ಹೇಲೇಜ್ ಮೇವು

7

ಹೇಲೇಜ್ ಮೇವು

Published:
Updated:
Deccan Herald

ಚಾಮರಾಜನಗರ ಸಮೀಪದ ಬೆಟ್ಟದಪುರದ ಗುರುಲಿಂಗಪ್ಪ ಏಳೆಂಟು ಮಿಶ್ರತಳಿ ಹಸುಗಳನ್ನು ಸಾಕಿದ್ದಾರೆ. ಅವುಗಳಿಗೆ ಮೇವು ಪೂರೈಕೆ ಮಾಡುವುದಕ್ಕಾಗಿ, ರಸಮೇವು (ಸೈಲೇಜ್ - silage) ತಯಾರಿಕೆ ಕಲಿಯಲು ತೀರ್ಮಾನಿಸಿದರು. ರಸಮೇವು ತಯಾರಿಸಲು ಮೆಕ್ಕೆಜೋಳದ ಮೇವು(ಸೆಪ್ಪೆ) ಬೇಕಿತ್ತು. ತೆನೆ ಹಾಲುಗಾಳು ಕಟ್ಟಿದ್ದ ಜೋಳದ ಮೇವು ರಸಮೇವಿಗೆ ಅತ್ಯಂತ ಸೂಕ್ತ. ಆದರೆ, ಆ ಹೊತ್ತಿಗೆ ಅವರ ತೋಟದಲ್ಲಿದ್ದ ಮೆಕ್ಕೆಜೋಳ ರಸಮೇವು ಮಾಡುವ ಹಂತ ಮೀರಿತ್ತು. ತೆನೆಯ ಬೀಜ ಬಲಿತಿತ್ತು. ಈಗೇನು ಮಾಡುವುದು ಎಂದು ಚಿಂತಿಸುತ್ತಿದ್ದಾಗ, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ತಜ್ಞರು ‘ರಸಮೇವು ಇಲ್ಲದಿದ್ದರೇನಂತೆ, ಇರುವ ತೆನೆಯಲ್ಲಿ ಹೇಲೇಜ್ (Haylage) ಮಾಡಿಕೊಳ್ಳಿ. ಇದು ಕೂಡ ಉತ್ತಮ ಮೇವಾಗುತ್ತದೆ’ ಎಂದು ಸಲಹೆ ನೀಡಿದರು.

ತಜ್ಞರ ಮಾಹಿತಿಗೆ ಒಪ್ಪಿ, ಗುರುಲಿಂಗಪ್ಪ ಬಲಿತ ಕಾಳುಗಳುಳ್ಳ ಮೆಕ್ಕೆಜೋಳದ ತೆನೆ ತೆಗೆದು ಉಳಿದ ಮೇವು ಬಳಸಿ, ಹೇಲೇಜ್‌ ಮೇವು ತಯಾರಿಸಿದರು. ಆ ಮೇವನ್ನು ಜಾನುವಾರುಗಳು ಚಪ್ಪರಿಸುತ್ತಾ ತಿಂದವು. ಮಾತ್ರವಲ್ಲ, ಹಾಲಿನ ಇಳುವರಿಯೂ ಹೆಚ್ಚಿಗೆ ಆಯಿತು. ಹೀಗೆ ಗುರುಲಿಂಗಪ್ಪನಿಗೆ ಮೆಕ್ಕೆಜೋಳದ ಕಾಳು ಆಯಿತು, ಉತ್ಕಷ್ಟ ಮೇವೂ ಸಿಕ್ಕಿತು.

ಹೇಲೇಜ್ ಮೇವು ಬಳಸಿಕೊಂಡು ಗುರುಲಿಂಗಪ್ಪ ಅವರಂತೆ ಹುಬ್ಬಳ್ಳಿ ತಾಲೂಕಿನ ಬಸಯ್ಯ ಹಿರೇಮಠ, ತಾರೀಹಾಳ ಗ್ರಾಮದ ಬಸಪ್ಪ ಕುಂದಗೊಳ ಕೂಡ ಡಬಲ್ ಧಮಾಕ ಪಡೆದಿದ್ದಾರೆ. ಸುಮಾರು 5 ರಿಂದ 6 ವರ್ಷಗಳಿಂದ ಹೇಲೇಜ್ ತಯಾರಿಸುತ್ತಿದ್ದಾರೆ.

ಈ ಉದಾಹರಣೆಗಳು ಬಹುತೇಕ ರೈತರಿಗೆ ಅನ್ವಯವಾಗುತ್ತವೆ. ಎಕರೆಗಟ್ಟಲೆ ಮುಸುಕಿನ ಜೋಳ ಬೆಳೆಯುವ ರೈತರು ಹೇಲೇಜ್ ಮೇವು ಮಾಡಿಕೊಳ್ಳಬಹುದು. ಬಲಿತ ತೆನೆಯನ್ನು ಕೊಯ್ಲು ಮಾಡಿಕೊಂಡು, ಉಳಿದ ಸೆಪ್ಪೆಯನ್ನು ಮೇವನ್ನು ಹೇಲೇಜು ಮಾಡಿಕೊಳ್ಳಬಹುದು.

ಏನಿದು ಹೇಲೇಜು

ತೆನೆ ಹಾಲುಗಾಳು ಕಟ್ಟಿದಾಗ (ಶೆ 65-75 ರಷ್ಟು ತೇವಾಂಶ ಇದ್ದಾಗ) ಕಟಾವು ಮಾಡಿ ಮೇವು ಸಂರಕ್ಷಣೆ ಮಾಡುವ ವಿಧಾನಕ್ಕೆ ಸೈಲೇಜು ಅಥವಾ ರಸಮೇವು ಎಂದು ಕರೆಯುತ್ತಾರೆ. ತೆನೆ ಬಲಿತ ನಂತರ ಜೋಳದ ಕಡ್ಡಿ ಅಥವ ದಂಟು ಹಾಗೂ ಅದರ ಮೇಲ್ಭಾಗದ ಕೆಲವು ಎಲೆಗಳು ಹಸಿರಾಗಿರುತ್ತವೆ. ಈ ಹಂತದಲ್ಲಿ ತೆನೆಗಳನ್ನು ದಂಟಿನಿಂದ ತೆಗೆದು ಪ್ರತ್ಯೇಕವಾಗಿ ಒಣಗಿಸಿ, ಮೇವನ್ನು ಕೂಡಲೇ ಕಟಾವು ಮಾಡಿ ಅದನ್ನು ಸಂರಕ್ಷಣೆ ಮಾಡಿಕೊಳ್ಳಬೇಕು. ಈ ಹಂತದಲ್ಲಿ ಮೇವಿನಲ್ಲಿ ಶೇ 55 ರಿಂದ 65 ರಷ್ಟು ತೇವಾಂಶವಿರುತ್ತದೆ. ಕಡಿಮೆ ತೇವಾಂಶವಿರುವ ಮೇವನ್ನು ಕೂಡಿಡುವ ಪದ್ಧತಿಯೇ ಹೇಲೇಜು. ಇದನ್ನು ಒಣ/ಕಡಿಮೆ ತೇವಾಂಶವುಳ್ಳ ರಸಮೇವು ಎಂದು ಕರೆಯಬಹುದು. ಇದನ್ನು ಮುಸುಕಿನ ಜೋಳ ಅಥವಾ ಜೋಳದ ಮೇವು ಎರಡರಿಂದಲೂ ಮಾಡಬಹುದು.

ಒಣ ರಸಮೇವು ಮಾಡುವ ವಿಧಾನ

ಬೆಳೆದ ಮೇವಿನ ಪ್ರಮಾಣ ಮತ್ತು ಅವಶ್ಯಕತೆಗೆ ತಕ್ಕಂತೆ ಹೇಲೇಜ್ ಗುಂಡಿ ತಯಾರಿಸಬೇಕು. ಉದಾಹರಣೆಗೆ ಒಂದು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದ ಮೇವಿಗೆ ಸುಮಾರು 10 ಅಡಿ ಆಳ ಮತ್ತು 8 ಅಡಿ ಅಗಲದ ವೃತ್ತಾಕಾರದ ಗುಂಡಿ ಅಥವ ಎಂಟು ಅಡಿ ಆಳ, ಎಂಟು ಅಡಿ ಅಗಲ ಮತ್ತು ಎಂಟು ಅಡಿ ಉದ್ದದ ಚೌಕಾಕಾರದ ಗುಂಡಿಯಾದರೆ ಸಾಕು. ಇದರಲ್ಲಿ ಸುಮಾರು 8 ರಿಂದ 10 ಟನ್‍ಗಳಷ್ಟು ಮೇವನ್ನು ಶೇಖರಿಸಬಹುದು. ಇತ್ತೀಚೆಗೆ ವಾಣಿಜ್ಯವಾಗಿ ಲಭ್ಯವಿರುವ ಸೈಲೋ ಚೀಲಗಳನ್ನೂ ಬಳಸಿಯೂ ಇದನ್ನು ತಯಾರಿಸಬಹದು. (ಹೆಚ್ಚಿನ ವಿವರಗಳಿಗೆ ಕೃಷಿ ಕಣಜ ಪುರವಣಿಯ ಅಕ್ಟೋಬರ್ 9ರ ಸಂಚಿಕೆ ನೋಡಿ). ವಿವಿಧ ಪ್ರಮಾಣದ ಮೇವು ಹಿಡಿಸುವ ಚೀಲಗಳು ಲಭ್ಯ. 100, 200, 500, 750, 1000 ಕಿಲೋಗ್ರಾಂ ಗಾತ್ರದ ಚೀಲಗಳು ಇವೆ. ಚೀಲಗಳ ಬೆಲೆ ಗಾತ್ರದ ಅನುಗುಣವಾಗಿ ₹ 350 ರೂಪಾಯಿಗಳಿಂದ ₹ 750 ರೂಪಾಯಿಗಳವರೆಗೆ ಇದೆ.

ಮುಸುಕಿನ ಜೋಳದ ತೆನೆ ಬಲಿತ ಕೂಡಲೆ ತೆನೆಯನ್ನು ದಂಟಿನಿಂದ ಬೇರ್ಪಡಿಸಿ ಮೇವನ್ನು ಕಟಾವು ಮಾಡಬೇಕು. ಕಟಾವು ಮಾಡಿದ ಮೇವನ್ನು ಮೇವು ಕತ್ತರಿಸುವ ಯಂತ್ರದ ಸಹಾಯದಿಂದ ಒಂದರಿಂದ ಎರಡು ಸೆಂಟಿಮೀಟರ್ ಉದ್ದ ಗಾತ್ರದಲ್ಲಿ ತುಂಡರಿಸಬೇಕು.

ತುಂಡರಿಸಿದ ಒಂದು ಕ್ವಿಂಟಲ್ ಮೇವಿಗೆ (ಸೆಪ್ಪೆ) ಮೂರು ಲೀಟರ್ ನೀರಿನಲ್ಲಿ ಒಂದರಿಂದ ಎರಡು ಕೆಜಿಯಷ್ಟು ಪುಡಿ ಬೆಲ್ಲ ಅಥವಾ ಕಾಕಂಬಿ ಮಿಶ್ರಣವನ್ನು ಸಿಂಪಡಿಸಬೇಕು.

ಮೇವನ್ನು ತುಂಬುವಾಗ 2-3 ಜನ ಗುಂಡಿಯಲ್ಲಿ ಅಥವಾ ಚೀಲದಲ್ಲಿ ಇಳಿದು ಒಂದು ಕಡೆಯಿಂದ ಚೆನ್ನಾಗಿ ತುಳಿದು ಗಟ್ಟಿಯಾಗಿ ಪ್ಯಾಕ್ ಮಾಡಬೇಕು. ಚೀಲದಲ್ಲಿ ಗಾಳಿ ಇಲ್ಲದಂತೆ ನಿರ್ವಾತ ವಾತಾವರಣ ಸೃಷ್ಟಿಯಾಗುವವರೆಗೂ ತುಳಿಯಬೇಕು. ಉತ್ತಮ ರಸಮೇವು ತಯಾರಿಕೆಯಲ್ಲಿ ಗಾಳಿಯೇ ಶತ್ರು. ಚೆನ್ನಾಗಿ ಏರ್ ಟೈಟ್ ಮಾಡಿದರೆ ಒಳ್ಳೆ ಹೇಲೇಜು ತಯಾರಿಸಬಹುದು.

ಹೇಲೇಜ್ ಗುಂಡಿಗಳನ್ನು ಸಿಮೆಂಟಿನಿಂದ ಅಥವಾ ಕಾಂಕ್ರೀಟ್‍ನಿಂದ ತಯಾರಿಸಬಹುದು. ಪಾಲಿಥೀನ್ ಪ್ಲಾಸ್ಟಿಕ್ ಹಾಳೆಗಳನ್ನು ತೆರೆದ ಮಣ್ಣಿನ ಗುಂಡಿಗೆ ಹೊದಿಸಿ ಮೇವನ್ನು ತುಂಬಬಹುದು.

ಹೊಸದಾಗಿ ನಿರ್ಮಿಸಿದ ಸಿಮೆಂಟ್ ಅಥವಾ ಕಾಂಕ್ರಿಟ್‌ನಿಂದ ತಯಾರಿಸಿದ ಗುಂಡಿಗೆ ಪ್ಲಾಸ್ಟಿಕ್ ಹಾಳೆ ಹೊದಿಸಿ ಮೇವು ತುಂಬಬೇಕು. ಏಕೆಂದರೆ ಸಿಮೆಂಟ್ ನಿಂದ ಹೊರಹೊಮ್ಮುವ ತೇವಾಂಶದಿಂದ ಅಂಚಿನ ಸುತ್ತಲೂ ಸುಮಾರು ಒಂದು ಅಡಿಯಷ್ಟು ಮೇವು ಕೆಡುವ ಸಾಧ್ಯತೆ ಇರುತ್ತದೆ.

ಗಮನಿಸಬೇಕಾದ ಅಂಶವೆಂದರೆ, ತುಂಡರಿಸಿದ ಮೇವನ್ನು ರಸಮೇವಿನ ಗುಂಡಿಗೆ ತುಂಬುವಾಗ ಬೆಲ್ಲ ಅಥವಾ ಕಾಕಂಬಿ ಮಿಶ್ರಣ ಬಿಟ್ಟು ಬೇರೆ ಏನನ್ನೂ ಸೇರಿಸುವ ಅಗತ್ಯವಿಲ್ಲ.

ಮೇವನ್ನು ಗುಂಡಿಗೆ ತುಂಬಿ ಅದರ ಮೇಲೆ ಪ್ಲಾಸ್ಟಿಕ್ ಹಾಳೆ ಹೊದಿಸಿ ಹೆಚ್ಚು ತೂಕದ ಕಲ್ಲು ಅಥವಾ ವಾಹನದ ಟೈರುಗಳನ್ನು ಇಡಬೇಕು. ಕೆಲವು ತಾಸುಗಳ ನಂತರ ಕಲ್ಲು ಹಾಗೂ ಟೈರುಗಳನ್ನು ತೆಗೆದು ಗುಂಡಿಯನ್ನು ಗಾಳಿ ಆಡದಂತೆ ರಾಡಿ ಮಣ್ಣಿನಿಂದ ಮುಚ್ಚಬೇಕು. ಸೈಲೋ ಚೀಲವಾದರೆ ಚೀಲ ತುಂಬಿದ ಮೇಲೆ ಮೊದಲು ಒಳಗಿನ ಪ್ಲಾಸ್ಟಿಕ್ ಚೀಲದ ಮೂತಿಯನ್ನು ಕಟ್ಟಿ ನಂತರ ಹೊರಗಿನ ಚೀಲದ ಮೂತಿಯನ್ನು ಗಾಳಿಯಾಡದಂತೆ ಕಟ್ಟಬೇಕು. ಚೀಲ ತೂತಾಗದಂತೆ ಜಾಗ್ರತೆವಹಿಸಬೇಕು. ಇಲಿಗಳ ಉಪಟಳವಿದ್ದಲ್ಲಿ ಚೀಲದ ಕೆಳಗಿನ ಒಂದಡಿ ಎತ್ತರಕ್ಕೆ ಬೇವಿನ ಎಣ್ಣೆ ಸಿಂಪಡಿಸಬಹುದು.

ಹೀಗೆ ಮುಚ್ಚಿದ ಗುಂಡಿಯ ಮೇಲ್ಭಾಗವನ್ನು ಆಗಾಗ ಗಮನಿಸುತ್ತಿರಬೇಕು. ಬಿರುಕು ಕಾಣಿಸಿಕೊಂಡರೆ ಅದನ್ನು ಕೂಡಲೇ ಮುಚ್ಚುತ್ತಿರಬೇಕು.

ಈ ರೀತಿ ತುಂಡರಿಸಿ ಗುಂಡಿಯಲ್ಲಿ ಅಥವ ಚೀಲದಲ್ಲಿ ತುಂಬಿದ ಮೇವನ್ನು ಕನಿಷ್ಠ ಎಂಟು ವಾರಗಳವರೆಗೆ ಬಿಡಬೇಕು.

ಎಂಟು ವಾರಗಳ ನಂತರ ಇದನ್ನು ತೆರೆದು ಪ್ರತಿ ದಿನ ಕನಿಷ್ಠ 5 ರಿಂದ 6 ಇಂಚಿನಷ್ಟು ಹೇಲೇಜ್‌ ಅನ್ನು ತೆಗೆಯುತ್ತಿರಬೇಕು. ಹೀಗೆ ತೆಗೆದ ಮೇವನ್ನು 10 ರಿಂದ 15 ಲೀಟರ್ ಹಾಲು ಕೊಡುವ ರಾಸುಗಳಿಗೆ ದಾಣಿ ಮಿಶ್ರಣ ಕೊಟ್ಟಲ್ಲಿ 15 ರಿಂದ 20 ಕೆ.ಜಿ. ಕೊಡಬಹುದು.

ಹೈಲೇಜ್‌ನಿಂದಾಗುವ ಪ್ರಯೋಜನ

ಗುರುಲಿಂಗಪ್ಪನ ಹಸುಗಳ ಹಾಲು ಡಿಗ್ರಿಗೆ ಬಾರದೆ ಡೇರಿಯಿಂದ ವಾಪಸ್ಸು ಬರುತ್ತಿತ್ತು. ಕೊನೆಗೆ ಈ ಹೇಲೇಜು ಮೇವನ್ನು ಹಸುಗಳಿಗೆ ನೀಡಿದ ನಂತರ, ಹಾಲಿನ ಗುಣಮಟ್ಟದಲ್ಲಿ ಸುಧಾರಣೆ ಕಂಡಿತು. ಸುಮಾರು 7.5 ರಷ್ಟಿದ್ದ ಎಸ್.ಎನ್.ಎಫ್. 8.5 (ಕೊಬ್ಬು ರಹಿತ ಘನಾಂಶ) ತಲುಪಿತು. ಈಗ ಗುರುಲಿಂಗಪ್ಪ ದೊಡ್ಡ ಮಟ್ಟದಲ್ಲಿ ರಸಮೇವನ್ನು ತಯಾರಿಸಿ ಬಳಸುತ್ತೇನೆ ಎಂದು ಹೇಳುತ್ತಿದ್ದಾರೆ. ‘ಹೇಲೇಜ್ ಮೇವು ಕೊಡುವುದರಿಂದ ಹಾಲಿನಲ್ಲಿ ಎಸ್ ಎನ್ ಎಫ್ ಮತ್ತು ಕೊಬ್ಬಿನಂಶ ಹೆಚ್ಚಾಗಿದೆ. ಇಳುವರಿ ಕೂಡ ಹೆಚ್ಚಾಗುತ್ತದೆ. ಇದು ಮೇವಿನ ಕೊರತೆಯನ್ನು ನೀಗಿಸುತ್ತದೆ’ ಎನ್ನುತ್ತಾರೆ ಬಸಯ್ಯ ಮತ್ತು ಬಸಪ್ಪ ಹಿರೇಮಠ.
ಹೇಲೇಜ್ ಕುರಿತ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 96327 33011, 79757 40337 ಕ್ಕೆ ಸಂಪರ್ಕಿಸಬಹುದು.

ಲೇಖಕರು: ಸಹಾಯಕ ಪ್ರಾಧ್ಯಾಪಕರು ಪಶುವೈದ್ಯಕೀಯ ಕಾಲೇಜು

***

ಸಣ್ಣ ರೈತರಿಗೆ ಹೇಗೆ ಲಾಭ?

ರಾಸುಗಳಿಗೆ ಪ್ರತ್ಯೇಕವಾಗಿ ಮೇವು ಬೆಳೆಯುವುದು ಕಷ್ಟ. ಸಣ್ಣ ರೈತರಿಗಂತೂ ಇದು ಅಸಾಧ್ಯ. ಹೀಗಾಗಿ ಈಗ ಲಭ್ಯವಿರುವ ಪರ್ಯಾಯ ಮಾರ್ಗವೆಂದರೆ ಧಾನ್ಯವನ್ನು (ಮುಸುಕಿನ ಜೋಳ) ಬೆಳೆದು, ಕಾಳುಗಳಿಂದ ಹಣ ಗಳಿಸಿ, ಉಳಿಯುವ ಸೆಪ್ಪೆ (ಮೇವು)ಯಿಂದ ಹೇಲೇಜ್‌ ತಯಾರಿಸಿಕೊಳ್ಳಬಹುದು. ಇದರಿಂದ ಪ್ರತ್ಯೇಕ ಮೇವು ಬೆಳೆಯುವುದು ತಪ್ಪುತ್ತದೆ.
ಸಣ್ಣ ಹಿಡುವಳಿದಾರರು ಕನಿಷ್ಠ 20 ಗುಂಟೆಗಳ ಜಮೀನಿನಲ್ಲಿ ಬೆಳೆದ ಮೇವನ್ನು ಹೇಲೇಜ್ ಆಗಿ ಮಾಡಿಟ್ಟರೆ ಎರಡರಿಂದ ಎರಡೂವರೆ ಟನ್ ಮೇವು ಬೇಸಿಗೆ ಕಾಲಕ್ಕೆ ಲಭ್ಯವಾಗುತ್ತದೆ. ಇದನ್ನು ಸೈಲೋ ಚೀಲಗಳಲ್ಲಿ ಅಥವ ಸಣ್ಣ ತೊಟ್ಟಿಗಳಲ್ಲಿಯಾದರೂ ಶೇಖರಿಸಿಡಬೇಕು. ಅಲ್ಲದೆ ಇದನ್ನು ಪ್ಲಾಸ್ಟಿಕ್ ಡ್ರಮ್‌ಗಳಲ್ಲಿಯೂ ಶೇಖರಿಸಿಡಬಹುದು. ಬೇಸಿಗೆಯಲ್ಲಿ ದಿನಕ್ಕೆ ಎರಡು ರಾಸುಗಳಿಗೆ ಸೇರಿ 30 ಕೆ.ಜಿ.ಯಂತೆ ಮೂರು ತಿಂಗಳ ಕಾಲ ಹೇಲೇಜ್‌ ಅನ್ನು ನೀಡಬಹುದು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !