ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲೇ ಗುಣಮಟ್ಟದ ಪ್ರಮಾಣ: ರೈತರ ಅಲೆದಾಟ ತಪ್ಪಿಸುವ ರೂಟ್ಸ್‌ಗೂಡ್ಸ್ ನವೋದ್ಯಮ

ರೈತರ ಅಲೆದಾಟ ತಪ್ಪಿಸಲು ನವೋದ್ಯಮ ಆರಂಭಿಸಿದ ಎಂಜಿನಿಯರ್
Last Updated 12 ನವೆಂಬರ್ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: ಕಟಾವಿನ ನಂತರ ಬೆಳೆಗಳ ಗುಣಮಟ್ಟ (ಗ್ರೇಡ್) ಪ್ರಮಾಣೀ ಕರಣಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಹೊಸದೊಂದು ತಂತ್ರಜ್ಞಾನದ ವೇದಿಕೆ ಕಲ್ಪಿಸಿರುವ ‘ರೂಟ್ಸ್‌ಗೂಡ್ಸ್’ ನವೋದ್ಯಮ, ಬೆಳೆಗಳ ಪ್ರಮಾಣ ಪತ್ರವನ್ನು ಅಂಗೈಯಲ್ಲೇ ಒದಗಿಸುವ ವ್ಯವಸ್ಥೆ ರೂಪಿಸಿದೆ.

ಬೆಳೆಗಳನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲು ಪ್ರಯೋಗಾಲಯಗಳಿಗೆ ರೈತರು ಅಲೆದಾಡುವ ಸ್ಥಿತಿ ಸದ್ಯಕ್ಕಿದೆ. ಇದಕ್ಕೆ ಮುಕ್ತಿ ನೀಡಲು ‘ರೂಟ್ಸ್‌ಗೂಡ್ಸ್’ ಜಾಲತಾಣ ಹಾಗೂ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಇವುಗಳಿಗೆ ನ.17ರಂದು ಟೆಕ್ ಸಮ್ಮೇಳನದಲ್ಲಿ ಚಾಲನೆ ದೊರೆಯಲಿದೆ.

ಆರ್.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಸಚಿನ್ ಹೆಗ್ಡೆ ಕುಡ್ಗಿ ಅವರು ಜರ್ಮನಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಅವರು, ಬೆಳೆಗಳ ಗುಣಮಟ್ಟ ಪ್ರಮಾಣೀಕರಿಸಲು ಹಾಗೂ ಕೃಷಿ ಉತ್ಪನ್ನ ಮಾರಾಟ ಮಾಡಲು ರೈತರು ಪಡುತ್ತಿದ್ದ ಕಷ್ಟ ಗಮನಿಸಿದರು. ರೈತರಿಗೆ ನೆರವಾಗಲು ರೂಟ್ಸ್ ಗೂಡ್ಸ್ ನವೋದ್ಯಮ ಆರಂಭಿಸಿದರು. ಉತ್ತಮ ನವೋದ್ಯಮವೆಂದು ಗುರುತಿಸಿದ ರಾಜ್ಯ ಸರ್ಕಾರ, ಮಾನ್ಯತೆಯನ್ನೂ ನೀಡಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಸಚಿನ್, ‘ಕಟಾವು ಆದ ಕೂಡಲೇ ಬೆಳೆ ಮಾರುವುದು ಉತ್ತಮ. ಗುಣಮಟ್ಟದ ಪ್ರಮಾಣೀಕರಣಕ್ಕಾಗಿ ಹೆಚ್ಚು ಸಮಯ ಹೋದರೆ, ಬೆಳೆ ಹಾಳಾಗುತ್ತದೆ. ದರವೂ ಕಡಿಮೆ ಸಿಗುತ್ತದೆ. ಇದಕ್ಕೆಲ್ಲ ಪರಿಹಾರವಾಗಿ ನವೋದ್ಯಮ ಆರಂಭಿಸಲಾಗಿದೆ. ಜಾಲತಾಣ ಹಾಗೂ ಆ್ಯಪ್ ನೋಂದಣಿ ಸಹ ಉಚಿತ’ ಎಂದರು.

‘ಕಟಾವು ಮಾಡಿದ ಬೆಳೆ ಫೋಟೊವನ್ನು ತೆಗೆದು ಅಪ್‌ಲೋಡ್ ಮಾಡಬೇಕು. ಅದನ್ನು ತಜ್ಞರು ಪರಿಶೀಲನೆ ನಡೆಸುತ್ತಾರೆ. ಮುಸುಕಿನ ಜೋಳ, ನುಗ್ಗೆ ಸೊಪ್ಪು, ದಾಳಿಂಬೆ, ದ್ರಾಕ್ಷಿ, ಸೀಬೆ ಹಣ್ಣು ಬೆಳೆಗಳಿಗೆ ಮಾತ್ರ ಸದ್ಯಕ್ಕೆ ಗ್ರೇಡ್ ನೀಡಲಾಗುತ್ತಿದೆ. ತೇವಾಂಶ ಹಾಗೂ ಕಪ್ಪು– ಬಿಳಿ ಫಂಗಸ್‌ ಆಧಾರದಲ್ಲಿ ಮೂರು ಗ್ರೇಡ್‌ಗಳಾಗಿ ವಿಂಗಡಿಸಲಾಗುವುದು. ಯಾವ ಬೆಳೆಗೆ ಯಾವ ಗ್ರೇಡ್‌ ಎಂಬುದನ್ನು ಪ್ರಮಾಣೀಕರಿಸಿ ‘ಪಿಡಿಎಫ್‌‘ ರೂಪದಲ್ಲಿ ಪ್ರಮಾಣ ಪತ್ರವನ್ನೂ ರೈತರಿಗೆ ಕಳುಹಿಸಲಾಗುವುದು’ ಎಂದೂ ಹೇಳಿದರು.

‘ಪ್ರಮಾಣೀಕರಿಸಿದ ಮಾಹಿತಿ ಕಾರ್ಗಿಲ್, ಸುಗುಣ ಚಿಕನ್ ಸೇರಿದಂತೆ 20 ಕಂಪನಿಗಳಿಗೆ ರವಾನೆಯಾಗುತ್ತದೆ. ಕಂಪನಿ ಪ್ರತಿನಿಧಿಗಳು, ರೈತರನ್ನು ಸಂಪರ್ಕಿಸಿ ಮಾರುಕಟ್ಟೆ ದರದನ್ವಯ ಬೆಳೆ ಖರೀದಿಸುತ್ತಾರೆ. ಕಂಪನಿಗಳು ಇಷ್ಟವಿಲ್ಲದಿದ್ದರೆ, ಬೇರೆಯವರಿಗೂ ಮಾರಲು ಅವಕಾಶವಿದೆ’ ಎಂದೂ ವಿವರಿಸಿದರು.

ದತ್ತಾಂಶಗಳ ಸಹಿತ ಮಾಹಿತಿ: ‘ಬೆಳೆ ಬೆಳೆದ ಪ್ರದೇಶದ ಕೃಷಿ ಸ್ಥಿತಿಗತಿ ಮಾಹಿತಿಯನ್ನೂ ದತ್ತಾಂಶ ಸಹಿತ ಒದಗಿಸಲಾಗುವುದು.ಇದು, ರೈತರ ಭವಿಷ್ಯದ ಕೃಷಿಗೂ ಅನುಕೂಲವಾಗಲಿದೆ’ ಎಂದೂ ಸಚಿನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT