ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಕುಟುಂಬಕ್ಕೆ ಯಂತ್ರೋಪಕರಣ ನೆರವು

ಸಹಕಾರಿ ಪದ್ಧತಿ ಕೃಷಿಗೆ ಉತ್ತೇಜನ, ಸಿಗಲಿದೆ ₹ 8 ಲಕ್ಷ ಸಬ್ಸಿಡಿ
Last Updated 10 ಜೂನ್ 2021, 5:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಹಕಾರಿ ತತ್ವದ ಕೃಷಿ ಪದ್ಧತಿಗೆ ಉತ್ತೇಜನ ನೀಡುತ್ತಿರುವ ಸರ್ಕಾರ ರೈತ ಕುಟುಂಬಗಳಿಗೆ ನೇರವಾಗಿ ಯಂತ್ರೋಪಕರಣ ನೀಡಲು ಮುಂದಾಗಿದೆ. ಗರಿಷ್ಠ ₹ 8 ಲಕ್ಷ ಸಬ್ಸಿಡಿ ಮಂಜೂರು ಮಾಡಲು ತೀರ್ಮಾನಿಸಿದೆ.

ಕೃಷಿ ಯಾಂತ್ರೀಕರಣ ಯೋಜನೆಯ ಅಡಿ ರೈತ ಸಹಕಾರಿ ಸಂಘಗಳಿಗೆ ಈಗಾಗಲೇ ಈ ನೆರವು ಸಿಗುತ್ತಿದೆ. ಇದನ್ನು ಇನ್ನಷ್ಟು ರೈತರಿಗೆ ತಲುಪಿಸುವ ಉದ್ದೇಶದಿಂದ ರೈತರ ಗುಂಪುಗಳಿಗೂ ಯೋಜನೆ ವಿಸ್ತರಿಸಲು ನಿರ್ಧರಿಸಿದೆ. ಇದರ ದುರ್ಬಳಕೆಯನ್ನು ತಡೆಯಲು ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ಜಿಲ್ಲೆಯ 22 ಹೋಬಳಿಗಳಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರಗಳಿವೆ. 2014–15ರಲ್ಲಿ ಏಳು, 2016–17ರಲ್ಲಿ ಹತ್ತು ಹಾಗೂ 2017–18ನೇ ಆರ್ಥಿಕ ವರ್ಷದಲ್ಲಿ ಐದು ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಭೂಮಿ ಹದ ಮಾಡುವ, ಬೆಳೆ ಕಟಾವು ಮಾಡುವ ಹಾಗೂ ಒಕ್ಕಣೆಯ ಯಂತ್ರಗಳು ಇಲ್ಲಿವೆ. ಹೋಬಳಿ ಕೇಂದ್ರ ವ್ಯಾಪ್ತಿಯ ಎಲ್ಲ ಗ್ರಾಮದ ರೈತರು ಈ ಯಂತ್ರಗಳನ್ನು ಬಳಸುವುದು ಕಷ್ಟವಾಗುತ್ತಿದೆ. ಕೃಷಿ ಯಾಂತ್ರೀಕರಣದಲ್ಲಿ ಅತ್ಯಂತ ಹಿಂದುಳಿದ ಗ್ರಾಮಗಳನ್ನು ಗುರುತಿಸಿ ನೂತನ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ.

‘ಗ್ರಾಮೀಣ ಕೃಷಿ ಯಂತ್ರೋಪಕರಣ ಬ್ಯಾಂಕ್‌’ ಹೆಸರಿನಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. 20 ರೈತ ಕುಟುಂಬಗಳು ಸೇರಿ ರಚಿಸಿಕೊಂಡ ಸಹಕಾರ ಸಂಘ ಸೌಲಭ್ಯ ಪಡೆಯಲು ಅರ್ಹವಾಗಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಎಲ್ಲ 20 ಸದಸ್ಯರು ತಲಾ ₹ 10 ಸಾವಿರದಂತೆ ₹ 2 ಲಕ್ಷವನ್ನು ಸಂಗ್ರಹಿಸಿಕೊಳ್ಳುವುದು ಕಡ್ಡಾಯ. ₹ 8 ಲಕ್ಷದವರೆಗೆ ಸರ್ಕಾರ ಅನುದಾನ ನೀಡಲಿದೆ.

‘ಗ್ರಾಮೀಣ ಕೃಷಿ ಯಂತ್ರೋಪಕರಣ ಯೋಜನೆ ಯನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಯಂತ್ರ ಖರೀದಿ ಸಬ್ಸಿಡಿ ಈ ಮೊದಲು ಸಹಕಾರ ಸಂಘಗಳಿಗೆ ನೀಡಲಾಗುತ್ತಿತ್ತು. ಈಗ ರೈತರ ನೋಂದಾಯಿತ ಗುಂಪುಗಳಿಗೂ ನೆರವು ಸಿಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪಿ.ರಮೇಶಕುಮಾರ್‌ ತಿಳಿಸಿದರು.

ನೆರವು ಪಡೆದ ರೈತರು ಕೃಷಿ ಉಪಕರಣ ಖರೀದಿಸುವುದು ಕಡ್ಡಾಯ. ಕೃಷಿ ಚಟುವಟಿಕೆಗೆ ಅಗತ್ಯವಾಗಿ ಬೇಕಾಗುವ ಟ್ರ್ಯಾಕ್ಟರ್‌ ಖರೀದಿಸುವುದು ಸೂಕ್ತವೆಂದು ಇಲಾಖೆ ಸಲಹೆ ನೀಡುತ್ತದೆ. ಉಳಿದ ಹಣದಲ್ಲಿ ಭೂಮಿ ಸಿದ್ಧತೆಯ ಇತರ ಉಪಕರಣ ಖರೀದಿಸಬಹುದು. ಎಲ್ಲ ಕುಟುಂಬಗಳು ಬಳಕೆ ಮಾಡಿಕೊಂಡು ಬಾಡಿಗೆಗೂ ನೀಡಲು ಅವಕಾಶ
ಮಾಡಿಕೊಟ್ಟಿದೆ.

‘ಕೃಷಿ ಯಂತ್ರೋಪಕರಣಗಳ ಬಾಡಿಗೆ ದುಬಾರಿ ಆಗುತ್ತಿದೆ. ಸಬ್ಸಿಡಿ ಪಡೆದು ಖರೀದಿಸಿದ ಯಂತ್ರೋಪಕರಣಗಳಿಗೆ ಕಡಿಮೆ ಬಾಡಿಗೆ ನಿಗದಿಪಡಿಸುವಂತೆ ಸೂಚನೆ ನೀಡಲಾಗುತ್ತದೆ. ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಉತ್ತೇಜಿಸಲು ಇದರಿಂದ ಸಾಧ್ಯವಾಗಲಿದೆ’ ಎನ್ನುತ್ತಾರೆ ರಮೇಶಕುಮಾರ್‌.

ಒಂದೇ ಕುಟುಂಬದ ಸಹೋದರರು ಸಹಕಾರ ಸಂಘ ರಚಿಸಿ ನೆರವು ಪಡೆದ ನಿದರ್ಶನಗಳು ಬಯಲಿಗೆ ಬಂದಿವೆ. ಇದನ್ನು ತಪ್ಪಿಸಲು ಕೆಲ ನಿರ್ಬಂಧಗಳನ್ನು ಇಲಾಖೆ ವಿಧಿಸುತ್ತಿದೆ. 20 ಸದಸ್ಯರ ಸಂಘದಲ್ಲಿ ಒಂದೇ ಕುಟುಂಬದ ಸಹೋದರರಿಗೆ ಅವಕಾಶವಿಲ್ಲ. ಸದಸ್ಯರ ಜಮೀನಿನ ಆರ್‌ಟಿಸಿ ಪಡೆದು ಪರಿಶೀಲಿಸಿದ ಬಳಿಕ ನೆರವು ಮಂಜೂರು ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT