ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಆಧಾರತ ಕೃಷಿ ಪ್ರೀತಿ!

Last Updated 1 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಆ ಜಮೀನು ಪ್ರವೇಶಿಸುತ್ತಿದ್ದಂತೆ ಹೆಬ್ಬೇವು, ಶ್ರೀಗಂಧ, ತೇಗದಂತಹ ವೈವಿಧ್ಯಮಯ ಕಾಡು ಮರಗಳು ಸ್ವಾಗತಿಸುತ್ತವೆ. ಪಕ್ಕದಲ್ಲಿ ಪೈರು ತುಂಬಿರುವ ಬತ್ತದ ಗದ್ದೆ. ದೂರದ ಶೆಡ್‌ನಲ್ಲಿ ಕುರಿಗಳು ಮ್ಯಾ.. ಮ್ಯಾ ಎಂದರೆ, ಗೂಡಿನಲ್ಲಿರುವ ಕೋಳಿಗಳು ಕೊಕ್ಕೋ.. ಎನ್ನುತ್ತಾ ಆ ಸ್ವಾಗತಕ್ಕೆ ದನಿಗೂಡಿಸುತ್ತವೆ. ಇನ್ನೊಂದು ಬದಿಯಲ್ಲಿರುವ ತೊನೆದಾಡುವ ಮೂಸುಂಬೆ, ಬಾಳೆ, ಕಿತ್ತಳೆಯಂತಹ ಹಣ್ಣಿನ ಫಸಲು ಜಮೀನು ಹೊಕ್ಕವರ ಕಣ್ಣು ತಂಪಾಗಿಸುತ್ತವೆ. ಒಟ್ಟು ಇಪ್ಪತ್ತೆರಡು ಎಕರೆಯ ಆ ಜಮೀನಿನಲ್ಲಿ ತಾಕು ತಾಕಿನಲ್ಲಿ ವೈವಿಧ್ಯಮಯ ಬೆಳೆಗಳಿವೆ. ಇಂಥದ್ದೊಂದು ಬಹು ಬೆಳೆ ಮಾದರಿಯ ತೋಟ ಮಾಡುತ್ತಿರುವವರ ಹೆಸರು ಜಿ.ರಾಮಕೃಷ್ಣಯ್ಯ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹನುಮಂತೇಗೌಡನ ಪಾಳ್ಯದ ಬಿ.ರಾಮಕೃಷ್ಣಯ್ಯ (ಎಂಬಿಟಿ), ಒಬ್ಬ ಉದ್ಯಮಿ. ಅವರು ಉದ್ಯಮದಷ್ಟೇ ಕೃಷಿಯನ್ನು ಪ್ರೀತಿಸುತ್ತಾರೆ. ಅದಕ್ಕಾಗಿಯೇ ಹುಟ್ಟೂರು ಬಿಟ್ಟು ನೆಲಮಂಗಲ ಸಮೀಪದ ಯಲಚಗೆರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಸ್ವಲ್ಪ ಸ್ವಲ್ಪ ಜಮೀನು ಖರೀದಿಸುತ್ತಾ, ಈಗ 22 ಎಕರೆಯಲ್ಲಿ ಬಹು ಬೆಳೆ ಮಾದರಿಯ ಕೃಷಿ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಅಲ್ಲೇ ಮನೆಕಟ್ಟಿಸಿಕೊಂಡು ಕೃಷಿಯೊಂದಿಗೆ ವಾಸ್ತವ್ಯ ಮಾಡಿದ್ದಾರೆ.

ಮರ ಆಧಾರಿತ ಕೃಷಿ

‘ಕೃಷಿ ಎಂದರೆ ಅದು ಕೇವಲ ಬೆಳೆಯಷ್ಟೇ ಅಲ್ಲ, ಮರಗಳೂ ಇರಬೇಕು’– ಎಂಬುದು ರಾಮಕೃಷ್ಣಯ್ಯ ಕಂಡುಕೊಂಡ ಸಿದ್ಧಾಂತ. ಅದಕ್ಕಾಗಿ ವಾರ್ಷಿಕ ಬೆಳೆಗಳ ಜತೆಗೆ ಧೀರ್ಘ ಕಾಲದಲ್ಲಿ ಕೈಹಿಡಿಯುವ ಮರಗಳನ್ನು ನಾಟಿ ಮಾಡಿದ್ದಾರೆ. ತೋಟದಲ್ಲಿ ಮೂರು ಸಾವಿರ ಶ್ರೀಗಂಧ ಬೆಳೆಸಿದ್ದಾರೆ. 6 ಸಾವಿರ ಹೆಬ್ಬೇವು, 1 ಸಾವಿರ ಮಹಾಗನಿ, 100 ರಕ್ತ ಚಂದನ ಮರಗಳಿವೆ. ಹೆಬ್ಬೇವು ನೆಟ್ಟು ಮೂರು ವರ್ಷ ಆಗಿರುವುದರಿಂದ ಅವುಗಳಿಗೆ ನೀರು ಕೊಡುವುದನ್ನು ನಿಲ್ಲಿಸಿದ್ದಾರೆ. ಉಳಿದ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.

ಹೆಬ್ಬೇವಿನ ನಡುವೆ ಮಹಾಗನಿ, ಶ್ರೀಗಂಧ ಹಾಕಿದ್ದಾರೆ. ಹೆಬ್ಬೇವು ಹನ್ನೆರಡು ವರ್ಷಕ್ಕೆ ಕಟಾವಿಗೆ ಬರುತ್ತದೆ. ಶ್ರೀಗಂಧ, ಮಹಾಗನಿ ಕಟಾವಿಗೆ 20 ವರ್ಷ ಬೇಕು. ಹೆಬ್ಬೇವು ಕಟಾವಿನ ನಂತರ ಉಳಿದ ಮರಗಳಿಗೆ ಅಗತ್ಯ ಬೆಳಕು ಬೀಳುತ್ತದೆ. ಮರಗಳು ಚೆನ್ನಾಗಿ ಬೆಳೆಯುತ್ತವೆ ಎಂಬುದು ಅವರ ಲೆಕ್ಕಾಚಾರ. ಮೂರು ವರ್ಷದಲ್ಲಿ ಮುಗಿಲೆತ್ತರಕ್ಕೆ ಬೆಳೆದಿರುವ ಹೆಬ್ಬೇವಿನಿಂದ ₹ 3 ಕೋಟಿ ಆದಾಯ ನಿರೀಕ್ಷಿಸುತ್ತಾರೆ. ‘ಇನ್ನು ಶ್ರೀಗಂಧ, ಮಹಾಗನಿ, ರಕ್ತಚಂದನದ ಲೆಕ್ಕಾಚಾರ ಈಗ ಬೇಡ’ ಎಂದು ನಗುತ್ತಾರೆ. ‘ಮರ ಆಧಾರಿತ ಕೃಷಿಯೇ ಸುಸ್ಥಿರ ಬದುಕಿಗೆ ರಹದಾರಿ’ ಎಂಬುದು ನಿಖರ ನುಡಿ.

ತೋಟಗಾರಿಕೆ ಬೆಳೆ

ಮರಗಳನ್ನು ಬಿಟ್ಟು ಉಳಿದ ಜಾಗದಲ್ಲಿ ಒಂದು ಸಾವಿರ ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ಅದಕ್ಕೆ ಈಗ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಮೂರು ವರ್ಷಕ್ಕೆ ಮೆಣಸು ಸಿಗಲಿದೆ. ತೋಟದಲ್ಲಿ ಎಲ್ಲೂ ಜಾಗ ವ್ಯರ್ಥ ಆಗದಂತೆ ಗಿಡಗಳನ್ನು ನೆಟ್ಟಿದ್ದಾರೆ. ಒಂದು ಕಡೆ ಡಿ.ಜೆ ತೆಂಗಿನ ಸಸಿಗಳು ಮತ್ತು ಅಡಿಕೆ ಗಿಡಗಳ ನಡುವೆಯೂ ಅಂತರ ಬೆಳೆಯಾಗಿ ಬಾಳೆ ಬೆಳೆದಿದ್ದಾರೆ. ಜತೆಗೆ ಈಚಲು ಗಿಡಗಳಿವೆ. ಹಲಸಿನ ಸಸಿಗಳನ್ನು ಹಾಕಿದ್ದಾರೆ. ಮೂಸುಂಬಿ, ಕಿತ್ತಲೆ, ಪರಂಗಿ, ಎಳ್ಳಿ, ನಿಂಬೆ, ಸೀತಾಫಲ, ಅಂಜೂರ ಹೀಗೆ ಅನೇಕ ವೆರೈಟಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ’ಮರಗಳು ಆದಾಯ ಕೊಡುವವರೆಗೂ, ಬಾಳೆ, ಅಡಿಕೆ, ತೆಂಗು ಆದಾಯ ಕೊಡುತ್ತವೆ. ಕುರಿ, ಮೇಕೆ ಮಾರಾಟದಿಂದಲೂ ಆದಾಯ ಬರುತ್ತದೆ’ ಎನ್ನುತ್ತಾರೆ ರಾಮಕೃಷ್ಣಯ್ಯ.

ಗೊಬ್ಬರಕ್ಕಾಗಿ ಹೈನುಗಾರಿಕೆ

‘ಕೃಷಿಯಲ್ಲಿ ರಾಸಾಯನಿಕ ಬಳಸುವುದು ಬೇಡ’ ಎಂದು ನಿರ್ಧಾರ ಮಾಡಿ, ಗೊಬ್ಬರಕ್ಕಾಗಿ ಕುರಿ, ಮೇಕೆ, ಕೋಳಿ ಸಾಕಾಣಿಕೆಯ ಮಾರ್ಗ ಹಿಡಿದಿದ್ದಾರೆ. ಪ್ರತಿ ವರ್ಷವೂ ಬೇರೇ ಬೇರೆ ತಳಿಯ ಕುರಿಗಳನ್ನು ಸಾಕಿ, ಮಾರಾಟ ಮಾಡುತ್ತಾರೆ. ಇದರಿಂದ ಉತ್ತಮ ಆದಾಯವನ್ನು ನೋಡುತ್ತಾರೆ. ಈಗ ತೋಟದ ಶೆಡ್‌ನಲ್ಲಿ ಯಾದಗಿರಿ ತಳಿಯ ನೂರು ಕುರಿಗಳಿವೆ. ತೋಟದ ಎತ್ತ ಕಡೆ ನೋಡಿದರೂ ನಾಟಿ ಕೋಳಿಗಳು ಕೂಗುವ ಧ್ವನಿ ಕೇಳಿಸುತ್ತದೆ. ‘ಕೂಲಿ ಕಾರ್ಮಿಕರನ್ನು ಹೆಚ್ಚು ನಂಬಿಕೊಳ್ಳದೇ ನಾವೇ ಕೆಲಸ ಮಾಡಿದರೆ ಮೇಕೆ, ಕುರಿ ಸಾಕಾಣಿಕೆಯಲ್ಲಿ ಒಳ್ಳೆಯ ಲಾಭವೇ ಇದೆ’ ಎನ್ನುತ್ತಾರೆ ಅವರು. ಪ್ರತಿ ಶ್ರೀಗಂಧದ ಬುಡದಲ್ಲೂ ಕುರಿಗಳಿಗಾಗಿಯೇ ಅಗಸೆ ಗಿಡಗಳನ್ನು ಬೆಳೆಸಿದ್ದಾರೆ. ಕುರಿಗಳನ್ನು ತೋಟದಲ್ಲಿ ಬಿಟ್ಟು ಮೇಯಿಸುತ್ತಾರೆ.

ದೇಸಿ ತಳಿಗಳ ಭತ್ತ

ಆಹಾರಕ್ಕಾಗಿ ಎರಡು ಎಕರೆಯಲ್ಲಿ ದೇಸಿ ತಳಿಗಳ ಭತ್ತವನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಗೌರಿ ಸಣ್ಣ ಭತ್ತ ಬೆಳೆದಿದ್ದರು. ಈ ಸಲ ಹೊಳೆನರಸೀಪುರದಿಂದ ರಾಜಮುಡಿ ಬೀಜಗಳನ್ನು ತರಿಸಿ ಬಿತ್ತನೆ ಮಾಡಿದ್ದಾರೆ. ‘ಐದು ತಿಂಗಳ ಬೆಳೆ ಇದು. ರಸಗೊಬ್ಬರ ಹಾಕಿಲ್ಲ. ನಾಟಿಗೆ ಮುನ್ನ ಅಲಸಂದೆ, ಹುರುಳಿ ಹಾಕಿದ್ದೆ. ಅದು ಚೊಟ್ಟು, ಕಾಯಿ ಆದಾಗ ಉಳುಮೆ ಮಾಡಿದೆ. ಹಸಿರೆಲೆಗೊಬ್ಬರ ಭೂಮಿಗೆ ಹರಗಿಸಿದಂತಾಯಿತು. ನೋಡಿ, ನಾಟಿ ಮಾಡಿ 20 ದಿನವಾಗಿದೆ. ಎಷ್ಟು ಸೊಗಸಾಗಿದೆ’ ಎಂದು ನೆಲಮುಚ್ಚುವಂತೆ ಬೆಳೆದಿದ್ದ ಹಸಿರು ಕಕ್ಕುವ ಗದ್ದೆ ತೋರಿಸಿದರು ಅವರು.

ಜಲ ಸಂರಕ್ಷಣೆಗೂ ಆದ್ಯತೆ

ನೀರಿನ ಮಹತ್ವ ಅರಿತಿರುವ ರಾಮಕೃಷ್ಣಯ್ಯ, ತೋಟದಲ್ಲಿ ಸುರಿಯುವ ಲಕ್ಷಾಂತರ ಲೀಟರ್‌ ಮಳೆ ನೀರನ್ನು ಸಂಗ್ರಹಿಸಲು, ಎರಡು ಬೃಹತ್ ಕೃಷಿ ಹೊಂಡಗಳನ್ನು ಮಾಡಿಸಿದ್ದಾರೆ. ಸಮೀಪದಲ್ಲೇ ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ.

’ಹೊಂಡದಲ್ಲಿ ಮಳೆ ನೀರು ಇಂಗುತ್ತದೆ. ಕೊಳವೆಬಾವಿಗಳು ಜಲಮರುಪೂರಣವಾಗುತ್ತವೆ. ಅದಕ್ಕಾಗಿ ಈ ವಿಧಾನ ಅನುಸರಿಸಿದ್ದೇನೆ’ ಎನ್ನುತ್ತಾರೆ ಅವರು. ತಮ್ಮಲ್ಲಿ ತಯಾರಾಗುವ ಕುರಿ ಗೊಬ್ಬರವನ್ನೇ ಇಡೀ ತೋಟಕ್ಕೆ ಬಳಸುತ್ತಿದ್ದಾರೆ. ಖಾಲಿ ಇರುವ ಎರಡು ಎಕರೆಯಲ್ಲಿ ಬಿದಿರು ಬೆಳೆಯುವ ಚಿಂತನೆಯಲ್ಲಿದ್ದಾರೆ.

‘ಈ ಭಾಗದ ನೂರಾರು ಜನರು ಹೊಲಗಳಲ್ಲಿ ನೀಲಗಿರಿ ಬೆಳೆದು ಅಂತರ್ಜಲ ಹಾಳು ಮಾಡುತ್ತಿದ್ದಾರೆ. ಅದರ ಬದಲಿಗೆ ಕಾಡು ಮರಗಳನ್ನು ನಾಟಿ ಮಾಡುವುದು ಒಳಿತು’ ಎಂಬುದು ಅವರ ಅಭಿಪ್ರಾಯ.

’ಬೆಳಿಗ್ಗೆಯಿಂದ ಸಂಜೆವರೆಗೂ ತೋಟದಲ್ಲಿ ದುಡಿಯುತ್ತೇನೆ. ಹೆಚ್ಚುವರಿ ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಇಟ್ಟುಕೊಂಡಿದ್ದೇನೆ. ತೋಟದಲ್ಲಿನ ಕೆಲಸದಿಂದಾಗಿ ಮಧುಮೇಹ, ರಕ್ತದೊತ್ತಡದಂತಹ ಯಾವ ರೋಗಗಳೂ ಇಲ್ಲ. ಪರಿಸರದ ನಡುವೆ ಬದುಕು ನಡೆಸುವ ಖುಷಿಯನ್ನು ಅನುಭವಿಸಿಯೇ ತೀರಬೇಕು ಎಂದು ಸಂಭ್ರಮದಿಂದ ನುಡಿಯುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT