ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಉತ್ಪನ್ನಗಳಿಗೆ ಮರು ಜೀವ...

Last Updated 28 ಜನವರಿ 2019, 19:30 IST
ಅಕ್ಷರ ಗಾತ್ರ

ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ (ಕೆ.ಆರ್.ನಗರ)ದಿಂದ ಐದು ಕಿ.ಮೀ ದೂರದಲ್ಲಿರುವ ಅಡಗನಹಳ್ಳಿಯಲ್ಲಿ ವರ್ಷದಿಂದೀಚೆಗೆ ಎಣ್ಣೆ ಅರೆಯುವ ಗಾಣದ ಸದ್ದು ಕೇಳುತ್ತಿದೆ. ಗಾಣದಲ್ಲಿ ಧಾನ್ಯಗಳನ್ನು ಅರೆಯುತ್ತಾ, ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ ಉತ್ಪಾದಿಸುವ ಪ್ರಕ್ರಿಯೆಯೊಂದು ಅಲ್ಲಿ ಆರಂಭವಾಗಿದೆ.

ಆ ಗ್ರಾಮವನ್ನು ಹೊಕ್ಕರೆ, ಶೇಂಗಾ, ಕೊಬ್ಬರಿ, ಕುಸುಬೆಯಂತಹ ಎಣ್ಣೆಗಳ ಪರಿಮಳ ಗಾಣವಿರುವ ಜಾಗಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗ) ತೆಂಗಿನ ಗರಿಯ ಸೂರಿನ ಕೆಳಗೆ ಜೋಡೆತ್ತುಗಳನ್ನು ಕಟ್ಟಿ ಗಾಣ ತಿರುಗಿಸುತ್ತಿರುವ ಹಾಗೂ ಗಾಣದ ಒರಳಿನಲ್ಲಿ, ಹಿಂಡಿ ತೆಗೆಯುತ್ತಾ, ಎಣ್ಣೆ ಸಂಗ್ರಹಿಸುತ್ತಿರುವ ದೃಶ್ಯ ಕಾಣುತ್ತದೆ.

ಮೂವರ ಯುವಕರ ಸಾಹಸ: ಕಲಬೆರಕೆ ಆಹಾರದ ಬಗ್ಗೆ ಜಾಗೃತಿ ಮೂಡಿಸುತ್ತಾ, ಸಾಂಪ್ರದಾಯಿಕ ರೀತಿಯಲ್ಲೇ ಆಹಾರ ಉತ್ಪನ್ನಗಳನ್ನು ತಯಾರಿಸಲು ಮುಂದಾಗಿದ್ದಾರೆ ಎಂಜಿನಿಯರಿಂಗ್‌ ಪದವೀಧರರಾದ ಕೆ.ಆರ್. ನಗರದ ನವೀನ್ ಕುಮಾರ್, ಬೆಂಗಳೂರಿನ ಯೋಗೇಶ್, ಚಾಮರಾಜನಗರದ ಮಹೇಶ್. ಈ ಮೂವರೇ ಗಾಣದ ಎಣ್ಣೆ ಘಟಕಗಳ ಹಿಂದಿನ ರೂವಾರಿಗಳು.

ಆಹಾರ ಕಲಬೆರಕೆ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಕಂಡು ಬೇಸತ್ತಿದ್ದ ಯುವಕರಿಗೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನಿಸಿತು. ಇನ್ನೊಂದೆಡೆ ದೇಸಿ ತಳಿಗಳು, ಸಾಂಪ್ರದಾಯಿಕ ಕೃಷಿ ವಿಧಾನಗಳು ಅಳಿವಿನಂಚಿಗೆ ಸರಿಯುತ್ತಿದ್ದದು ಮತ್ತಷ್ಟು ಕಾಡಿತು. ಇವೆರಡನ್ನೂ ಗಂಭೀರವಾಗಿ ಪರಿಗಣಿಸಿದ ಅವರು, ಪ್ರತಿಷ್ಠಿತ ಕಂಪನಿಗಳಲ್ಲಿ ಮಾಡುತ್ತಿದ್ದ ಉದ್ಯೋಗ ಬಿಟ್ಟು, ಆಹಾರ ಜಾಗೃತಿ ಮೂಡಿಸುತ್ತಾ, ದೇಸಿ ಆಹಾರ ಉತ್ಪಾದನೆಗೆ ಮುಂದಾದರು. ಅದರ ಮೊದಲ ಪ್ರಯತ್ನವಾಗಿ ಗಾಣದಿಂದ ಎಣ್ಣೆ ತೆಗೆಯುವ ಘಟಕ ಆರಂಭಿಸಿದರು.

ನೈಸರ್ಗಿಕಕೃಷಿ ಪದ್ಧತಿಯಲ್ಲಿ ಆಹಾರ ಧಾನ್ಯ ಬೆಳೆಸಲು ರೈತರನ್ನು ಉತ್ತೇಜಿಸುವುದು. ಅವರು ಬೆಳೆದ ಆಹಾರ ಧಾನ್ಯವನ್ನು ಖರೀದಿಸುವುದು. ಆ ಧಾನ್ಯಗಳನ್ನು ಬಳಸಿ ಗಾಣದಿಂದಲೇ ಅಡುಗೆ ಎಣ್ಣೆ ಉತ್ಪಾದಿಸಿ, ಗ್ರಾಹಕರಿಗೆ ತಲುಪಿಸುವುದು. ಈ ಮೂಲಕ ದೇಸಿ ತಳಿ ರಾಸುಗಳ ಪೋಷಣೆಗೆ ಉತ್ತೇಜನ, ಪರಿಶುದ್ಧ ಆಹಾರ ಜಾಗೃತಿ ಜತೆಗೆ ಗ್ರಾಮೀಣ ಯುವಕರಿಗೆ, ಅವರ ಗ್ರಾಮಗಳಲ್ಲೇ ಉದ್ಯೋಗ ಸಿಗುವುದಂತೆ ಮಾಡುವುದು- ಇಂಥ ಉದ್ದೇಶಗಳೊಂದಿಗೆ ಮುನ್ನಡೆದಿರುವ ಈ ಯುವಕರು, ಇದಕ್ಕಾಗಿ ‘ದೇಸಿರಿ ನ್ಯಾಚುರಲ್ಸ್‌’ ಎಂಬ ಕಂಪನಿಯನ್ನೇ ಆರಂಭಿಸಿದ್ದಾರೆ.

ಇದಕ್ಕೂ ಮುನ್ನ ಕರ್ನಾಟಕ ಸೇರಿದಂತೆ ಆಂಧ್ರ, ತಮಿಳುನಾಡಿನಾದ್ಯಂತ ಸಾವಿರಾರು ಕಿಲೋ ಮೀಟರ್ ಸುತ್ತಾಡಿ, ಜನರಿಂದ, ರೈತರಿಂದ, ಉತ್ಪನ್ನಗಳ ತಯಾರಿಸುವವರಿಂದ ಮಾಹಿತಿ ಪಡೆದಿದ್ದಾರೆ. ದೇಸಿ ರಾಸುಗಳ ಲಭ್ಯತೆ, ಎಣ್ಣೆ ಉತ್ಪಾದಿಸುವ ಗಾಣಗಳನ್ನು ಬಳಸುವ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದ ನಂತರ ಗಾಣಗಳ ಸ್ಥಾಪನೆಗೆ ಮುಂದಾಗಿದ್ದಾರೆ.

ನೆರವಾದ ಹಲವರು: ಗಾಣ ಹಾಕಲು ನಿರ್ಧರಿಸಿದಾಗ, ಮಾಳೂರಿನ ಶ್ರೀರಾಮಚಂದ್ರಾಪುರ ಮಠದವರು ಎರಡು ಎತ್ತುಗಳನ್ನು ಕೊಟ್ಟಿದ್ದಾರೆ. ಅದನ್ನು ಬಳಸಿಕೊಂಡು ನವೀನ್ ಕುಮಾರ್‌ ತನ್ನ ಸ್ವಂತ ಸ್ಥಳ ಅಡಗನಹಳ್ಳಿಯಲ್ಲೇ ಗಾಣ ಸ್ಥಾಪಿಸಿ, ಎಣ್ಣೆ ಉತ್ಪಾದನೆ ಶುರು ಮಾಡಿಸಿದರು. ಆರಂಭದಲ್ಲಿ ಒಂದು ಗಾಣ ಇತ್ತು. ಗ್ರಾಹಕರ ಉತ್ತಮ ಸ್ಪಂದನೆಯಿಂದಾಗಿ, ಒಂದು ವರ್ಷ ತುಂಬುವುದರೊಳಗೆ ಮೂರು ಗಾಣಗಳು ಎಣ್ಣೆ ಅರೆಯುತ್ತಿವೆ. 17 ದೇಸಿ ತಳಿ ಎತ್ತುಗಳನ್ನು ಪೋಷಿಸುತ್ತಿದ್ದಾರೆ. 20 ಮಂದಿ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ನೀಡಿದ್ದಾರೆ.

ನೈಸರ್ಗಿಕ ಪದ್ಧತಿಯಲ್ಲಿ ಬೆಳೆದಿರುವ ಧಾನ್ಯವನ್ನು ರೈತರಿಂದ ಖರೀದಿಸುತ್ತಿದ್ದಾರೆ. ಅದರಿಂದ ಎಣ್ಣೆ ತಯಾರಿಸಿ, ಶೀಶೆಗಳಲ್ಲೇ ತುಂಬಿಸಿ ಮಾರಾಟ ಮಾಡುತ್ತಾರೆ. ‘ಎಣ್ಣೆ ತಯಾರಿಕೆಯಲ್ಲಿ ಎಲ್ಲೂ ಯಂತ್ರ ಬಳಸುವುದಿಲ್ಲ. ಪ್ಲಾಸ್ಟಿಕ್ ಸೋಕಿಸುವುದಿಲ್ಲ. ಪ್ಲಾಸ್ಟಿಕ್‌ನಲ್ಲಿ ಎಣ್ಣೆ ತುಂಬಿಸಿದರೆ ಎಣ್ಣೆಯ ಶುದ್ಧತೆ ಹೋಗುತ್ತದೆ. ಅದೇ ಕಾರಣದಿಂದ ಗಾಜಿನ ಶೀಶೆಯಲ್ಲೇ ಎಣ್ಣೆಯನ್ನು ಶೇಖರಿಸಿ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಯೋಗೇಶ್.

ನಿತ್ಯ ಸುಮಾರು 50 ಲೀಟರ್, ತಿಂಗಳಿಗೆ 1000 ಲೀಟರ್‌ನಷ್ಟು ಎಣ್ಣೆ ಉತ್ಪತ್ತಿ ಮಾಡಲಾಗುತ್ತಿದೆ. ಕಡಲೆಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಹುಚ್ಚೆಳ್ಳೆಣ್ಣೆ, ಕುಸುಬೆ ಎಣ್ಣೆ, ಹರಳೆಣ್ಣೆ ತಯಾರಿಸಲಾಗುತ್ತಿದೆ. ಆರಂಭದಲ್ಲಿ ಒಂದೇ ಉತ್ಪನ್ನವಿತ್ತು. ಈಗ ದೇಸಿರಿ ನ್ಯಾಚುರಲ್ಸ್‌ನಿಂದ ಆರು ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ.

ತುಸು ದುಬಾರಿ, ಆದರೆ ಪರಿಶುದ್ಧ : ಮಾರುಕಟ್ಟೆಯಲ್ಲಿ ದೊರೆಯುವ ಅಡುಗೆ ಎಣ್ಣೆಗಿಂತ, ಗಾಣದಲ್ಲಿ ಉತ್ಪಾದಿಸುವ ಎಣ್ಣೆ ತುಸು ದುಬಾರಿ. ಆದರೆ, ಈ ಎಣ್ಣೆ ಏಕೆ ದುಬಾರಿ ಆಗುತ್ತದೆ ಎಂಬುದನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡುತ್ತಾರೆ ಯುವಕರು. ‘ಒಂದು ಲೀಟರ್‌ ಕಡಲೆಕಾಯಿ ಎಣ್ಣೆ ತಯಾರಿಕೆಗೆ 3 ಕೆ.ಜಿ ಬೀಜ ಬೇಕು. ಒಂದು ಕೆ.ಜಿ ಕಡಲೆಕಾಯಿ ಬೀಜಕ್ಕೆ ₹ 120. ಮೂರು ಕೆ.ಜಿ ಕಡಲೆಕಾಯಿಗೆ ₹ 360. ಜತೆಗೆ ತಯಾರಿಕಾ ಖರ್ಚು. ಆದರೆ, ಮಾರುಕಟ್ಟೆಯಲ್ಲಿ ಒಂದು ಲೀಟರ್‌ ಕಡಲೆಕಾಯಿ ಎಣ್ಣೆ ಬೆಲೆ ₹ 120. ಈಗ ಹೇಳಿ, ಯಾವುದು ಶುದ್ಧ ಎಣ್ಣೆ’ ಎಂದು ವಿವರಿಸುತ್ತಾ ಗ್ರಾಹಕರ ಎದುರು ಆಯ್ಕೆಗಳನ್ನು ತೆರೆದಿಡುತ್ತಾರೆ. ಇಂಥ ಮನವರಿಕೆ ಮಾತುಗಳಿಗೆ ಸ್ಪಂದಿಸಿರುವ ಸಾವಿರಕ್ಕೂ ಹೆಚ್ಚು ಗ್ರಾಹಕರು, ದೇಸಿರಿ ನ್ಯಾಚುರಲ್ಸ್‌ನ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಬೆಂಗಳೂರು ನಗರದಲ್ಲೇ ಸುಮಾರು 800 ಗ್ರಾಹಕರಿದ್ದಾರಂತೆ.

ಗ್ರಾಮೀಣ ಉದ್ಯೋಗ ಸೃಷ್ಟಿಯ ಗುರಿ: ‘ದೇಸಿರಿ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಾರುಕಟ್ಟೆಗೂ ವಿಸ್ತರಿಸುವ ಗುರಿ ಇದೆ. ಆದರೆ, ನಾವೇ ಮೂವರು ಈ ಕೆಲಸ ಸಾಧಿಸುವುದು ಕಷ್ಟ. ಅದಕ್ಕಾಗಿ ಪ್ರತಿ ಗ್ರಾಮದಲ್ಲಿರುವ ನಿರುದ್ಯೋಗಿ ಯುವಕರು, ಗ್ರಾಮಸ್ಥರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತೇವೆ. ಮಾತ್ರವಲ್ಲ, ಗ್ರಾಮೀಣ ಯುವಕರು ಗಾಣಗಳನ್ನು ಸ್ಥಾಪಿಸಿ, ಉತ್ಪನ್ನಗಳನ್ನು ತಯಾರಿಸುವುದಕ್ಕೆ ಬೇಕಾದ ತರಬೇತಿಯನ್ನೂ ಕೊಡಿಸುವ ಯೋಚನೆ ಇದೆ. ಇದರಿಂದ ಉದ್ಯೋಗ ಸೃಷ್ಟಿಯ ಜತೆಗೆ, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ’ ಎಂಬುದು ಇವರ ಅಭಿಪ್ರಾಯವಾಗಿದೆ.

ದೇಸಿ ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನವೀನ್ ಕುಮಾರ್ (9945811771) ಮಹೇಶ್. (9972374918) ಯೋಗೇಶ್ (9686988887) ಸಂಪರ್ಕಿಸಬಹುದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT