ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್ ಎಡೆಕುಂಟೆ

Last Updated 29 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಬಂಡ್ರಿ ಮತ್ತು ಕೂಡ್ಲಿಗಿ ತಾಲ್ಲೂಕಿನ ಹಾಳ್ ಗಜಾಪುರ ಮತ್ತು ಸುತ್ತಲಿನ ಹಳ್ಳಿಯ ರೈತರು ನಿರುಪಯುಕ್ತ ಸೈಕಲ್‍ನಿಂದ ತಯಾರಿಸಿದ ಕೃಷಿ ಯಂತ್ರ ಬಳಸುತ್ತಾರೆ. ಅದು ಸ್ಥಳೀಯವಾಗಿ ‘ಸೈಕಲ್ ಎಡೆಕುಂಟೆ’ ಎಂದೇ ಜನಪ್ರಿಯ. ಬಂಡ್ರಿಯ ಕೂಡ್ಲಿಗಿ ಯರ‍್ರಿಸ್ವಾಮಿ ಈ ಉಪಕರಣದ ತಯಾರಕರು.

ಎತ್ತು, ಆಳುಗಳ ಸಮಸ್ಯೆಗೆ ಬೇಸತ್ತಿದ್ದ ಯರ‍್ರಿಸ್ವಾಮಿಗೆ ಸಕಾಲದಲ್ಲಿ ಆಳುಗಳ ಅಲಭ್ಯವೂ ತೀವ್ರ ಸಮಸ್ಯೆಯಾಗಿತ್ತು. ಹೀಗಾಗಿ ಆದಷ್ಟು ಎಲ್ಲ ಹೊಲದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಹೀಗೆ ಒಮ್ಮೆ ಹಾವೇರಿ ಜಿಲ್ಲೆಯಲ್ಲಿ ಅಡ್ಡಾಡುತ್ತಿದ್ದಾಗ, ಅಲ್ಲಿನ ಕೆಲ ರೈತರು ಹಳೆಯ ಸೈಕಲ್‍ಗೆ ಕುಂಟೆ ಫಿಕ್ಸ್ ಮಾಡಿ ಭೂಮಿ ಹರಗುವುದನ್ನು ಕಂಡಿದ್ದರು.

‘ಆ ಉಪಕರಣಕ್ಕೆ ಎರಡು ಚಕ್ರಗಳಿದ್ದವು. ಹಾಗೆಯೇ ಕೆಲವು ನ್ಯೂನತೆಗಳನ್ನೂ ಕಂಡೆ. ಅದರ ಕೆಲಸ ನೀಟ್ ಅನಿಸಲಿಲ್ಲ. ಹಾಗಾಗಿ ನಾನು ಸ್ವಲ್ಪ ಬದಲಾವಣೆ ಮಾಡಿ, ಹೊಸ ಉಪಕರಣವನ್ನು ಹೊಲಕ್ಕಿ
ಳಿಸಿದೆ. ಎಲ್ಲಾ ನಾನು ಅಂದುಕೊಂಡಂತೆ ಆಯ್ತು’ ಎನ್ನುತ್ತಾ ಯರ‍್ರಿಸ್ವಾಮಿ ‘ಸೈಕಲ್ ಎಡೆಕುಂಟೆ’ ಉಪಕರಣವನ್ನು ರೂಪಿಸಿದ ಅನುಭವ ಹಂಚಿಕೊಂಡರು.

ಉಪಕರಣ ಮಾಡಿದ್ದು ಹೀಗೆ
ಹಳೆ ಸೈಕಲ್ ಮತ್ತು ಬಹುತೇಕ ಅದರ ಬಿಡಿ ಭಾಗಗಳನ್ನೇ ಈ ಉಪಕರಣಕ್ಕೆ ಬಳಸಿದ್ದಾರೆ. ಸೈಕಲ್‍ನ ಒಂದು ಚಕ್ರ, ಹ್ಯಾಂಡಲ್ ಮಾಡಿದ್ದಾರೆ. ಹ್ಯಾಂಡಲ್‌ ಶೀಟಿನ ಜಾಗದಲ್ಲಿ ವೆಲ್ಡಿಂಗ್ ಮಾಡಿ ಎರಡು ರೆಕ್ಕೆ ಕುಳ್ಳಿರಿಸಿ, ಪೈಪ್‍ಗೆ ಕುಂಟೆ ಅಳವಡಿಸುತ್ತಾರೆ. ಹಲಗು, ವೆಲ್ಡಿಂಗ್ ಮಿಷನ್, ಕರೆಂಟ್‌ ಎಲ್ಲ ಸೇರಿ ಸ್ವಲ್ಪ ಹಣ ಖರ್ಚು ಆಗುತ್ತೆ. ಒಂಟಿ ಗಾಲಿ ದಾರಿ ತೋರಿಸಲಿಕ್ಕೆ ಬಳಸುತ್ತಾರೆ. ಹ್ಯಾಂಡಲ್ ಹಿಡಿದು ಮುಂದೆ ಸಾಗಿದರೆ, ಕೆಳಗೆ ಫಿಕ್ಸ್‌ ಮಾಡಿರುವ ಕುಂಟೆ ಜಮೀನಿನಲ್ಲಿರುವ ಕಳೆಯನ್ನು ತೆಗೆಯುತ್ತದೆ. ಚಕ್ರಕ್ಕಿರುವ ಟೂಬ್‍ಗೆ ಗಾಳಿ ಬೇಕಾಗಿಲ್ಲ!. ಹೀಗಾಗಿ ಗಾಲಿ ಪಂಚರ್ ಆಯ್ತು, ಟಯರ್ ಸವೆಯಿತು ಎಂಬ ಉಪದ್ರವಗಳಿಲ್ಲ ಎನ್ನುತ್ತಾರೆ ಯರ‍್ರಿಸ್ವಾಮಿ.

ಎತ್ತು ಬಳಸಿ ಕುಂಟೆ ಹಾಕುವಾಗ್ಗೆ ಎತ್ತುಗಳ ಕಾಲಿಗೆ ಅಲ್ಪಸ್ವಲ್ಪ ಬೆಳೆ ಸಿಕ್ಕು ನಾಶ ಆಗುತ್ತೆ. ಬೆಳೆ ಸಾಲಿನ ಹುಲ್ಲು ಹಾಗೆ ಉಳಿಯುತ್ತೆ. ಆದರೆ ಈ ಉಪಕರಣದಿಂದ ಹುಲ್ಲು ಇರುವಲ್ಲೆಲ್ಲಾ ಸಲೀಸಾಗಿ ತಿರುಗಿಸಿ, ಕಳೆ ತೆಗೆಯಬಹುದು. ಅದು ಬೇರೆ ಸುಮಾರು 4-5 ಅಡಿ ಎತ್ತರದ ಬೆಳೆ ನಡುವೆಯೂ ಲೀಲಾಜಾಲವಾಗಿ ಹುಲ್ಲು ತೆಗೆಯಬಹುದು!.

ಯಾವಾವ ಬೆಳೆಗೆ ಸೂಕ್ತ?
ವಿಪರೀತ ಕಲ್ಲು ಜಮೀನನ್ನು ಬಿಟ್ಟು ಎಲ್ಲಾ ಮಣ್ಣಿನಲ್ಲಿ ಈ ಉಪಕರಣ ಬಳಸಬಹುದು. ವಿವಿಧ ಅಳತೆಯ ಕೂರಿಗೆ ಸಾಲುಗಳಲ್ಲೂ ಇದನ್ನು ಬಳಸುತ್ತಿದ್ದಾರೆ ಯರ‍್ರಿಸ್ವಾಮಿ. ಜೋಳ, ಮೆಕ್ಕೆಜೋಳ, ಶೇಂಗಾ, ರಾಗಿ, ಸಾಲು ನೆಲ್ಲು ಗದ್ದೆ, ಕನಕಾಂಬರ... ಹೀಗೆ ಬಹುತೇಕ ಎಲ್ಲಾ ಬೆಳೆಗಳಲ್ಲಿ ಕಳೆ ತೆಗೆಯಲು ಉಪಯುಕ್ತ. ಇನ್ನು ಸೌತೆ, ಮೆಣಸಿನ ಗಿಡದಲ್ಲಿ ಸಾಲು ಗೊಬ್ಬರ ಹಾಕಲಿಕ್ಕೆ ಮಡಿಕೆ ಆಗಿಯೂ, ಯಂತ್ರದ ರೆಕ್ಕೆಯ ಎರಡೂ ಕಡೆ ಹಗ್ಗ, ತಂತಿ ಸುತ್ತುವರೆದರೆ ಬೋದು ಹೊಡೆಯಲಿಕ್ಕೂ ಬರುತ್ತದೆಯಂತೆ.

ಯರ‍್ರಿಸ್ವಾಮಿ ಅವರಂತೆ ಈ ಭಾಗದಲ್ಲಿ ಹಲವು ರೈತರು ಈ ಉಪಕರಣ ಬಳಸುತ್ತಾರೆ. ಅವರಲ್ಲಿ ಕೆಲವರಿಗೆ ಕೂಲಿ ಖರ್ಚು ಉಳಿತಾಯವಾಗಿದೆ. ‘ನಮ್ಮಲ್ಲಿ ಕುಂಟೆ ಹೊಡೆಯಲು ಎತ್ತು, ಗಂಡು ಆಳು ಬೇಕು. ಕಳೆ ತೆಗೆಯಲು, ಹುಲ್ಲು ಆರಿಸಲು ಹೆಣ್ಣಾಳು ಇರ್ತಾರೆ. ಇದಕ್ಕಾಗಿ ಎಕರೆಗೆ ಅಂದಾಜು ₹2 ಸಾವಿರ ಖರ್ಚು ಐತಿ. ಆದರೆ ಈಗ ತಲೆಬಿಸಿ ಇಲ್ಲ. ಈ ಉಪಕರಣ ಬಳಸಿ ಮೂರು ದಿನದಲ್ಲಿ ಎರಡು ಎಕರೆ ಜೋಳಕ್ಕೆ ನಾನೊಬ್ಬನೇ ಕುಂಟೆ ಹೊಡಿತೀನಿ’ ಎಂದು ಬಂಡ್ರಿಯ ದಾಸರ ವೆಂಕಟೇಶ ಹಿಗ್ಗಿನಿಂದ ಹೇಳುತ್ತಾರೆ. ‘ಎತ್ತು, ಆಳು-ಕಾಳುಗಳದ್ದೇ ದೊಡ್ಡ ಸಮಸ್ಯೆ ಆಗಿತ್ತು. ಬೇಸಾಯ ಸಹವಾಸ ಬೇಡ ಅಂತಾ ತಿರ್ಮಾನಿಸಿದ್ದೆ. ನನಗೀಗ ಕಡ್ಲೆ ತಿಂದು ಕೈ ತೊಳೆದಂಗೆ ಹೊಲದ ಕೆಲಸ ಸಲೀಸು ಆಗೈತೆ. ದುಡ್ಡಿನ ಹೊರೆ ತಪ್ಪಿದೆ’ ಎನ್ನುತ್ತಾರೆ ಹಾಳ್ ಗಜಾಪುರದ ಬಾರಿಕರ ಶಿವರಾಮ್.

ಒಟ್ಟಿನಲ್ಲಿ ಆಳು, ಎತ್ತುಗಳ ಬೇಡಿಕೆ ತಗ್ಗಿಸಿದ ವೆಚ್ಚದಾಯಕ ಅಲ್ಲದ ಈ ಯಂತ್ರಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ‘ಉಪಕರಣ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ತೋರಿದರೆ, ನಾನೇ ಅವರಲ್ಲಿಗೆ ಹೋಗಿ ತರಬೇತಿ ಕೊಟ್ಟು, ಅದನ್ನು ಬಳಸುವುದನ್ನೂ ಹೇಳಿಕೊಟ್ಟು ಬರುತ್ತೇನೆ. ಆದರೆ, ಐದಾರು ರೈತರು ಸೇರಿ ತರಬೇತಿ ಪಡೆಯುವುದಾದರೆ ಒಳ್ಳೆಯದು. ಒಬ್ಬೊಬ್ಬರಿಗೆ ಕಲಿಸುವುದು ತ್ರಾಸ ಆಗ್ತದೆ’ ಎನ್ನುತ್ತಾರೆ ಯರ‍್ರಿಸ್ವಾಮಿ. ‘ಇದನ್ನು ಬಳಸುವುದು ಸರಳ. ಒಮ್ಮೆ ಲಕ್ಷಕೊಟ್ಟು ನೋಡಿಕೊಂಡರೆ ತಯಾರಿಸುವುದೂ ಸುಲಭ. ನನಗೆ ಇದರಿಂದ ದುಡ್ಡು ಮಾಡೋ ಆಸೆಯಿಲ್ಲ. ಎಲ್ಲರಿಗೂ ಅನುಕೂಲವಾದರೆ ಸಾಕು’ ಎಂದು ವಿನಯದಿಂದ ನುಡಿಯುತ್ತಾರೆ ಅವರು.

ಎಡೆಕುಂಟೆ ಉಪಕರಣ ಕುರಿತು ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9449202693

ಸೈಕಲ್ ಎಡೆಕುಂಟೆಯ ಪ್ರಾತ್ಯಕ್ಷಿಕೆ ಚಿತ್ರಗಳು: ಲೇಖಕರವು
ಸೈಕಲ್ ಎಡೆಕುಂಟೆಯ ಪ್ರಾತ್ಯಕ್ಷಿಕೆ ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT