ಗುರುವಾರ , ಏಪ್ರಿಲ್ 2, 2020
19 °C

ಕಿಸೆಗೆ ಹಗುರ ಸಸ್ಯಜನ್ಯಕೀಟನಾಶಕ

ಚೈತ್ರ ಮಲವಗೊಪ್ಪ Updated:

ಅಕ್ಷರ ಗಾತ್ರ : | |

Prajavani

ಇದು ಬಹುತೇಕ ಬೆಳೆಗಳ ಬೆಳವಣಿಗೆ ಸಮಯ. ಕೀಟಗಳ ಹಾವಳಿ ಸಾಮಾನ್ಯ. ಈ ವರ್ಷ ಮಳೆ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

ರಾಸಾಯನಿಕಗಳನ್ನು ಬಳಸದೇ ಕೀಟಗಳನ್ನು ಸುಲಭವಾಗಿ ನಿಯಂತ್ರಿಸಲು ಹತ್ತಾರು ವಿಧಾನಗಳಿವೆ. ಕೀಟಗಳ ಸಂಖ್ಯೆ ಕಡಿಮೆ ಇದ್ದ ಸಂದರ್ಭದಲ್ಲಿ ಕೈಯಿಂದ ಆರಿಸುವುದು, ಬೆಳೆಗಳ ಮಧ್ಯಭಾಗ ಅಥವಾ ಅಲ್ಲಲ್ಲಿ ಕವಲು ಒಡೆದ ಮರದ ಟೊಂಗೆಗಳನ್ನು ನಿಲ್ಲಿಸುವುದು. ಇವೆಲ್ಲ ತುಂಬಾ ಪ್ರಯೋಜನಕಾರಿಯಾದ ಕ್ರಮಗಳು. ಟೊಂಗೆ ನಿಲ್ಲಿಸುವುದರಿಂದ ಪಕ್ಷಿಗಳು ಈ ಟೊಂಗೆಗಳ ಮೇಲೆ ಕುಳಿತು ಕೀಟಗಳನ್ನು ಹೆಕ್ಕಿ ತಿನ್ನುತ್ತವೆ. ಅಲ್ಲದೆ ಭತ್ತದ ಗದ್ದೆಯಲ್ಲಿ ಎರಡು ಕಡೆ ಹಗ್ಗ ಹಿಡಿದು ಬೆಳೆಗಳ ಮೇಲೆ ಎಳೆದರೆ ಹುಳುಗಳು ನೀರಿನಲ್ಲಿ ಬಿದ್ದು ಸಾಯುತ್ತವೆ.

ಇದರ ಜೊತೆಗೆ ಕಹಿ ಗುಣವುಳ್ಳ, ಕತ್ತರಿಸಿದಾಗ ಹಾಲು ಬರುವ, ಘಾಟು ವಾಸನೆಯುಳ್ಳ ಸಸ್ಯಗಳ ಎಲೆ ಹಾಗೂ ಬೀಜಗಳನ್ನು ಬಳಸಿ ಸಸ್ಯಮೂಲ ಕೀಟನಾಶಕವನ್ನು ತಯಾರಿಸಿಕೊಳ್ಳಬಹುದು.

ತಮಿಳುನಾಡಿನ ರೈತರಾದ ಚೆಲ್ಲಮುತ್ತುರವರು ಇಂತಹ ಗುಣವುಳ್ಳ ಆರು ಸಸ್ಯಮೂಲಗಳನ್ನು ಬಳಸಿ ಒಂದು ಜೈವಿಕ ಕೀಟನಾಶಕ ಬೆಳಕಿಗೆ ತಂದಿದ್ದಾರೆ. ಅದರ ಹೆಸರು ಪೂಚಿಮರಂದು (ಕೀಟಗಳ ಔಷಧಿ).

ಭದ್ರಾವತಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಗೊಂದಿ ಆಧುನೀಕರಣ ಯೋಜನೆಯಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲಾಗುತ್ತಿದೆ. ಅದರ ಭಾಗವಾಗಿ ಪೂಚಿಮರಂದು, ಬಯೋಬಾಂಬ್, ಮೀನಿನ ಟಾನಿಕ್, ಬಿಲ್ವ ಪತ್ರೆ ಮತ್ತು ತುಳಸಿ ಕಷಾಯ ಇತ್ಯಾದಿ ಹಲವು ಜೈವಿಕ ವಿಧಾನಗಳನ್ನು ರೈತರಿಗೆ ತಿಳಿಸಲಾಗುತ್ತಿದೆ. ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯ ಮಾರ್ಗದರ್ಶನದಲ್ಲಿ ರೈತರು ಇವುಗಳನ್ನು ಅಳವಡಿಸಿಕೊಳ್ಳುತಿದ್ದಾರೆ. ಅವುಗಳಲ್ಲಿ ಪೂಚಿಮರಂದು ಹೆಚ್ಚು ಪರಿಣಾಮಕಾರಿಯಾಗಿದ್ದು ಹಲವು ರೈತರು ಬಳಸುತ್ತಿದ್ದಾರೆ.

ತಯಾರಿಕೆ ಹೇಗೆ?

ಎಲ್ಲಾ ಸೊಪ್ಪುಗಳು, ಬೇವಿನ ಬೀಜ ಮತ್ತು ಶುಂಠಿಯನ್ನು ರುಬ್ಬು ಗುಂಡು, ಮಿಕ್ಸಿ ಅಥವಾ ಗ್ರೈಂಡರ್‌ನಲ್ಲಿ ಪ್ರತ್ಯೇಕವಾಗಿ ರುಬ್ಬಿಕೊಳ್ಳಬೇಕು ( ಅಗತ್ಯ ಪದಾರ್ಥಗಳು ಮತ್ತು ಪ್ರಮಾಣಕ್ಕೆ ಬಾಕ್ಸ್‌ ನೋಡಿ). ಚಟ್ನಿಯಂತೆ ನುಣ್ಣಗೆ ಇರಬೇಕು. ರುಬ್ಬುವ ಮುನ್ನ ಸೊಪ್ಪುಗಳನ್ನು ಸಣ್ಣಗೆ ಕತ್ತರಿಸಿಕೊಳ್ಳುವುದು ಒಳ್ಳೆಯದು. ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಳ್ಳಬೇಕು. ಲೋಳೆಸರಕ್ಕೆ ನೀರು ಹಾಕುವ ಅವಶ್ಯಕತೆ ಇಲ್ಲ. ರುಬ್ಬುವಾಗ ಅದರಲ್ಲಿಯೇ ನೀರಿನ ಅಂಶ ಬಿಟ್ಟುಕೊಳ್ಳುತ್ತದೆ.

ಒಂದು ಬಕೆಟ್‍ನಲ್ಲಿ ಪ್ರತ್ಯೇಕವಾಗಿ ಎಲ್ಲವನ್ನು ಮಿಶ್ರಮಾಡಿ 5ರಿಂದ 7 ದಿನ ಬಿಡಬೇಕು. ನಂತರ ಆ ಕಷಾಯವನ್ನು ಸೋಸಿಕೊಂಡು 100 ಲೀಟರ್ ನೀರಿಗೆ 5 ಲೀಟರ್ ಮಿಶ್ರಮಾಡಿ ಸಿಂಪಡಣೆ ಮಾಡಬಹುದು. ಭತ್ತದ ಗದ್ದೆಗಳಲ್ಲಿ ಸಸಿಗಳು ಹೂವಾಗುವುದಕ್ಕೂ ಮುನ್ನ ಪ್ರತಿ 15 ದಿನಗಳಿಗೊಮ್ಮೆ ಸಿಂಪಡಿಸಬಹುದು. ತರಕಾರಿ ಬೆಳೆಗಳಿಗೆ ಹೂ ಬಿಡುವುದಕ್ಕೂ ಮುನ್ನ ಈ ದ್ರಾವಣವನ್ನು ಸಿಂಪಡಿಸುವುದು ಸೂಕ್ತ.
ಭದ್ರಾವತಿ ತಾಲ್ಲೂಕು ದೊಡ್ಡಗೊಪ್ಪೇನಹಳ್ಳಿ ನೀರು ಬಳಕೆದಾರರ ಸಹಕಾರ ಸಂಘದ ನಂಜುಂಡಪ್ಪನವರು ಈ ದ್ರಾವಣವನ್ನು ತಯಾರಿಸಿ ಭತ್ತದ ಗದ್ದೆಗೆ ಬಳಸಿದ್ದಾರೆ. ನಾಟಿ ಮಾಡಿದ ಒಂದು ತಿಂಗಳ ನಂತರ ಸಿಂಪಡಿಸಿದ್ದು ಯಾವುದೇ ಕೀಟ ಬಾಧೆ ಇರುವುದಿಲ್ಲ. ಅಲ್ಲದೆ ಸಸಿಗಳ ಬೆಳವಣಿಗೆಯೂ ಚೆನ್ನಾಗಿದೆ ಎನ್ನುತ್ತಾರೆ. ಇವರಿಂದ ಇದೇ ಗ್ರಾಮದ ದಿನೇಶ್, ವಿರೂಪಾಕ್ಷಪ್ಪ ಹಾಗೂ ಸುತ್ತಮುತ್ತಲ ಗ್ರಾಮಗಳ ಹತ್ತಕ್ಕೂ ಹೆಚ್ಚು ರೈತರು ಕಷಾಯ ಪಡೆದು ಬಳಸಿದ್ದಾರೆ. ಕಾಗೆಕೊಡಮಗ್ಗೆ ಗ್ರಾಮದ ರವಿಕುಮಾರ್ ಅವರು ಬೆಂಡೆ ಮತ್ತು ಬೀನ್ಸ್ ತರಕಾರಿಗಳಿಗೆ ಹೂ ಬಿಡುವುದಕ್ಕೂ ಮುನ್ನ ಬಳಸಿದ್ದಾರೆ. ಒಳ್ಳೆಯ ಫಲಿತಾಂಶ ಬಂದಿದೆ. ‘ಯಾವುದೇ ಖರ್ಚಿಲ್ಲದ ಉಪಾಯ ಇದು, ಇನ್ನು ಮುಂದೆ ಎಲ್ಲಾ ಬೆಳೆಗಳಿಗೂ ಇದನ್ನೇ ಬಳಸುತ್ತೇನೆ’ ಎನ್ನುತ್ತಾರೆ ದಿನೇಶ್.

ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ದೇವಕುಮಾರ್ ಅವರು ‘ಈ ಸಸ್ಯಮೂಲ ದ್ರಾವಣವು ತುಂಬಾ ಪರಿಣಾಮಕಾರಿ’ ಎನ್ನುತ್ತಾರೆ. ನಿಯಮಿತವಾಗಿ ಇದನ್ನು ಬಳಸಿದ ಅನುಭವ ಇವರದು. ‘ಮುಖ್ಯವಾಗಿ ತರಕಾರಿಗಳಲ್ಲಿ ಹೆಚ್ಚು ಕಾಟ ಕೊಡುವ ರಸಹೀರುವ ಕೀಟಗಳನ್ನು ಈ ದ್ರಾವಣ ಸಿಂಪರಣೆಯಿಂದ ನಿಯಂತ್ರಿಸಬಹುದು, ಇದನ್ನು ಮುನ್ನೆಚ್ಚರಿಕೆಯಾಗಿಯೂ ಬಳಸಬಹುದು, ಕೀಟಗಳು ಬಂದಾಗಲೂ ಬಳಸಬಹುದು. ಈ ದ್ರಾವಣ ತಯಾರಿಕೆಯಲ್ಲಿ ಬಳಸುವ ಎಲೆ ಮತ್ತು ಬೀಜಗಳು ಹೆಚ್ಚು ಕೀಟ ವಿಕರ್ಷಕ ಗುಣ ಹೊಂದಿರುವುದು ಇದಕ್ಕೆ ಕಾರಣ’ ಎಂಬುದು ಇವರ ಅನಿಸಿಕೆ.

‘ರಾಸಾಯನಿಕ ಬಳಕೆಯಿಂದ ಬೆಳೆಗಳಿಗೆ ಹಾನಿ ಮಾಡುವ ಕೀಟಗಳ ಜೊತೆಗೆ ರೈತರಿಗೆ ಉಪಯೋಗವಾಗುವ ಕೀಟಗಳೂ ಸಾಯುತ್ತವೆ. ಇದರಿಂದ ಪರಿಸರದ ಏರುಪೇರಿಗೆ ಈಗಾಗಲೇ ಕಾರಣವಾಗಿದೆ, ಹಾಗಾಗಿ ಪೂಚಿಮರಂದು ರೀತಿಯ ಸ್ಥಳೀಯ ಲಭ್ಯ ಸಂಪನ್ಮೂಲಗಳನ್ನು ಬಳಸಿ ತಯಾರಿಸುವ ವಿಧಾನಗಳತ್ತ ರೈತರು ಅವಲಂಬಿಸಬೇಕು’ ಎನ್ನುತ್ತಾರೆ ಇಂತಹ ವಿಧಾನಗಳನ್ನು ಪ್ರಚುರಪಡಿಸುತ್ತಿರುವ ಸಿ. ಶಾಂತಕುಮಾರ್.

ಪೂಚಿಮರಂದು ತಯಾರಿಸಲು ಬೇಕಾಗುವ ಸಾಮಗ್ರಿಗಳು (ಒಂದು ಎಕರೆಗೆ)

ಎಕ್ಕದ ಸೊಪ್ಪು-2 ಕೆಜಿ, ಲಕ್ಕಿ ಸೊಪ್ಪು -2 ಕೆಜಿ, ಬೇವಿನ ಬೀಜ -2 ಕೆಜಿ, ಲೋಳೆಸರ -2ಕೆ.ಜಿ, ವಿಷಮಧಾರೆ ಸೊಪ್ಪು -2 ಕೆಜಿ (garden quinine, wild jasmine), ಶುಂಠಿ -ಅರ್ಧ ಕೆಜಿ

ಚಿತ್ರಗಳು: ಮಲ್ಲಿಕಾರ್ಜುನ ಹೊಸಪಾಳ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು