ರಾಕ್ ಉದ್ಯಾನದಲ್ಲಿ ‘ಆಲಮಟ್ಟಿ ಎಕ್ಸ್‌ಪ್ರೆಸ್‌ ರೈಲು’ ಆರಂಭ

7

ರಾಕ್ ಉದ್ಯಾನದಲ್ಲಿ ‘ಆಲಮಟ್ಟಿ ಎಕ್ಸ್‌ಪ್ರೆಸ್‌ ರೈಲು’ ಆರಂಭ

Published:
Updated:
Prajavani

ಆಲಮಟ್ಟಿ: ಇಲ್ಲಿನ ಉದ್ಯಾನದಲ್ಲಿ ದಡಕ್‌... ದಡಕ್‌... ಶಬ್ದದ ಜತೆ ನಡು ನಡುವೆ ಕೂ ಎನ್ನುವ ಕೂಗು... ಕುತೂಹಲದಿಂದ ವೀಕ್ಷಿಸುತ್ತಿದ್ದ ಪ್ರವಾಸಿಗರು, ಅದರೊಳಗೆ ನಾ ಕೂಡಬೇಕು, ನೀನು ಕೂಡಬೇಕು ಎಂಬ ಬಯಕೆ ವ್ಯಕ್ತಪಡಿಸಿದರು.

ಮತ್ತಷ್ಟು ಪ್ರವಾಸಿಗರನ್ನು ಆಲಮಟ್ಟಿಗೆ ಆಕರ್ಷಿಸಲು, ಕೆಬಿಜೆಎನ್ಎಲ್‌ ರಾಕ್‌ ಉದ್ಯಾನದಲ್ಲಿ ಹೊಸ ವರ್ಷದ ಆರಂಭದ ದಿನವಾದ ಮಂಗಳವಾರದಿಂದ ‘ಆಲಮಟ್ಟಿ ಎಕ್ಸ್‌ಪ್ರೆಸ್‌ ಪುಟಾಣಿ ರೈಲು’ ಸಂಚಾರ ಆರಂಭಿಸಿದ ಸಂದರ್ಭ ಗೋಚರಿಸಿದ ಚಿತ್ರಣವಿದು.

ಮುಖ್ಯ ಎಂಜಿನಿಯರ್ ಟಿ.ವೆಂಕಟೇಶ, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಎಸ್.ಎನ್.ಜೋಷಿ ಈ ಪುಟಾಣಿ ರೈಲಿಗೆ ಚಾಲನೆ ನೀಡಿದರು. ಶಂಕ್ರಯ್ಯ ಮಠಪತಿ, ಆರ್‌ಎಫ್‌ಓ ಮಹೇಶ ಪಾಟೀಲ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

15 ದಿನಗಳಿಂದ ಪ್ರಾಯೋಗಿಕವಾಗಿ ಆರಂಭಗೊಂಡಿದ್ದ ಈ ರೈಲಿಗೆ ಮಂಗಳವಾರ ಅಧಿಕೃತ ಚಾಲನೆ ನೀಡಲಾಯಿತು. ಒಂದು ಎಂಜಿನ್‌, ನಾಲ್ಕು ಬೋಗಿಗಳುಳ್ಳ, ವಿದ್ಯುತ್ ಚಾಲಿತ ಈ ರೈಲು ರಾಕ್‌ ಉದ್ಯಾನದಲ್ಲಿ ಒಂದು ಟ್ರಿಪ್‌ನಲ್ಲಿ 1.5 ಕಿ.ಮೀ ದೂರ ಚಲಿಸಲಿದೆ.

ರಾಕ್‌ ಉದ್ಯಾನದ ಮಕ್ಕಳ ಉದ್ಯಾನದ ಹಿಂಬದಿಯಿಂದ ಆರಂಭಗೊಳ್ಳುವ ಈ ರೈಲು 40 ಎಕರೆ ವಿಸ್ತಾರದ ರಾಕ್ ಉದ್ಯಾನದ ಪ್ರತಿ ಸೆಕ್ಟರ್‌ನಲ್ಲಿ ಸಂಚರಿಸಲಿದೆ.

ಈ ಉದ್ಯಾನದಲ್ಲಿ ಸಿಲ್ವರ್‌ ಲೇಕ್‌, ಪಕ್ಷಿ, ಸೂರ್ಯ, ಬೋಗವಿಲ್ಲಾ, ಮರುಭೂಮಿ, ಕುದುರೆ, ಸರಿಸೃಪ, ಮಕ್ಕಳ, ಆದಿವಾಸಿಗಳು ಸೇರಿ ನಾನಾ ಸೆಕ್ಟರ್‌ಗಳಿದ್ದು, ಅರ್ಧ ಚಂದ್ರಾಕೃತಿಯಲ್ಲಿ ಕಂಗೊಳಿಸುತ್ತಿವೆ.

ಬೃಹತ್ತಾಕಾರದಲ್ಲಿ ಬೆಳೆದ ಮರಗಳು ಪ್ರವಾಸಿಗರಿಗೆ ತಂಪನ್ನುಂಟು ಮಾಡುತ್ತವೆ. ಆದರೆ ಪುಟಾಣಿಗಳು, ಹಿರಿಯ ನಾಗರಿಕರು ಹಲವರಿಗೆ ಇವೆಲ್ಲಾ ಸೆಕ್ಟರ್‌ಗಳನ್ನು ಸುತ್ತುವುದು ಅಸಾಧ್ಯ. ಸುತ್ತಲೂ ಕನಿಷ್ಠ 3 ಗಂಟೆ ಸಮಯವಾದರೂ ಬೇಕು, ತ್ವರಿತವಾಗಿ ಎಲ್ಲವನ್ನೂ ಆರಾಮವಾಗಿ ಕುಳಿತು ವೀಕ್ಷಿಸಲು ಅನುಕೂಲವಾಗಲು ‘ಆಲಮಟ್ಟಿ ಎಕ್ಸ್‌ಪ್ರೆಸ್‌’ ವಿದ್ಯುತ್ ಚಾಲಿತ ರೈಲು ಸೇವೆ ಆರಂಭಗೊಂಡಿದೆ.
ಇದು ಭರಪೂರ ಮನೋರಂಜನೆ ಒದಗಿಸುವುದರ ಜೊತೆಗೆ ಆರಾಮದಾಯಕ ಉದ್ಯಾನ ವೀಕ್ಷಣೆಗೆ ನೆರವಾಗಲಿದೆ ಎಂಬ ಅನಿಸಿಕೆ ಪ್ರವಾದೋದ್ಯಮ ಪ್ರಿಯರದ್ದು.

ಇದು ಪರಿಸರ ಸ್ನೇಹಿ ರೈಲಾಗಿದ್ದು, ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ವಿದ್ಯುತ್ ಶಕ್ತಿಯಿಂದ ಈ ರೈಲು ಚಲಿಸಲಿದ್ದು, ವಿದ್ಯುತ್ ವೋಲ್ಟೇಜ್ 230 ವೋಲ್ಟ್‌ನಿಂದ 80 ವೋಲ್ಟ್‌ಗೆ ಕಡಿಮೆಗೊಂಡು ಇದಕ್ಕೆ ವಿದ್ಯುತ್ ಶಕ್ತಿ ಲಭಿಸಲಿದೆ. ಅಹ್ಮದಾಬಾದ್‌ನಲ್ಲಿ ಈ ರೈಲನ್ನು ನಿರ್ಮಿಸಲಾಗಿದ್ದು, ಪ್ರತಿ ಬೋಗಿಯಲ್ಲಿ ನಾಲ್ವರು ದೊಡ್ಡವರು ಕೂಡಬಹುದು, ಸದ್ಯ ಎರಡು ಬೋಗಿಗಳನ್ನು ಅಳವಡಿಸಲಾಗಿದ್ದು, ನಂತರ ಹಂತ ಹಂತವಾಗಿ ಇನ್ನೆರೆಡು ಬೋಗಿಗಳನ್ನು ಅಳವಡಿಸಲಾಗುವುದು ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ತಿಳಿಸಿದರು.

ರಾಕ್ ಉದ್ಯಾನದ 1.5 ಕಿ.ಮೀ ಉದ್ದದವರೆಗೆ ಹಳಿ ಹಾಕಲಾಗಿದೆ. ಇಡೀ ಯೋಜನಾ ವೆಚ್ಚ ₹ 46.52 ಲಕ್ಷ ಇದ್ದು, ಅಹ್ಮದಾಬಾದ್‌ನ ಎಂ.ಆರ್.ಶೆಟ್ಟಿ ಎಜೆನ್ಸಿ ಈ ಕಾರ್ಯ ಕೈಗೊಂಡಿದೆ ಎಂಬ ಮಾಹಿತಿ ನೀಡಿದರು.

ಸದ್ಯ ಇನ್ನೂ ನಾಲ್ಕೈದು ದಿನ ಉಚಿತವಾಗಿ ಈ ರೈಲು ಸಂಚರಿಸಲಿದ್ದು, ನಂತರ ಪ್ರತಿ ವ್ಯಕ್ತಿಗೆ ದರ ನಿಗದಿಗೊಳಿಸಲಾಗುವುದು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !