ಕತ್ತಲ ಬದುಕಿಗೆ ಆಲಿಯಾ ‘ಬೆಳಕು’

7

ಕತ್ತಲ ಬದುಕಿಗೆ ಆಲಿಯಾ ‘ಬೆಳಕು’

Published:
Updated:

ನಾಗರಿಕ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡ ಬಡವರ ಬದುಕಿನ ಬಂಡಿ ಇದು. ಸೂರ್ಯ ಮುಳುಗುವುದಕ್ಕೂ ಮೊದಲು ಉಂಡು ಮಲಗುವ ಇವರು ಕಗ್ಗತ್ತಲ ಜೊತೆ ಗೆಳೆತನ ಬೆಳೆಸಿಕೊಂಡವರು. ಹುಣ್ಣಿಮೆ ಚಂದ್ರ ಮೂಡಿ ಬಂದಾಗಲೇ ಇವರ ಮನೆಯಲ್ಲಿ, ಮನದಲ್ಲಿ ಹೊಸ ಬೆಳಕು. ಆ ಬೆಳಕೇ ದಾರಿ ದೀಪ. ಕತ್ತಲ ನಡುವೆ ಮಿಂಚು ಚಾಟಿ ಬೀಸಿದರೆ ಭಯದ ನಡುವೆಯೂ ಬೆಳಕಿನ ಹೊಂಗಿರಣ. ಹಿಂದಕ್ಕೆ ದೊಡ್ಡ ಹಳ್ಳ, ಬಲಕ್ಕೆ ಬೃಹತ್‌ ಕಾಂಪೌಂಡ್, ಎಡಕ್ಕೆ ಅರಣ್ಯದ ನಡುವೆ ಸಿಲುಕಿರುವ ಇವರು ಕಳೆದ 35 ವರ್ಷಗಳಿಂದ ಕತ್ತಲಲ್ಲೇ ಉಳಿದಿದ್ದಾರೆ. ಶೂನ್ಯ ಸೌಲಭ್ಯದಿಂದ ಬದುಕು ನಡೆಸುತ್ತಿರುವ ಇವರಿಗೆ ಹಣತೆ ಕಂಡರೆ ಭಯ. ಏಕೆಂದರೆ, ಹತ್ತು ವರ್ಷಗಳ ಹಿಂದೆ ಅದೇ ಹಣತೆಯ ಬೆಳಕಿನಿಂದಲೇ ಬದುಕು ಸುಟ್ಟುಕೊಂಡಿದ್ದಾರೆ. ಆ ಕರಾಳ ದಿನವನ್ನು ನೆಪಿಸಿಕೊಂಡರೆ ಈಗಲೂ ಭಯಬೀಳುತ್ತಾರೆ. ರಾತ್ರಿಯ ಹೊತ್ತಿನಲ್ಲಿ ಹಣತೆ ಹಚ್ಚಿಕೊಳ್ಳುವುದಿಲ್ಲ. ಸೂರ್ಯನ ಜೊತೆಯಲ್ಲೇ ಮಲಗುತ್ತಾರೆ, ಸೂರ್ಯೋದಯದೊಂದಿಗೆ ಮೇಲೇಳುತ್ತಾರೆ. ಇವರ ಬದುಕಿನ ಪಾಳಿ; ಬೆಳಿಗ್ಗೆ 6ರಿಂದ ಸಂಜೆ 7!

ಮಂಡ್ಯ ಜಿಲ್ಲೆ, ಕೆ.ಆರ್‌.ಪೇಟೆ ತಾಲ್ಲೂಕು ಕಿಕ್ಕೇರಿಯ ಹೊರವಲಯದಲ್ಲಿರುವ 50 ಗುಡಿಸಲುಗಳ ಕೊಳೆಗೇರಿಯ ಕಥೆ ಇದು. ಸ್ಟಾರ್ಟ್ ಸಿಟಿ, ಡಿಜಿಟಲ್ ಯುಗದಲ್ಲೂ ಇಲ್ಲಿನ ಕುಟುಂಬಗಳು ಮೂರೂವರೆ ದಶಕಗಳಿಂದ ಬೆಳಕು ಕಾಣದೆ ಬದುಕುತ್ತಿದ್ದವು. ಸೌಲಭ್ಯಗಳಿಗಾಗಿ ಕಾದು ಸುಸ್ತಾಗಿರುವ ಸೂರ್ಯನ ಪಾಳಿಗೆ ಹೊಂದುಕೊಂಡಿದ್ದರು. ಇಂಥವರ ಬಾಳಲ್ಲೀಗ ಹೊಸಬೆಳಕು ಮೂಡಿದೆ. ಈಗ ಸಂಜೆ 7ಕ್ಕೆ ಅವರು ಮಲಗುವುದಿಲ್ಲ, ಮಹಿಳೆಯರು ಗುಡಿಸಲು ಮುಂದೆ ಕುಳಿತು ಇಸ್ತ್ರಿ ಎಲೆ ಕಟ್ಟುತ್ತಾರೆ, ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಗಂಡಸರು ರೇಡಿಯೂ ಹಾಡು ಕೇಳುತ್ತಾ ಕಬ್ಬಿಣ ಬಡಿಯುತ್ತಾರೆ. ಕೊಳೆಗೇರಿಯ ಮಂದಿ ತಿಂಗಳಿಂದ ಹೀಗೆ ಹೊಸ ಬೆಳಕಿನ ಬದುಕು ಕಂಡಿದ್ದಾರೆ. ಸೌರಶಕ್ತಿಯ ರೂಪದಲ್ಲಿ ರಾತ್ರಿಯ ಹೊತ್ತಲ್ಲೂ ಸೂರ್ಯ ಕೆಳಗಿಳಿದು ಬಂದಿದ್ದಾನೆ. ಅದು ಯಾರಿಗೂ ತಿಳಿಯದ ಹಾಗೆ!

ಈ ನಿವಾಸಿಗಳ ಬದುಕಲ್ಲಿ ಹೊಸ ಬೆಳಕು ಮೂಡಿಸಿದವರು ಬೇರಾರೂ ಅಲ್ಲ, ಬಾಲಿವುಡ್‌ ನಟಿ ‘ಆಲಿಯಾ ಭಟ್‌’! ಮಂಡ್ಯ ಜಿಲ್ಲೆಯ ಜನರಿಗೆ ಬಾಲಿವುಡ್‌ ನಟನಟಿಯರ ಪರಿಚಯ ಅಷ್ಟಾಗಿ ಇಲ್ಲ. ಹಿಂದಿ ಬಾರದ ಕಾರಣ ಇವರಿಗೆ ಸ್ಯಾಂಡಲ್‌ವುಡ್‌ ಮಂದಿಯ ಆಕರ್ಷಣೆ ಹೆಚ್ಚು. ಆದರೂ ಜಿಲ್ಲೆಯಲ್ಲಿ ಈಗ ಆಲಿಯಾ ಭಟ್‌ರದ್ದೇ ಧ್ಯಾನ. ಆಕೆ ಸಿನಿಮಾ ನಟಿಯಂತಲ್ಲ. ಅವರು ಮಾಡಿರುವ ಸಾಮಾಜಿಕ ಕಾರ್ಯಕ್ಕಾಗಿ. ಕಿಕ್ಕೇರಿ ಕೊಳೆಗೇರಿ ಜನರಿಗೆ ಸೌರ ದೀಪ ಕೊಟ್ಟಿದ್ದಕ್ಕಾಗಿ. ಬೆಳಕನ್ನೇ ಕಾಣದ ಕೊಳೆಗೇರಿಯನ್ನು ಗುರುತಿಸಿದ್ದಕ್ಕಾಗಿ.

ಕಳೆದ ತಿಂಗಳು (ಜುಲೈ) 13ರಂದು ಯಾವುದೇ ಮುನ್ಸೂಚನೆ ಇಲ್ಲದೆ ಕೊಳೆಗೇರಿಗೆ ಬಂದ ಬೆಂಗಳೂರಿನ ‘ಆರೋಹ’ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಈ ಕೊಳೆಗೇರಿಯಲ್ಲಿ ಸೌರ ದೀಪಗಳನ್ನು ಅಳವಡಿಸಿದ್ದಾರೆ. ಅವರೇ ಕಂಬ ನೆಟ್ಟು ನಾಲ್ಕು ಬೀದಿ ಹಾಕಿದ್ದಾರೆ. 40 ಗುಡಿಸಲು ನಿವಾಸಿಗಳಿಗೆ ತಲಾ ಮೂರು ಸೋಲಾರ್‌ ಬಲ್ಬ್‌, ಒಂದು ಸೌರ ಫಲಕ ಕೊಟ್ಟಿದ್ದಾರೆ. ಮಕ್ಕಳ ಓದಿಗಾಗಿ ಪ್ರತಿ ಮನೆಗೆ ಒಂದೊಂದು ಸೋಲಾರ್‌ ಸ್ಟಡಿ ಲ್ಯಾಂಪ್‌ ಕೊಟ್ಟಿದ್ದಾರೆ. ಆಲಿಯಾ ಭಟ್‌, ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡ ನಂತರವಷ್ಟೇ ಇದ್ದೊಂದು ಸಾಮಾಜಿಕ ಕಾರ್ಯದ ವಿಚಾರ ಬೆಳಕಿಗೆ ಬಂದಿದೆ. ಅಲ್ಲಿಯವರೆಗೆ ಕೊಳೆಗೇರಿ ನಿವಾಸಿಗಳಿಗೂ ಈ ಬಗ್ಗೆ ತಿಳಿದಿರಲಿಲ್ಲ. ‘ಮಿ ವಾರ್ಡ್‌ರೋಬ್‌ ಈಸ್‌ ಸು ವಾರ್ಡ್‌ರೋಬ್‌’ (ನನ್ನ ಉಡುಪು ನಿಮ್ಮವು) ಆಂದೋಲನದ ಭಾಗವಾಗಿ ಆಲಿಯಾ ಈ ಕಾರ್ಯ ಮಾಡಿದ್ದಾರೆ.

ಆಲಿಯಾ ಈಗ ಪುಣ್ಯಾತ್ಗಿತ್ತಿ:
ಕತ್ತಲಲ್ಲಿ ಬದುಕು ಕಳೆಯುತ್ತಿದ್ದ ಕೊಳೆಗೇರಿ ಜನರು ಹೊಸಬೆಳಕು ಕೊಟ್ಟ ಆಲಿಯಾ ಭಟ್‌ ಅವರನ್ನು ಮನಸಾರೆ ಪ್ರೀತಿಸುತ್ತಿದ್ದಾರೆ. ಅವರ ಹೆಸರನ್ನೂ ಸರಿಯಾಗಿ ಉಚ್ಛಾರಣೆ ಮಾಡದಲು ಬಾರದವರು ಟನ್‌ಗಟ್ಟಲೇ ಪ್ರೀತಿ ತೋರಿಸುತ್ತಿದ್ದಾರೆ. ಮಹಿಳೆಯರಂತೂ ನಟಿಗೆ ‘ಪುಣ್ಯಾತ್ಗಿತ್ತಿ’ ಎಂಬ ಬಿರುದು ಕೊಟ್ಟಿದ್ದಾರೆ.

‘ನಮ್ಮ ಸ್ಥಿತಿ ಆ ಪುಣ್ಯಾತ್ಗಿತ್ತಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ, ನಾವೀಗ ಸೂರ್ಯ ಮುಳುಗಿದರೂ ನಾವು ಎದ್ದಿರುತ್ತೇವೆ. ನಮ್ಮ ಮಕ್ಕಳು ರಾತ್ರಿ 9 ಗಂಟೆವರೆಗೂ ಪುಸ್ತಕ ಹಿಡಿದು ಓದುತ್ತಾರೆ. ನಾವು ಎಷ್ಟೋ ಬಾರಿ ಕಿಕ್ಕೇರಿ ಗ್ರಾಮ ಪಂಚಾಯಿತಿಯ ಮುಂದೆ, ಬೆಳಕು ಕೊಡಿ, ಕುಡಿಯುವ ನೀರು ಕೊಡಿ ಎಂದು ಒತ್ತಾಯಿಸಿ ಧರಣಿ ಕುಳಿತಿದ್ದೇವೆ. ಅದರೆ ನಮ್ಮ ಕಷ್ಟ ಯಾರಿಗೂ ತಿಳಿಯಲಿಲ್ಲ. ಇಲ್ಲಿಯವರೇ ನಮ್ಮ ಕಷ್ಟ ಕೇಳಿಲ್ಲ, ಯಾರೋ ಪರಿಚಯವಿಲ್ಲದ ಹುಡುಗಿಯೊಬ್ಬಳು ನಮಗೆ ಬೆಳಕು ಕೊಟ್ಟಿದ್ದನ್ನು ಜೀವನ ಪರ್ಯಂತ ಮರೆಯುವುದಿಲ್ಲ’ ಎಂದು ಕೊಳೆಗೇರಿ ನಿವಾಸಿ ಮಂಜಮ್ಮ ಹೇಳಿದರು.

ಈ ಕೊಳೆಗೇರಿಯಲ್ಲಿ ಎರಡು ಭಾಗಗಳಿವೆ. ಕೆಲವರು ಗುಡಿಸಲಿಗೆ ಶೀಟ್‌ ಹಾಕಿಕೊಂಡಿದ್ದಾರೆ. ಅಂತಹ 6 ಮನೆಗಳು ಇಲ್ಲಿವೆ. ಉಳಿದ 44 ಮನೆಗಳು ಸಂಪೂರ್ಣ ತೆಂಗಿನ ಗರಿಯಿಂದ ಕಟ್ಟಿದ ಗುಡಿಸಲು. 5 ಎಕರೆ ಜಾಗದಲ್ಲಿ ಒಂದರ ಪಕ್ಕ ಒಂದರಂತೆ ಬೆಂಕಿಕಡ್ಡಿ ಪೆಟ್ಟಿಗೆ ಜೋಡಿಸಿದಂತೆ ಗುಡಿಸಿಲುಗಳನ್ನು ನಿರ್ಮಿಸಲಾಗಿದೆ. ಆಲಿಯಾ ಭಟ್‌ ಎಲ್ಲವುದಕ್ಕೂ ದೀಪ ಕೊಟ್ಟಿದ್ದಾರೆ.


ಮೊದಲ ಬಾರಿ ಕೊಳೆಗೇರಿಯಲ್ಲಿ ಬೆಳಕು ಬಂದಾಗ 

ಈ ಬೆಳಕು ಶಾಶ್ವತವೇ?
ಈಗ ಆಲಿಯಾ ಭಟ್‌ ಇಲ್ಲಿ ಸೌರ ದೀಪ ಅಳವಡಿಸಿ ಹೋಗಿದ್ದಾರೆ. ಬೆಳಕು ಕಂಡ ಬಡವರ ಬದುಕು ಬದಲಾಗಿದೆ. ಆದರೆ ಈ ಬೆಳಕು ಶಾಶ್ವತವಲ್ಲ, ಮತ್ತೆ ಅವರೇ ದೀಪ ಕೊಡಬೇಕು ಎಂದು ನಿರೀಕ್ಷಿಸುವುದು ಥರವಲ್ಲ. ನಮ್ಮ ದಪ್ಪ ಚರ್ಮದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ಜನರ ಸಂಕಷ್ಟ ಅರಿಯಬೇಕು, ಕತ್ತಲ ಬದುಕಿಗೆ ಮುಕ್ತ ಶಾಶ್ವತವಾಗಿ ಮುಕ್ತಿ ಕೊಡಬೇಕು ಎಂಬುದೇ ಈ ಬಡಜನರ ಒತ್ತಾಸೆ.

‘ನಮ್ಮ ಗುಡಿಸಲುಗಳ ಮೇಲೆಯೇ ವಿದ್ಯುತ್‌ ಲೈನ್‌ ಹೋಗಿದೆ. ಆದರೂ ನಮಗೆ ಬೆಳಕಿಲ್ಲ. ನಾವು ಪ್ರಾಣಿಗಿಂತಲೂ ಕಡೆಯಾಗಿ ಜೀವನ ಮಾಡಿದೆವು. ನಮ್ಮ ಮಕ್ಕಳು ಇದೇ ರೀತಿ ಜೀವಿಸಬೇಕಾ? ಅವರು ಎರಡು ಅಕ್ಷರ ಕಲಿಯಬಾರದೇ?’ ಎಂದು ಗುಡಿಸಲು ನಿವಾಸಿ ಶಿವರಾಜ್‌ ಹೇಳಿದರು.

ಏನಿದು ಆಲಿಯಾ ಅಭಿಯಾನ?
ಹಲವು ಪ್ರಯೋಗಾತ್ಮಕ ಪಾತ್ರಗಳಲ್ಲಿ ಮಿಂಚಿರುವ ನಟಿ ಆಲಿಯಾ ಭಟ್‌ ಸಮಾಜಸೇವೆಯ ಉದ್ದೇಶದಿಂದ ‘ಮಿ ವಾರ್ಡ್‌ರೋಬ್‌ ಈಸ್‌ ಸು ವಾರ್ಡ್‌ರೋಬ್‌’ ಅಭಿಯಾನ ಆರಂಭಿಸಿದ್ದಾರೆ. ವೈಯಕ್ತಿಕ ವಸ್ತ್ರ ಹಾಗೂ ಶೂಟಿಂಗ್‌ ಸಂದರ್ಭದಲ್ಲಿ ಪಡೆದ ಉಡುಪುಗಳನ್ನು ತಮ್ಮ ಅಭಿಮಾನಿಗಳಿಗೆ ಮಾರಾಟ ಮಾಡಿ ಬಂದ ಹಣವನ್ನು ಸಮಾಜಸೇವೆಯಲ್ಲಿ ತೊಡಗಿಸುತ್ತಿದ್ದಾರೆ. ಮೇ 19, 20ರಂದು ಮುಂಬೈನಲ್ಲಿ (ಸ್ಟೈಲ್‌ಕ್ರ್ಯಾಕರ್‌ ನೈಟ್‌ ಮಾರ್ಕೆಟ್‌) ಮೊದಲ ಮಾರಾಟ ನಡೆಯಿತು. ಗ್ರಾಹಕರು ಕನಿಷ್ಠ ಎರಡು ಉಡುಪು ಕೊಳ್ಳಲು ಅವಕಾಶ ನೀಡಲಾಗಿತ್ತು. ಮೊದಲ ಮಾರಾಟದಲ್ಲಿ ಬಂದ ಹಣದಲ್ಲಿ ಆಲಿಯಾ ಕಿಕ್ಕೇರಿ ಕೊಳೆಗೇರಿಗೆ ಸೌರ ದೀಪ ಕೊಡಿಸಿದ್ದಾರೆ. ಬೆಂಗಳೂರು ಮೂಲದ ‘ಆರೋಹ’ ಎನ್‌ಜಿಒ ಮೂಲಕ ಸರ್ಕಾರದ ಕಣ್ಣಿಗೆ ಬೀಳದ ಸಮಾಜದ ಕಡೆಯ ಜನಸಮುದಾಯವನ್ನು ಗುರುತಿಸಿದ್ದಾರೆ.

ತ್ಯಾಜ್ಯ ವಸ್ತುಗಳಿಂದ ಸೋಲಾರ್‌ ದೀಪ
‘ಆರೋಹ’ ಸಂಸ್ಥೆ ತ್ಯಾಜ್ಯ ವಸ್ತುಗಳಿಂದ ಸೋಲಾರ್‌ ದೀಪ ತಯಾರಿಸಿ ಬೆಳಕು ಕಾಣದ ಜನಸಮುದಾಯಗಳಿಗೆ ವಿತರಣೆ ಮಾಡುತ್ತಿದೆ. ಪಂಕಜ್‌ ದೀಕ್ಷಿತ್‌, ತೃಪ್ತಿ ಅಗರ್‌ವಾಲ್‌ ಇದರ ಸಂಸ್ಥಾಪಕರು. ಕಳೆದ ನಾಲ್ಕು ವರ್ಷಗಳಿಂದ ‘ಲೈಟರ್‌ ಆಫ್‌ ಲೈಟ್‌’ (ಬೆಳಕು ಹಚ್ಚುವವನು) ಕಾರ್ಯಕ್ರಮ ನಡೆಸುತ್ತಿರುವ ಈ ಸಂಸ್ಥೆ ನಿರ್ಲಕ್ಷ್ಯಕ್ಕೆ ಒಳಗಾದ ಜನಸಮುದಾಯಕ್ಕೆ ಬೆಳಕು ನೀಡುತ್ತಿದೆ. ಸಂಸ್ಥೆಯ ಸಿಬ್ಬಂದಿ ಸ್ಥಳೀಯ ಜನರ ಜೊತೆ ಬೆರೆತು ಸ್ಥಳದಲ್ಲಿ ಸಿಗುವ ತಾಜ್ಯ ವಸ್ತಗಳಿಂದ ಸೋಲಾರ್‌ ದೀಪ ತಯಾರಿಸುತ್ತಾರೆ. ಪಿವಿಸಿ ಪೈಪ್‌, ಪ್ಲಾಸ್ಟಿಕ್‌ ಬಾಟೆಲ್‌, ಅಲ್ಯುಮಿನಿಯಂ ವೈರ್‌, ಫೈಬರ್‌ ಬೋರ್ಡ್‌ ಮುಂತಾದ ವಸ್ತುಗಳಿಂದ ದೀಪ ತಯಾರಿಸುತ್ತಾರೆ.

‘ಪ್ಲಾಸ್ಟಿಕ್‌ ವಸ್ತುಗಳ ಪುನರ್‌ಬಳಕೆಯೇ ನಮ್ಮ ಉದ್ದೇಶ. ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ 15 ನಿರ್ಲಕ್ಷಿತ ಜನಸಮುದಾಯವನ್ನು ಗುರುತಿಸಿ ಅವರಿಗೆ ಬೆಳಕು ನೀಡಿದ್ದೇವೆ. ನಾವು ಈ ಬಾರಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿದ ಕಾರಣ ನಮ್ಮ ಕೆಲಸಕ್ಕೂ ಬೆಳಕು ಬಂದಂತಾಗಿದೆ’ ಎಂದು ಆರೋಹ ಸಂಸ್ಥಾಪಕರಲ್ಲಿ ಒಬ್ಬರಾದ ಪಂಕಜ್‌ ದೀಕ್ಷಿತ್‌ ಹೇಳಿದರು.

ಆಲಿಯಾ ಸಂದೇಶ
‘ದೇಶದಲ್ಲಿ ಇನ್ನೂ ಹಲವು ಕುಟುಂಬಗಳು ಬೆಳಕು ಕಂಡಿಲ್ಲ. ಅವರ ಬಾಳು ಬೆಳಗಲು ಪರಿಸರ ಸ್ನೇಹಿ ಸೌರ ದೀಪಗಳು ರಚನಾತ್ಮಕ ವಿಧಾನವಾಗಿವೆ.ಇದರಿಂದ ಅವರಿಗೆ ಗುಣಾತ್ಮಕ ಜೀವನ ನೀಡಿದಂತಾಗುತ್ತದೆ. ನನ್ನ ಈ ಕೆಲಸದಿಂದ ಮಂಡ್ಯ ಜಿಲ್ಲೆ, ಕಿಕ್ಕೇರಿಯಲ್ಲಿ 200 ಜನರ ಬಾಳು ಬೆಳಗಿದೆ. ಇಂತಹ ಕೆಲಸ ಮುಂದುವರಿಸುತ್ತೇನೆ. ಸಾಮಾಜಿಕ ಕೆಲಸ ಮಾಡುವ ಸಂಸ್ಥೆಗಳ ಜೊತೆ ಸದಾ ಕೈಜೋಡಿಸುತ್ತೇನೆ’ ಎಂದು ಆಲಿಯಾ ಭಟ್‌ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂಪರ್ಕ ಸೇತುವಾದ ‘ಪ್ರಜಾವಾಣಿ’
‘ಆರೋಹ’ ಸಂಸ್ಥೆ ಕಳೆದ ಒಂದೂವರೆ ವರ್ಷದ ಹಿಂದೆ ಚಿಕ್ಕಬಳ್ಳಾಪುರದ ಕೊಳೆಗೇರಿಯೊಂದರಲ್ಲಿ ಸೌರದೀಪ ಅಳವಡಿಸಿತ್ತು. ಇದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿಯಾಗಿತ್ತು. ವರದಿಯ ಜೊತೆ ಸಂಸ್ಥಾಪಕ ಪಂಕಜ್‌ ದೀಕ್ಷಿತ್‌ ಸಂಪರ್ಕ ಸಂಖ್ಯೆಯೂ ಪ್ರಕಟಗೊಂಡಿತ್ತು. ವರದಿಯನ್ನು ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಸಂಚಾಲಕ, ಕಿಕ್ಕೇರಿ ಹೋಬಳಿ ಗಂಗೇನಹಳ್ಳಿ ಗ್ರಾಮಸ್ಥ ಗಿರೀಶ್‌ ಓದಿದ್ದರು. ಪತ್ರಿಕೆಯಲ್ಲಿದ್ದ ಸಂಖ್ಯೆಗೆ ಗಿರೀಶ್‌ ಕರೆ ಮಾಡಿದರು. ಕಿಕ್ಕೇರಿ ಕೊಳೆಗೇರಿ ಜನರ ಸ್ಥಿತಿಯನ್ನು ಆರೋಹ ಗಮನಕ್ಕೆ ತಂದರು. ಆರೋಹ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸೌರದೀಪ ಅಳವಡಿಸಿದರು.

‘ನಾನು ಪ್ರಜಾವಾಣಿ ನೋಡಿ ಅಲ್ಲಿದ್ದ ಸಂಖ್ಯೆಗೆ ಕರೆ ಮಾಡಿದೆ. ತಿಂಗಳೊಳಗೆ ಆರೋಹ ಸಂಸ್ಥೆಯವರು ನನಗೆ ಕರೆ ಮಾಡಿ ಕಿಕ್ಕೇರಿಗೆ ಬಂದು ಕೊಳೆಗೇರಿ ನೋಡಿಕೊಂಡು ಹೋದರು. ನಂತರ ಏಳೆಂಟು ಜನರು ಬಂದು ಕೊಳೆಗೇರಿಯಲ್ಲೇ ಕುಳಿತು ಬಾಟೆಲ್‌ಗಳಿಂದ ಸೌರ ದೀಪ ತಯಾರಿಸಿ ಅಳವಡಿಸಿದರು’ ಎಂದು ಗಿರೀಶ್‌ ಹೇಳಿದರು.

ಚಿತ್ರಗಳು: ಸಂತೋಷ್‌ ಚಂದ್ರಮೂರ್ತಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !