ತಾರಸಿ ತೋಟದಲ್ಲಿ ನೀರುಳಿಸುವ ಪರಿ

ಬುಧವಾರ, ಏಪ್ರಿಲ್ 24, 2019
32 °C

ತಾರಸಿ ತೋಟದಲ್ಲಿ ನೀರುಳಿಸುವ ಪರಿ

Published:
Updated:
Prajavani

ಮೈಸೂರಿನ ವಿಜಯನಗರ ಬಡಾವಣೆಯ ಎರಡನೇ ಹಂತದ ಡಬಲ್ ರೋಡ್ ಸಮೀಪದಲ್ಲಿ ಎರಡು ಅಂತಸ್ತಿನ ಮನೆಯಿದೆ. ಮನೆಯ ಎದುರು ನಿಂತರೆ, ಕೆಳಭಾಗ ಪೀಠೋಪಕರಣಗಳ ‘ಶೋ ರೂಮ್’. ತಲೆ ಎತ್ತಿ ನೋಡಿದರೆ ಗಿಡಗಳಿಂದ ತುಂಬಿರುವ ತಾರಸಿ ತೋಟ ಕಾಣುತ್ತದೆ.

ಅದೇ ದಿಲೀಪ್ ಮತ್ತು ಸೆಲೀನಾ ದಂಪತಿಯ ಮನೆ. ತಾರಸಿಯಲ್ಲಿರುವುದು ಅವರ ಕನಸಿನ ತೋಟ. ‘ಅರೆ, ತಾರಸಿ ತೋಟ ಎಲ್ಲೆಡೆ ಸಾಮಾನ್ಯ. ಅದರಲ್ಲೇನು ವಿಶೇಷ’ ಎನ್ನುತ್ತೀರಲ್ಲವಾ?. ನಿಜ, ಇತ್ತೀಚೆಗೆ ಅನೇಕರು ತಾರಸಿ ತೋಟ ಮಾಡುತ್ತಿದ್ದಾರೆ. ಆದರೆ, ಈ ದಂಪತಿ ತಾರಸಿಯಲ್ಲಿ ಹೂವು, ಹಣ್ಣು, ತರಕಾರಿಗಳನ್ನು ಬೆಳೆಸುತ್ತಾ ತೋಟಕ್ಕೆ ಬಳಸುವ ನೀರು, ಗೊಬ್ಬರವನ್ನು ಮರುಬಳಕೆ ಮಾಡುತ್ತಿ
ದ್ದಾರೆ. ಈ ವಿಧಾನವೇ ಈ ತಾರಸಿ ತೋಟ ವೈಶಿಷ್ಟ್ಯ.

ಹೊಸ ಬಡಾವಣೆಯಲ್ಲಿ ಮನೆ ಕಟ್ಟಿದಾಗ, ನೀರಿನ ಸಮಸ್ಯೆ ಕಾಡುವುದು ಸಹಜ. ಇಂಥ ಸಮಸ್ಯೆ ಇದ್ದರೂ, ಮನೆ ಕಟ್ಟಿದವರಿಗೆ, ಅಂದವಾದ ಕೈತೋಟ ಮಾಡುವ ಉತ್ಕಟ ಬಯಕೆ ಇರುತ್ತಲ್ಲವಾ? ಸೆಲೀನಾ ದಂಪತಿಗೂ ಇಂಥದ್ದೇ ಒಂದು ಆಸೆ ಇತ್ತು. ಹೀಗಾಗಿ ನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡೇ ಸೆಲೀನಾ ಕೈತೋಟ ಮಾಡಲು ನೀಲನಕ್ಷೆ ಹಾಕಿದರು.

ಪತಿ ದಿಲೀಪ್, ನೀರಿನ ಮಿತ ಬಳಕೆ ಮತ್ತು ಅದಕ್ಕೆ ಬೇಕಾದ ತಾಂತ್ರಿಕತೆಗಳ ಕುರಿತು ಯೋಜನೆ ರೂಪಿಸಿದರು. ಹೀಗೆ ಶುರುವಾಯಿತು ಇವರ ಕನಸಿನ ತೋಟ ಕಟ್ಟುವ ಕೆಲಸ.

ವಿನ್ಯಾಸಕ್ಕೆ ತಕ್ಕಂತೆ ಜೋಡಣೆ
ತಾರಸಿಯಲ್ಲಿ ಬಿಸಿಲು ಬೀಳುವ ಸ್ಥಳದಲ್ಲಿ ನಾಲ್ಕು ಸಾಲು ಕಬ್ಬಿಣದ ಆಂಗಲ್‌ ಸ್ಟಾಂಡ್ ಮಾಡಿ, ಅದರ ಮೇಲೆ ಸಮ ಅಳತೆಯಲ್ಲಿ ಅಡ್ಡವಾಗಿ ಕತ್ತರಿಸಿದ ಪ್ಲಾಸ್ಟಿಕ್ ಡ್ರಮ್‌ಗಳನ್ನು ಮೇಲೆ ಜೋಡಿಸಿದರು. ಎತ್ತರವಿದ್ದರೂ ಅಗಲ ಸಾಲದೆನ್ನಿಸಿದಾಗ, ಕತ್ತರಿಸಿಟ್ಟಿದ್ದ ಡ್ರಮ್‌ಗಳ ಮೇಲ್ಭಾಗವನ್ನು ಮುಂದಿನ ಸಾಲಿನಲ್ಲಿನ ಅಡ್ಡವಾಗಿ ಇಟ್ಟರು. ಅದರೊಳಗೆ ಕಾಯರ್ ಪಿತ್‌ ಮತ್ತು ಕಾಂಪೋಸ್ಟ್ ತುಂಬಿದ ಮಿಶ್ರಣ ತುಂಬಿ
ಸಿದ್ಧ ಸಸಿಗಳನ್ನು ಸಸಿ ನೆಟ್ಟರು. ಇರುವ ಒಂದು ಕೊಳವೆ ಬಾವಿಯಿಂದಲೇ ಕೈ ತೋಟಕ್ಕೆ ನೀರು ಹಾಯಿಸಲು ಪೈಪ್‌ ಸಂಪರ್ಕ ಕೊಟ್ಟು, ಮಿತ ನೀರು ಬಳಕೆಗಾಗಿ ಡ್ರಮ್‌ಗಳ ಮೇಲ್ಬಾಗದಲ್ಲಿ ಡ್ರಿಪ್‌ ಪೈಪ್ ಅಳವಡಿಸಿ, ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರು ಪೂರೈಸಲು ವ್ಯವಸ್ಥೆ ಮಾಡಿದರು. ‘ಆದರೆ, ಗಿಡಗಳು ಕುಡಿದು ಡ್ರಮ್‌ನಿಂದ ಹೊರಗೆ ಬಿಡುವ ನೀರು ವ್ಯರ್ಥವಾಗುತ್ತದಲ್ಲ’ ಎಂಬ ಚಿಂತೆ ಅವರನ್ನು ಕಾಡಿತು. 

ನೀರು, ಪರಿಸರದ ಬಗ್ಗೆ ಕಾಳಜಿಯಿದ್ದ ಈ ದಂಪತಿ ಹೊರಬರುವ ನೀರನ್ನು ಮರುಬಳಕೆ ಮಾಡಲು ಯೋಜನೆ ರೂಪಿಸಿದರು. ಇದಕ್ಕಾಗಿ ಗಿಡಗಳನ್ನು ಹಾಕಿದ ಪ್ರತಿ ಡ್ರಮ್‌ನ ಕೆಳಭಾಗದಲ್ಲಿ ಒಂದು ಸಣ್ಣ ನಲ್ಲಿ ಕೂಡಿಸಿ, ನಲ್ಲಿ ಬಾಯಿಗೆ ಪೈಪ್ ಜೋಡಿಸಿ, ಆ ಮೂಲಕ ಡ್ರಮ್‌ನಿಂದ ಹೊರ ಬಂದ ಹೆಚ್ಚುವರಿ ನೀರು ಮತ್ತೊಂದು ಡ್ರಮ್‌ಗೆ ಸೇರುವಂತೆ ಮಾಡಿದರು. ಈ ನೀರು ಕಾಯರ್ ಪಿತ್‌ ಮತ್ತು ಕಾಂಪೋಸ್ಟ್‌ ಮೂಲಕ ಹರಿದು ಬರುವುದರಿಂದ, ಇದೊಂದು ರೀತಿ ದ್ರವರೂಪಿ ಗೊಬ್ಬರದಂತಾಗಿತ್ತು. ಇಂಥ ನೀರನ್ನು ಮರುಬಳುವುದಕ್ಕಾಗಿ, ನೀರು ಸಂಗ್ರಹವಾದ ಡ್ರಮ್‌ಗೆ ಪುಟ್ಟ ಪಂಪ್ ಜೋಡಿಸಿದರು. ಅದೇ ಪಂಪ್‌ನಿಂದ ಹನಿ ನೀರಾವರಿ ಪೈಪ್‌ ಮೂಲಕ ಗಿಡಗಳಿಗೆ ದ್ರವರೂಪಿ ಗೊಬ್ಬರದಂತಿದ್ದ ನೀರನ್ನು ಪೂರೈಸಲಾರಂಭಿಸಿದರು.

‘ಈ ವಿಧಾನದಿಂದ ಸಮಯ ಉಳಿತಾಯವಾಯಿತು. ನೀರು ಬಳಕೆಯೂ ಕಡಿಮೆಯಾಯಿತು. ಪೋಷಕಾಂಶಯುಕ್ತ ನೀರು ಪೂರೈಸಿದ ಪರಿಣಾಮ ಬಳ್ಳಿ, ತರಕಾರಿ, ಹೂವಿನ ಗಿಡಗಳು ಸೊಂಪಾಗಿ ಬೆಳೆದವು. ರುಚಿಯಾದ ತಾಜಾ ತರಕಾರಿ ಸಿಕ್ಕಿತು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸೆಲೀನಾ– ದಿಲೀಪ್. ಈಗ ಇವರ ತಾರಸಿ ತೋಟದಲ್ಲಿ ಗಿಡಕ್ಕೆ ಪೂರೈಸುವ ನೀರು ಮರುಬಳಕೆಯಾಗುತ್ತಿದೆ. ನೀರಿನ ಬಳಕೆ ಮೇಲೂ ಕಡಿವಾಣ ಬಿದ್ದಿದೆ.

ತುಸು ದುಬಾರಿಯೇ, ಆದರೆ..
ಪ್ಲಾಸ್ಟಿಕ್‌ ಡ್ರಮ್‌, ಕಬ್ಬಿಣದ ಆ್ಯಂಗಲ್‌, ‌ಪೈಪ್, ನಲ್ಲಿಗಳು, ನೀರು ಸಂಗ್ರಹಣಾ ಸ್ರಮ್‌, ಕಾಯರ್‌ಪಿತ್‌, ಮೂಲ ಸಾಮಗ್ರಿಗಳು ಎಲ್ಲ ಸೇರಿ ಅಂದಾಜು ₹30 ಸಾವಿರ ಖರ್ಚಾಗಿದೆ. ಕಚ್ಚಾ ವಸ್ತುಗಳಷ್ಟೇ ಹೊರಗಿನಿಂದ ತಂದಿದ್ದಾರೆ. ವಿನ್ಯಾಸ, ಜೋಡಣೆ, ನಿರ್ವಹಣೆ ಎಲ್ಲಾ ಇವರದ್ದೇ. ‘ಹಾಗಾಗಿ ಖರ್ಚು ಕಡಿತಗೊಳಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ದಿಲೀಪ್.

ಗಿಡಗಳಿಗೆ ಗೊಬ್ಬರವಾಗಿ ಕಾಯರ್‌ಪಿತ್‌ ಬಳಸುವುದರಿಂದ ತಾರಸಿ ಮೇಲೆ ತೂಕ ಬೀಳುವುದಿಲ್ಲ. ಡ್ರಮ್‌ಗಳನ್ನು ಜೋಡಿಸುವುದರಿಂದ ಸ್ಥಳಾಂತರ ಸುಲಭ. ಮನೆ, ತೋಟದ ತ್ಯಾಜ್ಯದಿಂದ ಇವರೇ ಕಾಂಪೋಸ್ಟ್‌ ತಯಾರಿಸಿಕೊಳ್ಳುವುದರಿಂದ ಗೊಬ್ಬರದ ಖರ್ಚು ಉಳಿತಾಯ. ‘ತಿಂಗಳಿಗೆ ನಿರ್ವಹಣೆಗಾಗಿ ₹250 ರಿಂದ ₹300 ಖರ್ಚಾಗಬಹುದು. ಆದರೆ, ನಮ್ಮ ಕಣ್ಣೆದುರಿಗೆ ಇಂಥ ರುಚಿಕರ ತರಕಾರಿ ಬೆಳೆದುಕೊಂಡು ತಿನ್ನುವುದು, ಮನೆಗೊಂದು ಸುಂದರ ಪರಿಸರ, ಪುಕ್ಕಟೆ ಆಮ್ಲಜನಕ, ಧಾರಾಳ ವಿಟಮಿನ್ ‘ಡಿ’ ಸಿಗುತ್ತಿರುವುದರ ಎದುರು ಆ ಖರ್ಚು ಏನೂ ಅಲ್ಲ’ ಎನ್ನುತ್ತಾರೆ ಸೆಲೀನಾ.

ನೀರಿನ ಬಗೆಗಿನ ಇವರ ಕಾಳಜಿ, ನಿರ್ವಹಣೆಯ ರೀತಿ, ಹನಿ ನೀರು ಪೋಲಾಗದಂತೆ ನೋಡಿಕೊಳ್ಳುವ ಕೌಶಲ, ಹೆಚ್ಚುವರಿ ನೀರಿನ ಮರು ಬಳಕೆ ಈಗ ಆ ಬಡಾವಣೆಯಲ್ಲಿ ಮನೆ ಮಾತಾಗಿದೆ. ತಮ್ಮ ತಾರಸಿ ತೋಟದ ಮಾಹಿತಿಯನ್ನು ತೋಟ ನೋಡಲು ಬರುವವರಿಗೆ ವಿವರಿಸುವ ಪರಿಯೇ ಬೇರೆಯವರನ್ನು ತೋಟ ಕಟ್ಟಲು ಉದ್ದೀಪಿಸುತ್ತದೆ. ಹಾಗಾಗಿ ನೀರಿನ ಮಿತ ಹಾಗೂ ಮರು ಬಳಕೆ ಇದೊಂದು ಮಾದರಿ.


ಗಿಡಗಳ ಆರೈಕೆಯಲ್ಲಿ ಸೆಲೀನಾ ಹಾಗೂ ದಿಲೀಪ್‌ 

ಕೈತೋಟ ಪ್ರೀತಿಯ ದಂಪತಿ
ಎಂಜಿನಿಯರ್ ದಿಲೀಪ್, ಮೊದಲು ಟೆಕ್ಸ್‌ಟೈಲ್ಸ್‌ ಉದ್ಯಮದಲ್ಲಿದ್ದರು. ಕೆಲಸದ ಏಕತಾನತೆಗೆ ಬೇಸತ್ತು ಸ್ವಂತ ಉದ್ಯಮ ಆರಂಭಿಸಿದರು. ತಂದೆ ಮಾಡುತ್ತಿದ್ದ ಪೀಠೋಪಕರಣದ ಕೆಲಸಕ್ಕೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಈಗ ಆ ಉದ್ಯಮಕ್ಕೆ ಹೊಸ ಆಯಾಮ ನೀಡಿದ್ದಾರೆ. ಇತ್ತೀಚೆಗೆ ‘ಮಾಡರ್ನ್ ಕಿಚನ್’ ಗಳಿಗೆ ಇವರು ನೀಡಿರುವ ವಿನ್ಯಾಸ ಅತ್ಯಂತ ಜನಪ್ರಿಯವಾಗುತ್ತಿದೆ. ಪತ್ನಿ ಸೆಲೀನ ಎಂಎಸ್‌ಸಿ ಸಸ್ಯಶಾಸ್ತ್ರ ಓದಿದವರು. ಈಗ ಪತಿಯ ಕಾರ್ಯಗಳಲ್ಲಿ ನೆರವಾಗುತ್ತಿದ್ದಾರೆ. ಮಗಳು ಆರ್ಕಿಟೆಕ್ಟ್‌. ಸೆಲೀನಾ ತಾನು ಕಲಿತ ಸಸ್ಯಶಾಸ್ತ್ರೀಯ ವಿದ್ಯೆಯನ್ನು ಗಿಡಗಳ ಆರೈಕೆಗೆ ಬಳಸುತ್ತಾರೆ. .

ಶಿಸ್ತುಬದ್ಧವಾಗಿ ನಿರ್ಮಿಸಿರುವ ತಾರಸಿ ತೋಟದ ಗಿಡಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಸೋಕಿಸುವುದಿಲ್ಲ. ಹಾಗಾಗಿ ತೋಟದಲ್ಲಿ ಸಾವಯವದ ಪರಿಮಳ ಸುಳಿದಾಡುತ್ತಿರುತ್ತದೆ. ದಿಲೀಪ್‌ಗೆ ಒತ್ತಡ ನಿವಾರಣೆಗೆ ತಾರಸಿ ತೋಟ ಸಹಕಾರಿ. ಇಲ್ಲಿ ಬೆಳೆಯುವ ತರಕಾರಿ, ಸೊಪ್ಪು ತಿನ್ನುವ ಸಂತಸ ಸೆಲೀನಾರಿಗೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !