ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ‘ಟುಟಾ’ ಕೊಲ್ಲಲು ‘ದೀಪದ ಬಲೆ’

Last Updated 23 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ಟೊಮೆಟೊ ಗಿಡ ಹಾಗೂ ಕಾಯಿಯನ್ನು ಭಾಗಶಃ ತಿಂದು ಹಾಕಿ ಶೇ 20ರಿಂದ 40ರಷ್ಟು ಇಳುವರಿ ಕುಂಠಿತಗೊಳಿಸುವ ಟುಟಾ ಅಬ್ಸೊಲುಟಾ (ಊಜಿ) ಕೀಟಬಾಧೆಗೆ ಪರಿಹಾರ ಕಂಡುಕೊಂಡಿರುವ ವಿಜ್ಞಾನಿಗಳು, ವಿದ್ಯುತ್ ಹಾಗೂ ಸೋಲಾರ್ ಚಾಲಿತ ‘ದೀಪದ ಬಲೆ’ ಉಪಕರಣ ಆವಿಷ್ಕರಿಸಿದ್ದಾರೆ.

‘ರಾಷ್ಟ್ರೀಯ ತೋಟಗಾರಿಕೆ ಮೇಳ’ ದಲ್ಲಿ ಈ ಉಪಕರಣದ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಯಾವುದೇ ಔಷಧಿ ಸಿಂಪಡಿಸದೇ, ಕೀಟಗಳನ್ನು ಕೊಲ್ಲುವ ಈ ಉಪಕರಣ ರೈತರ ಗಮನ ಸೆಳೆಯುತ್ತಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಇತರೆ ರಾಜ್ಯಗಳಲ್ಲಿ ಟೊಮೆಟೊ ಬೆಳೆಯುವ ರೈತರು, ಟುಟಾ ಕೀಟದಿಂದ ನಷ್ಟ ಅನುಭವಿಸುತ್ತಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಳ ಮೇಲೆ ದಾಳಿ ಮಾಡುವ ಟುಟಾ ಕೀಟಗಳು, ಟೊಮೆಟೊ ಗಿಡ ಹಾಗೂ ಕಾಯಿ ಮೇಲೆ ಕುಳಿತುಕೊಳ್ಳುತ್ತವೆ. ನಂತರ, ಹಂತ ಹಂತವಾಗಿ ಗಿಡ ಹಾಗೂ ಕಾಯಿ ತಿನ್ನುತ್ತವೆ. ಕಾಯಿಯೊಳಗೆ ರಂಧ್ರಗಳು ಬಿದ್ದು, ಕೊಳೆಯುತ್ತವೆ.

‘ದಕ್ಷಿಣ ಆಫ್ರಿಕಾದಿಂದ ಲಗ್ಗೆ ಇಟ್ಟಿರುವ ಟುಟಾ ಅಬ್ಸೊಲುಟಾ ಕೀಟಕ್ಕೆ, ಊಜಿ ಅಥವಾ ರಂಗೋಲಿ ಕೀಟವೆಂದೂ ಕರೆಯುತ್ತಾರೆ. ಇದರ ನಿಯಂತ್ರಣಕ್ಕಾಗಿ ಔಷಧ ಸಿಂಪರಣೆ ಮಾಡಲಾಗುತ್ತದೆ. ಆದರೆ, ಔಷಧಿ ಬಳಸದೇ ಕೀಟ ಕೊಲ್ಲಲು ಉಪಕರಣ ಆವಿಷ್ಕರಿಸಲಾಗಿದೆ. ಈಗಾಗಲೇ ರೈತರ ಜಮೀನುಗಳಲ್ಲಿ ಪ್ರಾಯೋಗಿಕವಾಗಿ ಉಪಕರಣ ಇರಿಸಲಾಗಿದ್ದು, ಉತ್ತಮ ಫಲಿತಾಂಶ ಸಿಕ್ಕಿದೆ’ ಎಂದು ಸಸ್ಯ ರಕ್ಷಣಾ ವಿಭಾಗದ ಮುಖ್ಯಸ್ಥ ಡಾ. ಪಿ. ವೆಂಕಟರಾಮಿರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪಕರಣ ತಂತ್ರಜ್ಞಾನವನ್ನು ಖಾಸಗಿಯವರಿಗೆ ನೀಡಿ, ಅದನ್ನು ರೈತರಿಗೆ ತಲುಪಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ವಿದ್ಯುತ್ ಹಾಗೂ ಸೋಲಾರ್ ಚಾಲಿತವಿರುವ ಉಪಕರಣದ ಬೆಲೆ ₹ 3,000ರಿಂದ ₹ 4,500 ಆಗಬಹುದು. ಇದಕ್ಕಿಂತಲೂ ಕಡಿಮೆ ಬೆಲೆಗೆ ರೈತರಿಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.

ಎಕರೆಗೆ ಎರಡು ಉಪಕರಣ: ‘ಬಲ್ಬ್, ಪ್ಲಾಸ್ಟಿಕ್ ತಟ್ಟೆಗಳು, ಚಿಕ್ಕ ಫ್ಯಾನ್ ಹಾಗೂ ಬಲೆ ಬಳಸಿ ಈ ಉಪಕರಣ ಸಿದ್ಧಪಡಿಸಲಾಗುತ್ತದೆ. ಎಕರೆಗೆ ಎರಡು ಕಡೆ ಉಪಕರಣ ಇರಿಸಬಹುದು’ ಎಂದು ಪ್ರಧಾನ ವಿಜ್ಞಾನಿ ಡಾ. ವಿ. ಶ್ರೀಧರ್ ಹೇಳಿದರು.

‘ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಉಪಕರಣ ಬಳಸಬಹುದು. ಬಲ್ಬ್ ಬೆಳಕಿಗೆ ಆಕರ್ಷಣೆಯಾಗುವ ಕೀಟಗಳನ್ನು ಎಳೆದುಕೊಳ್ಳುವ ಫ್ಯಾನ್, ಬಲೆಗೆ ಬೀಳಿಸುತ್ತದೆ. ಬಲೆಯಲ್ಲಿರುವ ದ್ರಾವಣ, ಕೀಟಗಳನ್ನು ಕೊಲ್ಲುತ್ತದೆ. ಹೆಣ್ಣು ಕೀಟಗಳ ಸಂತಾನೋತ್ಪತ್ತಿಯೂ ಕ್ಷೀಣಿಸುತ್ತದೆ. ಉಪಕರಣವನ್ನು ರಾತ್ರಿ ಮಾತ್ರ ಬಳಸುವುದರಿಂದ, ಜೇನು ನೊಣ ಹಾಗೂ ಇತರೆ ಉಪಯೋಗಕಾರಿ ಕೀಟಗಳಿಗೆ ಯಾವುದೇ ತೊಂದರೆಯಾಗದು’ ಎಂದು ತಿಳಿಸಿದರು.

‘ಟೊಮೆಟೊ ಗಿಡಗಳು 25 ದಿನವಿದ್ದಾಗಿನಿಂದಲೇ ಈ ಕೀಟ ಆವರಿಸಿಕೊಳ್ಳುತ್ತದೆ. ಸಸಿಯ ಎಳೆ ಕೊಂಬೆಗಳು, ಕಾಯಿ ಹಾಗೂ ಹಣ್ಣು ಎಲ್ಲವನ್ನೂ ಕೀಟ ಆವರಿಸಿಕೊಳ್ಳುತ್ತದೆ. ಸೋಂಕಿತ ಹಣ್ಣುಗಳು ಭಾಗಶಃ ಕೊಳೆಯುತ್ತವೆ. ಬದನೆ ಹಾಗೂ ಇತರೆ ತರಕಾರಿ ಬೆಳೆ
ಯಲ್ಲೂ ಈ ಕೀಟದ ಹಾವಳಿ ಇದ್ದು, ಪ್ರಮಾಣ ಕಡಿಮೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT