ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿ ಬೆಳೆಯುವ ಮುನ್ನ...

Last Updated 19 ನವೆಂಬರ್ 2019, 5:26 IST
ಅಕ್ಷರ ಗಾತ್ರ

ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಶುಂಠಿ ಬಿತ್ತನೆ ಫೆಬ್ರುವರಿಯಿಂದಲೇ ಶುರುವಾಗುತ್ತದೆ. ನಾಟಿಗೆ ಕನಿಷ್ಠ ಮೂರು ತಿಂಗಳ ಮೊದಲೇ ಯೋಜನೆ ಮತ್ತು ಸಿದ್ಧತೆಗಳು ಶುರುವಾಗಬೇಕು. ಯಾವುದೇ ಪೂರ್ವ ತಯಾರಿ ಇಲ್ಲದೇ, ಶುಂಠಿ ಬೆಳೆದರೆ ಭೂಮಿಯೂ ಹಾಳಾಗುತ್ತದೆ. ಜೇಬೂ ಬರಿದಾಗುತ್ತದೆ. ಹಾಗಾದರೆ, ಸುಸ್ಥಿರವಾಗಿ ಶುಂಠಿ ಕೃಷಿ ಮಾಡುವುದು ಹೇಗೆ? – ಈ ಪ್ರಶ್ನೆಯೂ ಸೇರಿದಂತೆ, ಶುಂಠಿ ಕೃಷಿಯಲ್ಲಿ ಕೇಳಿ ಬರುವ ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದ್ದೇನೆ.

ಶುಂಠಿ ಬೆಳೆದರೆ ಭೂಮಿ ಹಾಳಾಗುತ್ತಾ?

ಇದು ಬಹುತೇಕರ ಪ್ರಶ್ನೆ. ಯಾವುದೇ ಬೆಳೆ ಬೆಳೆದರೂ ಭೂಮಿಯಿಂದ ಆ ಬೆಳೆ ಇಂತಿಷ್ಟು ಪೋಷಕಾಂಶಗಳನ್ನು ಹೀರಿಕೊಂಡಿರುತ್ತದೆ. ಆದರೆ, ಹೆಚ್ಚು ಇಳುವರಿ ಕೊಡುವ ಬೆಳೆಗಳು, ಹೆಚ್ಚು ಪೋಷಕಾಂಶ ತೆಗೆದುಕೊಂಡಿರುತ್ತವೆ. ರಾಗಿ-ಜೋಳಕ್ಕೆ ಹೋಲಿಸಿದರೆ ಶುಂಠಿ ಅದರ 8 ರಿಂದ 10 ಪಟ್ಟು ಪೋಷಕಾಂಶಗಳನ್ನು ತೆಗೆದುಕೊಳ್ಳುತ್ತದೆ. ಹೀಗೆ ಹೆಚ್ಚು ಇಳುವರಿ ಕೊಡುವುದರಿಂದ ಶುಂಠಿ ಹೆಚ್ಚು ಪೋಷಕಾಂಶ ಬೇಡುವ ಬೆಳೆಯಾಗಿದೆ.

ಯಾವ ಬೆಳೆಗಾದರೂ ಅವಶ್ಯಕತೆಗೆ ತಕ್ಕಷ್ಟು ಪೋಷಕಾಂಶ ನೀಡದಿದ್ದರೆ, ಅಂತಹ ಜಮೀನಿನ ಫಲವತ್ತತೆ ಕಡಿಮೆಯಾಗುತ್ತಾ ಹೋಗುತ್ತದೆ. ಹಸಿರೆಲೆ ಗೊಬ್ಬರ, ಜೀವಾಣು ಗೊಬ್ಬರಗಳನ್ನು ಕೊಡುತ್ತಾ, ಮಣ್ಣು ಪರೀಕ್ಷೆ ಆಧಾರದಲ್ಲಿ ಪೋಷಕಾಂಶಗಳನ್ನು ಸಮರ್ಪಕವಾಗಿ ಪೂರೈಸಿದರೆ ಶುಂಠಿ ಬೆಳೆದ ನಂತರವೂ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳಬಹುದು.

ಭೂಮಿಯ ಫಲವತ್ತತೆ ರಕ್ಷಣೆಯಾಗಬೇಕೆಂದರೆ, ಒಮ್ಮೆ ಶುಂಠಿ ಬೆಳೆದ ನಂತರ, ಆ ಜಮೀನಿನಲ್ಲಿ ಕನಿಷ್ಠ ಮೂರು ವರ್ಷಗಳವರೆಗೂ ಶುಂಠಿ ಹಾಕಬಾರದು. ಆನಂತರವೂ ಆ ತಾಕಿನಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಮೊದಲು ಕಡ್ಡಾಯವಾಗಿ ಹಸಿರೆಲೆ ಗೊಬ್ಬರದ ಬೆಳೆ ಬೆಳೆದು ಭೂಮಿಗೆ ಸೇರಿಸಬೇಕು. ಕಡಿಮೆ ಪೋಷಕಾಂಶ ಬೇಡುವ ಧಾನ್ಯದ ಬೆಳೆಗಳನ್ನು ಬೆಳೆಯಬೇಕು. ಸೂಕ್ತ ಬೆಳೆ ಪರಿರ್ವತನೆ ಮಾಡುವುದು ಪ್ರಮುಖ ವಿಚಾರ. ಯಾವುದೇ ಜಮೀನಿನ ಫಲವತ್ತತೆಯನ್ನು ಸಹಜ ಸ್ಥಿತಿಗೆ ತರುವುದಕ್ಕೆ ಅಥವಾ ಸುಧಾರಿಸುವುದಕ್ಕೆ ಖಂಡಿತ ಸಾಧ್ಯವಿದೆ. ಆದರೆ, ಸರಿಯಾದ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು.

ಜಮೀನಿನ ಆಯ್ಕೆ ಹೇಗಿರಬೇಕು?

ಹಿಂದಿನ ಬೆಳೆ ಶುಂಠಿಯಾಗಿದ್ದಲ್ಲಿ ಮತ್ತೆ ಅಲ್ಲಿ ಖಂಡಿತವಾಗಿ ಶುಂಠಿ ಬೇಡ. ಟೊಮೆಟೊ, ಆಲೂಗಡ್ಡೆ, ಮೆಣಸಿನಕಾಯಿ, ಬದನೆ, ಕ್ಯಾಪ್ಸಿಕಂ, ಶೇಂಗಾ, ಬಾಳೆ, ಅರಿಸಿನ ಬೆಳೆದಿದ್ದರೂ ಅಲ್ಲಿ ಶುಂಠಿ ಬಿತ್ತನೆ ಮಾಡಬೇಡಿ. ನೀರು ನಿಲ್ಲುವಂತಹ ತಗ್ಗಿನ‌ ಪ್ರದೇಶಗಳೂ ಬೇಡ.

ನಾಲ್ಕೈದು ವರ್ಷ ಖಾಲಿ ಇದ್ದ ಜಮೀನಾದರೆ, ಅಲ್ಲಿ ಶುಂಠಿ ಬೆಳೆಯಬಹುದು. ಅಡಿಕೆ, ತೆಂಗಿನ ತೋಟಗಳಲ್ಲಿ ಅಂತರಬೆಳೆಯಾಗಿಯೂ ಬೆಳೆಸಬಹುದು(ಇಳುವರಿಯಲ್ಲಿ ಶೇ 20 ರಿಂದ 30 ರಷ್ಟು ಕಡಿಮೆ ಬರುತ್ತದೆ). ತೊಗರಿ ಅಥವಾ ಹರಳು (ಔಡಲ) ನಡುವೆ ಶುಂಠಿ ಬೆಳೆದರೆ ಅದರ ತೆಳು ನೆರಳು ಶುಂಠಿಗೆ ಹೆಚ್ಚು ಸೂಕ್ತ; ಅಲ್ಲದೇ ಎಕರೆಗೆ ₹15 ರಿಂದ 20 ಸಾವಿರ ಹೆಚ್ಚಿನ ಆದಾಯ ಸಿಗುತ್ತದೆ. ತೊಗರಿ ದ್ವಿದಳ ಗುಂಪಿಗೆ ಸೇರಿರುವುದರಿಂದ ಭೂಫಲವತ್ತತೆ ಸುಧಾರಿಸುವಲ್ಲಿ ಸಹಕಾರಿ.

ಯಾವ ಮಣ್ಣು ಶುಂಠಿಗೆ ಸೂಕ್ತ?

ಕೆಂಪು/ಮರಳು ಮಿಶ್ರಿತ ಗೋಡು ಹಾಗೂ ಜಂಬಿಟ್ಟಿಗೆ ಮಣ್ಣು ಹೆಚ್ಚು ಸೂಕ್ತ. ಸೂಕ್ತ ನಿರ್ವಹಣೆ ಮಾಡಿದಲ್ಲಿ ತುಸು ಕಪ್ಪು ಮಣ್ಣಿನಲ್ಲಿಯೂ ಶುಂಠಿ ಬೆಳೆ ಸಾಧ್ಯ. ಮಣ್ಣಿನ ರಸಸಾರ (ಪಿಎಚ್‌) 6 ರಿಂದ 6.5 ಇರಬೇಕು. ಅಂದರೆ ಸ್ವಲ್ಪಮಟ್ಟಿಗೆ ಹುಳಿ/ಆಮ್ಲೀಯವಾಗಿರಬೇಕು. (ಮಣ್ಣಿನ‌ ಪರೀಕ್ಷೆಯಿಂದ ಇದನ್ನು ಅರಿಯಬಹುದು). ಸಹಜವಾಗಿ ಬಯಲು ಸೀಮೆಯ ಮಣ್ಣು ತುಸು ಕ್ಷಾರವಾಗಿಯೂ ಮಲೆನಾಡಿನ ಮಣ್ಣುಗಳು ಸ್ಬಲ್ಪ ಹುಳಿಯಾಗಿಯೂ ಇರುತ್ತವೆ. ಸುಣ್ಣಕಲ್ಲು ಹೆಚ್ಚಿರುವ ಜಮೀನುಗಳು ಶುಂಠಿ ಬೆಳೆಯಲು ಯೋಗ್ಯವಲ್ಲ. ರಸಸಾರದ ಆಧಾರದ ಮೇಲೆ ಸೂಕ್ತ ಪೋಷಕಾಂಶ ನಿರ್ವಹಣೆ ಅಗತ್ಯ.

ಯಾವಾಗ ನಾಟಿ ಮಾಡುವುದು?

ದಕ್ಷಿಣ ಕರ್ನಾಟಕದಲ್ಲಿ ಫೆಬ್ರುವರಿಯಿಂದ-ಮೇ ತಿಂಗಳವರೆಗೂ; ಉತ್ತರ ಕರ್ನಾಟಕದಲ್ಲಿ ಮೇ ತಿಂಗಳಿಂದ ಜುಲೈವರೆಗೂ ನಾಟಿಗೆ ಸೂಕ್ತ ಸಮಯ. ದಕ್ಷಿಣದಲ್ಲಿ ಬೇಗ ನಾಟಿ ಮಾಡುವುದರಿಂದ ಕಾಂಡಕೊರಕದ ಬಾಧೆ ಕಡಿಮೆಯಾಗುತ್ತದೆ. ಉತ್ತರದ ಜಿಲ್ಲೆಗಳಲ್ಲಿ ಬೇಸಿಗೆಯ ಹೆಚ್ಚಿರುವುದರಿಂದ ಮುಂಗಾರಿನ ನಂತರವೇ ಶುಂಠಿ ನಾಟಿ ಮಾಡುವುದು ವಾಡಿಕೆ. ಈ ಬೆಳೆ ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಬೇಡುತ್ತದೆ (ಆರ್ದ್ರತೆ). ನೀರಾವರಿ ವ್ಯವಸ್ಥೆ ಇದ್ದರೂ ಬಿಸಿಲಿನ ತಾಪ ಕಡಿಮೆಯಾಗುವವರೆಗೆ (ಮೇ ತಿಂಗಳವರೆಗೆ) ಬಿತ್ತನೆ ಬೇಡ.

ಫೆಬ್ರುವರಿಯಲ್ಲಿ ನಾಟಿಯಾದರೆ ಅಕ್ಟೋಬರ್‌ನಲ್ಲಿ ಕಟಾವು, ಏಪ್ರಿಲ್‌ನಲ್ಲಾದರೆ ಡಿಸೆಂಬರ್, ಜೂನ್‌ನಲ್ಲಾದರೆ ಫೆಬ್ರುವರಿಯಲ್ಲಿ ಕಟಾವಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆ ಇರುವಾಗ ಸಹಜವಾಗಿ ದರ ಹೆಚ್ಚು. ಯಾವಾಗ ಎಷ್ಟು ದರ ಇರುತ್ತದೆ ಎಂದು ಅಂದಾಜಿಸುವುದು ಅಷ್ಟು ಸುಲಭವಲ್ಲ; ಅದನ್ನು ಕೃಷಿಕರ ಅನುಭವ ಹಾಗೂ ವಿವೇಚನೆ ನಿರ್ಧರಿಸಲಿ.

ಡ್ರಿಪ್ ಅಥವಾ ಸ್ಪ್ರಿಂಕ್ಲರ್ ನೀರಾವರಿಯೋ?

ಶುಂಠಿ ಬೆಚ್ಚನೆಯ ಆರ್ದ್ರ (ವಾತಾವರಣದಲ್ಲಿ ಹೆಚ್ಚು ತೇವಾಂಶ) ವಾತಾವರಣ ಬೇಡುವ ಬೆಳೆ. ವಾತಾವರಣದ ತೇವಾಂಶ ಹೆಚ್ಚಿರುವ ಕಡೆ ಹನಿ ನೀರಾವರಿ ಮಾಡಬಹುದು. ಬೆಳೆಯುವ ಪ್ರದೇಶದಲ್ಲಿ ಹೆಚ್ಚಾಗಿ ಒಣ ಹವೆ ಇದ್ದಲ್ಲಿ ತುಂತುರು (ಸ್ಪ್ರಿಂಕ್ಲರ್‌) ನೀರಾವರಿ ವ್ಯವಸ್ಥೆ ಒಳ್ಳೆಯದು. ಹನಿ (ಡ್ರಿಪ್‌) ನೀರಾವರಿಯಾದಲ್ಲಿ ಪೋಷಕಾಂಶಗಳನ್ನೂ ನೀರಿನ ಜೊತೆ ನೀಡಬಹುದು; ತುಂತುರು ನೀರಾವರಿಯಾದಲ್ಲಿ ಈ ಆಯ್ಕೆ ಇರುವುದಿಲ್ಲ; ಅಲ್ಲದೇ, ಸ್ಪ್ರಿಂಕ್ಲರ್ ಮಾಡಿಸಿದರೆ ಕಳೆ ನಿರ್ವಹಣೆಗೆ ತುಸು ಹೆಚ್ಚು ಖರ್ಚು ಬರುತ್ತದೆ. ಹನಿ ನೀರಾವರಿಯಲ್ಲಿ ನೀರಿನ ಉಳಿತಾಯ ಹೆಚ್ಚು; ಜೊತೆಗೆ ಪೋಷಕಾಂಶಗಳು ಪೋಲಾಗುವುದೂ ಕಡಿಮೆ. ಆದರೆ, ವಾತಾವರಣದ ತೇವಾಂಶದ ಆಧಾರದ ಮೇಲೆಯೇ ಕೃಷಿಕರು ನೀರಾವರಿ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಬಿತ್ತನೆ ಶುಂಠಿ ಆಯ್ಕೆ‌ ಮುಖ್ಯ

ಉತ್ಕೃಷ್ಟ ಫಸಲಿಗೆ ಉತ್ತಮ ಗುಣಮಟ್ಟದ ಬಿತ್ತನೆ ಶುಂಠಿ ಬೀಜ ಅಗತ್ಯ. ಬಿತ್ತನೆ ಬೀಜ ಸರಿ ಇಲ್ಲದಿದ್ದರೆ, ಹೇಗೇ ನಿರ್ವಹಣೆ ಮಾಡಿದರೂ ಸೋತುಬಿಡುತ್ತೀರಿ. ಹೀಗಾಗಿ ರೈತರೇ ಬೀಜೋತ್ಪಾದನೆ ಮಾಡಿಕೊಳ್ಳುವುದು ಉತ್ತಮ. ಆಗದಿದ್ದ ಪಕ್ಷದಲ್ಲಿ, ಬಿತ್ತನೆ ಖರೀದಿಗೆ ಮೊದಲೇ ಒಂದೆರಡು ಬಾರಿ ರೋಗರಹಿತ ತಾಕುಗಳಿಗೆ ಭೇಟಿ ನೀಡಿ; ಆ ತಾಕನ್ನು ಉತ್ತಮವಾಗಿ ನಿರ್ವಹಿಸಿದ್ದಾರೆಯೇ ಹಾಗೂ ಅಲ್ಲಿನ ಬೆಳೆಗೆ ಕೊಳೆರೋಗದ ಬಾಧೆ ಇಲ್ಲವೇ ಖಾತ್ರಿಪಡಿಸಿಕೊಳ್ಳಿ. ಶುಂಠಿ ಸಂಪೂರ್ಣ ಬಲಿಯುವ ಮೊದಲೇ ಕಟಾವು ಮಾಡಿದ್ದಲ್ಲಿ, ಅದು ನಾಟಿಗೆ ಖಂಡಿತ ಯೋಗ್ಯವಲ್ಲ.

ಕಟಾವು ಮಾಡಿದ ತಕ್ಷಣವೇ ಆ ಶುಂಠಿಯನ್ನು ನಾಟಿಗೆ ಬಳಸಬೇಡಿ. 20-30 ದಿನ ತಂಪಾದ ಸ್ಥಳದಲ್ಲಿಡಿ. ಮೊಳಕೆ ಕಾಣಿಸಲು ಶುರುವಾದಾಗ ಮಾತ್ರ ಅದು ನಾಟಿಗೆ ಸಿದ್ಧ ಎಂದರ್ಥ. ಬೆಲ್ಲದ ರೋಗವಿರುವ (ಫ್ಯುಸೇರಿಯಂ ಶಿಲೀಂಧ್ರದಿಂದ ಬರುತ್ತದೆ) ಶುಂಠಿ ಬೇಡವೇ ಬೇಡ.

ಈ ರೋಗ ಬಾಧಿತ ಗಡ್ಡೆಗಳು ಮೇಲ್ನೋಟಕ್ಕೆ ಚೆನ್ನಾಗಿಯೇ ಕಾಣುತ್ತವೆ. ಗಡ್ಡೆ ಮುರಿದಾಗ ತಿಳಿಹಳದಿ‌ ಬಣ್ಣದ್ದಾಗಿರುತ್ತದೆ. ಇಂಥಹ ಗಡ್ಡೆ ನಾಟಿಗೆ ಬಳಸಿದರೆ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಮರಿಕಂದುಗಳ ಸಂಖ್ಯೆ ಅತಿ ಕಡಿಮೆಯಾಗುತ್ತದೆ. ರೋಗದ ತೀವ್ರತೆ ಹೆಚ್ಚುತ್ತದೆ. ಗುರುತು-ಪರಿಚಯ ಇರುವ ಅಥವಾ ನಂಬಿಕೆಗೆ ಅರ್ಹರಾಗಿರುವ ರೈತರ ಬಳಿಯೇ ಬಿತ್ತನೆ ಶುಂಠಿ ಖರೀದಿಸಿ.

ಹಸಿರೆಲೆ ಗೊಬ್ಬರದ ಬೆಳೆ ಕಡ್ಡಾಯ

ಶುಂಠಿ ನಾಟಿ ಮಾಡಲು ಉದ್ದೇಶಿಸಿರುವ ಜಮೀನಿನಲ್ಲಿ 90 ದಿನಗಳು ಮುಂಚಿತವಾಗಿ ಸೆಣಬು ಅಥವಾ ಡಯಂಚ(ಚೆಂಬೆ)ದಂತಹ ಹಸಿರೆಲೆ ಗೊಬ್ಬರದ ಬೆಳೆಯನ್ನು ತಪ್ಪದೇ ಬೆಳೆಯಿರಿ. ಇವೆರಡೂ ಭೂಮಿಗೆ ಹೆಚ್ಚು ಸಾರಜನಕ ಸ್ಥಿರೀಕರಿಸುತ್ತವೆ. ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಬೆಳೆದರೆ ಸಾಕು. ಅಲಸಂದೆ, ಹುರುಳಿ, ವೆಲ್ವೆಟ್ ಬೀನ್ಸ್‌ ಬೆಳೆಯಬಹುದು.

ಯಾವುದೇ ಹಸಿರೆಲೆ ಗೊಬ್ಬರದ ಬೆಳೆ ಹೂ ಬಿಡುವ ಸಂದರ್ಭದಲ್ಲಿ (ಬಿತ್ತನೆಯಾದ 45 ರಿಂದ 60 ದಿನಗಳಲ್ಲಿ) ಅದನ್ನು ಮಣ್ಣಿಗೆ ಸೇರಿಸಬೇಕು, ಆಗ ಮಾತ್ರ ಹೆಚ್ಚು ಪ್ರಯೋಜನ. ಸೆಣಬಿಗೆ ಹೋಲಿಸಿದರೆ ಡಯಂಚದಲ್ಲಿ ಸಾರಜನಕದ ಅಂಶ ತುಸು ಹೆಚ್ಚು, ಸೆಣಬಿನಲ್ಲಿ ಪೊಟ್ಯಾಶ್ ತುಸು ಹೆಚ್ಚು. ಹಸಿರೆಲೆ ಗೊಬ್ಬರದ ಬೆಳೆ ಬೆಳೆಯುವುದರಿಂದ ಮಣ್ಣಿನ ಭೌತಿಕ ಗುಣಮಟ್ಟದಲ್ಲಿ ಸುಧಾರಣೆ; ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ; ಸೆಣಬು ಬೆಳೆದರೆ ಬೇರುಗಂಟು (ನೆಮಟೋಡ್ಸ್) ಬಾಧೆ ಕಡಿಮೆ; ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿಯಲ್ಲಿ ಹೆಚ್ಚಳ; ಒಟ್ಟಾರೆ ಮಣ್ಣಿನ ಫಲವತ್ತತೆ ಹೆಚ್ಚಳ.

‘ಸಾವಯವ ಹೊದಿಕೆ’ ಹೊಂದಿಸಿಟ್ಟುಕೊಳ್ಳಿ

ಶುಂಠಿ ನಾಟಿಯಾದ ತಕ್ಷಣ ಹೊದಿಕೆ ಅಥವಾ ಮುಚ್ಚಿಗೆ ಹಾಕುವುದರಿಂದ ಅನೇಕ ಅನುಕೂಲಗಳಿವೆ. ನಾಟಿಯಾದ ಶುಂಠಿ ಮೊಳಕೆ ಬಂದು ಸರಿಯಾಗಿ ಬೆಳೆಯಲು ತಿಂಗಳೇ ಬೇಕು. ಹೊದಿಕೆ ಇಲ್ಲದಿದ್ದರೆ ಕಳೆಗಳೇ ಮೇಲುಗೈ ಸಾಧಿಸುತ್ತವೆ. ಅಲ್ಲದೆ, ಮೊಳೆಯುವ ಶುಂಠಿಗೆ ಮಣ್ಣಿನಲ್ಲಿ ತುಸು ಹೆಚ್ಚಿನ ಕಾವು ಇರಬೇಕು. ಆ ಎಲ್ಲ ಕೆಲಸವನ್ನು ಹೊದಿಕೆ ಮಾಡುತ್ತದೆ. ಏನನ್ನು ಹೊದಿಸುವುದು ಅಂತೀರಾ? ನಿಮ್ಮಲ್ಲಿ ಭತ್ತ ಅಥವಾ ರಾಗಿ ಹುಲ್ಲು ಇದ್ದರೆ ಸಾಕು. ಹಸಿ ಬೇವು, ಹೊಂಗೆ ಅಥವಾ ಗೊಬ್ಬರದ ಗಿಡ (ಗ್ಲಿರಿಸಿಡಿಯಾ) ಸೊಪ್ಪುಗಳೂ ಆಗಬಹುದು. ಈ ಹೊದಿಕೆಯಿಂದಾಗಿ, ತೇವಾಂಶ ಸಂರಕ್ಷಣೆಯೂ ಸಾಧ್ಯ. ಅಲ್ಲದೇ, ಈ ಸಾವಯವ ವಸ್ತುಗಳು ಕ್ರಮೇಣ ಕರಗಿ ಗೊಬ್ಬರವಾಗಿ ಬೆಳೆಯುವ ಶುಂಠಿಗೆ ಸಿಕ್ಕೇ ಸಿಗುತ್ತವೆ.

ಬಿತ್ತನೆ ಶುಂಠಿ ಶೇಖರಣೆ ಹೇಗೆ?

ಕಟಾವಾದ ಕೂಡಲೇ ಶುಂಠಿ ನಾಟಿಗೆ ಯೋಗ್ಯವಾಗಿರುವುದಿಲ್ಲ. ಉತ್ತಮ ಬೆಳೆ ತೆಗೆಯುವಲ್ಲಿ ಬಿತ್ತನೆ ಶುಂಠಿಯನ್ನು ಸಮರ್ಪಕ ವಾಗಿ ಶೇಖರಿಸುವುದು ಅತಿ ಮುಖ್ಯ. ಶೇಖರಣೆಗೆ ಮುನ್ನ ಬಿತ್ತನೆ ಶುಂಠಿಯನ್ನು ಕ್ವಿನಾಲ್ ಫಾಸ್ (ಲೀಟರ್ ನೀರಿಗೆ 2 ಮಿ. ಲೀ) ಹಾಗೂ ಮ್ಯಾಂಕೋಝೆಬ್ (ಲೀಟರ್ ನೀರಿಗೆ 3 ಗ್ರಾಂ) ದ್ರಾವಣದಲ್ಲಿ 30 ನಿಮಿಷ ಉಪಚರಿಸಿ ನೆರಳಿನಲ್ಲಿ ಒಣಗಿಸಿಬೇಕು. ಸಾವಯವ ಪದ್ಧತಿಯಲ್ಲಾದರೆ ರಾಸಾಯನಿಕಗಳಿಗೆ ಪರ್ಯಾಯವಾಗಿ ಶೇ 1 ರ ಬೋರ್ಡೊ ದ್ರಾವಣ ಬಳಸಬಹುದು.

ಬೀಜೋಪಚಾರದ ನಂತರ ಅವುಗಳನ್ನು ನೆರಳಿರುವ ಕಡೆ ಅವಶ್ಯವಿರುವಷ್ಟು ಗಾತ್ರದ ಗುಂಡಿ ತೆಗೆದು ಅದರಲ್ಲಿ ಪದರಗಳ ರೀತಿ ಇಡಬೇಕು. ಒಂದು ಪದರ ಶುಂಠಿಯ ಮೇಲೆ 2 ಸೆಂ. ಮೀ ದಪ್ಪನಾಗಿ ಮರಳು ಅಥವಾ ಮರದ ಹೊಟ್ಟನ್ನು ಹಾಕಬೇಕು. ಪುನಃ ಅದರ ಮೇಲೆ ಶುಂಠಿ, ಮತ್ತೆ ಮರಳು. ಪ್ರತಿ ಪದರದ ನಡುವೆ ಬೇವಿನ ಎಲೆಗಳನ್ನು ಹರಡುವು
ದರಿಂದ ಗಡ್ಡೆಗಳಿಗೆ ಶಲ್ಕ ಕೀಟ ಬಾಧಿಸದಂತೆ ತಡೆಯಬಹುದು. ಶೇಖರಣಾ ಗುಂಡಿ ತುಂಬಿದ ನಂತರ ಅದು ಗಾಳಿಯಾಡುವ ರೀತಿ ಮುಚ್ಚಬೇಕು. ಹೀಗೆ ಶೇಖರಿಸಿದ ಬಿತ್ತನೆ ಗಡ್ಡೆಗಳನ್ನು ಎರಡು ವಾರಗಳಿಗೊಮ್ಮೆ ಪರೀಕ್ಷಿಸಿ, ಸುಕ್ಕಾಗಿರುವ ಅಥವಾ ರೋಗಕ್ಕೆ ತುತ್ತಾಗಿರುವ ಗಡ್ಡೆಗಳಿದ್ದಲ್ಲಿ ತೆಗೆದುಹಾಕಬೇಕು.

ಕೊನೆಯದಾಗಿ.....

ಶುಂಠಿ ಬೆಳೆದು ಕಾಸು ಮಾಡುವ ಕನಸು ನಿಮಗಿರಬಹುದು, ಇರಲಿ. ಜೊತೆ-ಜೊತೆಗೆ ಶುಂಠಿ ಬೆಳೆ ನಾಟಿ ಮಾಡುವ ಜಮೀನಿನ ಫಲವತ್ತತೆ ಕಾಯ್ದುಕೊಳ್ಳುವ ಗುರುತರ ಜವಾಬ್ದಾರಿಯೂ ನಿಮ್ಮ ಮೇಲಿದೆ. ಇದಕ್ಕಾಗಿ ವೈಜ್ಞಾನಿಕ ವಿಧಾನಗಳು ಲಭ್ಯವಿವೆ. ಈ ದಿಸೆಯಲ್ಲಿ ಅನುಭವಿ ಕೃಷಿಕರ, ವಿಜ್ಞಾನಿಗಳ ಹಾಗೂ ವಿಸ್ತರಣಾಧಿಕಾರಿಗಳ ಸಹಾಯ ಸಲಹೆ ಉಪಯುಕ್ತ.

ಪ್ರತೀ ವರ್ಷ ಶುಂಠಿ ಬೆಳೆಯಬೇಕೆಂಬ ಹಠ ಬೇಡ. ಒಳ್ಳೆ ದರ ಸಿಗದಿದ್ದರೆ, ಬೆಳೆ ಕೊಳೆಗೆ ಆಹುತಿಯಾದರೆ, ಹಾಕಿದ ಬಂಡವಾಳವೂ ಸಿಗದಿರಬಹುದು.

ಇನ್ನೊಂದು ಮಾತು; ಇದೇ ಮೊದಲ ಸಲ ಶುಂಠಿ ಬೆಳೆಯ ಬೇಕೆನ್ನುವವರು ಹೆಚ್ಚಿನ ಪ್ರದೇಶದಲ್ಲಿ ನಾಟಿ ಮಾಡಬೇಡಿ. ಬೆಳೆಯ ಆಗು-ಹೋಗುಗಳನ್ನು ನೋಡಿಕೊಂಡು, ಅನುಭವ ಪಡೆದು ಮುಂದುವರೆಯುವುದು ಉತ್ತಮ.

ಸಾವಯವ ಗೊಬ್ಬರದ ಮೌಲ್ಯವರ್ಧನೆ

ಒಂದು ಎಕರೆ ಶುಂಠಿ ಬೆಳೆಯಲು 10 ರಿಂದ 12 ಟನ್ (5 ರಿಂದ 6 ಟ್ರ‍್ಯಾಕ್ಟರ್ ಲೋಡ್) ಗುಣಮಟ್ಟದ ಕೊಟ್ಟಿಗೆ ಗೊಬ್ಬರ ಬೇಕು. ಅದು ಚೆನ್ನಾಗಿ ಕಳಿತಿರಬೇಕು (ಮೈಸೂರು ಕಡೆ ಹಣ್ಣು/ಹುಡಿ ಗೊಬ್ಬರವೆನ್ನುವರು). ಇಲ್ಲದಿದ್ದರೆ, ತುಸು ಹಸಿಗೊಬ್ಬರ/ತಿಪ್ಪೆ ಗೊಬ್ಬರವನ್ನೇ ಹಾಕಿದರೆ, ಅದು ಜಮೀನನಲ್ಲೇ ಕೊಳೆಯಲು ಶುರುವಾಗಿ ಹಾಕಿದ ಪೋಷಕಾಂಶ ನೀರಿಗಾಗಿ ಶುಂಠಿಯೊಂದಿಗೆ ಪೈಪೋಟಿ ಮಾಡಿ ಬೆಳೆ ಕುಂಠಿತವಾಗುವಂತೆ ಮಾಡುತ್ತದೆ. ಕೊಟ್ಟಿಗೆ ಗೊಬ್ಬರದೊಟ್ಟಿಗೆ 2 ರಿಂದ 3 ಟನ್ ಮೂರ್ನಾಲ್ಕು ತಿಂಗಳು ಮಾಗಿಸಿದ ಕೋಳಿ ಗೊಬ್ಬರ ಕೂಡ ಬಳಸಬಹುದು.

ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಾವಯವ ಗೊಬ್ಬರ ಬಳಸಿ. ಬಳಸುವ ಮುನ್ನ ಒಂದೆರಡು ತಿಂಗಳು ಮೊದಲೇ ಅವುಗಳ ಮೌಲ್ಯವರ್ಧಿಸಬೇಕು. ಅಂದರೆ 10 ಟನ್ ಕೊಟ್ಟಿಗೆ ಗೊಬ್ಬರಕ್ಕೆ 2 ರಿಂದ 3 ಕೆ.ಜಿ ಅಜಟೋಬ್ಯಾಕ್ಟರ್, ಅಷ್ಟೇ ಪ್ರಮಾಣದ ರಂಜಕ ಕರಗಿಸುವ ದುಂಡಾಣು ಹಾಗೂ ವ್ಯಾಂ(VAM) ಜೀವಾಣುಗೊಬ್ಬರಗಳನ್ನು ಮಿಶ್ರ ಮಾಡಬೇಕು. ಶುಂಠಿಯನ್ನು ಕೊಳೆರೋಗ, ಗೊಣ್ಣೆಹುಳು ಹಾಗೂ ಬೇರುಗಂಟು ಹುಳು ಹೆಚ್ಚಾಗಿ ಬಾಧಿಸುತ್ತವೆ. ಮುಂಜಾಗ್ರತೆಯಾಗಿ ಮೌಲ್ಯವರ್ಧನೆ ಮಾಡುವಾಗ ಜೈವಿಕ ರೋಗ-ಜಂತು ನಿವಾರಕಗಳಾದ ಟ್ರೈಕೋಡರ್ಮ, ಸುಡೋಮೊನಾಸ್, ಮೆಟರೈಝಿಯಂ ಹಾಗೂ ಪೆಸಿಲಿಯೋಮೈಸಿಸ್‌ಗಳನ್ನು 10 ಟನ್ ಕೊಟ್ಟಿಗೆ ಗೊಬ್ಬರಕ್ಕೆ 2-3 ಕಿಲೋ ಪ್ರಮಾಣದಲ್ಲಿ ಬಳಸಬೇಕು. ಜೊತೆಗೆ ಎಕರೆಗೆ 1 ಟನ್ ಬೇವಿನ ಹಿಂಡಿಯೂ ಇರಲಿ.

ಜೀವಾಣು ಗೊಬ್ಬರ ಹಾಗೂ ಜೈವಿಕ ಪೀಡೆನಾಶಕಗಳನ್ನು ಎರೆಗೊಬ್ಬರ ಬಳಸಿಯೂ ಮೌಲ್ಯವರ್ಧನೆ ಮಾಡಿಕೊಳ್ಳಬಹುದು. ಭತ್ತದ ಹೊಟ್ಟಿನ ಬೂದಿಯನ್ನು (ಪುರಿ ಭಟ್ಟಿ ಇಲ್ಲವೇ ಭತ್ತದ ಗಿರಣಿಗಳಲ್ಲಿ ಸಿಗುವುದು) ಎಕರೆಗೆ 800 ಕೆಜಿಯಿಂದ 1000 ಕೆಜಿವರೆಗೂ ಹಾಕುವುದರಿಂದ ಬೆಳೆಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಫೆಬ್ರುವರಿ-ಮಾರ್ಚ್‌ನಲ್ಲಿ ಶುಂಠಿ ನಾಟಿ ಮಾಡುವವರು ಇವೆಲ್ಲವುಗಳನ್ನೂ ಸಂಗ್ರಹಿಸಿ ಮೌಲ್ಯವರ್ಧಿಸಲು ಈಗ ಸಕಾಲ. ನಾಟಿಯ ಎರಡು ತಿಂಗಳು ಮೊದಲು ಕುರಿ ಮಂದೆ ನಿಲ್ಲಿಸಬಹುದು. ಆದರೆ ಮಂದೆ ನಿಲ್ಲಿಸುವುದಕ್ಕೂ ಶುಂಠಿ ನಾಟಿಗೂ ಕನಿಷ್ಟ ಎರಡು ತಿಂಗಳ ಅಂತರವಿರಬೇಕು.

ಶುಂಠಿ ಬೆಳೆಯುವ ಕುರಿತು ಇನ್ನೂ ಸಂದೇಹಗಳಿದ್ದರೆ ಈ ಸಂಖ್ಯೆಗೆ ಕರೆ ಮಾಡಬಹುದು 94805 57634.

(ಲೇಖಕರು ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT