ಕೆ.ಜಿ ಗೊಬ್ಬರವನ್ನು ಒಂದು ಬಾರಿ ತೋಟಕ್ಕೆ ಹಾಕುತ್ತಾರೆ. ಆದರೆ, ಅದೇ ಪ್ರಮಾಣದ ಗೊಬ್ಬರವನ್ನು ‘ರಸಾವರಿ’ ವಿಧಾನದ ಮೂಲಕ ನಾಲ್ಕೈದು ಬಾರಿ ಬೆಳೆಗಳಿಗೆ ತಲುಪಿಸಬಹುದು’ ಎಂದು ಅವರು ವಿವರಿಸಿದರು.

ಈ ವಿಧಾನದಿಂದ ನೀರು, ಗೊಬ್ಬರ ಹಾಗೂ ಕೀಟನಾಶಕಗಳು ಬೆಳೆಗಳಿಗೆ ಮಾತ್ರ ತಲುಪುತ್ತದೆ. ರೈತರು ಪದೇ ಪದೇ ಗೊಬ್ಬರ ಹಾಕುವುದೂ ತಪ್ಪಲಿದೆ. ಇದನ್ನು ಮನದಟ್ಟು ಮಾಡಲು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದೇವೆ’ ಎಂದರು.

‘ಸಮಗ್ರ ಕೃಷಿ’ ತೋಟ: 2–5 ಎಕರೆಗಳಷ್ಟು ನೀರಾವರಿ ಕೃಷಿ ಭೂಮಿ ಹೊಂದಿರುವ ಐದಾರು ಸದಸ್ಯರ ಚಿಕ್ಕ ರೈತಾಪಿ ಕುಟುಂಬ ನಿಮ್ಮದಾದಲ್ಲಿ, ಹೆಚ್ಚು ಲಾಭ ತರುವ ‘ಸಮಗ್ರ ಕೃಷಿ ಪದ್ಧತಿ’ ಅನುಸರಿಸಬಹುದು. ಈ ಬಗ್ಗೆ ರೈತರಿಗೆ ಪೂರ್ಣ ಹಾಗೂ ನಿಖರ ಮಾಹಿತಿ ನೀಡಲು ಐದು ಎಕರೆ ಪ್ರದೇಶದಲ್ಲಿ ‘ಸಮಗ್ರ ಕೃಷಿ’ ತೋಟವೇ ಸಿದ್ಧವಾಗಿದೆ. 

ರೈತರು ಕೃಷಿಯ ಜತೆಗೆ ಹೈನುಗಾರಿಕೆ ಮಾಡುವುದರಿಂದ ಜಾನುವಾರುಗಳ ಗೊಬ್ಬರ ತೋಟಕ್ಕೆ ಬಳಸಬಹುದು. ಆಧುನಿಕ ನೀರಾವರಿ ತಂತ್ರಜ್ಞಾನ ಬಳಸಿ ಸಣ್ಣ ಪ್ರಮಾಣದಲ್ಲಿ ವಿವಿಧ ಬೆಳೆ ಬೆಳೆಯಬಹುದು. ಪೂರಕವಾಗಿ ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡಬಹುದು. ಕೃಷಿ ಹೊಂಡದಲ್ಲಿ ಮಳೆ ನೀರು ಸಂಗ್ರಹಿಸಿ ಮೀನು ಸಾಕಬಹುದು. ಇದರ ಸಂಪೂರ್ಣ ಮಾಹಿತಿಗೆ ಐದು ಎಕರೆ ಪ್ರದೇಶದ ತೋಟದಲ್ಲಿ ಪ್ರಾತ್ಯಕ್ಷಿಕೆ ಇದೆ. 21 ಉಪಕಸುಬುಗಳನ್ನು ಪರಿಚಯಿಸಲಾಗಿದೆ. 62 ಬೆಳೆಗಳನ್ನು ಬೆಳೆಯಲಾಗಿದೆ.

‘ರಸಾವರಿ’ ಬೇಸಾಯ ಎಂದರೇನು?

ಹನಿ ನೀರಾವರಿ ಮೂಲಕವೇ ರಸಗೊಬ್ಬರ, ಕೀಟನಾಶಕವನ್ನು ನೀರಿನ ಜೊತೆಯಲ್ಲೇ ನೇರವಾಗಿ ಬೆಳೆಗಳಿಗೆ ಅಥವಾ ಗಿಡದ ಬುಡಗಳಿಗೆ ಸಿಂಪಡಣೆ ಮಾಡುವ ವಿಧಾನಕ್ಕೆ ‘ರಸಾವರಿ ಕೃಷಿ ಪದ್ಧತಿ’ ಎಂದು ಕರೆಯುವರು. ಇದರಿಂದ ನೀರು, ಗೊಬ್ಬರ, ಕೀಟನಾಶಕಗಳನ್ನು ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬಹುದು.

‘ವೆಂಚುರಿ’ ಸಾಧನದಿಂದ ಯಶಸ್ಸು

‘ರಸಾವರಿ ಬೇಸಾಯ ಮಾಡಲು ‘ವೆಂಚುರಿ’ ಸಾಧನ ಅವಶ್ಯಕ. ಇದರ ಅಳವಡಿಕೆಗೆ ₹2,500 ವೆಚ್ಚ ಬೀಳುತ್ತದೆ. ಸಂಪ್ ಮುಖಾಂತರ ನೀರು ಹರಿಸಲು ಅಳವಡಿಸುವ ‘ಪೈಪ್ ಮಾದರಿಯಲ್ಲೇ ವೆಂಚುರಿ ಸಾಧನ ಕಾರ್ಯನಿರ್ವಹಿಸುತ್ತದೆ. ನೀರು ಹರಿಯುವಾಗ ಒಂದು ಬಕೆಟ್‌ ಅಥವಾ ಡ್ರಮ್‌ನಲ್ಲಿ ಗೊಬ್ಬರ, ಕೀಟನಾಶಕಗಳನ್ನು ಬೆರೆಸಿ ಅದನ್ನು ನೇರವಾಗಿ ಗಿಡಗಳಿಗೆ ಪೈಪ್ ಮೂಲಕ ಪೂರೈಸಬಹುದು’ ಎನ್ನುತ್ತಾರೆ ಹನುಮಂತಪ್ಪ.

‘ವೆಂಚುರಿ’ ಸಾಧನದಿಂದ ರಸಾವರಿ ಯಶಸ್ವಿ

‘ರಸಾವರಿ ಬೇಸಾಯ ಮಾಡಲು ‘ವೆಂಚುರಿ’ ಸಾಧನ ಅವಶ್ಯಕ. ಇದರ ಅಳವಡಿಕೆಗೆ ₹2,500 ವೆಚ್ಚ ಬೀಳುತ್ತದೆ. ಸಂಪ್ ಮುಖಾಂತರ ನೀರು ಹರಿಸಲು ಅಳವಡಿಸುವ ‘ಪೈಪ್ ಮಾದರಿಯಲ್ಲೇ ವೆಂಚುರಿ ಸಾಧನ ಕಾರ್ಯನಿರ್ವಹಿಸುತ್ತದೆ. ನೀರು ಹರಿಯುವಾಗ ಒಂದು ಬಕೆಟ್‌ ಅಥವಾ ಡ್ರಮ್‌ನಲ್ಲಿ ಗೊಬ್ಬರ, ಕೀಟನಾಶಕಗಳನ್ನು ಬೆರೆಸಿ ಅದನ್ನು ನೇರವಾಗಿ ಗಿಡಗಳಿಗೆ ಪೈಪ್ ಮೂಲಕ ಪೂರೈಸಬಹುದು’ ಎನ್ನುತ್ತಾರೆ ಹನುಮಂತಪ್ಪ.

***

ರೈತರನ್ನು ತೋಟದೊಳಗೆ ಕರೆದೊಯ್ದು ಪ್ರತ್ಯಕ್ಷವಾಗಿ ಬೇಸಾಯ ಪದ್ಧತಿಗಳನ್ನು ವಿವರಿಸ<br/>ಲಾಗುವುದು. ಇದರಿಂದ ರೈತರಿಗೆ ನಿಖರ ಮಾಹಿತಿ ದೊರೆಯಲಿದೆ

- ಹನುಮಂತಪ್ಪ, ಕೃಷಿ ವಿಜ್ಞಾನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು