ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲು ರಕ್ಷಣೆಗೆಎಲ್ಇಡಿ ಬೆಳಕು

Last Updated 15 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಕೇರಳದ ಕಾಸರಗೋಡು ಜಿಲ್ಲೆಯ ಕಿನ್ನಿಂಗಾರು ಸಮೀಪದ ಕೈಪಂಗಳ, ರಾಜಗೋಪಾಲರ ಹುಟ್ಟಿದೂರು. ಎಲೆಕ್ಟ್ರಿಕಲ್ ಎಂಜಿನಿಯರ್ ಆದ ಇವರು ದೇಶ ವಿದೇಶಗಳಲ್ಲಿ ದುಡಿದವರು. ಹುಟ್ಟೂರಿನಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಮೂರು ವರ್ಷಗಳ ಹಿಂದೆ ಊರಿಗೆ ಮರಳಿದರು. ಪಿತ್ರಾರ್ಜಿತ ಜಮೀನಿನಲ್ಲಿ ಕೃಷಿ ಆರಂಭಿಸಿದರು. ಆಗ ಅವರಿಗೆ ಸವಾಲಾದುದು ರಾತ್ರಿ ವೇಳೆ ಬೆಳೆಗಳಿಗೆ ಹಂದಿ ಮತ್ತು ಆನೆಗಳ ಕಾಟ.

ಈ ಪ್ರಾಣಿಗಳ ದಾಳಿ ನಿಯಂತ್ರಣಕ್ಕೆ ಅನೇಕ ಪ್ರಯೋಗಗಳ ಬಗ್ಗೆ ಯೋಚಿಸಿದರು. ಅಂತಿಮವಾಗಿ ಅವರಿಗೆ ಸರಿ ಎನಿಸಿದ್ದು ‘ಬೆಳಕಿದ್ದಲ್ಲಿಗೆ ಈ ಪ್ರಾಣಿಗಳ ಕಾಟ ಕಡಿಮೆ’ ಎಂಬ ವಿಶ್ಲೇಷಣೆ. ಇದರ ಅನ್ವಯ ಮೊರೆ ಹೋಗಿದ್ದು ಎಲ್‌ಇಡಿ ಬಲ್ಬ್‌ಗಳ ಬೆಳಕಿಗೆ. ಮನೆಯಲ್ಲಿ ಎಲ್ ಇ ಡಿ ಬಲ್ಪ್‌ಗಳ ಬೆಳಕಿನ ಪ್ರಖರತೆ ಕಡಿಮೆ ಮಾಡಲು ಬಿಳಿ ಲೇಪನ ಮಾಡಿದ ಬುರುಡೆಗಳನ್ನು ಉಪಯೋಗಿಸುತ್ತಾರೆ. ಇದರೊಳಗೆ ಜೋಡಿಸಿದ ಎಲ್ ಇ ಡಿ ಸಣ್ಣ ಸಣ್ಣ ಬಲ್ಬ್‌ಗಳನ್ನು ಸರಣಿಯಾಗಿ ಜೋಡಿಸಿದರೆ, ಅವುಗಳ ಬೆಳಕು ನಮ್ಮ ಕಣ್ಣನ್ನು ಕುಕ್ಕುತ್ತವೆ. ಮಾರ್ಕೆಟ್‍ನಲ್ಲಿ ವಿಚಾರಿಸಿದಾಗ 12 ವೋಲ್ಟ್‌ನ 24 ಬಲ್ಬ್‌ಗಳನ್ನು ಸರಣಿಯಾಗಿ ಪ್ಯಾನಲ್‍ನಲ್ಲಿ ಜೋಡಿಸಿದ ಬಲ್ಬ್ ದೊರೆಯಿತು. ಅವುಗಳಿಗೆ 12 ವೋಲ್ಟ್ ಬ್ಯಾಟರಿ ಜೋಡಿಸಿ, ರಾತ್ರಿ ಹೊತ್ತಿನಲ್ಲಿ ಅಡಿಕೆ ತೋಟಕ್ಕೆ ಹಂದಿ ಬರುವ ದಾರಿಯಲ್ಲಿ ತೂಗು ಹಾಕಿದರು. ಎದುರು ಬರುವ ಹಂದಿ ಮೇಲೆ ಪ್ರಖರವಾಗಿ ಬೆಳಕು ಬೀಳುವಂತೆ ಜೋಡಿಸಿದರು.

ಹಂದಿಯ ಕಣ್ಣಿನ ಎತ್ತರ ಸುಮಾರು ಒಂದಡಿ ಮತ್ತು ಆನೆಯ ಕಣ್ಣಿನ ಎತ್ತರ ಸುಮಾರು 8 ಅಡಿ, ಕಾಡುಕೋಣ 7 ಅಡಿ. ಹೀಗೆ ಇದೇ ಎತ್ತರದಲ್ಲಿ ಈ ಪ್ರಾಣಿಗಳು ಬರುವ ದಾರಿಯಲ್ಲಿ ಈ ಎಲ್ ಇ ಡಿ ಬಲ್ಬ್‍ಗಳನ್ನು ತೂಗು ಹಾಕಿ ಬ್ಯಾಟರಿಯ ಮೂಲಕ ರಾತ್ರಿ ಬಲ್ಬ್‌ಗಳನ್ನು ಹೊತ್ತಿಸಿದರು. ಇದರ ಬೆಳಕು ಸುಮಾರು 50 ಮೀಟರ್ ದೂರಕ್ಕೆ ಪ್ರಖರವಾಗಿ ಕಾಣುತ್ತದೆ. ಬರಿಗಣ್ಣಿನಿಂದ ಈ ಬೆಳಕಿನ ಪ್ರಖರತೆ ನೋಡಿ, ನಂತರ ಬೇರೆ ಕಡೆ ದೃಷ್ಟಿ ಹಾಯಿಸಿದರೆ ಕಣ್ಣಿಗೆ ಕತ್ತಲು ಕವಿಯುತ್ತದೆ. ಹೀಗಾಗಿ, ಬಲ್ಬ್‌ಗಳನ್ನು ತೂಗು ಹಾಕಿದ ಕಡೆಗೆ ಪ್ರಾಣಿಗಳು ಬರಲೇ ಇಲ್ಲ.

ರಾಜಗೋಪಾಲ್‌, ಸುಮಾರು ಒಂದೂವರೆ ವರ್ಷಗಳ ಕಾಲ ತೋಟದಲ್ಲಿ ಈ ಎಲ್‌ಇಡಿ ಬಲ್ಬ್‌ಗಳ ಪ್ರಯೋಗ ಮುಂದುವರಿಸಿದರು. ಪ್ರಾಣಿಗಳು ಫಸಲು ತಿನ್ನಲು ಬಾರದ್ದನ್ನು ದೃಢಪಡಿಸಿಕೊಂಡರು. ನಂತರ ಸನಿಹದ ಕೃಷಿಕರಿಗೂ ಈ ವಿಚಾರ ತಿಳಿಸಿದರು. ಅಲ್ಲಿಯೂ ಇದನ್ನು ಅಳವಡಿಸಿಕೊಟ್ಟರು. ಅಲ್ಲಿಯೂ ಸಕ್ಸಸ್. ವ್ಯಾಪಕ ಪ್ರಚಾರ ನೀಡಿದರು.

ಎರಡು ವರ್ಷಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 60 ಕಡೆಗೆ ಅವರೇ ಈ ದೀಪಗಳನ್ನು ಅಳವಡಿಸಿ ಕೊಟ್ಟಿದ್ದಾರೆ. ನಂತರ ಮುಳ್ಳೇರಿಯಾದಲ್ಲಿ ಕೃಷಿ ಭೂಮಿಗೆ ಆನೆಗಳು ಬರುವ ದಾರಿಯಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದು ಈ ಎಲ್ ಇ ಡಿ ಬಲ್ಬ್‍ಗಳ ಪ್ರಯೋಗ ಮಾಡಲಾಯಿತು. ಇದೀಗ ಅರಣ್ಯ ಇಲಾಖೆ ಈ ಪ್ರಯೋಗದ ಬಗ್ಗೆ ಪೂರ್ಣ ತೃಪ್ತಿ ವ್ಯಕ್ತಪಡಿಸಿದೆ. ಮೇಲಧಿಕಾರಿಗಳಿಗೆ ಈ ಕುರಿತು ಶಿಪಾರಸು ಮಾಡಿದೆ. ಮಾತ್ರವಲ್ಲ, ಸಕಲೇಶಪುರದಲ್ಲಿ ಆನೆಗಳ ನಿಯಂತ್ರಣಕ್ಕಾಗಿ, ಈ ಬೆಳಕಿನ ಪ್ರಯೋಗವನ್ನು ಅಳವಡಿಸಿ, ಯಶಸ್ಸು ಕಂಡಿದ್ದಾಗಿದೆಯೆಂತೆ.

ಸಣ್ಣ ಹಿಡುವಳಿಯಾದರೆ..

‘ಸಣ್ಣ ಹಿಡುವಳಿಯಾದರೆ ಬಲ್ಬ್‌ಗಳ ಸಂಖ್ಯೆ ಕಡಿಮೆ ಇದ್ದರೂ ಸಾಕು. ದೊಡ್ಡ ಹಿಡುವಳಿಯಾದರೆ ಈ ಪ್ರಾಣಿಗಳು ಬರುವ ದಾರಿ ಗುರುತಿಸಿ ಅಲ್ಲಿ 50 ಮೀಟರಿಗೊಂದರಂತೆ ಇರಿಸಬೇಕಾಗುತ್ತದೆ’ ಎನ್ನುತ್ತಾರೆ ರಾಜಗೋಪಾಲ್. ಪ್ರಯೋಗ ಮುಂದುವರಿದಂತೆ, ಈಗ ಈ ಬಲ್ಬ್‌ನಲ್ಲಿ ಹಲವಾರು ವಿಧಗಳನ್ನು ತಂದಿದ್ದಾರೆ. ತನ್ನ ಈ ಆವಿಷ್ಕಾರಕ್ಕೆ KRAC Led Light ಎಂದು ಹೆಸರು ಇಟ್ಟಿದ್ದಾರೆ.

ಎಲ್ ಇ ಡಿ ಪ್ಯಾನಲ್ ಅಳವಡಿಸಿದ 4 ಬಲ್ಬ್‌ಗಳು ವೈರ್‌ಗಳು, 12 ವೋಲ್ಟ್ ಡಿಸಿ ಕನ್ವರ್ಟರ್ ಗೆ ಸುಮಾರು ₹2000 ವೆಚ್ಚವಾಗುತ್ತದೆ. ಬ್ಯಾಟರಿಯಾದರೆ ವೆಚ್ಚ ಪ್ರತ್ಯೇಕ. ವೈರ್ ಮೂಲಕ ಸುಮಾರು 100 ಮೀಟರ್ ದೂರದ ತನಕ ಸಂಪರ್ಕ ನೀಡಬಹುದು. 12 ವೋಲ್ಟ್ ಡಿ ಸಿ ಕನ್ವರ್ಟರ್ ಉಪಯೋಗಿಸಿ ಮನೆ ಬದಿಯಲ್ಲಿ ಈ ಲೈಟ್ ಉರಿಸಬಹುದು. ಆದರೆ, ಕಾನೂನಿನ ದೃಷ್ಟಿಯಿಂದ ತೋಟದಲ್ಲಿ 12 ವೋಲ್ಟ್ ಬ್ಯಾಟರಿ ಮೂಲಕ ಸಂಪರ್ಕ ನೀಡುವುದು ಉಚಿತ ಎನ್ನುತ್ತಾರೆ ಇವರು. ಈ ಪ್ರಮಾಣದ ವಿದ್ಯುತ್ ಪ್ರವಹಿಸುವ ಕಾರಣ ಶಾಕ್ ತಗಲುವುದಿಲ್ಲ.

ಮಿನುಗುವ ಸೋಲಾರ್ ಚಾರ್ಜರ್ ಇರುವ ಎಲ್ಇಡಿ ಬಲ್ಬ್‌ಗಳನ್ನು ರಾಜಗೋಪಾಲ್ ಅವರೇ ತಯಾರಿಸಿ ನೀಡುತ್ತಿದ್ದಾರೆ. ಹಗಲು ಸೂರ್ಯ ಬೆಳಕಿನಲ್ಲಿ ಇವು ಚಾರ್ಜ್ ಆಗಿ ರಾತ್ರಿ ಚಾಲನೆಯಾಗುತ್ತವೆ. ಬೆಳಕು ಹರಿದೊಡನೆ ಆಫ್ ಅಗುತ್ತವೆ. ಇದರ ಬೆಲೆ ₹ 1400. ಇನ್ನೊಂದು ಮಾಡಲ್ ಟಾರ್ಚ್ ಮಾದರಿಯದು. ನಮ್ಮ ಸಾದಾ ಟಾರ್ಚ್‍ಗಳಿಗೆ ಉಪಯೋಗಿಸುವ 2 ದೊಡ್ಡ ಬ್ಯಾಟರಿಗಳನ್ನು ಇದರಲ್ಲಿ ಉಪಯೋಗಿಸಿದ್ದಾರೆ. ಇದು ರಾತ್ರಿಯಾದೊಡನೆ ಸ್ವಯಂ ಚಾಲಿತವಾಗಿ ಉರಿಯುತ್ತದೆ. ಬೆಳಗಾದೊಡನೆ ಆಫ್ ಆಗುತ್ತಿದೆ. ಬ್ಯಾಟರಿ ಸುಮಾರು 2 - 3 ತಿಂಗಳಿಗೆ ಬರುತ್ತದೆ. ಇದರ ಬೆಲೆ ₹ 275.

ಅಡಿಕೆ ತೋಟದಲ್ಲಿ ನೀರು ಬೀಳದಂತೆ ಛಾವಣಿ ವ್ಯವಸ್ಥೆಯಲ್ಲಿ ಉರಿಯುತ್ತಿರುವ ಎಲ್ ಇ ಡಿ ಪ್ಯಾನಲ್
ಅಡಿಕೆ ತೋಟದಲ್ಲಿ ನೀರು ಬೀಳದಂತೆ ಛಾವಣಿ ವ್ಯವಸ್ಥೆಯಲ್ಲಿ ಉರಿಯುತ್ತಿರುವ ಎಲ್ ಇ ಡಿ ಪ್ಯಾನಲ್

ರಾಜಗೋಪಾಲರ ಮಾರ್ಗದರ್ಶನದಲ್ಲಿ ಅನೇಕ ರೈತರು ಈ ಬಲ್ಬ್‌ಗಳ ವಿಧಾನ ಅಳವಡಿಸಿಕೊಂಡು ಪ್ರಾಣಿಗಳನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಾರೆ. ‘ಕೃಷಿಕರಿಗೆ ಕಾಡು ಪ್ರಾಣಿಗಳಿಂದ ಮುಕ್ತಿ ದೊರೆತರೆ ಅದೇ ನನಗೆ ಸಂತಸ’ ಎನ್ನುತ್ತಾ, ಈ ತಂತ್ರಜ್ಞಾನದ ಪೇಟೆಂಟ್‍ಗಾಗಿ ಅರ್ಜಿಯನ್ನೂ ಸಲ್ಲಿಸಿದ್ದಾರೆ ರಾಜಗೋಪಾಲ್. ತಮ್ಮ ಆವಿಷ್ಕಾರವನ್ನು ಕೇರಳ ರಾಜ್ಯಪಾಲ ಜಸ್ಟೀಸ್ ಸದಾಸಿವಮ್ ಅವರಿಗೆ ತಿಳಿಸಿ, ಭೇಷ್ ಎನ್ನಿಸಿಕೊಂಡಿದ್ದಲ್ಲದೇ, ‘ಈ ಸಾಧನೆಯ ವಿವಿರ ದೇಶದೆಲ್ಲೆಡೆಗೆ ಹರಡಬೇಕು. ಮಾಧ್ಯಮಗಳು ಈ ನಿಟ್ಟಿನಲ್ಲಿ ಪ್ರಚಾರ ನೀಡಬೇಕು’ ಎಂದು ಜಸ್ಟೀಸ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಯೋಗ ನಡೆಸಿ ಯಶಸ್ವಿಯಾದವರು..

ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ರಾಜೀವನ್, ಮುಳ್ಳೇರಿಯಾದ ಕಾಯ್ದಿಟ್ಟ ಅರಣ್ಯ ಪ್ರದೇಶಲ್ಲಿ ಆನೆಗಳು ಬರುವ ದಾರಿಯಲ್ಲಿ 5 ಕಡೆಗಳಲ್ಲಿ ಈ ಬಲ್ಬ್‌ಗಳನ್ನು ಇರಿಸಿದ್ದಾರೆ. ಈಗ ಆನೆಗಳ ಕಾಟ ಇಲ್ಲವಾಗಿದೆಯಂತೆ. ಕಾಞಗಾಡಿನ ಅಟ್ಟಂಗಾನದ ಗೋಪಾಕೃಷ್ಣನ್ 10 ಎಕರೆ ಭತ್ತದ ಗದ್ದೆ ಮೇಲೆ ಮಾಡುತ್ತಿದ್ದ ಹಂದಿ ದಾಳಿಯನ್ನು ಮೂರು ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿ ನಿಯಂತ್ರಿಸಿದ್ದಾರೆ.

ಕೆ.ಟಿ ಭಟ್ ಸವಣೂರು, ಕಳೆದ ವರ್ಷ 300 ನೇಂದ್ರ ಬಾಳೆ ಗಿಡ ನೆಟ್ಟಿದ್ದರು. ಹಂದಿ ಕಾಟದಿಂದ 110 ಗಿಡಗಳು ನಾಶವಾದವು. ನೆಟ್ಟ 100 ತೆಂಗಿನ ಗಿಡಗಳಲ್ಲಿ ಹಲವು ಹಂದಿ ದಾಳಿಗೆ ತುತ್ತಾಗಿದ್ದವು. ಎಲ್‌ಇಡಿ ಬಲ್ಬ್‌ ಪ್ರಯೋಗ ಮಾಡಿದ ಮೇಲೆ, ಪೂರ್ಣ ಯಶಸ್ಸು ಕಂಡರು.

ಎಸ್ .ಎನ್ ಭಟ್ ಸಾರಡ್ಕ ಅವರ ತೋಟದಲ್ಲಿ ತೀವ್ರ ಹಂದಿಯ ಉಪಟಳ. ನೆಟ್ಟ ಬಾಳೆ, ತೆಂಗು, ಅಡಿಕೆ ಎಲ್ಲವೂ ಹಂದಿಗಳ ಪಾಲಾಗುತ್ತಿತ್ತು. 8 ತಿಂಗಳಿಂದೀಚೆಗೆ, 5 ಎಕರೆ ಅಡಿಕೆ ತೋಟದಲ್ಲಿ 12 ವೋಲ್ಟ್‌ ಬ್ಯಾಟರಿಗೆ, 5 ಎಲ್ ಇ ಡಿ ಪ್ಯಾನಲ್ ಅಳವಡಿಸಿದ್ದಾರೆ. ದೂರದ ತೋಟದಲ್ಲಿ ಮಿನುಗುವ 1 ಸೋಲಾರ್ ಎಲ್ ಇ ಡಿ ಅಳವಡಿಕೆಗೆ ಹಂದಿಗಳ ಸುಳಿವಿಲ್ಲ. ಕೊಕೊ ತಿನ್ನಲು ಬರುತ್ತಿದ್ದ ಕಾಡು ಬೆಕ್ಕುಗಳು ಮಾಯ. ಮಳೆಗಾಲದಲ್ಲಿ ಎಲ್ ಇ ಡಿ ಪ್ಯಾನಲ್‍ನಲ್ಲಿರುವ ಬಲ್ಬ್‌ಗಳು ನೀರು ಬಿದ್ದರೆ ಕೆಡುತ್ತವೆ. ಈ ಬಲ್ಬ್‍ಗಳ ಮೇಲೆ ನೀರು ಬೀಳದಂತೆ ಚೌಕಾಕರಕ್ಕೆ ಕಬ್ಬಿಣದ ಶೀಟ್‍ ಛಾವಣಿ ಮಾಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT