ಹಣ್ಣುಗಳ ಕೊಯ್ಲಿಗೆ ಸುಲಭ ಸಾಧನ!

7

ಹಣ್ಣುಗಳ ಕೊಯ್ಲಿಗೆ ಸುಲಭ ಸಾಧನ!

Published:
Updated:
Deccan Herald

ಹಣ್ಣಿನ ಗಿಡಗಳನ್ನು ಹೇಗೋ ಕಷ್ಟಪಟ್ಟು ಬೆಳೆಸಬಹುದು. ಆದರೆ ಬೆಳೆದು ನಿಂತ ಮರಗಳಿಂದ ಹಣ್ಣು ಕೊಯ್ಯುವುದು ಮಾತ್ರ ಕಷ್ಟದ ಕೆಲಸ. ಒಂದು ಎತ್ತರದ ಮರಗಳಿಂದ ಹಣ್ಣುಗಳನ್ನು ಕೊಯ್ಯಲು ಆಳುಗಳು ಬೇಕು. ನಿಂಬೆ, ಮೋಸುಂಬೆಯಂತಹ ಕುಬ್ಚಗಿಡಗಳಿಂದ ಹಣ್ಣು ಬಿಡಿಸಲು ಮುಳ್ಳಿನ ಸಮಸ್ಯೆ. ಇವೆರಡಕ್ಕೂ ಕಾರ್ಮಿಕರನ್ನು ಆಶ್ರಯಿಸೋಣ ಎಂದರೆ, ಸಮಯಕ್ಕೆ ಸರಿಯಾಗಿ ಅವರು ಸಿಗುವುದಿಲ್ಲ. ಮತ್ತೊಂದೆಡೆ, ಎತ್ತರದ ಮರದಿಂದ ಹಣ್ಣನ್ನು ಕೊಯ್ದು, ಅದು ಕೆಳಗೆ ಬಿದ್ದರೆ, ಹಾಳಾಗುತ್ತದೆ. ಈ ಎಲ್ಲ ಸಮಸ್ಯೆಗಳಿಂದಾಗಿ ತೋಟಗಾರಿಕೆ ಕೃಷಿಯೇ ಕಷ್ಟ ಎನ್ನಿಸುವಂತಾಗಿದೆ.

ಇದನ್ನು ಮನಗಂಡ ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಸೇಂತಿಲ್ ಕುಮಾರ್‌ ಮತ್ತು ತಂಡ ಸುಲಭ ರೂಪದಲ್ಲಿ, ಕಡಿಮೆ ಬೆಲೆಯಲ್ಲಿ, ರೈತರೇ ತಯಾರಿಸಿಕೊಳ್ಳಬಹುದಾದ ಹಣ್ಣುಗಳ ಕೊಯ್ಲು ಮಾಡುವಂತಹ ಉಪಕರಣಗಳನ್ನು ಸಿದ್ಧಪಡಿಸಿದ್ದಾರೆ. ಇವರು ಸಿದ್ಧಪಡಿಸಿರುವ ಸಾಧನಗಳಲ್ಲಿ ಮಾವು, ನಿಂಬೆ, ಕಿತ್ತಳೆ, ಸಪೋಟ ಹಣ್ಣುಗಳನ್ನು ಕೊಯ್ಲು ಮಾಡಬಹುದು.

ಉಪಕರಣ ಹೀಗಿದೆ
ಹಗ್ಗದಿಂದ ನೇಯ್ದ ಬಲೆಯನ್ನು ವೃತ್ತಾಕಾರದ ಆಕಾರದಲ್ಲಿರುವ ಕಬ್ಬಿಣದ ಕಂಬಿಗೆ ಕಟ್ಟಬೇಕು. ಆ ಕಂಬಿಯ ತುದಿಯಲ್ಲಿ ಕಬ್ಬಿಣದ ಒಂದು ಪಟ್ಟಿಯನ್ನು ಅಡ್ಡಲಾಗಿ ಜೋಡಿಸಬೇಕು. ಅದಕ್ಕೆ ಹೊಂದಿಕೊಂಡಂತೆ ಅಗತ್ಯಕ್ಕೆ ತಕ್ಕಷ್ಟು ಉದ್ದದ ಅಲ್ಯೂಮಿನಿಯಂ ಪೈಪ್ ಅಳವಡಿಸಿಕೊಳ್ಳಬೇಕು. ಕಂಬಿಯ ತುದಿಯಲ್ಲಿ ಕಟ್ಟಿರುವ ಕಬ್ಬಿಣದ ಪಟ್ಟಿಗೆ ಹಣ್ಣಿನ ತೊಟ್ಟು ತಾಕಿಸಿ ಎಳೆದರೆ ಹಣ್ಣು ಬಲೆಯ ಒಳಗೆ ಬೀಳುತ್ತದೆ. ಇದರಿಂದ ಹಣ್ಣು ನೆಲಕ್ಕೆ ಬೀಳುವುದಿಲ್ಲ. ಈ ಉಪಕರಣದಿಂದ ಎಷ್ಟೇ ಎತ್ತರದಲ್ಲಿ ಇರುವ ಹಣ್ಣನ್ನೂ ಸುರಕ್ಷಿತವಾಗಿ ಕೊಯ್ಲು ಮಾಡಬಹುದಾಗಿದೆ ಎನ್ನುತ್ತಾರೆ ಡಾ. ಸೇಂತಿಲ್ ಕುಮಾರ್.  ಈ ಉಪಕರಣದ ಬೆಲೆ ₹ 350 ರೂಪಾಯಿ.

ನಿಂಬೆ ಹಣ್ಣು ಕೊಯ್ಯುವ ಸಾಧನ
ನಿಂಬೆಹಣ್ಣಿನ ಗಿಡ ಕುಬ್ಜವಾಗಿದ್ದರೂ ಗಿಡದಲ್ಲಿರುವ ಮುಳ್ಳಿನಿಂದಾಗಿ ಹಣ್ಣು ಕೊಯ್ಲು ಮಾಡುವುದು ಕಷ್ಟದ ಕೆಲಸ. ಯಾವ ವಿಧಾನದಿಂದ ಹಣ್ಣು ಬಿಡಿಸುತ್ತೆನೆಂದರೂ, ಮುಳ್ಳಿನಿಂದ ಚುಚ್ಚಿಸಿಕೊಳ್ಳದಿರಲು ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ. ಈ ಸಮಸ್ಯೆಗಳನ್ನೇ ಆಧಾರವಾಗಿಟ್ಟುಕೊಂಡು, ವಿಜ್ಞಾನಿಗಳ ತಂಡ ಪುಟ್ಟ ಉಪಕರಣ ತಯಾರಿಸಿದೆ. ಅದು ಹೀಗಿದೆ.

ಒಂದು ಅಡಿ ಉದ್ದದ, 25 ಮಿಲಿ ಮೀಟರ್ ಗಾತ್ರದ ಪಿವಿಸಿ ಪೈಪು (ಕೆಳಭಾಗ ಮುಚ್ಚಿರಬೇಕು. ವಿವರಣೆಗೆ 3ನೇ ಚಿತ್ರ ನೋಡಿ), ಮುಂಭಾಗದಲ್ಲಿ 4 ಕೊಕ್ಕೆಯಂತಹ ಕಬ್ಬಿಣದ ಕಂಬಿಗಳನ್ನು ಪೈಪಿಗೆ ಜೋಡಿಸಲಾಗಿದೆ. ಅಗತ್ಯಕ್ಕೆ ತಕ್ಕಷ್ಟು ಉದ್ದದ ಅಲ್ಯೂಮಿನಿಯಂ ಪೈಪು (ಈ ಪೈಪು ತೂಕ ಕಡಿಮೆ ಇರುವುದರಿಂದ ಕೊಯ್ಲು ಮಾಡುವ ಸಮಯದಲ್ಲಿ ಸಹಾಯಕ) ಜೋಡಿಸಲಾಗಿದೆ. ಗಿಡದ ನಡುವೆ ಪೈಪನ್ನು ತೂರಿಸಿ ಕೊಕ್ಕೆಗಳ ನಡುವೆ ಹಣ್ಣನ್ನು ಸೇರಿಸಿ ಎಳೆದರೆ, ತೊಟ್ಟು ಮುರಿದು ಹಣ್ಣು ಪೈಪ್‌ ಒಳಗೆ ಬೀಳುತ್ತದೆ. ಹೀಗೆ ಪೈಪ್ ತುಂಬುವವರೆಗೂ ಹಣ್ಣುಗಳನ್ನು ಕೊಯ್ಲು ಮಾಡಬಹುದು. ಕೆಳಭಾಗದ ಪೈಪ್ (ಕಂಬಿ) ಅನ್ನು ವಿಸ್ತರಿಸಿಕೊಂಡರೆ, ಎಷ್ಟು ಎತ್ತರದ ಮರಗಳಿಂದಲೂ ಹಣ್ಣು ಕೊಯ್ಲು ಮಾಡಬಹುದು. ಅಂದ ಹಾಗೆ ಈ ಉಪಕರಣದಿಂದ ನಿಂಬೆ ಅಷ್ಟೇ ಅಲ್ಲ, ನಿಂಬು ತರಹದ ಕಿತ್ತಲೆ, ಮೂಸಂಬಿಯಂತಹ ಹಣ್ಣುಗಳನ್ನು ಕೊಯ್ಲು ಮಾಡಬಹುದು. 

ಮಾವು ಕೊಯ್ಯುವ ಸಾಧನ
ಕೆಲವು ರೈತರು ಈ ಮೇಲೆ ವಿವರಿಸಿದ ಎರಡೂ ಸಾಧನಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದಿಷ್ಟು ಬದಲಾವಣೆ ಮಾಡಿಕೊಂಡು ಬಳಸುತ್ತಿದ್ದಾರೆ. ಪರಿಷ್ಕೃತ ಉಪಕರಣದಿಂದ ಮಾವಿನ ಹಣ್ಣನ್ನು ಸುಲಭವಾಗಿ ಮತ್ತು ವೇಗವಾಗಿ ಕೊಯ್ಲು ಮಾಡಲು ಸಾಧ್ಯವಾಗುತ್ತಿದೆಯಂತೆ.

ನಿಂಬೆ ಕೊಯ್ಯಲು ಬಳಸುವ ಪಿವಿಸಿ ಪೈಪ್‌ ಮಾದರಿಯ ಉಪಕರಣವನ್ನು ಮತ್ತಷ್ಟು ಸುಧಾರಿಸಬಹುದಾಗಿದೆ. ಅಂದರೆ, ಮುಚ್ಚಿರುವ ಪೈಪ್ ತಳಭಾಗವನ್ನು ತೆರವುಗೊಳಿಸಿ, ಆ ಜಾಗಕ್ಕೆ ವೃತ್ತಾಕಾರದಲ್ಲಿ ಉದ್ದನೆಯ ಬಲೆ (ನೆಟ್) ಜೋಡಿಸಿ, ಅದನ್ನು ನೆಲದ ಮೇಲಿಟ್ಟ ಚೀಲಕ್ಕೆ ಸೇರುವಂತೆ ಮಾಡಬೇಕು. ಹೀಗೆ ಮಾಡಿದಾಗ, ಕೊಯ್ಲಾದ ಹಣ್ಣುಗಳೆಲ್ಲ ಬಲೆಯ ಮೂಲಕ ಕೆಳಗಿರುವ ಚೀಲಕ್ಕೆ ನೇರವಾಗಿ ಬಂದು ಬೀಳುತ್ತದೆ. ಈ ವಿಧಾನವು ಜನಪ್ರಿಯವಾಗಿದ್ದು, ಬಹುತೇಕ ರೈತರು ಇದನ್ನೇ ಅನುಸರಿಸುತ್ತಿದ್ದಾರೆ. ಈ ಎಲ್ಲ ಉಪಕರಣಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಡಾ.ಸೇಂತಿಲ್ ಕುಮಾರ್‌ ಅವರನ್ನು 9449492857 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಚಿತ್ರಗಳ ಮೂಲ: ಐಐಎಚ್‌ಆರ್ ಹೆಸರಘಟ್ಟ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !