ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ರಕ್ಷಣೆಗೆ ಸೀರೆ ಹೊದಿಕೆ

ಅಕ್ಷರ ಗಾತ್ರ

ಬಿರು ಬೇಸಿಗೆಯಲ್ಲಿ ಬಿಸಿಲಿನಿಂದ ಹಣ್ಣಿನ ಬೆಳೆ ರಕ್ಷಿಸಿಕೊಳ್ಳುವುದು ಸಾಹಸದ ಕೆಲಸ. ಗಿಡ ಸಣ್ಣ ವಯಸ್ಸಿನದಾಗಿದ್ದರೆ ನೆರಳು ಮಾಡಬಹುದು. ಆದರೆ, ಹಣ್ಣು ಬಿಟ್ಟು, ಬಲಿಯುವ ಹಂತದಲ್ಲಿ ದ್ದಾಗ ನೆರಳು ಮಾಡುವುದು ಕಷ್ಟ. ಹಾಗೆ ಮಾಡದಿದ್ದರೆ ಬಿಸಿಲಿಗೆ ಕಾಯಿಗಳು ಬಿರುಕು ಬಿಡುತ್ತವೆ. ಇಲ್ಲವೇ ಕಪ್ಪಿಡುತ್ತವೆ.

ಇಂಥ ಪರಿಸ್ಥಿತಿಯಲ್ಲಿ ಗಿಡಗಳನ್ನು ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ರೆಡಿಮೇಡ್ ಹೊದಿಕೆಗಳು ಬಂದಿವೆ. ಆದರೆ, ಅವುಗಳ ಬೆಲೆ ತುಸು ದುಬಾರಿ. ಜತೆಗೆ, ಒಂದೆರಡು ಬೆಳೆಗಳಿಗೆ ಮಾತ್ರ ಆಗುತ್ತವೆ. ಇದನ್ನು ಮನಗಂಡ ಗದಗ ಜಿಲ್ಲೆಯ ರೋಣ ಪಟ್ಟಣದ ರೈತ ಬಸವರಾಜ ರಡ್ಡೇರ ಅವರು ದಾಳಿಂಬೆ ಗಿಡಗಳಿಗೆ ಸೀರೆಗಳನ್ನು ಉಡಿಸಿ ಹಣ್ಣುಗಳನ್ನು ರಕ್ಷಿಸಿಕೊಳ್ಳುವಂತಹ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕಲಬುರ್ಗಿಯಿಂದ ಕಡಿಮೆ ಬೆಲೆಗೆ ನಿರುಪಯುಕ್ತ ಹಳೆಯ ಸೀರೆಗಳನ್ನು ಖರೀದಿಸಿ ತಂದಿದ್ದಾರೆ. ಒಟ್ಟು 3 ಸಾವಿರ ಸೀರೆಗಳನ್ನು ಖರೀದಿಸಿ, ದಾಳಿಂಬೆ ಗಿಡಗಳಿಗೆ ಹೊದಿಕೆಯಾಗಿಸಿದ್ದಾರೆ.

‘ಸೀರೆಗಳನ್ನು ಗಿಡಗಳಿಗೆ ಹೊದಿಸುವುದರಿಂದ, ಕಾಯಿಗಳ ಮೇಲೆ ಬಿಸಿಲು ಬೀಳುವುದಿಲ್ಲ. ಇದರಿಂದ ಕಪ್ಪಾಗುವುದು ತಪ್ಪುತ್ತದೆ. ಸೀರೆಗಳು ಬಣ್ಣ ಬಣ್ಣವಾಗಿರುವುದರಿಂದ ಪ್ರಾಣಿ ಪಕ್ಷಿಗಳು ಹಣ್ಣಿನ ಮೇಲೆ ದಾಳಿ ಮಾಡುವುದಿಲ್ಲ. ಹೀಗಾಗಿ ಫಸಲಿನ ನಷ್ಟ ಕಡಿಮೆಯಾಗುತ್ತದೆ’ ಎಂದು ಲೆಕ್ಕಾಚಾರ ಹೇಳುತ್ತಾರೆ ಬಸವರಾಜ್.

ಬಸವರಾಜ್, ಈಗ ಎರಡು ವರ್ಷಗಳ ಹಿಂದೆ ಆರು ಎಕರೆಯಲ್ಲಿ ಮೂರು ಸಾವಿರ ಮಹಾರಾಷ್ಟ್ರದ ಕೇಸರಿ ತಳಿ ದಾಳಿಂಬೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಸಾಲಿಂದ ಸಾಲಿಗೆ 10 ಅಡಿ ಅಂತರವಿದೆ. ‌ಪ್ರತಿ ಗಿಡಕ್ಕೆ ಅಗತ್ಯಕ್ಕೆ ತಕ್ಕಷ್ಟು ನಿಗದಿತ ದಿನಗಳ ಅಂತರದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಸಾವಯವ ಗೊಬ್ಬರದ ಜತೆಗೆ, ಡಿಎಪಿ, 10-26 ಸಂಖ್ಯೆಯ ರಾಸಾಯನಿಕ ಗೊಬ್ಬರಗಳನ್ನು ನಿಗದಿತ ದಿನಗಳ ಅಂತರದಲ್ಲಿ ನೀಡಿದ್ದಾರೆ.

ಜಮೀನಿನಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಜಲಸಂರಕ್ಷಣಾ ರಚನೆಗಳನ್ನು ಮಾಡಿಸಿದ್ದಾರೆ. ಕೃಷಿ ಹೊಂಡದಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ. ಹೆಚ್ಚಾದ ನೀರನ್ನು ಕೊಳವೆಬಾವಿಗೆ ಜಲಮರುಪೂರಣವಾಗುವಂತೆ ಮಾಡಿದ್ದಾರೆ. ಕೊಳವೆಬಾವಿಯ ನೀರನ್ನೇ ಹನಿ ನೀರಾವರಿ ಮೂಲಕ ಗಿಡಗಳಿಗೆ ಪೂರೈಸುತ್ತಾರೆ.

ಹೀಗೆ ಜಾಗರೂಕತೆಯಿಂದ ಕೃಷಿ ಕೈಗೊಂಡಿರುವ ಪರಿಣಾಮ, ನಾಟಿ ಮಾಡಿದ ಎರಡು ವರ್ಷದಿಂದ ದಾಳಿಂಬೆ ಗಿಡಗಳು ಫಸಲು ಕೊಡಲು ಆರಂಭಿಸಿವೆ.

ಪ್ರತಿ ಗಿಡದಲ್ಲಿ 150 ರಿಂದ 200 ದಾಳಿಂಬೆ ಹಣ್ಣುಗಳು ಫಲಭರಿತಾಗಿ ನಿಂತಿವೆ. ಹಂತ ಹಂತವಾಗಿ ಮಾರುಕಟ್ಟೆಗೆ ಹೊರಡಲು ಸಿದ್ಧವಾಗಿರುವ ದಾಳಿಂಬೆ ಫಸಲನ್ನು ಬಿಸಿಲು ಮತ್ತು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು, ಸೀರೆ ಹೊದಿಕೆಗೆ ಮೊರೆ ಹೋಗಿದ್ದಾರೆ ಬಸವರಾಜ್.

‘ಈ ಹಂತದಲ್ಲಿ ಬೆಳೆ ಕಾಪಾಡಿಕೊಂಡರೆ, ಇದೇ 10 ವರ್ಷದವರೆಗೆ ನಿರಂತರವಾಗಿ ವರ್ಷಕ್ಕೆ ಒಂದರಂತೆ ಬೆಳೆ ಪಡೆಯಬಹುದಾಗಿದೆ’ ಎನ್ನುತ್ತಾರೆ ಬಸವರಾಜ್.

ದಾಳಿಂಬೆಗೆ ಸೀರೆ ಹೊದಿಕೆ
ದಾಳಿಂಬೆಗೆ ಸೀರೆ ಹೊದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT