ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ‘ವಾಲ್ಮಿ‘ಯಿಂದ ಪ್ರಾತ್ಯಕ್ಷಿಕೆ: ನೀರುಳಿಸಲು ಸೂಕ್ಷ್ಮ ಹನಿ ನೀರಾವರಿ

ಮಾಹಿತಿ ಪಡೆದ ರೈತರು
Last Updated 20 ಸೆಪ್ಟೆಂಬರ್ 2022, 3:10 IST
ಅಕ್ಷರ ಗಾತ್ರ

ಧಾರವಾಡ: ಕೃಷಿ ಮೇಳದ ಮುಖ್ಯ ಮಳಿಗೆಗಳ ಸಾಲಲ್ಲಿ ಆರಂಭದಲ್ಲೇ ರೈತರನ್ನು ಚುಂಬಕದಂತೆ ಸೆಳೆದಿದ್ದು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ಜಲ–ನೆಲ ಪ್ರಾತ್ಯಕ್ಷಿಕೆ. ಏತ ನೀರಾವರಿಯಲ್ಲಿ ಸ್ವಯಂಚಾಲಿತ ಸೂಕ್ಷ್ಮ ಹನಿ ನೀರಾವರಿ ಯೋಜನೆ ಪರಿಚಯಿಸುವ, ಮಾಹಿತಿ ನೀಡುವ ಈ ಪ್ರಾತ್ಯಕ್ಷಿಕೆ ನೀರಿನ ಸಮಸ್ಯೆ ಎದುರಿಸುತ್ತಿರುವ ಅದೆಷ್ಟೋ ರೈತರ ಪಾಲಿಗೆ ಆಶಾಕಿರಣವೆನಿಸಿತು.

ನೀರಿನ ಪೋಲು ತಡೆಯುವುದು, ಬೆಳೆಗೆ ಹಾಕಿದ ಪೋಷಕಾಂಶ ನಷ್ಟವಾಗದಂತೆ ನೋಡಿಕೊಳ್ಳುವುದು, ಹಾಲಿ ಬಳಕೆಯ ನೀರನ್ನೇ ದುಪ್ಪಟ್ಟು ಬೇಸಾಯಕ್ಕೆ ಬಳಸುವಂತೆ ಮಾಡುವುದು ಈ ಯೋಜನೆಯ ಉದ್ದೇಶ.

ಹತ್ತಿ, ತೊಗರಿ, ಶೇಂಗಾ, ಗೋವಿನಜೋಳ, ಭತ್ತದ ಕೃಷಿಯಲ್ಲದೆ ಟೊಮೆಟೊ, ಮೆಣಸಿನಕಾಯಿ, ದಪ್ಪಮೆಣಸಿನಕಾಯಿ, ಹೀರೆಕಾಯಿ, ಸೌತೆಕಾಯಿ, ಕ್ಯಾಬೇಜ್‌, ರಾಜಗಿರಿ, ಬೀನ್ಸ್‌, ಅವರೆಕಾಯಿ ಹಾಗೂ ಬದನೆ ಬೆಳೆಯಬಹುದು. ಸೇವಂತಿ, ಗಲಾಟೆ, ಚೆಂಡು ಹೂವಿನ ಬೇಸಾಯವನ್ನೂ ಯೋಜನೆ ಮೂಲಕ ಕೈಗೊಳ್ಳಬಹುದು.

‘ಬೆಳೆಗಳಿಗೆ ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರಗಳನ್ನು ವೆಂಚೂರಿ (ಪೋಷಕಾಂಶ ಮತ್ತು ರಾಸಾಯನಿಕವನ್ನು ಪೂರೈಸಬಹುದಾದ ಸಾಧನ) ಮೂಲಕ ನೀಡಲಾಗುತ್ತದೆ. ಹನಿ ನೀರಾವರಿ ಮೂಲಕ ರಾಸಾಯನಿಕ ಗೊಬ್ಬರಗಳನ್ನು ಕೊಡುವುದರಿಂದ ಶೇ 90–99ರಷ್ಟು ಗೊಬ್ಬರ ಬಳಕೆಯಾಗಿ ಬೆಳೆ ಇಳುವರಿ ಶೇ 20ರಿಂದ 50ರಷ್ಟು ಪ್ರಮಾಣ ಹೆಚ್ಚಾಗಲಿದೆ ಎಂಬುದನ್ನು ವಿವಿಧ ಪ್ರಯೋಗಗಳಿಂದ ಕಂಡುಕೊಳ್ಳಲಾಗಿದೆ’ ಎಂದು ವಾಲ್ಮಿಯ ಮಹಾದೇವಗೌಡ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

‘ಸಾಂಪ್ರದಾಯಿಕ ಪದ್ಧತಿಯಲ್ಲಿ ನೀಡುವ ಗೊಬ್ಬರ ಶೇ 30–40ರಷ್ಟು ಮಾತ್ರ ಬೆಳೆಗೆ ಲಭ್ಯವಾಗಲಿದೆ. ಉಳಿದವು ಆವಿಯಾಗಿ ಇಲ್ಲವೆ ನೀರಿನ ಮೂಲಕ ವ್ಯರ್ಥವಾಗಲಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ’ ಎಂಬುದು ವಾಲ್ಮಿ ಸಹಾಯಕ ಎಂಜಿನಿಯರ್‌ ಇಂ. ಮಹಾದೇವಗೌಡ ಹುತ್ತನಗೌಡರ ಅವರು ನೀಡುವ ವಿವರಣೆ.

‘ಸಾಕಷ್ಟು ಪ್ರದೇಶದಲ್ಲಿ ಸವಳು ಮತ್ತು ಜವಳು ಸಮಸ್ಯೆಯಿಂದ ಸಾಗುವಳಿ ಮಾಡಲಾಗುತ್ತಿಲ್ಲ. ಮಾಡಿದರೂ ನಿರೀಕ್ಷಿತ ಇಳುವರಿ ಪಡೆಯಲಾಗದೆ ರೈತರು ನಷ್ಟ ಅನುಭವಿಸುತ್ತಾರೆ. ಕರ್ನಾಟಕದಲ್ಲಿ ಮಳೆಯಾಶ್ರಿತ, ಒಣ ಬೇಸಾಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿದ್ದು ಸೂಕ್ಷ್ಮ ನೀರಾವರಿ ಅಳವಡಿಕೆಗೆ ಅವಕಾಶಗಳಿವೆ. ನೀರಿನ ಬಳಕೆ ಸಾಮರ್ಥ್ಯವನ್ನು ಶೇ 90ಕ್ಕೆ ಹೆಚ್ಚಿಸಬಹುದು. ಇದರಿಂದ ಬೆಳೆ ಉತ್ಪಾದನೆ ಹೆಚ್ಚಿಸಬಹುದು. ಅಮೂಲ್ಯ ನೀರು ಪೋಲಾಗುವುದನ್ನು ತಡೆಯಬಹುದು. ಸೂಕ್ಷ್ಮ ನೀರಾವರಿ ಪದ್ಧತಿ ಹವಾಮಾನ ವೈಪರಿತ್ಯಕ್ಕೂ ಪರಿಹಾರ’ ಎಂದು ಅವರು ಹೇಳಿದರು.

‘ಸಾಗುವಳಿ ಜಮೀನಿಗೆ ಅಗತ್ಯ ನೀರಿಗೆ ತಕ್ಕಂತೆ, ನೀರಿನ ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು. ಸವಳು ನೀರಿನ ಸಮಸ್ಯೆ ಇದ್ದಲ್ಲಿ ಕೊಂಚ ವೆಚ್ಚ ಹೆಚ್ಚಲಿದೆ’ ಎಂದು ಹೇಳಿದರು.

ಹೊಲ ಐತ್ರಿ.. ಆದ್ರ ನೀರಿನ ಸಮಸ್ಯೆ ಬಾಳ ಅದೇರಿ.. ಎಂಬ ಪ್ರಶ್ನೆಯೊಂದಿಗೆ ಬಂದ ರೈತರಿಗೆ ಪ್ರಾತ್ಯಕ್ಷಿಕೆ ತಂಡದವರು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗೆ 0836–2486893 ಮೊಬೈಲ್‌ ಫೋನ್‌: 9448386889

ಸ್ವಯಂಚಾಲಿತ ಸೂಕ್ಷ್ಮ ಹನಿ ನೀರಾವರಿ ಯೋಜನೆಯಿಂದ ಕೃಷಿ ಕಾರ್ಮಿಕರ ಕೊರತೆ, ಸವಳು–ಜವಳು, ಕಳೆ ನಿಯಂತ್ರಣ, ಭೂಮಿ ಸಮತಟ್ಟಿನ ಸಮಸ್ಯೆಗಳನ್ನು ಏಕಕಾಲಕ್ಕೆ ಬಗೆಹರಿಸಬಹುದು
– ಇಂ. ಮಹಾದೇವಗೌಡ ಹುತ್ತನಗೌಡರ, ಸಹಾಯಕ ಎಂಜಿನಿಯರ್‌, ವಾಲ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT