ನಿವೃತ್ತ ಶಿಕ್ಷಕರೀಗ ನೆಲ್ಲಿ ಮೇಷ್ಟ್ರು

7

ನಿವೃತ್ತ ಶಿಕ್ಷಕರೀಗ ನೆಲ್ಲಿ ಮೇಷ್ಟ್ರು

Published:
Updated:
Deccan Herald

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ಗಡೇನಹಳ್ಳಿಯ ರಾಜಣ್ಣ ನಿವೃತ್ತ ಶಿಕ್ಷಕರು. ನಿವೃತ್ತಿಯ ನಂತರ ಕ್ರಿಯಾಶೀಲವಾಗಿ ಬದುಕು ಕಳೆಯಬೇಕೆಂದೇ ಕೃಷಿ ಮಾಡಲು ತೀರ್ಮಾನಿಸಿದರು. ಕೃಷಿ ಹೊರೆಯಾಗಬಾರದು. ಮನಸ್ಸಿಗೆ ನೆಮ್ಮದಿಯೂ ನೀಡಬೇಕು. ಆದಾಯವೂ ಕೊಡುವಂತಿರಬೇಕು ಎಂಬುದು ಅವರ ಅಪೇಕ್ಷೆ. ಹೀಗೆ ತುಸು ವಿಭಿನ್ನವಾಗಿ ಯೋಚಿಸುತ್ತಿರುವಾಗಲೇ ಅವರ ತಲೆಗೆ ಹೊಳೆದಿದ್ದು ನೆಲ್ಲಿ ಕೃಷಿ. ಇದು ಆರಂಭವಾಗಿದ್ದು ಎಂಟು ವರ್ಷಗಳ ಹಿಂದೆ.

ಆರಂಭದಲ್ಲಿ ನರ್ಸರಿಯೊಂದರಿಂದ ಒಂದು ಗಿಡಕ್ಕೆ ರೂ 60 ರಂತೆ ಹಣ ನೀಡಿ ಹೈಬ್ರಿಡ್ ನೆಲ್ಲಿಕಾಯಿಯ ಗಿಡಗಳನ್ನು ಖರೀದಿಸಿದರು. ಒಂದೂವರೆ ಎಕರೆಯ ಜಮೀನಿನಲ್ಲಿ 180 ನೆಲ್ಲಿ ಗಿಡಗಳನ್ನು ನಾಟಿ ಮಾಡಿದರು. ಈ ಊರಿಗೆ ಅದು ಅಪರಿಚಿತ ಬೆಳೆ. ಜತೆಗೆ, ಆರಂಭದ ದಿನಗಳಲ್ಲಿ ಗಿಡಗಳನ್ನು ಬೆಳೆಸುವುದೇ ಸವಾಲಾಗಿತ್ತು. ರೋಗಗಳಿಂದ ಗಿಡಗಳು ಒಣಗುತ್ತಿದ್ದವು. ನಾಟಿ ಮಾಡಿದ ಎರಡು ವರ್ಷಗಳ ನಂತರ ಉಳಿದ ಗಿಡಗಳು ಕಾಯಿ ಬಿಟ್ಟಾಗ, ಅದಕ್ಕೆ ಮಾರುಕಟ್ಟೆ ಹುಡುಕುವುದೇ ಸವಾಲಾಗಿತ್ತು. ದಿನ ಕಳೆದಂತೆ ಅನುಭವಗಳು ಪಾಠ ಕಲಿಸಿದುವು. ಮಾತ್ರವಲ್ಲ, ಸಂಕಷ್ಟ ಬಂದಾಗ, ಗೊತ್ತಿರುವ ರೈತರ ಬಳಿ ನೆಲ್ಲಿ ಕೃಷಿ ಹಾಗೂ ಮಾರುಕಟ್ಟೆ ಕುರಿತು ಮಾಹಿತಿ ಪಡೆದುಕೊಂಡರು. ಕಲಿತ ಪಾಠವನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡರು. ಈಗ ನೋಡಿ, ಅವರ ಒಂದು ಎಕರೆಯಲ್ಲಿರುವ ನೆಲ್ಲಿ ಗಿಡಗಳು ನಿರೀಕ್ಷೆಗೂ ಮೀರಿ ಫಸಲು ಕೊಡುತ್ತಿವೆ. ಈ ಗೆಲುವಿನಿಂದ ಉತ್ತೇಜಿತಗೊಂಡ ರಾಜಣ್ಣ, ಎರಡು ವರ್ಷಗಳ ಹಿಂದೆ ಪುನಃ ಒಂದೂವರೆ ಎಕರೆಯಲ್ಲಿ 300 ಗಿಡಗಳನ್ನು ನಾಟಿ ಮಾಡಿದ್ದಾರೆ. ಅವು ಇನ್ನೇನು ಫಲಕೊಡುವ ಹಂತದಲ್ಲಿವೆ.

ನಾಟಿ ಮಾಡಿ, ಬೆಳೆಸಿದ್ದು ಹೀಗೆ

ನರ್ಸರಿಯಿಂದ ತಂದ ನೆಲ್ಲಿ ಸಸಿಗಳನ್ನು ಒಂದು ಅಡಿ ಸುತ್ತಳತೆಯ ಗುಂಡಿ ತೆಗೆದು ನೆಟ್ಟರು. ಗಿಡ ಬೆಳೆದಂತೆ ರೆಂಬೆಗಳು ದೊಡ್ಡದಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಗಿಡದಿಂದ ಗಿಡಕ್ಕೆ ಹದಿನೈದು ಅಡಿ ಅಂತರ ಬಿಟ್ಟು ನಾಟಿ ಮಾಡಿದರು. ನೆಟ್ಟ ಗಿಡದ ಬುಡಕ್ಕೆ ಅರ್ಧ ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಿ, ಬುಡವನ್ನು ಮಣ್ಣಿನಿಂದ ಮುಚ್ಚಿದರು.

ನೆಲ್ಲಿ ಗಿಡಕ್ಕೆ ನೀರು ಬೇಕೇ ಬೇಕು. ಹಾಗಾಗಿ ಗಿಡಗಳಿಗೆ ಹನಿ ನೀರಾವರಿ ಮೂಲಕ ನಿತ್ಯ ಅರ್ಧ ಗಂಟೆ ನೀರುಣಿಸಲಾರಂಭಿ­ಸಿದರು. ಸಾವಯವ ಪದ್ಧತಿಯಲ್ಲಿ ಬೆಳೆಯುವುದು ಕಷ್ಟ. ಇಳುವರಿ ಕಡಿಮೆಯಾಗುತ್ತದೆ ಎಂದು ತೀರ್ಮಾನಿಸಿದ ರಾಜಣ್ಣ, ಹೆಚ್ಚು ಇಳುವರಿಗಾಗಿ ವರ್ಷದಲ್ಲೊಮ್ಮೆ ಕಾಯಿ ಬಿಡುವ ಹಂತದಲ್ಲಿ ಹನಿ ನೀರಾವರಿಯೊಂದಿಗೆ ರಾಸಾಯನಿಕ ಗೊಬ್ಬರವನ್ನು ಪೂರೈಕೆ ಮಾಡಿದರು. ಈ ವಿಧಾನವನ್ನು ಅನುಸರಿಸಿದ ನಂತರ, ನಾಟಿ ಮಾಡಿದ ಎರಡು ವರ್ಷದ ಹೊತ್ತಿಗೆ ಪ್ರತಿ ಗಿಡದಲ್ಲಿ ಗೊಂಚಲು ಗೊಂಚಲಾಗಿ ಕಾಯಿಗಳು ನೇತಾಡತೊಡಗಿದವು.

ಇಳುವರಿ, ಮಾರುಕಟ್ಟೆ

ನೆಲ್ಲಿ ವಾರ್ಷಿಕ ಬೆಳೆ. ಬೇಸಿಗೆಗಾಲದಲ್ಲಿ ಎಲೆ ಉದುರಿ ಗಿಡ ಒಣಗಿದಂತೆ ಕಾಣುತ್ತದೆ. ನಂತರ ಗಿಡ ಚಿಗುರಿ ಹೂವಿನೊಂದಿಗೆ ಕಾಯಿ ಕಾಣಿಸಿಕೊಳ್ಳುತ್ತದೆ. ಜೂನ್, ಜುಲೈ, ಆಗಸ್ಟ್ ಮೂರು ತಿಂಗಳಲ್ಲಿ ನೆಲ್ಲಿ ಕಟಾವಿಗೆ ಲಭ್ಯ. ಈ ಮೂರು ತಿಂಗಳಲ್ಲಿ ರಾಜಣ್ಣ ಪ್ರತಿದಿನ ನೆಲ್ಲಿಕಾಯಿ ಕಟಾವು ಮಾಡಿಸಿ, ಮಾರುಕಟ್ಟೆಗೆ ಕಳುಹಿಸುತ್ತಿದ್ದರು. ಕಾಯಿ ಕಟಾವಿಗೆ ಕೂಲಿಯಾಳುಗಳ ಜತೆಗೆ ಮನೆ ಮಂದಿಯೂ ಸೇರಿಕೊಳ್ಳುತ್ತಾರೆ.

ಒಂದು ಗಿಡ ಮೂರು ತಿಂಗಳಲ್ಲಿ ಒಂದು ಕ್ವಿಂಟಲ್‌ವರೆಗೆ ಕಾಯಿ ಕೊಡುತ್ತದೆ. ಒಂದೂವರೆ ಎಕರೆಯಲ್ಲಿರುವ ಆಯ್ದ ನಾಲ್ಕು ಗಿಡಗಳು 200 ಕೆ.ಜಿಯಿಂದ 250 ಕೆ.ಜಿವರೆಗೂ ಕಾಯಿಗಳನ್ನು ಕೊಟ್ಟ ದಾಖಲೆ ಇದೆಯಂತೆ.

ಅಂದ ಹಾಗೆ, ರಾಜಣ್ಣ ಅವರು ಪ್ರತಿನಿತ್ಯ 300 ಕೆ.ಜಿ. ಕಾಯಿಯನ್ನು ಚಿಕ್ಕಬಳ್ಳಾಪುರ, ಯಲಹಂಕ ಮಾರುಕಟ್ಟೆಗೆ ಕೆ.ಜಿ.ಗೆ ರೂ 50 ರಂತೆ ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಖರೀದಿದಾರರು ಇವರ ತೋಟಕ್ಕೆ ಬಂದು ಕಟಾವು ಮಾಡಿಕೊಂಡು ಹೋಗುತ್ತಾರಂತೆ. ಸಾಮಾನ್ಯವಾಗಿ ಒಂದು ಕಾಯಿ 50 ಗ್ರಾಂ ತೂಗುತ್ತದೆ. ಮಾರುಕಟ್ಟೆಯಲ್ಲಿ ಒಂದು ನೆಲ್ಲಿ ಕಾಯಿಗೆ ರೂ. 5 ದರವಿದೆ.

ಸಂಸ್ಕರಣೆ, ಸಂಗ್ರಹಣೆ

ನೆಲ್ಲಿ ಕಾಯಿ ಬಿಡುವುದಕ್ಕೆ ಮುನ್ನವೇ ಮಾರುಕಟ್ಟೆ ಬಗ್ಗೆ ರೈತರು ಯೋಚನೆ ಮಾಡಿರಬೇಕು. ಇಲ್ಲದಿದ್ದರೆ, ಈ ಕಾಯಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟ. ಇದನ್ನು ಸಂಸ್ಕರಿಸಿಡುವ ವ್ಯವಸ್ಥೆ ಇದ್ದರೂ, ಅದು ಸುಲಭವಾಗಿಲ್ಲ. ಕಡಿಮೆ ಸಂಖ್ಯೆಯ ಗಿಡಗಳನ್ನು ನೆಟ್ಟರೆ, ಸ್ಥಳೀಯವಾಗಿ ಮಾರಾಟ ಮಾಡಬಹುದು. ಎಕರೆಗಟ್ಟಲೆ ಬೆಳೆಯುವವರು ಕಡ್ಡಾಯವಾಗಿ ಮಾರುಕಟ್ಟೆಯನ್ನು ಹುಡುಕಿಕೊಂಡಿರಬೇಕು ಎಂಬುದು ರಾಜಣ್ಣನವರ ಸಲಹೆ. ನೆಲ್ಲಿ ಬೆಳೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ರಾಜಣ್ಣ ಅವರನ್ನು:9845069034 ದೂರವಾಣಿಯಲ್ಲಿ ಸಂಪರ್ಕಿಸಬಹುದು.

***
ನೆಲ್ಲಿ ಬೆಳೆದಿರುವ ರಾಜಣ್ಣ ಅವರು, ಮುಂದೆ ಈ ಕೃಷಿ ಕೈಗೊಳ್ಳುವವರಿಗೆ ಕೆಲವೊಂದು ಅನುಭವದ ಮಾತು ಹೇಳುತ್ತಾರೆ.

ನೆಲ್ಲಿಯನ್ನು ಎಲ್ಲಾ ವಾತಾವರಣ, ಮಣ್ಣಿನಲ್ಲೂ ಬೆಳೆಸುವುದು ಕಷ್ಟ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸುವಂತಿಲ್ಲ.

ಕೇವಲ ಸಾವಯವ ವಿಧಾನದಲ್ಲೇ ಬೆಳೆಸುವುದು ಕಷ್ಟ. ಮಿತವಾಗಿ ರಾಸಾಯನಿಕ ಗೊಬ್ಬರ ಬಳಸಬೇಕಾಗುತ್ತದೆ. ಆದರೆ, ಸಾವಯವದ ಅಂಶವಿರುವ ಒಳಸುರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದಷ್ಟು ಗಿಡ ಹೆಚ್ಚು ವರ್ಷಗಳ ಕಾಲ ಬದುಕುತ್ತದೆ.

ನೆಲ್ಲಿ ಗಿಡ ನೆಟ್ಟು ಒಂದು ವರ್ಷಕ್ಕೆ ಕಾಯಿ ಬಿಡುತ್ತದೆ. ಆದರೆ, ಅದನ್ನು ಕಟಾವು ಮಾಡಬಾರದು. ಹಾಗೆ ಮಾಡಿದರೆ, ಗಿಡ ಆರೋಗ್ಯಪೂರ್ಣವಾಗಿ ಬೆಳೆಯುವುದಿಲ್ಲ. ಎರಡು ವರ್ಷಗಳ ನಂತರ ರೆಂಬೆಯಲ್ಲಿರುವ ಕಾಯಿ ಪ್ರಮಾಣವನ್ನು ನೋಡಿಕೊಂಡು ಕಾಯಿಯನ್ನು ಕೀಳಬೇಕು. ಇಲ್ಲವಾದರೆ ರೆಂಬೆಗಳು ಮುರಿದು ಬೀಳುತ್ತವೆ.

ಕಾಯಿಯನ್ನು ನೆಲಕ್ಕೆ ಬೀಳದಂತೆ ಕೊಯ್ಯಬೇಕು. ಮಣ್ಣಿಗೆ ಬಿದ್ದರೆ ಬೇಗ ಕೆಡುತ್ತದೆ. ಕಟಾವು ಹಂತದಲ್ಲಿ ಇಂಥ ಸಮಸ್ಯೆ ಇರುತ್ತದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು.

ಕಾಯಿಗೆ ಚುಕ್ಕೆ ರೋಗ ಕಾಣಿಸಿಕೊಂಡರೆ ತಕ್ಷಣ ಔಷಧ ಸಿಂಪಡಿಸಬೇಕು. ಇಲ್ಲವಾದರೆ ರೋಗ ತೋಟದಲ್ಲಿರುವ ಉಳಿದ ನೆಲ್ಲಿ ಗಿಡಗಳಿಗೂ ಹರಡುವ ಸಾಧ್ಯತೆಗಳಿರುತ್ತವೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !