ನೆರಳಿನ ಮನೆಯಲ್ಲಿ ಬಣ್ಣದ ಹೂವುಗಳು

ಶುಕ್ರವಾರ, ಏಪ್ರಿಲ್ 19, 2019
30 °C

ನೆರಳಿನ ಮನೆಯಲ್ಲಿ ಬಣ್ಣದ ಹೂವುಗಳು

Published:
Updated:

ಚಿತ್ರದುರ್ಗ ಜಿಲ್ಲೆ ನೀರಿನ ಕೊರತೆ ಎದುರಿಸುತ್ತಿದ್ದರೂ, ಪುಷ್ಪ ಕೃಷಿಯಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಚಿತ್ರದುರ್ಗದ ಹಿರಿಯೂರು ಭಾಗದಲ್ಲಿ ಕಡಿಮೆ ನೀರಿನಲ್ಲೂ ಸೇವಂತಿಗೆ, ಕನಕಾಂಬರ ಹೂವಿನ ಕೃಷಿ ಮಾಡುತ್ತಿದ್ದಾರೆ. ಈಗ ಅದೇ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿತ್ರಯ್ಯನಹಟ್ಟಿ ರೈತ ಮಹಿಳೆ ವಿನೋದಮ್ಮ, ಪ್ರಾಯೋಗಿಕವಾಗಿ ಪಾಲಿಹೌಸ್‌ನಲ್ಲಿ ಕಾರ್ನೇಷನ್ ಅಲಂಕಾರಿಕ ಪುಷ್ಪವನ್ನು ಬೆಳೆಯುತ್ತಿದ್ದಾರೆ.

ಚಳ್ಳಕೆರೆ ಸಮೀಪದ ನನ್ನಿವಾಳ ಗ್ರಾಮದಲ್ಲಿ ವಿನೋದಮ್ಮ ಅವರದ್ದು ಒಂದು ಎಕರೆ ಒಣಭೂಮಿ ಇತ್ತು. ಅದೇ ಭೂಮಿಯಲ್ಲಿ ಈ ಅಲಂಕಾರಿಕ ಹೂವಿನ ಕೃಷಿ ಮಾಡಿದ್ದಾರೆ. ಸರ್ಕಾರದ ಕೃಷಿ ಭಾಗ್ಯ ಯೋಜನೆಯ ಅನುದಾನದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ, ಕೊಳವೆಬಾವಿ ಕೊರೆಸಿ, ಡ್ರಿಪ್ ಮೂಲಕವೇ ನೆರಳಿನ ಮನೆಯಲ್ಲಿ ಹೂವು ಬೆಳೆಸುತ್ತಿದ್ದಾರೆ. ಮಾರುಕಟ್ಟೆ ನೋಡಿಕೊಂಡು ಹೂವು ಕೊಯ್ಲು ಮಾಡುತ್ತಾರೆ.

ಒಂದು ಕಾಲದಲ್ಲಿ ಇಟ್ಟಿಗೆ ಭಟ್ಟಿ ಮಾಡಿ ನಷ್ಟ ಅನುಭವಿಸಿದ್ದ ವಿನೋದಮ್ಮ, ಒಂದು ವರ್ಷದಿಂದ ಪುತ್ರ ಮಧುವಿನೊಂದಿಗೆ ಒಂದು ಎಕರೆಯಲ್ಲಿ ಪಾಲಿಹೌಸ್‌ನಲ್ಲಿ ಕಾರ್ನೇಷನ್ ಹೂವು ಕೃಷಿ ಶುರು ಮಾಡಿದ್ದಾರೆ. ಆರಂಭದಲ್ಲಿ ತೋಟಗಾರಿಕಾ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಅವರ ಸಹೋದರಿ ಈ ಕೃಷಿಗೆ ಮಾರ್ಗದರ್ಶನ ನೀಡಿದರು.

ಕಾರ್ನೇಷನ್ ಹೂವು ಬೆಳೆಯಲು ತೀರ್ಮಾನಿಸಿದ ಮೇಲೆ ಪಾಲಿಹೌಸ್ ನಿರ್ಮಾಣ ಮಾಡಿಸಿದರು. ಕೊಳವೆಬಾವಿ ಕೊರೆಸಿದರು. 400 ಅಡಿಗೆ 2 ಇಂಚು ನೀರು ಸಿಕ್ಕಿತು. ನಂತರ ಮುನ್ನ ಮಣ್ಣು ಮತ್ತು ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದರು ವಿನೋದಮ್ಮ.

ಹೂವಿನ ಗಿಡ ನಾಟಿಗೆ ಮುನ್ನ ಭೂಮಿ ಸಮತಟ್ಟು ಮಾಡಿಸಿ, ಗೊಬ್ಬರ ಕೊಟ್ಟು ಮಣ್ಣನ್ನು ಹದಗೊಳಿಸಿದರು. ನೆಲದಿಂದ ಒಂದೂವರೆ ಅಡಿ ಎತ್ತರ, ಎರಡು ಅಡಿ ಅಗಲದ ಮಣ್ಣಿನ ಬೆಡ್ ನಿರ್ಮಾಣ ಮಾಡಿಸಿದರು.

ಹೈಡ್ರೋಕಾರ್ಬೆಂಡೆಜಿಂ, ಆಕ್ಸಿಕ್ಲೋರೈಡ್, ಕೊಟ್ಟಿಗೆ ಗೊಬ್ಬರ, ಬೇವು, ಹೊಂಗೆ ಹಿಂಡಿಯನ್ನು ಮಣ್ಣಿಗೆ ಬೆರೆಸಿ ಮಿಶ್ರಣ ಮಾಡಿದರು. ಮಣ್ಣಿನ ಬೆಡ್‍ನಲ್ಲಿ ನೀರು ಇಂಗಲು ತೆಂಗಿನ ನಾರು ಹರಡಿಸಿದರು. ‘ಪ್ರತಿ ಬೆಡ್‌ಗೂ ಡ್ರಿಪ್‌ ಮೂಲಕವೇ ನೀರು ಹಾಯಿಸಬೇಕು. ಒಂದೆರಡು ತಿಂಗಳ ನಂತರ ಬೆಡ್‍ನಲ್ಲಿನ ಮಣ್ಣು ಕಳಿತು ಉತ್ಕೃಷ್ಟ ಗೊಬ್ಬರವಾಗುತ್ತದೆ. ಆಗ ಹೂವಿನ ಸಸಿಯನ್ನು ನಾಟಿ ಮಾಡಬೇಕು’ ಎನ್ನುತ್ತಾರೆ ವಿನೋದಮ್ಮ.

ಗಿಡಗಳ ನಾಟಿ ವಿಧಾನ
ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ನರ್ಸರಿಯಿಂದ ಸಸಿಯೊಂದಕ್ಕೆ ₹ 50 ರಂತೆ ಗೇಣು ಉದ್ದದ 80 ಸಾವಿರ ಹೂವಿನ ಸಸಿಯನ್ನು ಖರೀದಿಸಿ ತಂದು ಒಂದು ಎಕರೆಯಲ್ಲಿ ನಾಟಿ ಮಾಡಿದರು. ಆರಂಭದಲ್ಲಿ ಬೆಳೆಗೆ ಪ್ರತಿ ದಿನ ಕನಿಷ್ಠ 2-3 ಗಂಟೆ ನೀರು ಹಾಯಿಸುತ್ತಿದ್ದರು. ಕಬ್ಬಿಣದ ರಿಪೀಸ್, ಕಟ್ಟಿಗೆ ಮತ್ತು ಪ್ಲಾಸ್ಟಿಕ್ ದಾರದಿಂದ 2 ಅಡಿ ಅಗಲ, 4 ಅಡಿ ಎತ್ತರದಲ್ಲಿ ಬೆಳೆಗೆ ನೆಟ್ ಕಟ್ಟಿಸಿದರು.

‘ಗಿಡಗಳನ್ನು ನಾಟಿ ಮಾಡಿದ 3-4 ತಿಂಗಳಲ್ಲಿ ಹೂವಿನ ಬೆಳೆ ಆರಂಭವಾಯಿತು. ಒಮ್ಮೆ ನಾಟಿ ಮಾಡಿ ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಕನಿಷ್ಠ 5 ವರ್ಷದವರೆಗೂ ಉತ್ತಮ ಬೆಳೆ ತೆಗೆಯಬಹುದು’ ಎನ್ನುತ್ತಾರೆ ಮಧು.

‘ಡ್ರಿಪ್ ನೀರು ಪೂರೈಸುವ ಪೈಪ್ ಜತೆಗೆ ಫಾಗರ್ ಅಳವಡಿಸಿಕೊಳ್ಳಬೇಕು. ಪಾಲಿಹೌಸ್‌ ಒಳಗೆ ಉತ್ಪತ್ತಿಯಾಗುವ ಒಣ ಹವೆಯನ್ನು ಫಾಗರ್‌ ಮೂಲಕ ತಕ್ಷಣ ತಂಪು ಮಾಡಬಹುದು. ಫಾಗರ್ ಇಲ್ಲದಿದ್ದರೆ, ಕೈಯಲ್ಲಿಯೇ ಬೆಳೆಗೆ ನೀರು ಸಿಂಪಡಿಸಬೇಕು’ ಎನ್ನುವುದು ತಾಯಿ-ಮಗನ ಅನುಭವದ ನುಡಿ.

ಗಿಡಗಳಿಗೆ ನೈಟ್ಸ್ ರೋಗ ಬಿಟ್ಟರೆ ಬೇರೆ ಬಾಧೆ ಕಾಣಲಿಲ್ಲವಂತೆ. ತಜ್ಞರಿಂದ ಸಲಹೆ ಪಡೆದು ಔಷಧ ಸಿಂಪಡಿಸಿ, ರೋಗವನ್ನು ಹತೋಟಿ ಮಾಡಿದ್ದಾರೆ.

ಇಷ್ಟೆಲ್ಲ ಕಾರ್ಯಗಳಿಗೆ ನಿತ್ಯ ಇಬ್ಬರು ಅಥವಾ ಮೂವರು ಕಾರ್ಮಿಕರು ಬೇಕಾಗುತ್ತಾರೆ. ಇಷ್ಟು ಹೊರತುಪಡಿಸಿದರೆ, ಇದಕ್ಕೆ ಹೆಚ್ಚು ಕಾರ್ಮಿಕರು ಅಗತ್ಯವಿಲ್ಲ.

ಬಣ್ಣ ಬಣ್ಣದ ಹೂವುಗಳು
ನಾಲ್ಕು ತಿಂಗಳ ಹೊತ್ತಿಗೆ ಇಡೀ ಪಾಲಿಹೌಸ್‌ ತುಂಬಾ ಬಣ್ಣ ಬಣ್ಣದ ಹೂವು ಅರಳಲು ಆರಂಭವಾಯಿತು. ಈಗ ಕೆಂಪು, ಹಳದಿ, ಬಿಳಿ, ಪಿಂಕ್ ಸೇರಿದಂತೆ 8 ವಿಧದ ಹೂವುಗಳು ಬಿಡುತ್ತಿವೆ.

‘ಗಿಡದಲ್ಲಿ ಒಂದಕ್ಕಿಂತ ಹೆಚ್ಚು ಮೊಗ್ಗುಗಳು ಇರಬಾರದು. ಇದ್ದಲ್ಲಿ ಅವುಗಳನ್ನು ಚಿವುಟಿ ಹಾಕಬೇಕು. ಇದರಿಂದ 5-6 ಸುತ್ತಿನ ದೊಡ್ಡ ಗ್ರಾತ್ರದ ಆಕರ್ಷಕ ಹೂವುಗಳು ಗಿಡದಲ್ಲಿ ಬಿಡುವ ಹಾಗೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಮಧು.

ವಾರದಲ್ಲಿ 3-4 ದಿನ ಹೂವುಗಳನ್ನು ಕಟಾವ್ ಮಾಡಬೇಕು. ಮಾರುಕಟ್ಟೆಯಲ್ಲಿ ಒಂದು ಹೂವಿಗೆ ಕನಿಷ್ಠ ₹2 ರಿಂದ ₹ 12ರವರೆಗೆ ಬೆಲೆ ಸಿಗುತ್ತಿದೆಯಂತೆ.

ಪ್ಯಾಕಿಂಗ್ ಮತ್ತು ರಫ್ತು ವ್ಯವಸ್ಥೆ
ವಿನೋದಮ್ಮ ಮತ್ತು ಮಧು ದಿನ ಬಿಟ್ಟು ದಿನ ಹೂವು ಕೊಯ್ಲು ಮಾಡುತ್ತಿದ್ದಾರೆ. ನೆಲದಿಂದ 4 ಇಂಚು ಬಿಟ್ಟು 1 ಅಡಿ ಉದ್ದ ಹೂವಿನ ಗೊನೆಯನ್ನು ಕಟ್ ಮಾಡಿ, ಒಂದೇ ಬಣ್ಣದ 20 ಹೂವುಗಳನ್ನು ಸೇರಿಸಿ ರಬ್ಬರ್‌ಬೆಂಡ್‌ ಹಾಕಿ ಬಿಳಿ ಬಿಳಿ ಪೇಪರ್ ಸುತ್ತಿ ಬೊಕ್ಕೆ(ಗುಚ್ಚ) ತಯಾರಿಸುತ್ತಾರೆ.  ‘ಇಂಥ ಗುಚ್ಛದ 75 ರಿಂದ 80 ರ ಸಂಖ್ಯೆಯಲ್ಲಿ ಸೇರಿಸಿ, ಗೋಣಿಚೀಲದಲ್ಲಿ ಪ್ಯಾಕ್ ಮಾಡಿ ಬಸ್ಸಿನಲ್ಲಿ ಬೆಂಗಳೂರಿಗೆ ಕಳುಹಿಸುತ್ತೇವೆ. ಮಾರಾಟಗಾರು ಬಾಕ್ಸ್ ಪಡೆದು ಹಣವನ್ನು ಆಕೌಂಟಿಗೆ ಜಮಾ ಮಾಡುತ್ತಾರೆ’ ಎನ್ನುತ್ತಾರೆ ವಿನೋದಮ್ಮ.

ಒಂದು ಬೊಕ್ಕೆಗೆ ಕನಿಷ್ಠ ₹ 50, ಗರಿಷ್ಠ ₹250ವರೆಗೆ ಬೆಲೆ ದೊರೆಯುತ್ತದೆ. ಪ್ಯಾಕ್ ಮಾಡಿದ್ದ ಹೂವುಗಳು 7-8 ದಿನಗಳವರೆಗೆ ಬಾಡುವುದಿಲ್ಲ. ಸದ್ಯ ಇವರ ಜಮೀನಿನ ಹೂವುಗಳು ಹೈದರಾಬಾದ್, ಚೆನೈ, ದೆಹಲಿ, ಮುಂಬೈ ನಗರಗಳಿಗೆ ರಫ್ತಾಗುತ್ತಿದೆ.

ಮಾರ್ಕೆಟ್ ಸೀಸನ್ ಯಾವಾಗ?
ಹೆಚ್ಚಾಗಿ ಅಲಂಕಾರಕ್ಕಾಗಿ ಮತ್ತು ಗುಚ್ಚಗಳನ್ನು ತಯಾರಿಸಲು ಕಾರ್ನೇಷನ್ ಹೂವು ಬಳಸುತ್ತಾರೆ. ಹೀಗಾಗಿ ದಸರಾ, ದೀಪಾವಳಿ, ಕ್ರಿಸ್‍ಮಸ್, ಪ್ರೇಮಿಗಳ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಹೂವಿಗೆ ಮಾರುಕಟ್ಟೆ ಇರುತ್ತದೆ. ಇದರ ಜತೆಗೆ, ಮದುವೆ ಸಮಯದಲ್ಲಿ ಮಂಟಪದ ಅಲಂಕಾರಕ್ಕಾಗಿ ಹೆಚ್ಚು ಹೂವು ಖರೀದಿ ಮಾಡುವವರಿದ್ದಾರೆ.

'ಚುನಾವಣೆ ಬಂದಾಗ, ರಾಜಕಾರಣಿಗಳ ಸಮಾವೇಶದ ಸಂದರ್ಭದಲ್ಲಿ ನಮ್ಮ ಹೂವಿಗೆ ಡಿಮ್ಯಾಂಡ್ ಇರುತ್ತದೆ' ಎಂದು ಸ್ಥಳೀಯ ಮಾರುಕಟ್ಟೆ ಕುರಿತು ವಿವರಿಸುತ್ತಾರೆ ಮಧು.

ಸ್ಥಳೀಯ ಮಾರುಕಟ್ಟೆ
ಸ್ಥಳೀಯವಾಗಿ ಮದುವೆ ಸೀಸನ್ ಗಳಲ್ಲಿ ಹೂವು ಮಾರಾಟವಾಗುತ್ತದೆ. ಅದಕ್ಕಾಗಿ ಸೀಸನ್ ನೋಡಿ ಕೊಂಡು ಹೂವನ್ನು ಕಟಾವ್ ಮಾಡುತ್ತಾರೆ ಇವರು.

‘ಬೆಳೆಗಾರರು ಹಾಗೂ ಮಾರಾಟಗಾರರು ವ್ಯಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಇದರಿಂದಾಗಿ ಪರಸ್ಪರ ಸಂಪರ್ಕದಲ್ಲಿ ಇರುತ್ತೇವೆ. ಬೇಡಿಕೆ ಬಂದ ಕೂಡಲೇ ಒಬ್ಬರಿಗೊಬ್ಬರಿಗೆ ತಿಳಿಸುತ್ತೇವೆ' ಎನ್ನುತ್ತಾರೆ ಮಧು.

ಕಾರ್ನೇಷನ್ ಹೂವು ಕೃಷಿ ಕುರಿತ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9731657882

***
ಪಾಲಿಹೌಸ್ ನಲ್ಲಿ ಪುಷ್ಪ ಕೃಷಿ ಮಾಡುವುದರಿಂದ ರೋಗ ರುಜಿನ ಬಾಧೆ ಕಡಿಮೆ. ಹಾಗಾಗಿ ಈ ಕಾರ್ನೇಷನ್ ಹೂವನ್ನು ಎಲ್ಲಾ ಕಾಲದಲ್ಲೂ ಬೆಳೆಯಬಹುದು
-ಡಾ.ವಿರೂಪಾಪ್ಪ, ಹಿರಿಯ ಸಹಾಯಕ ಅಧಿಕಾರಿ, ತೋಟಗಾರಿಕಾ ಇಲಾಖೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !