ಅಕ್ವಾಡೆಕ್ಟ್‌ ನಿರ್ಮಾಣಕ್ಕೆ ತಂತ್ರಜ್ಞಾನದ ಸ್ಪರ್ಶ..!

ಶನಿವಾರ, ಮಾರ್ಚ್ 23, 2019
31 °C
ನೀರಾವರಿ ಕಾಮಗಾರಿಗೆ ಶರವೇಗ ನೀಡಿದ ಅತ್ಯಾಧುನಿಕ ತಂತ್ರಜ್ಞಾನ

ಅಕ್ವಾಡೆಕ್ಟ್‌ ನಿರ್ಮಾಣಕ್ಕೆ ತಂತ್ರಜ್ಞಾನದ ಸ್ಪರ್ಶ..!

Published:
Updated:
Prajavani

ವಿಜಯಪುರ: ನದಿ ಪಾತ್ರದಿಂದ ಅತ್ಯಂತ ಎತ್ತರದ ಪ್ರದೇಶಕ್ಕೆ ನೀರು ಕೊಂಡೊಯ್ಯುವುದು ಸಾಹಸಗಾಥೆ. ಕರ್ನಾಟಕ ನೀರಾವರಿ ನಿಗಮ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು, ಇದೀಗ ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ತಿಕೋಟಾ ಭಾಗ ಕೃಷ್ಣಾ ನದಿ ಪಾತ್ರದಿಂದ ಅತ್ಯಂತ ಎತ್ತರದಲ್ಲಿದೆ. ಇಲ್ಲಿಗೆ ನೀರು ಹರಿಸುವುದು ದುಸ್ಸಾಹಸದ ಕೆಲಸ. ಭಗೀರಥ ಯತ್ನವೇ ನಡೆಯಬೇಕು.

ಈ ಭಾಗಕ್ಕೆ ನೀರು ಹರಿಸಲೇಬೇಕು ಎಂಬ ಸಂಕಲ್ಪದಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಿದ್ದ ಎಂ.ಬಿ.ಪಾಟೀಲ ತುಬಚಿ–ಬಬಲೇಶ್ವರ ಯೋಜನೆ ರೂಪಿಸಿದ್ದರು. ತಮ್ಮ ಅವಧಿಯಲ್ಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೂ ಚಾಲನೆ ನೀಡಿದ್ದರು.

ಯೋಜನೆಯಡಿ ನಿಗದಿತ ಪ್ರದೇಶಕ್ಕೆ ನೀರು ಕೊಂಡೊಯ್ಯುವ ಮಾರ್ಗ ಮಧ್ಯೆ ಅಕ್ವಾಡೆಕ್ಟ್‌ ನಿರ್ಮಿಸಬೇಕಿದ್ದು, ಇದು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ನೀರಾವರಿ ನಿಗಮಕ್ಕೆ ಸವಾಲಿನ ಕೆಲಸವಾಗಿದೆ.

ಇದನ್ನು ಸಾಕಾರಗೊಳಿಸಲಿಕ್ಕಾಗಿಯೇ ಯೋಜನೆಯ ಗುತ್ತಿಗೆ ಪಡೆದಿರುವ ಶಂಕರ ನಾರಾಯಣ ಕನ್‌ಸ್ಟ್ರಕ್ಷನ್‌ ಕಂಪನಿ ನಿಗದಿತ ಅವಧಿಯೊಳಗೆ ಅಕ್ವಾಡೆಕ್ಟ್‌ ಕಾಮಗಾರಿ ಪೂರ್ಣಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೊಕ್ಕಿದೆ.

ವಿಜಯಪುರ ತಾಲ್ಲೂಕಿನ ಬುರಾಣಾಪುರದ ಬಳಿ ಅಕ್ವಾಡೆಕ್ಟ್ ನಿರ್ಮಾಣಕ್ಕೆ ಅಗತ್ಯವಿರುವ ಯು ಟ್ರಫ್‌, ಯು ಗರ್ಡರ್‌ಗಳನ್ನು ಕಂಪನಿ ನಿರ್ಮಿಸಿಕೊಳ್ಳುತ್ತಿದೆ. ನಿತ್ಯವೂ ಇಲ್ಲಿ ಇವುಗಳ ಕಾಮಗಾರಿ ನಡೆದಿದೆ. ಗುಣಮಟ್ಟಕ್ಕೆ ಒತ್ತು ನೀಡಿದ್ದು, ಇವು ವಾಟರ್‌ಫ್ರೂಪ್‌ ಸಿಮೆಂಟ್ ತೊಟ್ಟಿಯಂತಿವೆ.

‘ಒಂದೊಂದು ಯು ಟ್ರಫ್ 220 ಟನ್‌, 250 ಟನ್ ಭಾರವಿವೆ. ಒಂದೊಂದರ ತಯಾರಿಗೆ ಏಳು ದಿನ ಸಮಯ ಬೇಕಿದೆ. 15 ದಿನ ಕ್ಯೂರಿಂಗ್ ಮಾಡಿದ ಬಳಿಕ ಬೃಹತ್ ಲಾರಿಯಲ್ಲಿ 45 ಕಿ.ಮೀ. ದೂರ ಸಾಗಿಸಿ, 30 ಮೀಟರ್‌ ಎತ್ತರದ ಸಿಮೆಂಟ್‌ ಕಂಬಗಳ ಮೇಲೆ ಕೂರಿಸಲಾಗುತ್ತಿದೆ. ಇದಕ್ಕೆ ಕ್ರೇನ್‌ ಬಳಸಿಕೊಳ್ಳಲಾಗುತ್ತಿದ್ದು, ಜನರು ಕುತೂಹಲದಿಂದ ವೀಕ್ಷಿಸುವುದು ಸಾಮಾನ್ಯವಾಗಿದೆ’ ಎನ್ನುತ್ತಾರೆ ಶಂಕರ ನಾರಾಯಣ ಕನ್‌ಸ್ಟ್ರಕ್ಷನ್‌ ಕಂಪನಿಯ ಪ್ರಾಜೆಕ್ಟ್‌ ಎಜಿಎಂ ಎಸ್‌.ಡಿ.ಕುಲಕರ್ಣಿ.

‘ಅಕ್ವಾಡೆಕ್ಟ್‌ ಕಾಮಗಾರಿಗೆ ಆಧುನಿಕ ಸ್ಪರ್ಶ ನೀಡದಿದ್ದರೆ, ಮುಗಿಯಲು ಸಾಕಷ್ಟು ವರ್ಷಗಳೇ ಬೇಕಿತ್ತು. ನೀರಾವರಿ ಕಾಮಗಾರಿಗಳಿಗಾಗಿ ಈ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವುದು ನಾವೇ ಮೊದಲು’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಶಂಕರ ರಾಠೋಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

*
5.37 ಕಿ.ಮೀ. ಅಕ್ವಾಡೆಕ್ಟ್‌ ನಿರ್ಮಿಸಬೇಕಿದೆ. ಇದು ಪೂರ್ಣಗೊಂಡರೆ ಮಾತ್ರ ನೀರು ಹರಿಯಲಿದೆ. ಇದಕ್ಕಾಗಿ ಅಹೋರಾತ್ರಿ ಕೆಲಸ ನಡೆದಿದೆ.
–ಶಂಕರ ರಾಠೋಡ, ಇಇ, ಕೆಎನ್‌ಎನ್‌ಎಲ್‌

*
ಒಂದೊಂದು ಯು ಟ್ರಫ್ 2, 3 ಮೀಟರ್ ಎತ್ತರವಿವೆ. ನಿತ್ಯ ಸರಾಸರಿ ಎರಡರಿಂದ ನಾಲ್ಕನ್ನು ಮಾತ್ರ ಕೂರಿಸಬಹುದು.
–ಎಸ್‌.ಡಿ.ಕುಲಕರ್ಣಿ, ಪ್ರಾಜೆಕ್ಟ್‌ ಎಜಿಎಂ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !