ಸಾವಯವ ಟಾನಿಕ್

7

ಸಾವಯವ ಟಾನಿಕ್

Published:
Updated:
Prajavani

ಹೂವು ಮತ್ತು ತರಕಾರಿ ಬೆಳೆಯುವ ರೈತರು ಬೆಳೆ ಪ್ರಚೋದಕ(ಟಾನಿಕ್)ಗಳನ್ನು ಉಪಯೋಗಿಸುತ್ತಾರೆ. ಈ ಪ್ರಚೋದಕಗಳಿಗಾಗಿಯೇ ಸಾಕಷ್ಟ ಹಣ ವ್ಯಯಿಸುತ್ತಾರೆ. ಆದರೆ ಹೆಚ್ಚು ಹಣ ವ್ಯಯಿಸದೇ, ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಸಾವಯವ ಟಾನಿಕ್‌ ತಯಾರಿಸಿದ್ದಾರೆ ತುಮಕೂರು ಜಿಲ್ಲೆ ಹೆಬ್ಬೂರು ಸಮೀಪದ ಸೋಪನಹಳ್ಳಿಯ ಕೃಷಿಕ ನಾಗರಾಜು.

ತಯಾರಿಕೆ ವಿಧಾನ

ಈ ಟಾನಿಕ್ ತಯಾರಿಸಲು ಹುಳಿಮಜ್ಜಿಗೆ, ಗಂಜಲ ಮತ್ತು ಎಳನೀರು, ಬೆಲ್ಲದ ಪುಡಿಯಂತಹ ಕಚ್ಚಾವಸ್ತುಗಳು ಬೇಕು. 15ಲೀ ಟಾನಿಕ್ ತಯಾರಿಸಬೇಕಾದರೆ ಈ ಪ್ರಮಾಣದಲ್ಲಿ ಕಚ್ಚಾವಸ್ತುಗಳನ್ನು ಬಳಸಬೇಕು.

ಒಂದೂವರೆ ಲೀಟರ್ ಹುಳಿ ಮಜ್ಜಿಗೆ, ಒಂದೂವರೆ ಲೀಟರ್ ಗಂಜಲ(ನಾಟಿ ಹಸುವಿನದ್ದಾದರೆ ಉತ್ತಮ. ಹುಳಿ ಬಂದಿರಬೇಕು), ಒಂದೂವರೆ ಲೀಟರ್ ಎಳನೀರು (ಹುಳಿಯಿರಬೇಕು). ಇವೆಲ್ಲವನ್ನೂ ಔಷಧ ಸಿಂಪಡಿಸುವ ಕ್ಯಾನ್‌ನಲ್ಲಿ ತುಂಬಿಸಿ, ಜತೆಗೆ ನಾಲ್ಕು ಬೆರಳಿನಷ್ಟು ಬೆಲ್ಲದ ಪುಡಿ ಹಾಕಿ ಮಿಶ್ರ ಮಾಡಬೇಕು. ಈ ಮಿಶ್ರಣವನ್ನು 11 ಲೀಟರ್‌ನಷ್ಟು ನೀರಿಗೆ ಬೆರೆಸಿದರೆ, ಸಾವಯವ ಟಾನಿಕ್ ಸಿಂಪಡಿಸಲು ಸಿದ್ಧ.

ಬಳಸುವ ವಿಧಾನ

ಬೆಳೆಗಳು ಹೂವು ಬಿಡುವ ಹಂತದಲ್ಲಿ ಈ ಟಾನಿಕ್‌ ಅನ್ನು ಸಿಂಪಡಿಸಬೇಕು. ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಸಿಂಪಡಿಸಿದರೆ ಉತ್ತಮ. ಈ ಟಾನಿಕ್ ಅನ್ನು ಹೂವು, ಹಣ್ಣು, ತರಕಾರಿ ಯಾವ ಬೆಳೆಗಳಿಗೆ ಬೇಕಾದರೂ ಸಿಂಪಡಿಸಬಹುದು. ‘ನಾನು ನನ್ನ ಕಾಕಡ ಹೂವಿನ ಬೆಳೆಗೆ ಇದನ್ನು ಸಿಂಪಡಿಸಿದ್ದೇನೆ. ನಂತರದಲ್ಲಿ ಹೂವಿನ ಇಳುವರಿ ಹೆಚ್ಚಾಗಿದೆ. ಹೂವುಗಳು ಆಕರ್ಷಕವಾಗಿವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದೆ’ ಎನ್ನುತ್ತಾರೆ ಇವರು.

ನಾಗರಾಜು ಐಡಿಎಫ್ ಸ್ವಯಂ ಸೇವಾ ಸಂಸ್ಥೆಯಡಿ ರಚನೆಯಾಗಿ ಸ್ವಸಹಾಯ ಗುಂಪಿನ ಸದಸ್ಯರಾಗಿದ್ದರು. ಸಂಸ್ಥೆ ಆಯೋಜಿಸಿದ್ದ ಟಾನಿಕ್ ತಯಾರಿಕಾ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ತರಬೇತಿಯಲ್ಲಿ ಕಲಿತದ್ದನ್ನು ತಮ್ಮ ಬೆಳೆಗಳಿಗೆ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಸಾವಯವ ಟಾನಿಕ್ ಕುರಿತು ಹೆಚ್ಚಿನ ಮಾಹಿತಿಗೆ ನಾಗರಾಜು ಅವರ ಸಂಪರ್ಕ ಸಂಖ್ಯೆ: 9900227110

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !