ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕೀಟ ಭಕ್ಷಕ ಸಸ್ಯವೇ? ಕುಕ್ಕೆ ಬಳ್ಳಿ

Last Updated 4 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ನೈಋತ್ಯ ಅಮೆರಿಕಾ, ಮೆಕ್ಸಿಕೊ, ಮಧ್ಯ ಮತ್ತು ದಕ್ಷಿಣ ಅಮೆರಿಕ ಹಾಗೂ ವೆಸ್ಟ್‌ವಿಂಡೀಸ್‌ನ ಕುಕ್ಕೆಬಳ್ಳಿ, ಆಗ್ನೇಯ ಏಷ್ಯಾ ಮೂಲಕ ಭಾರತಕ್ಕೆ ಬಂದು ನೆಲೆ ನಿಂತಿದೆ. ಈಗ ಕರ್ನಾಟಕದೆಲ್ಲೆಡೆ ಹುಲುಸಾಗಿ ಹಬ್ಬಿ ಬೆಳೆಯುತ್ತಿದೆ. ಇದು ಬಹುವಾರ್ಷಿಕ ಬಳ್ಳಿ.

ಕುಕ್ಕೆ ಬಳ್ಳಿಯನ್ನು ಕಾಡುಕುಕ್ಕೆ, ಕಲ್ಲುಕುಕ್ಕೆ ಬಳ್ಳಿ ಎಂಬ ಸಾಮಾನ್ಯ ಹೆಸರುಗಳಿವೆ. ‘ಪ್ಯಾಸಿಪ್ಲೋರ ಫಿಟಿಡ’ ಎಂಬುದು ವೈಜ್ಞಾನಿಕ ಹೆಸರು. ಪ್ಯಾಸಿಪ್ಲೋರೇಸಿ ಸಸ್ಯ ಕುಟುಂಬಕ್ಕೆ ಸೇರಿಲಾಗಿದೆ. ಪ್ರಭೇದದ ಲ್ಯಾಟೀನ್ ಭಾಷೆಯಲ್ಲಿ ‘ಫಿಟಿಡ’ ಎಂದರೆ ‘ಕೊಳೆತ’ ಎಂದರ್ಥ. ಇದರ ಹಾನಿಗೊಳಗಾದ ಎಲೆಗಳಿಂದ ಹೊರ ಹೊಮ್ಮುವ ಕಟುವಾದ ಘಾಟು ವಾಸನೆಯ ಸೂಚಕವಾಗಿ ಈ ಹೆಸರಿಡಲಾಗಿದೆ.

ತೆಳ್ಳನೆಯ ಮೃದುವಾದ ಕಾಂಡ. ಸೂಕ್ಷ್ಮ ಜಿಗುಟಾದ ಹಳದಿ ತೊಟ್ಟು ರೋಮಗಳಿಂದ ಕೂಡಿದೆ. ಬಳ್ಳಿ ಬೆಳೆದಂತೆ ಕಾಂಡ ಗಟ್ಟಿಯಾಗುತ್ತದೆ. ಮೂರರಿಂದ ಐದು ಹಾಳೆಗಳಿಂದ ಕೂಡಿದ ಎಲೆಗಳ ಜತೆ ಸಣ್ಣ ರೋಮಗಳಿವೆ. ಈ ಎಲೆಗಳು ಪರ್ಯಾಯವಾಗಿ ಜೋಡಿಸಿಕೊಂಡಿವೆ. ಬಳ್ಳಿಯ ಕವಲುಗಳಿಲ್ಲದ ಅಡರು ಬಳ್ಳಿಗಳಿದ್ದು ಇವು ಹಬ್ಬಿ ಬೆಳೆಯಲು ಸಹಾಯಕವಾಗಿವೆ.

ಹೂವುಗಳು ಕೆನೆ ಬಣ್ಣ ಮಿಶ್ರಿತ ಕೆನ್ನೀಲಿ ಬಣ್ಣದಿಂದ ಕೂಡಿವೆ. ಐದು ಕೇಸರಗಳು ಶಲಾಕಾಗ್ರಕ್ಕೆ ಅಂಟಿಕೊಂಡಿದೆ. ಹಸಿರಾದ ಕಾಯಿಯನ್ನು ಬಲೆಯಂತಿರುವ ಪುಷ್ಪಪತ್ರಕ್ಕೆ ಸುತ್ತುವರೆದಿದೆ. ಎತ್ತುಗಳ ಬಾಯಿಗೆ ಕಟ್ಟುವ ಬೆತ್ತದ ಕುಕ್ಕೆಯಂತೆ ಕಾಣುತ್ತದೆ. ಅದಕ್ಕೇ ಈ ಬಳ್ಳಿಗೆ ‘ಕುಕ್ಕೆ ಬಳ್ಳಿ’ ಎಂದು ಹೆಸರು ಬಂದಿದೆ. ಗೋಳಾಕೃತಿಯಿಂದ ಕೂಡಿದ ಕಿತ್ತಳೆ ಬಣ್ಣದ ಹಣ್ಣುಗಳು ಮಾಗಿದಂತೆ ಕೆಂಪಾಗುತ್ತವೆ. ತಿರುಳಿನಲ್ಲಿ ಕಪ್ಪು ಬಣ್ಣದ ಬೀಜಗಳಿದ್ದು ಹಣ್ಣನ್ನು ತಿಂದ ಪಕ್ಷಿಗಳಿಂದ ಬೀಜ ಪ್ರಸಾರಣೆಯಾಗುತ್ತದೆ.

ಕೀಟಹಾರಿ ಸಸ್ಯವೇ?
ಹೂವು ಹಾಗೂ ಕಾಯಿಗಳಿಗೆ ಆವೃತವಾಗಿರುವ ಕುಕ್ಕೆ ರೋಮಗಳ ತೊಟ್ಟುಗಳಲ್ಲಿರುವ ಜಿಗುಟಾದ ವಸ್ತುವು ಕೀಟಗಳನ್ನು ಪತ್ತೆ ಮಾಡುವುತ್ತದೆ. ಅಲ್ಲದೆ ಜೀರ್ಣಕಾರಿ ಕಿಣ್ವಗಳನ್ನು ಹೊರಹಾಕಿ ಕೀಟಗಳನ್ನು ಭಕ್ಷಿಸುವುದರಿಂದ ಇದನ್ನು ಕೀಟಹಾರಿ ಸಸ್ಯವೆಂದು ಹೇಳಲಾಗುತ್ತದೆ. ಆದರೆ, ಈ ವಿಷಯದಲ್ಲಿ ಸಸ್ಯ ವಿಜ್ಞಾನಿಗಳಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಈ ಬಗ್ಗೆ ಅಧ್ಯಯನ ಮುಂದುವರೆದಿದೆ. ಪ್ರಸ್ತುತ ಈ ಬಳ್ಳಿಯನ್ನು ‘ಪ್ರೋಟೋಕಾರ್ನಿವೋರಸ್’ ಸಸ್ಯವೆಂದು ಪರಿಗಣಿಸಲಾಗಿದೆ.

ಈ ಬಳ್ಳಿಯು ಕಪಿಲ ಚಿಟ್ಟೆಯ ಕಂಬಳಿಹುಳುವಿನ ಆಹಾರ ಸಸ್ಯವಾಗಿದೆ. ಕಪಿಲ ಚಿಟ್ಟೆಯು ಈ ಬಳ್ಳಿಯ ಎಲೆಯ ಮೇಲೆ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರ ಬಂದ ಕಂಬಳಿಹುಳುಗಳು ಇದರ ಎಲೆಗಳನ್ನು ಭಕಾಸುರನಂತೆ ತಿಂದು ಬೆಳವಣಿಗೆ ಹೊಂದಿ, ಕೋಶವಸ್ಥೆಗೆ ತಲುಪುತ್ತವೆ. ನಂತರ ಪ್ರೌಢ ಚಿಟ್ಟೆಗಳಾಗಿ ನಿಸರ್ಗ ಸೇರುತ್ತವೆ. ಕೀಟಹಾರಿ ಸಸ್ಯವಾದರೂ ಚಿಟ್ಟೆಗಳ ಕಂಬಳಿಹುಳುಗಳಿಗೆ ಆಹಾರ ಸಸ್ಯವಾಗಿರುವುದು ಸೋಜಿಗದ ಸಂಗತಿ.

ಈ ಬಳ್ಳಿಯಲ್ಲಿ ಅನೇಕ ಔಷಧಿ ಗುಣಗಳಿವೆ ಎಂದು ಗಿಡಮೂಲಿಕೆ ತಜ್ಞರು ಹೇಳುತ್ತಾರೆ. ಹಾದಿ ಬದಿ, ಬೇಲಿ ಸಾಲಿನಲ್ಲಿ ಬೆಳೆದು ಉಪಯೋಗಕಾರಿಯಾಗುವ ಈ ಬಳ್ಳಿಯನ್ನು ಸಂರಕ್ಷಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT