ಗುರುವಾರ , ಏಪ್ರಿಲ್ 2, 2020
19 °C
ರೈತರಿಗಾಗಿ ‘ತಂತ್ರಜ್ಞಾನ ಹಾಗೂ ಮೌಲ್ಯವರ್ಧಿತ ಆಹಾರ’ ಕುರಿತ ವಿಚಾರ ಸಂಕಿರಣ

‘ಅಭಿವೃದ್ಧಿಯಾಗದ ಕೊಯ್ಲೋತ್ತರ ತಂತ್ರಜ್ಞಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆ ನಮ್ಮಲ್ಲಿ ಕೊಯ್ಲೋತ್ತರ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಚ್.ನಾಗರಾಜ್ ತಿಳಿಸಿದರು.

ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾಲಯ(ಸಿಎಫ್‌ಟಿಆರ್‌ಐ)ದ ಕನ್ನಡ ಸಹೃದಯ ಬಳಗದಿಂದ ಸೋಮವಾರ ಆಯೋಜಿಸಿದ್ದ ರೈತರಿಗಾಗಿ ‘ತಂತ್ರಜ್ಞಾನ ಹಾಗೂ ಮೌಲ್ಯವರ್ಧಿತ ಆಹಾರ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 20 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಯಿದೆ. ವಾರ್ಷಿಕ ₹ 45,000 ಕೋಟಿ ಮೌಲ್ಯದ ಉತ್ಪನ್ನ ಉತ್ಪಾದನೆಯಾಗಲಿದೆ. ಇದರಲ್ಲಿ ವಿವಿಧ ಕಾರಣಗಳಿಂದ ಶೇ.30ರಷ್ಟು ಉತ್ಪನ್ನ ಹಾಳಾಗುತ್ತಿದೆ. ಕೊಯ್ಲೋತ್ತರ ಸಂಸ್ಕರಣೆ, ಮೌಲ್ಯವರ್ಧನೆ ನಡೆಯದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ’ ಎಂದರು.

‘ತೋಟಗಾರಿಕೆ ಇಲಾಖೆ ಈಚೆಗೆ 100ಕ್ಕೂ ಹೆಚ್ಚು ತೋಟಗಾರಿಕಾ ಬೆಳೆಗಳ ಉತ್ಪಾದಕರ ಕಂಪನಿ ಆರಂಭಿಸಿದೆ. ನಬಾರ್ಡ್‌ ಸಹ ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿಕೊಂಡಿದೆ. ಹೆಚ್ಚೆಚ್ಚು ಕಂಪನಿ ಆರಂಭಗೊಂಡಂತೆ ಸಂಸ್ಕರಣೆ, ಮೌಲ್ಯವರ್ಧನೆಗೂ ಅವಕಾಶ ಸಿಗುತ್ತಿದೆ’ ಎಂದು ಹೇಳಿದರು.

‘ರಾಷ್ಟ್ರೀಯ ತೋಟಗಾರಿಕಾ ಮಿಷನ್ ಈಚೆಗಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಾರರಿಗೆ ತಮ್ಮ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಗೆ ಸರ್ಕಾರದ ನೆರವನ್ನು ನೀಡುತ್ತಿದೆ. ಕೃಷಿಕರು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಉತ್ಪನ್ನಗಳು ಸಂಸ್ಕರಣೆಗೊಳಪಟ್ಟು, ಮೌಲ್ಯವರ್ಧನೆಗೊಂಡರೆ ರೈತರಿಗಾಗುವ ನಷ್ಟ ಸಾಕಷ್ಟು ಪ್ರಮಾಣದಲ್ಲಿ ತಗ್ಗಲಿದೆ. ಗ್ರಾಹಕರಿಗೂ ಗುಣಮಟ್ಟದ ಉತ್ಪನ್ನ ಸಿಗಲಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯೂ ಕಾರ್ಯೋನ್ಮುಖವಾಗಿದೆ’ ಎಂದು ತಿಳಿಸಿದರು.

ಎಎಫ್ಎಸ್‌ಟಿಯ ಹಿರಿಯ ವಿಜ್ಞಾನಿ ಡಾ.ಭಾಸ್ಕರನ್ ‘ನಮ್ಮ ಆಹಾರ ವಿಜ್ಞಾನ’ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಸಹೃದಯ ಬಳಗದ ಚಟುವಟಿಕೆಗಳನ್ನು ಶ್ಲಾಘಿಸಿದರು. ತಾವೂ ಕನ್ನಡ ಕಲಿತಿದ್ದನ್ನು ಹೇಳಿಕೊಂಡರು.

ಸಿಎಫ್‌ಟಿಆರ್‌ಐನ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್.ರಾಘವರಾವ್ ವಿಚಾರ ಸಂಕಿರಣ ಉದ್ಘಾಟಿಸಿದರು. ಕನ್ನಡ ಸೃಹದಯ ಬಳಗದ ಅಧ್ಯಕ್ಷ ರಂಗಧಾಮಯ್ಯ ಉಪಸ್ಥಿತರಿದ್ದರು. ವಿವಿಧ ವಿಷಯಗಳ ಕುರಿತು ಗೋಷ್ಠಿ ನಡೆದವು. ಸಂಜೆ ಸಮಾರೋಪ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು