ತಾರಸಿಯಲ್ಲಿ ‘ಬ್ರಹ್ಮಾಂಡ ಕೈತೋಟ’

7

ತಾರಸಿಯಲ್ಲಿ ‘ಬ್ರಹ್ಮಾಂಡ ಕೈತೋಟ’

Published:
Updated:

ಮೈಸೂರಿನ ವಿಜಯನಗರದ ಬಿ ಬ್ಲಾಕ್, ಮೂರನೇ ಹಂತದ 16ನೇ ಕ್ರಾಸ್, 16ನೇ ಮೇನ್‌ನಲ್ಲಿರುವ ಸಾವಿರದೈನೂರು ಚದರ ಅಡಿ ಮನೆಯ ಮೆಟ್ಟಿಲು ಏರಿ ತಾರಸಿಗೆ ಹೆಜ್ಜೆ ಇಟ್ಟರೆ, ಅಲ್ಲೊಂದು ‘ಕೈತೋಟದ ಬ್ರಹ್ಮಾಂಡ’ವೇ ಅನಾವರಣಗೊಳ್ಳುತ್ತದೆ. ದೃಷ್ಟಿ ಹಾಯಿಸುತ್ತಾ ಬಂದರೆ, ತರಕಾರಿ, ಹೂವು, ಹಣ್ಣು, ಬಳ್ಳಿ ತರಕಾರಿ, ಜೇನು, ದುಂಬಿಗಳು, ಚೌಕಾಕಾರದ ಹುಲ್ಲು ಹಾಸು, ತುದಿಯಲ್ಲಿ ಬಣ್ಣದ ಛತ್ರಿ, ವಿರಮಿಸಿಕೊಳ್ಳಲು ಅದರ ಕೆಳಗೊಂದು ಕುರ್ಚಿಯೂ ಇದೆ. ಕುರ್ಚಿ ಮೇಲೆ ಕುಳಿತರೆ ‘ಸ್ವರ್ಗವೇ ಕಣ್ಣೆದುರು ಅನಾವರಣ’.

ಇದು ಪ್ರೊ. ರುದ್ರಾರಾಧ್ಯ ಅವರ ತಾರಸಿ ತೋಟದ ಝಲಕ್. ಆರಾಧ್ಯರದ್ದು ಕೃಷಿ ಕ್ಷೇತ್ರದಲ್ಲಿ ತುಸು ಪರಿಚಿತ ಹೆಸರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾಗ ‘ಬಾವಿಕೆರೆ ಮಾದರಿ’ ಎಂಬ ಒಣ ಭೂಮಿ ಸಣ್ಣ ಹಿಡುವಳಿ ರೈತರಿಗೆ ಒಂದು ಎಕರೆಯ ಕೃಷಿ ಮಾದರಿಯನ್ನು ಪರಿಚಯಿಸಿದ್ದರು. ನಂತರ ಜೆಎಸ್ಎಸ್ ವಿದ್ಯಾಲಯದಲ್ಲಿ ‘ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ ‘ರೈತ ಪರ ವಿಜ್ಞಾನಿ’ ಅವರು. ಅನಾರೋಗ್ಯ ಕಾರಣದಿಂದ ಸ್ವಯಂ ನಿವೃತ್ತಿ ಪಡೆದ ಅವರು ಈಗ ಮನೆಯ ಮೇಲೆ ‘ಕೈತೋಟದ ಬ್ರಹ್ಮಾಂಡ’ವನ್ನೇ ಸೃಷ್ಟಿಸಿದ್ದಾರೆ.

ಏನುಂಟು-ಏನಿಲ್ಲ, ಅದೂ ತಾರಸಿಯ ಮೇಲೆ?

ತಾರಸಿ ಮೇಲೆ ಏನು ಬೆಳೆಯೋದಕ್ಕೆ ಸಾಧ್ಯ? ಹೀಗೆಂದು ಪ್ರಶ್ನಿಸುವವರು ಒಮ್ಮೆ ಆರಾಧ್ಯರ ಮನೆಯ ಮೇಲಿನ ತಾರಸಿ ತೋಟ ನೋಡಬೇಕು. ಅಲ್ಲಿ ಬಗೆ-ಬಗೆಯ ತರಕಾರಿ, ಬಹು ಬಗೆಯ ಹೂ-ಪುಷ್ಪ, ವಿಧ-ವಿಧದ ಹಣ್ಣು-ಹಂಪಲು ಕಾಣಬಹುದು. ‘ದಿನನಿತ್ಯ ಎಷ್ಟು ಬಗೆಯ ತರಕಾರಿ ಬಳಸುತ್ತೀರಿ; ಮೂರು, ನಾಲ್ಕು, ಐದು ಬಗೆ. ಆದರೆ ನಮ್ಮ ತಾರಸಿಯಿಂದ ನಮಗೆ ಕನಿಷ್ಠ ದಿನಂಪ್ರತಿ 8 ರಿಂದ 10 ಬಗೆಯ ತರಕಾರಿ, ಅದೂ ತಾಜಾ ತಾಜಾ ಸಿಗುತ್ತದೆ. ನಮಗೂ ಸಾಕಾಗಿ ಆಜು-ಬಾಜಿನವರಿಗೂ ಕೊಡುತ್ತಿದ್ದೇವೆ. ಅದೂ ಉಚಿತವಾಗಿ ತುಸು ಪ್ರೀತಿ ಬೆರೆಸಿ’ ಎನ್ನುತ್ತಾರೆ ಆರಾಧ್ಯರು.

ತಾರಸಿಯ ಮೇಲೆ ತರಕಾರಿ ಜತೆಗೆ, ದ್ರಾಕ್ಷಿ, ಸ್ಟ್ರಾಬೆರಿ, ಡ್ರಾಗನ್ ಫ್ರೂಟ್, ಅಂಜೂರಕ್ಕೂ ಅವಕಾಶ ಮಾಡಿದ್ದಾರೆ. ಜತೆಗೆ, ಸರ್ವಋತು ಮಾವು, ನುಗ್ಗೆ ಗಿಡ, ದೇವರ ಪೂಜೆಗೆ ಬೇಕಾದ ಬಿಲ್ವಪತ್ರೆ ಮರವನ್ನೂ ಬೆಳೆಸಿದ್ದಾರೆ. ಔಷಧೀಯ ಗುಣವಿರುವ ಕಾಡುಕೊತ್ತಂಬರಿ, ದೊಡ್ಡಪತ್ರೆಯಂತಹ ಸಸ್ಯಗಳಿವೆ. ಎಲೆಕೋಸು, ಹೂಕೋಸು, ಗಡ್ಡೆಕೋಸು ಬೆಳೆಯುವುದಕ್ಕಾಗಿ ತಾರಸಿಯಲ್ಲಿ ನೆರಳುಪರದೆ ಮನೆ ಮಾಡಿದ್ದಾರೆ. ಅದರೊಳಗೆ ಬಣ್ಣಬಣ್ಣದ ದೊಣ್ಣೆಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

ಅಂಗಳದಲ್ಲಿ ಹೊನಗೊನೆ, ದಂಟು, ಕೊತ್ತಂಬರಿ, ಮೆಂತೆ ಸೊಪ್ಪುಗಳಿವೆ. ಸೊಪ್ಪುಗಳನ್ನು ಒಮ್ಮೆ ಬಿತ್ತಿದರೆ ಮುಗಿಯಿತು. ನಂತರ ಕಟಾವಿಗೆ ಬಂದಾಗ, ಒಂದಂಗುಲ ಬಿಟ್ಟು ಸೊಪ್ಪುಗಳನ್ನು ಚಿವುಟಿಬಿಡುತ್ತಾರೆ. ಇದರಿಂದಾಗಿ ಹದಿನೈದು ಇಪ್ಪತ್ತು ದಿನಗಳಲ್ಲಿ ಮತ್ತೆ ಮತ್ತೆ ಸೊಪ್ಪುಗಳು ಕೊಯ್ಲಿಗೆ ಬರುತ್ತವೆ. ಹೀಗೆ ಕನಿಷ್ಠ ಐದಾರು ಸಲ ಕೊಯ್ಲು ಮಾಡಿದ ಮೇಲೆ ಹೊಸದಾಗಿ ಸೊಪ್ಪಿನ ಬೀಜಗಳನ್ನು ಬಿತ್ತುತ್ತಾರೆ.

ಆರಾಧ್ಯರ ಆರೈಕೆ - ನಿರ್ವಹಣೆ

ಇಲ್ಲಿನ ಬಹುತೇಕ ಬೆಳೆಗಳನ್ನು ದಪ್ಪನೆಯ ಪಾಲಿಥೀನ್ ಚೀಲ (ಬಾಳಿಕೆ ಹೆಚ್ಚು) ಇಲ್ಲವೇ ಕುಂಡಗಳಲ್ಲಿ ಬೆಳೆಯುತ್ತಾರೆ. ಮಾವು, ಬಿಲ್ವಪತ್ರೆ, ದ್ರಾಕ್ಷಿ, ಅಂಜೂರ ಮುಂತಾದ ಬಹುವಾರ್ಷಿಕ ಬೆಳೆಗಳನ್ನು ಹೆಚ್ಚು ಎತ್ತರ-ಅಗಲ ಇರುವ ಪ್ಲಾಸ್ಟಿಕ್ ಡ್ರಂಗಳಲ್ಲಿ ಬೆಳೆಯಲಾಗಿದೆ. ಶೇ 30 ಮಣ್ಣು, ಅಷ್ಟೇ ಪ್ರಮಾಣದ ಸಾವಯವ ಗೊಬ್ಬರ ಹಾಗೂ ತೆಂಗಿನ ನಾರಿನ ಪುಡಿ ಜೊತೆಗೆ ಶೇ 10ರಷ್ಟು ಬೇವಿನಿಂಡಿ ಮಿಶ್ರಣಮಾಡಿ ಕುಂಡ, ಪ್ಲಾಸ್ಟಿಕ್ ಡ್ರಂ ಅಥವಾ ಬೆಳೆಸುವ ಯಾವುದೇ ಪರಿಕರಕ್ಕೆ ತುಂಬುತ್ತಾರೆ.

ಮೊದಲು ಪ್ರತಿ ದಿನ ಆರಾಧ್ಯ ದಂಪತಿ ಗಿಡಗಳಿಗೆ ನೀರು ಹನಿಸುತ್ತಿದ್ದರು. ಹೆಚ್ಚು ನೀರು ಬಳಕೆಯಾಗುತ್ತಿದೆ ಎಂದು ಎನಿಸಿದಾಗ ಇಡೀ ತಾರಸಿ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿಸಿದ್ದಾರೆ. ‘ಇದರಿಂದ ನೀರೇನೊ ಉಳಿಯುತ್ತೆ, ಆದರೆ ಗಿಡಗಳ ಸಂಪರ್ಕ ತಪ್ಪುತ್ತದೆ’ ಎಂಬುದು ಆರಾಧ್ಯರ ವ್ಯಥೆ. ಏನೇ ಆದರೂ, ಪ್ರತಿ ದಿನ ಗಿಡಗಳನ್ನು ಭೇಟಿಯಾಗುವ ಆರಾಧ್ಯರು, ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೀಟಗಳಿದ್ದರೆ ಹಿಡಿದು ಹಿಸುಕುತ್ತಾರೆ. ರೋಗಬಾಧಿತ ಭಾಗವನ್ನು ತೆಗೆದು ಸುಟ್ಟು ಅದರ ಬೂದಿಯನ್ನು ಗೊಬ್ಬರವಾಗಿ ಬಳಸುತ್ತಾರೆ. ಒಂದು ವೇಳೆ ತೀವ್ರವಾಗಿದ್ದರೆ ಬಾಧಿತ ಗಿಡ/ಬೆಳೆಯನ್ನೇ ತೆಗೆದುಬಿಡುತ್ತಾರೆ; ಇದರಿಂದ ಉಳಿದ ಬೆಳೆಗಳಿಗೆ ತೊಂದರೆಯಾಗದಿರಲೆಂದು. ಜೊತೆಗೆ ವಾರಕ್ಕೊಮ್ಮೆ ಬೇವಿನೆಣ್ಣೆಯ ಸಿಂಪಡಣೆ ಮತ್ತು ಅಗತ್ಯವಿದ್ಯಾಗ ಸಾಬೂನಿನ ದ್ರಾವಣದಲ್ಲಿ ಕರಗಿಸಿ ಬುಡವನ್ನೂ ತೋಯಿಸಿಬಿಡುತ್ತಾರೆ.

ಜೇನಿಗೂ ಜಾಗ

ಆರಾಧ್ಯರ ತಾರಸಿಯ ಮೇಲೆ ಒಂದು ಜೇನಿನ ಪೆಟ್ಟಿಗೆ ಜಾಗ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಸ್ವಾರ್ಥವೂ ಇದೆಯೆನ್ನಿ. ಹೀರೆ, ಸೋರೆ, ತುಪ್ಪೀರೆ, ಹಾಗಲ, ಪಡುವಲ, ಕುಂಬಳ, ಬೂದುಗುಂಬಳ ಹೀಗೆ ಹತ್ತು ಹಲವು ಬಳ್ಳಿ ಬೆಳೆಗಳು. ಅವುಗಳು ಹೂ ಬಿಟ್ಟು ಕಾಯಿ ಕಚ್ಚಬೇಕೆಂದರೆ ಪರಾಗಸ್ಪರ್ಶಿಸಲು ಜೇನು ಬೇಕೇ ಬೇಕು; ಇಲ್ಲ ನಾವೇ ಕೃತಕವಾಗಿ ಪರಾಗಸ್ಪರ್ಶಿಸಬೇಕು. ಇದರ ಅರಿವಿದ್ದ ಪ್ರೊಫೆಸರ್ ಕೃತಕತೆಗೆ ಅವಕಾಶ ನೀಡದೆ ಆ ಕಾಯಕವನ್ನು ಜೇನ್ನೊಣಗಳಿಗೆ ಬಿಟ್ಟಿದ್ದಾರೆ. ಜೇನ್ನೊಣಗಳಿಗೆ ಪರಾಗ-ಮಕರಂದ, ಇವರಿಗೆ ಹಣ್ಣು-ಕಾಯಿ ಜೊತೆಗೆ ಉಚಿತವಾಗಿ ಅವುಗಳ ಝೇಂಕಾರ.

ಕೈತೋಟಕ್ಕೆ ‘ಕೆಆರ್‌ಎಸ್’ ಹೆಸರು

ಹಾಸಿಗೆ ಹಿಡಿದಿದ್ದ ಆರಾಧ್ಯರಿಗೆ ಮರುಜೀವ ಬಂದಿರುವುದು ಇದೇ ತಾರಸಿ ತೋಟದಿಂದ. ಹತ್ತು ಹೆಜ್ಜೆ ಇಡಲು ಕಷ್ಟಪಡುತಿದ್ದ ಆರಾಧ್ಯರೀಗ ಸಲೀಸಾಗಿ ತಾರಸಿ ಏರಿ ಮೂರ್ನಾಲ್ಕು ತಾಸು ಗಿಡಗಳೊಡನೆ ಒಡನಾಡುತ್ತಾರೆ; ಮಗನ ಸಂಗೀತ ಶಾಲೆಗೆ ಕಲಿಯಲು ಬರುವ ಮಕ್ಕಳ ಇಷ್ಟದ ಜಾಗ ಈ ತಾರಸಿ ತೋಟ. ಅದರಲ್ಲೂ ಹುಲ್ಲು ಹಾಸಿನ ತಾಣ. ಅವು ಅವರವರ ಮನೆಯಲ್ಲಿ ತಂದೆ-ತಾಯಿಗಳಿಗೆ ನೀವೂ ಈ ರೀತಿ ತಾರಸಿ ತೋಟ ಮಾಡಿ ಎಂದು ಒತ್ತಾಯಿಸುತ್ತಿರುವುದು ಖುಷಿಯ ವಿಚಾರ. ಅವರಲ್ಲೂ ಹಸಿರ ಪ್ರೀತಿ ಹುಟ್ಟಿಸುತ್ತಿರುವ ಧನ್ಯತೆ.

ತಾರಸಿ ತೋಟಕ್ಕೆ ‘ಕೆಆರ್‍ಎಸ್ ತಾರಸಿ ತೋಟ’ ಎಂದು ಹೆಸರಿಸಿದ್ದಾರೆ. ಕೆಆರ್ ಎಸ್ ಎಂದರೆ ಕೃಷ್ಣರಾಜಸಾಗರವಲ್ಲ, ಅದು ಅವರ ಮೂವರು ಮೊಮ್ಮಕ್ಕಳಾದ ಖುಷಿ, ರಿದನ್ಯ ಹಾಗೂ ಸಾನ್ವಿ ಅವರ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಇಟ್ಟದ್ದು. ಇದರಿಂದ ನಮ್ಮ ಹೆಸರಿನ ತೋಟವೆಂದು ಮೊಮ್ಮಕ್ಕಳಿಗೆ ಖುಷಿಯೋ ಖುಷಿ.

ತೋಟದಿಂದ ಲಾಭವೇನು ?

ಮನೆಗೆ ಬೇಕಾದ ಬಹುತೇಕ ತರಕಾರಿ-ಹಣ್ಣು-ಹೂಗಳು ಇಲ್ಲೇ ಸಿಗುತ್ತದೆ. ಖರೀದಿ ವೆಚ್ಚ, ಸಮಯ ಉಳಿದಿದೆ. ರಾಸಾಯನಿಕ ಕೀಟ, ಪೀಡೆನಾಶಕ ಉಳಿಕೆಯ ಭಯವೂ ಇಲ್ಲ. ವೈವಿಧ್ಯಮಯ ಹಾಗೂ ತಾಜಾ ತರಕಾರಿ ಲಭ್ಯ. ತೋಟ ನಿರ್ವಹಣೆಯಿಂದಾಗಿ ಮೊಬೈಲು-ಕಂಪ್ಯೂಟರಿನಿಂದ ದೂರ ಉಳಿಯಲು ಸಾಧ್ಯವಾಗಿದೆ. ಮನೆ ಮಂದಿಯೆಲ್ಲ ತೋಟ ಮಾಡುವುದರಿಂದ ಎಲ್ಲರಿಗೂ ಶುದ್ಧಗಾಳಿ ಲಭ್ಯ. ತೋಟದಿಂದ ಅಕ್ಕ-ಪಕ್ಕದವರಿಗೂ ಪುಕ್ಕಟೆ ಶುದ್ಧಗಾಳಿ. ಸಿಗುವ ಹಣ್ಣು-ಹೂ-ತರಕಾರಿ ಇವರಿಗೂ ಸಾಕಾಗಿ, ಪಕ್ಕದವರಿಗೂ ಹಂಚಿ, ಮತ್ತಷ್ಟು ನೆರೆಹೊರೆಯವರಿಗೂ ತಲುಪಿಸುವ ಭಾಗ್ಯ ಸಿಕ್ಕಿದೆ. ಅದೂ ಉಚಿತವಾಗಿ. ಪ್ರತಿಯಾಗಿ ಅವರಿಂದ ಉಚಿತ ಪ್ರೀತಿ ಸಿಕ್ಕಿದೆ.
‘ಎಲ್ಲರಿಗೂ ಎಕರೆಗಟ್ಟಲೆ ಜಮೀನು ಇರೋದಿಲ್ಲ, ಆದರೆ ಬಹುತೇಕರಿಗೆ ಮನೆ ಇದ್ದೇ ಇರುತ್ತೆ; ತಾರಸಿ ತೋಟ ನೋಡಿದರೆ ಸಾಲದು, ಮನಸ್ಸು ಮಾಡಿ ಅವರೂ ಮಾಡುವಂತಾಗಬೇಕು’ ಎನ್ನುತ್ತಾರೆ ಆರಾಧ್ಯರು. ತಾರಸಿ ತೋಟದ ಕುರಿತ ಮಾಹಿತಿಗಾಗಿ ಆರಾಧ್ಯರ ಸಂಪರ್ಕ: 94481 45228.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !