ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು | ಹೊಸ ಅರಿಸಿನ ತಳಿ ಅಭಿವೃದ್ಧಿ - ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆ

Last Updated 21 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಹುಣಸೂರು(ಮೈಸೂರು ಜಿಲ್ಲೆ): ವರ್ಜೀನಿಯ ತಂಬಾಕು ಬೆಳೆಗೆ ಹೆಸರುವಾಸಿಯಾದ ಹುಣಸೂರು ಉಪ ವಿಭಾಗದಲ್ಲಿ ಅರಿಸಿನ ಬೆಳೆಯು ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆಯಾಗುವ ಸೂಚನೆಗಳು ಕಂಡು ಬಂದಿವೆ.

ರೋಗ ನಿರೋಧಕ ಔಷಧಯುಕ್ತ ಕರ್ಕ್ಯುಮಿನ್ ಅಂಶ ಶೇ 7ರಷ್ಟಿರುವ ಮೇಘಾಲಯದ ಲಕಾಡಾಂಗ್ ಅರಿಸಿನ ತಳಿಯನ್ನು ಕೇಂದ್ರ ತಂಬಾಕು ಸಂಶೋಧನಾಲಯದಲ್ಲಿ ‘ಪ್ರತಿಭಾ ಮತ್ತು ಪ್ರಗತಿ’ ಹೆಸರಿನಲ್ಲಿ ಅಭಿವೃದ್ಧಿಪಡಿಸಿದ್ದು ಉತ್ತಮ ಫಲಿತಾಂಶ ಸಿಕ್ಕಿದೆ. ರೈತರಿಗೆ ಬಿತ್ತನೆ ಬೀಜ ವಿತರಿಸುವ ಸಿದ್ಧತೆಯೂ ನಡೆದಿದೆ. ಮೇಘಾಲಯದಲ್ಲಿ ಅತಿ ಹೆಚ್ಚು ಅರಿಸಿನ ಬೆಳೆಯುತ್ತಿದ್ದು, ನಂತರದಲ್ಲಿ ತಮಿಳುನಾಡು, ಕರ್ನಾಟಕವಿದೆ.

ಸದ್ಯ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಕೆಲವೆಡೆ ಬೆಳೆಯಲಾಗುತ್ತಿರುವ ಪಾರಂಪರಿಕ ಸೇಲಂ ತಳಿ ಅರಿಸಿನದಲ್ಲಿ ಕರ್ಕ್ಯುಮಿನ್ ಅಂಶ ಕಡಿಮೆ ಇದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲ ಎನ್ನಲಾಗಿದೆ.

‘ಹೊಸ ತಳಿಗಳಲ್ಲಿ ಕರ್ಕ್ಯುಮಿನ್ ಅಂಶ ಹೆಚ್ಚಿರುವುದರಿಂದ ಕ್ಯಾನ್ಸರ್ ರೋಗ ನಿವಾರಕ ಔಷಧ ಉತ್ಪಾದಿಸುವ ಕಂಪನಿಗಳಿಂದ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ’ ಎಂದು ಸಂಶೋಧನಾ ಕೇಂದ್ರದ ಮುಖ್ಯಸ್ಥ ವಿಜ್ಞಾನಿ ಡಾ.ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘10ರಿಂದ 11 ತಿಂಗಳ ಅವಧಿಯ, ಹೆಚ್ಚು ನೀರು ಬೇಡುವ ಸೇಲಂ ಅರಿಸಿನದ ಇಳುವರಿ ಪ್ರತಿ ಎಕರೆಗೆ 30ರಿಂದ 40 ಕ್ವಿಂಟಲ್ ದೊರಕುತ್ತದೆ. ಹೊಸ ತಳಿಗಳ ಅವಧಿ 6–7 ತಿಂಗಳಷ್ಟೇ. ಹನಿ ನೀರಾವರಿಯಲ್ಲೂ ಬೆಳೆಯಬಹುದು. ಇಳುವರಿ 80ರಿಂದ 90 ಕ್ವಿಂಟಲ್ ಬರಲಿದೆ. ಉತ್ಪಾದನಾವೆಚ್ಚ ಎಕರೆಗೆ ₹ 40ಸಾವಿರದಿಂದ ₹ 50 ಸಾವಿರ ಆಗಲಿದೆ’ ಎಂದು ತಿಳಿಸಿದರು.

ಕೇಂದ್ರದಲ್ಲಿ ಕೆಂಪು ಮೆಣಸಿನಕಾಯಿ (ಬ್ಯಾಡಗಿ) ಹೊಸ ತಳಿ ಅಭಿವೃದ್ಧಿಗೊಳಿಸುವ ಪ್ರಯತ್ನವೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT