ಶನಿವಾರ, ಡಿಸೆಂಬರ್ 14, 2019
21 °C

ಶ್ರಮ ಹಗುರ ಮನ ಹಗುರ

ನಯನ Updated:

ಅಕ್ಷರ ಗಾತ್ರ : | |

Deccan Herald

‘ಇಂದು ಅಡಿಕೆ ಕೊಯ್ಯಬೇಕು. ಆದರೆ ಬಿದ್ದ ಕಾಯಿ ಆಯಲು ಸಹಾಯಕರು ಸಿಗುತ್ತಿಲ್ಲ’ – ಇದು ಅಡಿಕೆ ತೋಟದ ರೈತರ ಅಳಲು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅತ್ತಿಕಟ್ಟೆಯ ಆನಂದ್, ಈ ಬಗ್ಗೆ ಚಿಂತಿಸುವುದಿಲ್ಲ. ಏಕೆಂದರೆ, ಅವರು ಕಾರ್ಮಿಕರ ಕೊರೆಯ ನಡುವೆ ಅಡಿಕೆ ಕೊಯ್ಯಲು ಸರಳ ಉಪಾಯ ಕಂಡುಕೊಂಡಿದ್ದಾರೆ. ಅದೇ ‘ಪ್ಲಾಸ್ಟಿಕ್ ಗೋಣಿಚೀಲ’ ವಿಧಾನ. ಇದೊಂದು ಸರಳ ಮಾರ್ಗವಾಗಿದ್ದು, ಯಾರು ಬೇಕಾದರೂ ಇದನ್ನು ಅನುಸರಿಸಬಹುದು. ಇದರಿಂದ ಕಾರ್ಮಿಕರ ಸಮಸ್ಯೆ ನೀಗಿಸುವ ಜತೆಗೆ, ರೈತರ ಕೆಲಸವನ್ನೂ ಸುಲಭವಾಗಿಸುತ್ತದೆ.

ವಿಧಾನ ಹೀಗಿದೆ: ಎರಡು ಕೈಯಲ್ಲಿ ಹಿಡಿದುಕೊಳ್ಳುವಷ್ಟು ಅಗಲವಾದ ಹಾಗೂ ತುಸು ದಪ್ಪವಾಗಿರುವ ತಾಡಪಾಲನ್ನು, ಚೌಕಾಕಾರ ಬರುವಂತೆ ಹೊಲಿಯಬೇಕು. ಒಂದು ಬದಿ ಮಾತ್ರ ತೆರೆದಿದ್ದು, ಉಳಿದ ಮೂರು ಭಾಗವನ್ನು ಮುಚ್ಚಿರಬೇಕು (ಚಿತ್ರ ನೋಡಿ). ತೆರೆದ ಭಾಗದ ಎರಡು ಬದಿಗೆ ಎರಡು ಪ್ಲಾಸ್ಟಿಕ್ ಪೈಪ್ ಜೋಡಿಸಬೇಕು. ಪೈಪ್‌ಗೆ ಸಣ್ಣ ರಂದ್ರ ಮಾಡಿ ಚೀಲದೊಂದಿಗೆ ಹೊಲಿದು ಭದ್ರ ಮಾಡಬೇಕು. ಹೀಗೆ ಮಾಡುವುದರಿಂದ ಚೀಲವೂ ಹಗುರ, ಹೊತ್ತೊಯ್ಯವುದಕ್ಕೂ ಸುಲಭ. ಈಗ ಅಡಿಕೆ ಮರದಿಂದ ಕಿತ್ತ ಗೊನೆ ನೇರವಾಗಿ ತಾಡಪಾಲಿನ ಚೀಲದೊಳಗೆ ಬೀಳುವಂತೆ ಮರದ ಕೆಳಗೆ ಹಿಡಿದು ನಿಲ್ಲಿ. ಆ ನೋಡಿ ಒಂದೂ ಕಾಯಿ ಹೊರಗಡೆ ಸಿಡಿಯದೇ, ಎಲ್ಲವೂ ಚೀಲದೊಳಗೆ ಬೀಳುತ್ತವೆ. ಇದರಿಂದ, ಕಾಯಿಗಳು ಹೊರಗೆ ಸಿಡಿಯುವುದಿಲ್ಲ. ಆಯ್ದುಕೊಳ್ಳುವ ಕಷ್ಟವೂ ಇರುವುದಿಲ್ಲ.

ಹಿಂದೊಮ್ಮೆ ಇಂಥದ್ದೇ ಮಾದರಿಯನ್ನು ರೈತರೊಬ್ಬರ ಮಾಡಿದ್ದರು. ಅದನ್ನು ಅನುಸರಿಸಿದ ಆನಂದ್, ಎರಡು ಬೂಸ ಚೀಲಗಳನ್ನು ಸೇರಿಸಿ ಹೊಲಿದು, ಚೀಲದ ಬಾಯಿಗೆ ತಂತಿ ಸುತ್ತಿ ಅಡಿಕೆ ಸಂಗ್ರಹಿಸುವುದಕ್ಕಾಗಿ ಬಳಸಿ ನೋಡಿದ್ದರು. ‘ಆ ಅನುಭವದ ಸಾಧಕ ಬಾಧಕಗಳ ಅರಿವಾದ ನಂತರ, ಅದನ್ನು ಸುಧಾರಿಸಿ ಮತ್ತಷ್ಟು ಹೆಚ್ಚು ಬಾಳಿಕೆ ಬರುವ ಮಾದರಿಯನ್ನು ತಯಾರಿಸಿದೆ’ ಎನ್ನುತ್ತಾರೆ ಅವರು. ‘ಇಂಥ ಟಾರ್ಪಲ್‌ಗಳು ಮಾರುಕಟ್ಟೆಯಲ್ಲಿ ದೊರೆಯಬಹುದು. ಅದರ ಬದಲು ರೈತರು ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸುಲಭವಾಗಿ ಹೀಗೆ ಮಾಡಿಕೊಳ್ಳಬಹುದು’ ಎಂದು ಸಲಹೆ ನೀಡುತ್ತಾರೆ ಆನಂದ್. ಹೆಚ್ಚಿನ ಮಾಹಿತಿ ಸಂಪರ್ಕಕ್ಕೆ: ಆನಂದ್ ಮೊಬೈಲ್‌: 8453663378 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು