ಶುಕ್ರವಾರ, ಸೆಪ್ಟೆಂಬರ್ 20, 2019
22 °C
ಚಿನ್ನದ ಬೆಲೆ ಗಗನಮುಖಿಯಾಗುತ್ತಿದ್ದರೂ ಖರೀದಿಗೆ ಹುಮ್ಮಸ್ಸು... ಬೈಕ್‌ ಖರೀದಿಗೂ ವಿಶೇಷ ಒತ್ತು

ಅಕ್ಷಯ ತೃತೀಯ; ಬಜಾರ್‌ ಖರೀದಿಮಯ..!

Published:
Updated:
Prajavani

ವಿಜಯಪುರ: ವಿಜಯಪುರ ನಗರವೂ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಬಸವ ಜಯಂತಿ ಸಡಗರ. ಇದರೊಟ್ಟಿಗೆ ಅಕ್ಷಯ ತೃತೀಯದ ಸಂಭ್ರಮವೂ ಹೌದು. ಎತ್ತ ನೋಡಿದರೂ ಖರೀದಿ ಭರಾಟೆ... ಚಿನ್ನಾಭರಣ ಮಳಿಗೆಗಳು, ಬೈಕ್‌ ಶೋ ರೂಂಗಳು ಕಿಕ್ಕಿರಿದ ಜನದಟ್ಟಣೆಯಿಂದ ಕೂಡಿದ್ದವು...

ಸೋಮವಾರ ಮುಸ್ಸಂಜೆಯಿಂದಲೇ ವಹಿವಾಟು ಬಿರುಸುಗೊಂಡಿತ್ತು. ಮಂಗಳವಾರ ಮುಂಜಾವಿನಿಂದ ತಡರಾತ್ರಿವರೆಗೂ ಚಿನ್ನ–ಬೆಳ್ಳಿಯ ಖರೀದಿ ಭೀಕರ ಬರದಲ್ಲೂ ಬಿರುಸಿನಿಂದ ನಡೆಯಿತು. ಹೊಸ ವಾಹನ ಖರೀದಿಗೂ ಬರದ ಸೋಂಕು ತಗುಲಿಲ್ಲ.

ನಗರದ ಸರಾಫ್‌ ಬಜಾರ್ ಸೇರಿದಂತೆ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಚಿನ್ನಾಭರಣ ಅಂಗಡಿಗಳು ಕಿಕ್ಕಿರಿದ ಜನರಿಂದ ಕೂಡಿದ್ದವು. ಕಾಲಿಡಲು ಸ್ಥಳವಿರಲಿಲ್ಲ. ಬಹುತೇಕರು ಶುಭ ದಿನ ಎಂಬ ನಂಬಿಕೆಯಿಂದ ಖರೀದಿಗೆ ಮುಗಿಬಿದ್ದರು.

ಅಕ್ಷಯ ತೃತೀಯ, ಬಸವ ಜಯಂತಿಯಂದು ಚಲೋ ಮುಹೂರ್ತ ಎಂದು ಹಲವರು ಲಗ್ನ, ಮನೆ ಶಾಂತಿ ಸಮಾರಂಭ ಆಯೋಜಿಸಿದ್ದರು. ಈ ಕಾರ್ಯಕ್ರಮಗಳಿಗೆ ಹಾಜರಾದ ಸಂಬಂಧಿಕರು, ಗೆಳೆಯರು, ಆತ್ಮೀಯರು ಉಡುಗೊರೆ ನೀಡಲಿಕ್ಕಾಗಿಯೇ ಗಿಫ್ಟ್‌ ಸೆಂಟರ್‌ಗಳಿಗೆ ಏಕಕಾಲಕ್ಕೆ ಎಡತಾಕಿದ್ದರಿಂದ, ಅಲ್ಲಿಯೂ ಭರ್ಜರಿ ವಹಿವಾಟು ನಡೆಯಿತು.

ತುಟ್ಟಿಯಾದರೂ ಖರೀದಿ

ಬಂಗಾರದ ಬೆಲೆ ಗಗನಮುಖಿಯಾದರೂ; ಸಂಪ್ರದಾಯದ ನಂಬಿಕೆಗೆ ಜೋತು ಬಿದ್ದ ಜನಸ್ತೋಮ ಚಿನ್ನಾಭರಣ ಅಂಗಡಿಗಳಿಗೆ ಮುಗಿ ಬಿದ್ದು ಖರೀದಿ ನಡೆಸಿತು. ಹೊಸ ಉತ್ಪನ್ನ ಖರೀದಿಗಾಗಿ ತಂಡೋಪ ತಂಡವಾಗಿ ಬಜಾರ್‌ಗಳಲ್ಲಿನ ಅಂಗಡಿಗೆ ದಾಂಗುಡಿಯಿಟ್ಟ ದೃಶ್ಯ ಜಿಲ್ಲೆಯ ಎಲ್ಲೆಡೆ ಗೋಚರಿಸಿತು.

‘ಅಕ್ಷಯ ತೃತೀಯ’ ಖರೀದಿಗೆ ಶುಭದಿನ. ಯಾವುದೇ ಹೊಸ ವಸ್ತು ಖರೀದಿಸಿದರೂ ಚಲೋ. ಸಂಪತ್ತು ವೃದ್ಧಿಯಾಗಲಿದೆ. ವರ್ಷ ಪೂರ್ತಿ ಆದಾಯ, ಸಂಪತ್ತಿನ ಖರೀದಿ ಮುಂದುವರೆಯಲಿದೆ ಎಂಬ ನಂಬಿಕೆಯಿಂದ ಖರೀದಿಗೆ ಮುಗಿಬಿದ್ದವರೇ ಹೆಚ್ಚು. ಕಾಸಿನ ಕೊರತೆಯಿಂದ ನಿರೀಕ್ಷೆಯಷ್ಟು ಖರೀದಿಸದಿದ್ದರೂ; ಕೊಂಚವನ್ನಾದರೂ ಖರೀದಿಸಲೇಬೇಕು ಎಂಬ ಆಕಾಂಕ್ಷೆಯಿಂದ ಬಜಾರ್‌ಗೆ ಬಂದಿದ್ದವರೇ ಹೆಚ್ಚಿದ್ದರು.

‘ಅಕ್ಷಯ ತೃತೀಯ ದಿನವನ್ನು ಕಾತರದಿಂದ ಕಾದಿರುತ್ತೇವೆ. ಬಂಗಾರದ ಧಾರಣೆ ಎಷ್ಟೇ ತುಟ್ಟಿಯಾಗಿದ್ದರೂ; ಖರೀದಿ ತಪ್ಪಿಸಲ್ಲ. ಇದಕ್ಕಾಗಿಯೇ ಪ್ರತಿ ತಿಂಗಳು ಹಣ ಉಳಿಸಿರುತ್ತೇವೆ. ಹಲವರು ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿ, ಈ ಶುಭ ಮುಹೂರ್ತದಲ್ಲಿ ಖರೀದಿಸುತ್ತಾರೆ. ಈ ಖರೀದಿ ನಮ್ಮ ಕುಟುಂಬದ ಏಳ್ಗೆ, ಆರ್ಥಿಕ ಪ್ರಗತಿಗೆ ವರ್ಷವಿಡಿ ಪೂರಕವಾಗಿರುತ್ತದೆ. ಸಮೃದ್ಧಿಯೂ ಹೆಚ್ಚಲಿದೆ’ ಎಂದು ಗೃಹಿಣಿಯರಾದ ವಂದನಾ ಹಜೇರಿ, ಕಮಲಾ ಶಿರಗುಪ್ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಮಳಿಗೆಗಳಲ್ಲಿ ಜನಜಂಗುಳಿ ಇರಲಿದೆ. ನಮಗಿಷ್ಟದ ವಿನ್ಯಾಸದ ಆಭರಣ ಆಯ್ಕೆ ಮಾಡಿಕೊಳ್ಳಲಾಗಲ್ಲ ಎಂದೇ ಸೋಮವಾರವೇ ಅಂಗಡಿಗೆ ಬಂದು, ಇಷ್ಟವಾದುದನ್ನು ಆಯ್ಕೆ ಮಾಡಿಕೊಂಡು, ಮುಂಗಡ ಹಣವನ್ನು ಕೊಟ್ಟಿದ್ದೆ.

ಹಬ್ಬದ ದಿನ ಮನೆ ಮಂದಿಯೊಟ್ಟಿಗೆ ಬಂದು, ಸಂಭ್ರಮದಿಂದ ನಿಗದಿಪಡಿಸಿಕೊಂಡಿದ್ದ ಚಿನ್ನದ ಆಭರಣ ಖರೀದಿಸಿ, ಮನೆಗೆ ಕೊಂಡೊಯ್ದು ದೇವರ ಮನೆಯಲ್ಲಿಟ್ಟು ಪೂಜೆ ಸಲ್ಲಿಸಿದ ಬಳಿಕ, ಧರಿಸಿಕೊಂಡು ಸಂಭ್ರಮಿಸಿದೆ’ ಎಂದು ಗೃಹಿಣಿ ನಿರ್ಮಲಾ ಸುಲಾಖೆ ಹೇಳಿದರು.

Post Comments (+)