ಕೃಷಿ ಯಂತ್ರಮೇಳದಲ್ಲಿ ಸುತ್ತಾಡುತ್ತಾ...

ಶುಕ್ರವಾರ, ಮಾರ್ಚ್ 22, 2019
27 °C

ಕೃಷಿ ಯಂತ್ರಮೇಳದಲ್ಲಿ ಸುತ್ತಾಡುತ್ತಾ...

Published:
Updated:
Prajavani

ಕನಸಿನ ಮನೆ
ಪುತ್ತೂರು ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಕಡಿಮೆ ವೆಚ್ಚದ, ತ್ವರಿತಗತಿಯಲ್ಲಿ ನಿರ್ಮಾಣ ಮಾಡುವ ಮನೆಯೊಂದರ ಮಾದರಿಯನ್ನು ಮೇಳದಲ್ಲಿ ಪ್ರದರ್ಶಿಸಿದ್ದರು. ಯಂತ್ರಮೇಳದಲ್ಲೇ ಏಳು ದಿನಗಳೊಳಗೆ ₹6 ಲಕ್ಷ ವೆಚ್ಚದಲ್ಲಿ ಈ ಮನೆ ನಿರ್ಮಾಣ ಮಾಡಿದ್ದರು. ಈ ಮನೆ ಎರಡು ಮಲಗುವ ಕೋಣೆ, ಅಡುಗೆ ಮನೆ, ವರಾಂಡ ಹಾಗೂ ಶೌಚಾಲಯ, ಶ್ವಾನ ಗೃಹ, ಕಾಂಪೌಂಡ್‌, ಒಳಗಡೆ ಬಾವಿ ಜತೆಗೆ ತುಳಸಿಕಟ್ಟೆ.. ಇವು ಆ ಮನೆಯ ಭಾಗಗಳು. ಕೇವಲ 550 ಚದರ ಮೀಟರ್‍ಗಳಲ್ಲಿ ಮನೆ ನಿರ್ಮಿಸಿದ್ದರು. ಈ ಮನೆಯ ಆವರಣ ಸಂಪೂರ್ಣವಾಗಿ ಇಂಟರ್ ಲಾಕ್ ಹೊಂದಿತ್ತು. ಜೆ.ಎಸ್.ಡಬ್ಲೂ ಕಂಪೆನಿಯ ಎಮ್40 ಶೀಟ್‍ಗಳನ್ನು ಮೇಲ್ಛಾವಣಿ ಹೊದಿಕೆಯಾಗಿ ಬಳಸಲಾಗಿತ್ತು. ಶಾಖ ನಿರೋಧಕ ಹಾಗೂ ಶಬ್ಧ ನಿವಾರಣೆ ಇದರ ವೈಶಿಷ್ಟ್ಯ. ಈ ಮನೆಗೆ ಬಳಸಲಾದ ವಸ್ತುಗಳು ಗೆದ್ದಲು ಹಾಗೂ ತುಕ್ಕು ನಿರೋಧಕಗಳಾಗಿದ್ದು, ಸರ್ವಕಾಲಕ್ಕೂ ಸುರಕ್ಷಿತ ಎಂದು ನಿರ್ಮಾಣಕಾರರು ಹೇಳುತ್ತಾರೆ.

ಮಾದರಿ ಹೈನುಗಾರಿಕೆ 
ದಕ್ಷಿಣಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘ ಒಂದು ಮಾದರಿ ಕೊಟ್ಟಿಗೆ (ಹಟ್ಟಿ)ಯನ್ನು ಮೇಳದಲ್ಲಿ ನಿರ್ಮಾಣ ಮಾಡಿತ್ತು. ಇದರಲ್ಲಿ ನೀರು,ಗೊಬ್ಬರದ ಟ್ಯಾಂಕ್, ದನದ ಸಗಣಿ ಮಿಶ್ರಣದ ಸಾಧನ, ಮೇವು ಕಟಾವು ಯಂತ್ರ, ಹಾಲು ಹಿಂಡುವ ಮಷೀನ್, ವೈವಿಧ್ಯಮಯ ಮೇವಿನ ಸಸಿಗಳ ಮಾದರಿಗಳನ್ನು ಪ್ರದರ್ಶಿಸಿತ್ತು. ಅಷ್ಟೇ ಅಲ್ಲ, ಕರೆದ ಹಾಲಿಲನ ಗುಣಮಟ್ಟ ಅಳೆಯುವ ಮಾಪನಗಳೂ ಇದ್ದವು. ‘ಮಿಲ್ಕ್ ಮಾಸ್ಟರ್’ ಖಾತಿಯ ರಾಘವ ಗೌಡರು ಮಾದರಿ ಕೊಟ್ಟಿಗೆ ಕುರಿತು ಮಾಹಿತಿ ನೀಡುತ್ತಿದ್ದರು.  ದೂ. 7899683696 ಸಂಪರ್ಕಿಸಬಹುದು.

ಮಂಗಗಳ ನಿಯಂತ್ರಣಕ್ಕೆ ಏರಗನ್

ಏರ್‌ಗನ್‌– ಇದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಕೆ. ಸುಬ್ಬರಾವ್ ಅವರ ಸಂಶೋಧನೆ. ತೋಟಗಳಲ್ಲಿ ಹೆಚ್ಚಿರುವ ಮಂಗಗಳ ಹಾವಳಿ ನಿಯಂತ್ರಿಸಲು ಬಳಸಬಹುದು. ಅದಕ್ಕೆ ‘ಬೆಸ್ಟ್ ಕ್ವಾಲಿಟಿ ಏರ್‍ಗನ್’ ಎಂದು ಹೆಸರು ಕೊಟ್ಟಿದ್ದಾರೆ. ಇದನ್ನು ಬಳಸಲು ಲೈಸನ್ಸ್ ಬೇಕಾಗಿಲ್ಲ!

ಮಂಗ ಮಾತ್ರವಲ್ಲ, ನವಿಲು, ಹಂದಿ ಸೇರಿದಂತೆ ತೋಟಕ್ಕೆ ದಾಳಿ ಮಾಡುವ ಇಂಥ ಪ್ರಾಣಿಗಳನ್ನು ತೋಟದಿಂದ ಓಡಿಸಬಹುದಾಗಿದೆ. ಉತ್ತಮ ದರ್ಜೆ ಮೆಟೀರಿಯಲ್‌ಗಳಿಂದ ತಯರಿಸುವ ಈ ಗನ್‌, ಬಳಸುವುದೂ ಸುಲಭ. ಏರಗನ್ ಕೆಲಸ ಮಾಡಲು ‘ಇಗ್ನೇಟರ್’ ಎಂಬ ದ್ರಾವಣದ ಅವಶ್ಯಕತೆಯಿದೆ. 280ಎಂಎಲ್ ಬಾಟಲಿಯ ಬೆಲೆ ಸುಮಾರು ₹220. ಇದು ಮುನ್ನೂರು ಶಾಟ್‍ಗಳನ್ನು ನೀಡುತ್ತದೆ. ಏರ್‍ಗನ್ ಬೆಲೆ ₹1400. ಇದರೊಂದಿಗೆ ಇಗ್ನೇಟರ್ ದ್ರಾವಣ ಉಚಿತವಾಗಿ ಕೊಡುತ್ತಿದ್ದಾರೆ. ಸುಬ್ಬರಾವ್‌ ಅವರ ಈ ಕಾರ್ಯದಲ್ಲಲಿ ಪುತ್ರ ನಾಗಭೂಷಣ್ ಕೂಡ ಜೊತೆಯಾಗಿದ್ದಾರೆ. ಹೆಚ್ಚಿನ ಮಾಹಿತಿಗೆ : 9483246036 ಸಂಪರ್ಕಿಸಿ.

ಕಾಳು ಮೆಣಸು ಬಿಡಿಸುವ ಯಂತ್ರ :

ಮೆಣಸಿನ ಬಳ್ಳಿಗಳನ್ನು ಬೆಳೆಯುವುದು ಸುಲಭ. ಆದರೆ, ಕಾಳುಗಳನ್ನು ಬೇರ್ಪಡಿಸುವುದು ಕಷ್ಟ. ಕೆಲಸಗಾರರ ಕೊರತೆಯಿಂದಾಗಿ, ಸಕಾಲದಲ್ಲಿ ಮೆಣಸಿನ ಕಾಳು ಬಿಡಿಸುವುದು ಸಾಹಸದ ಕೆಲಸ. ಇದಕ್ಕೊಂದು ಯಂತ್ರ ಬೇಕೆಂದು ಬಹಳ ಕೃಷಿಕರ ಆಶಯವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯ ಕೃಷಿಕ ಗಣಪಯ್ಯ ವಾಲ್ತಾಜೆ ಅವರು, ಕಾಳುಮೆಣಸು ಬಿಡಿಸುವ ಯಂತ್ರ ಆವಿಷ್ಕರಿಸಿ, ಮಾರುಕಟ್ಟೆಗೆ ಪರಿಚಯಿಸುವ ಮೂಲಕ, ಕಾಳುಮೆಣಸು ಕೃಷಿಕರ ಬೇಡಿಕೆ ಈಡೇರಿಸಿದ್ದಾರೆ.


ಕಾಳು ಮೆಣಸು ಬಿಡಿಸುವ ಯಂತ್ರ

ಈ ಯಂತ್ರದ ಸಂಶೋಧನೆಗೆ ಅವರು ತೆಗೆದುಕೊಂಡ ಸಮಯ ಬರೋಬ್ಬರಿ ಒಂದು ವರ್ಷ. ಗಂಟೆಗೆ ಸುಮಾರು 80 ಕೆ.ಜಿ. ಕಾಳುಗಳನ್ನು ಬೇರ್ಪಡಿಸುವ ಸಾಮರ್ಥ್ಯವಿರುವ ಈ ರೈತಸ್ನೇಹಿ ಯಂತ್ರಕ್ಕೆ ಅವರಿಟ್ಟ ಹೆಸರು ‘ರೈತಮಿತ್ರ’. ಇದನ್ನು ಸಿಂಗಾಪುರ್ ಅಡಕೆ ಸುಲಿಯಲೂ ಬಳಸಬಹುದಾಗಿದೆ. ಯಂತ್ರ ಕುರಿತು ಹೆಚ್ಚಿನ ಮಾಹಿತಿಗೆ : 9741021509 ಸಂಪರ್ಕಿಸಬಹುದು.

ಬೈಕ್ ಡಂಪರ್ 
ಕೃಷಿಭೂಮಿ ಅದರಲ್ಲೂ ತೋಟದ ನಡುವೆ ಸಂಚರಿಸುವ ದಾರಿ ಕಿರಿದಾಗಿರುತ್ತದೆ. ಹೀಗಾಗಿ ಬೆಳೆದ ಉತ್ಪನ್ನಗಳನ್ನು ಸಾಗಿಸಲು ಕೈಗಾಡಿಗಳನ್ನು ಬಳಸಬೇಕು. ಇಲ್ಲವೇ ಹೊತ್ತುಕೊಂಡು ಬರಬೇಕು. ಆ ಸಮಸ್ಯೆಗೆ ಬೈಕ್ ಡಂಪರ್‍ಗಳು ಪರಿಹಾರ ನೀಡುತ್ತವೆ. ಕೃಷಿಕರು ತಮ್ಮ ಬೈಕ್‍ಗಳಿಗೆ ಈ ಡಂಪರ್‍ಗಳನ್ನು ಜೋಡಿಸಿಕೊಂಡರೆ, ಉತ್ಪನ್ನಗಳನ್ನು ಸಾಗಿಸುವುದು ಸುಲಭ. ಈ ಯಂತ್ರ ಮೇಳದಲ್ಲಿ ಶಿವಮೊಗ್ಗದ ತೀರ್ಥಹಳ್ಳಿಯ ವಿ ಟೆಕ್ ಎಂಜಿನಿಯರಿಂಗ್‌ನವರು ತಾವು ತಯಾರಿಸಿದ ಬೈಕ್ ಡಂಪರ್‍ಗಳನ್ನು ಪ್ರದರ್ಶಿಸಿದ್ದರು. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ: 9448105006

ಅಡಿಕೆ ಬಾಚುವ ಸಹಾಯಿ:
ಒಣ ಅಡಿಕೆ ಬಾಚುವುದು ಸುಲಭದ ಕೆಲಸವಲ್ಲ. ಸಾಮಾನ್ಯವಾಗಿ ಮರದಿಂದ ಮಾಡಿದ ಅಥವಾ ಪ್ಲಾಸ್ಟಿಕ್‍ನಿಂದ ಮಾಡಿದ ಅಡಿಕೆ ಬಾಚನ್ನು ಬಳಸುತ್ತೇವೆ. ಆದರೆ ಇದು ಹೆಚ್ಚಿನ ಸಮಯವನ್ನು ಬೇಡುತ್ತದೆ. ಮುಖ್ಯವಾಗು ಮಳೆಗಾಲದಲ್ಲಿ ಈ ಅಡಿಕೆ ಬಾಚುವುದು ಅತಿದೊಡ್ಡ ಕೆಲಸವೆನಿಸಿಬಿಡುತ್ತದೆ.


ಅಡಿಕೆ ಬಾಚುವ ಸಹಾಯಿ

ಇದೀಗ ಅಡಿಕೆ ಬಾಚುವ ಉಪಕರಣ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಅಡಿಕೆ ಕೃಷಿಕರಿಗೆ ವರದಾನವಾಗಲಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಈ ಅಡಿಕೆ ಬಾಚು ಸಹಾಯಿ ನಿಮಗೂ ಬೇಕಾದಲ್ಲಿ ರಾಜೇಶ್ ಎ.ಕೆ. ಕಡಬ ಅವರನ್ನು ಸಂಪರ್ಕಿಸಬಹುದಾಗಿದೆ. ಸಂಪರ್ಕ ಸಂಖ್ಯೆ : 8105400493

ವಿದ್ಯಾರ್ಥಿಗಳು ಸಂಶೋಧಿಸಿದ ಯಂತ್ರಗಳು:

ಈ ಕೃಷಿಯಂತ್ರ ಮೇಳದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆಟೊಮೊಬೈಲ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಂಶೋಧಿಸಿದ ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಮೆಕ್ ಎಲೊವೇಟರ್, ಮರಳು ಗಾಳಿಸಲು ವಿದ್ಯುನ್ಮಾನ ಯಂತ್ರ, ಪವರ್ ಟಿಲ್ಲರ್‍ಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಹೆಚ್ಚು ಕೃಷಿಕರನ್ನು ಆಕರ್ಷಿಸಿದ ಈ ಯಂತ್ರಗಳಿಗೆ ಸ್ಥಳದಲ್ಲೇ 55 ಯಂತ್ರಗಳಿಗೆ ಆರ್ಡರ್‍ಗಳೂ ದೊರೆತಿವೆ.  ಈ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಉಪನ್ಯಾಸಕರದ್ದೂ ಪಾಲಿದೆ. ಈ ಯಂತ್ರಗಳ ಬಗ್ಗೆ ಮಾಹಿತಿಗಾಗಿ ವಿವೇಕಾನಂದ ಕಾಲೇಜು ಸಂಪರ್ಕಿಸಬಹುದು.

ಕೃಷಿ ಸಾಮಗ್ರಿಗಳು: ಕೃಷಿ ಅನುಶೋಧಕ ಫಿಲಿಪ್ ಡಿಸೋಜ ಉರಿಮಜಲು ಅವರು ಸ್ವಂತ ಅನುಭವದಲ್ಲಿ ತಯಾರಿಸಿದ ಕೃಷಿ ಸಾಮಾಗ್ರಿಗಳನ್ನು ಪ್ರದರ್ಶಿಸಿದ್ದರು. ಅವುಗಳಲ್ಲಿ ಕತ್ತಿ, ಕೊಕ್ಕೆ, ಕೊಕ್ಕೆ ಕತ್ತಿ, ಬಾಸ್ಕೆಟ್, ಗರಗಸ, ಕಟ್ಟರ್, ಸ್ಪ್ರೇಯರ್ ದೋಟಿ ಪ್ರಮುಖವಾಗಿದ್ದವು. ಸಂಪರ್ಕ ಸಂಖ್ಯೆ 9448824094.

’ನಿರ್ಗುಣ’ ಉಪಕರಣಗಳಿಗೆ ಪ್ರಶಂಸೆ

ನಿಟಿಲೆ ಮಹಾಬಲೇಶ್ವರ ಭಟ್ಟರು ‘ನಿರ್ಗುಣ ಕೃಷಿ ಸಲಕರಣೆಗಳು’ ಎಂಬ ಹೆಸರಿನಲ್ಲಿ ಹಲವು ರೈತ ಸ್ನೇಹಿ ಕೃಷಿ ಉಪಕರಣಗಳನ್ನು ಸಂಶೋಧಿಸಿದ್ದಾರೆ. ಅವೆಲ್ಲವನ್ನೂ ಈ ಬಾರಿಯ ಯಂತ್ರಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ಮೇಳದಲ್ಲಿ ಹೆಚ್ಚು ಪ್ರಶಂಸೆಗೆ ಒಳಗಾದ ಉಪಕರಣಗಳಿವು.

ಕೊಕೊ ಕಾಯಿ ತುಂಡು ಮಾಡುವ ಯಂತ್ರ, ಕತ್ತರಿಸಿದ ಬಾಳೆ ಕಂದಿನಿಂದ ಮತ್ತೆ ಮೊಳಕೆ ಬಾರದಂತೆ ಮಾಡುವ ಸಲಕರಣೆ, ಚೀಲಕ್ಕೆ ಮಣ್ಣು ತುಂಬಿಸುವ ಉಪಕರಣ, ರಥಪುಷ್ಪ ಕೀಳುವ ಸಾಧನ, ಕಾಳುಮೆಣಸು ಬಿಡಿಸುವ ಯಂತ್ರ, ಗೊನೆಯಿಂದ ಅಡಿಕೆ ಬೇರ್ಪಡಿಸು ಸಲಕರಣೆ, ಅಡಿಕೆ ಹೆಕ್ಕುವುದು, ಪೈಪುಗಳ ವಾಲ್ಟ್ ತಿರುಗಿಸುವ ಸಾಧನಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

‘ನನ್ನ ಸಂಶೋಧನೆಗಳನ್ನು ಯಾರಾದರೂ ಬಳಿಸಿ, ಉಪಕರಣಗಳನ್ನು ತಯಾರಿಸಿಕೊಳ್ಳಬಹುದು. ಅದರಿಂದ ಕೃಷಿಕರಿಗೆ ಉಪಕಾರಿಯಾದರೆ ನಾನು ಸಂತಸ ಪಡುತ್ತೇನೆ’ ಎನ್ನುತ್ತಾರೆ ನಿಟಿಲೆ ಮಹಬಲೇಶ್ವರ ಭಟ್ಟರು. ಈ ಉಪಕರಣಗಳ ಬಳಕೆಯೂ ಸುಲಭ ಮಾತ್ರವಲ್ಲ, ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಯೇ ತಯಾರಿಸಬಹುದು. ಭಟ್ಟರು ಸಂಶೋಧನೆಯ ಎಲ್ಲ ಉಪಕರಣಗಳ ಡೆಮೊ ವೀಡಿಯೋಗಳು ಯೂಟೂಬ್‍ನಲ್ಲಿ ಲಭ್ಯವಿವೆ. 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !