ಗಿರಿರಾಜಕೋಳಿ ಸಾಕಣೆಯಲ್ಲಿ ಅವ್ಯವಹಾರ ಆರೋಪ: ಕಾವೇರಿದ ಚರ್ಚೆ, ತನಿಖೆಗೆ ಆಗ್ರಹ

7
ಜಿಲ್ಲಾ ಪಂಚಾಯಿತಿ ಸಭೆ

ಗಿರಿರಾಜಕೋಳಿ ಸಾಕಣೆಯಲ್ಲಿ ಅವ್ಯವಹಾರ ಆರೋಪ: ಕಾವೇರಿದ ಚರ್ಚೆ, ತನಿಖೆಗೆ ಆಗ್ರಹ

Published:
Updated:

ಚಾಮರಾಜನಗರ: ಪಶುಸಂಗೋಪನೆ ಇಲಾಖೆಯು ಬಡವರಿಗೆ ವಿತರಿಸುವ ಉದ್ದೇಶಕ್ಕಾಗಿ ಜಾರಿಗೆ ತಂದಿರುವ ಗಿರಿರಾಜಕೋಳಿ ಸಾಕಣೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್‌ ಅವರು ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ವಿಶೇಷ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಭೆಗೆ ಇಲಾಖೆಯ ಪ್ರಗತಿ ವಿವರಗಳನ್ನು ನೀಡಿದ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶ ಡಾ. ಪದ್ಮನಾಭ್‌ ಅವರು ₹12 ಲಕ್ಷ ವೆಚ್ಚದಲ್ಲಿ 14 ಸಾವಿರ ಗಿರಿರಾಜ ಕೋಳಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನವೀನ್‌, ‘ಒಬ್ಬ ಫಲಾನುಭವಿಗೆ 10ರಂತೆ ಒಬ್ಬ ಜಿಲ್ಲಾ ಪಂಚಾಯಿತಿ ಸದಸ್ಯನ ಮೂಲಕ 10 ಜನರಿಗೆ ಒಟ್ಟು 100 ಕೋಳಿಗಳನ್ನು ವಿತರಿಸಲಾಗಿದೆ. 23 ಸದಸ್ಯರನ್ನು ಒಟ್ಟಾಗಿ ಲೆಕ್ಕ ಹಾಕಿದರೆ, 2,300 ಕೋಳಿಗಳು ಆಯಿತು. ಹಾಗಿದ್ದರೆ ಉಳಿದ ಕೋಳಿಗಳು ಎಲ್ಲಿ ಹೋದವು’ ಎಂದು ಪ್ರಶ್ನೆ ಮಾಡಿದರು. 

ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ಸದಸ್ಯ ಚೆನ್ನಪ್ಪ ಅವರು, ‘₹12 ಲಕ್ಷ ರೂಪಾಯಿಗೆ 14 ಸಾವಿರ ಕೋಳಿಗಳನ್ನು ಸಾಕಣೆ ಮಾಡಿದರೆ, ಒಂದು ಕೋಳಿಗೆ ಎಷ್ಟು ಖರ್ಚಾದಂತಾಯಿತು? ಇಲಾಖೆ ಇದಕ್ಕೆ ಸ್ಪಷ್ಟನೆ ನೀಡಬೇಕು’ ಎಂದು ಪಟ್ಟು ಹಿಡಿದರು.

ಬಿಜೆಪಿ ಸದಸ್ಯ ಬಾಲರಾಜು ಮಾತನಾಡಿ, ‘ನಾನು 20 ಫಲಾನುಭವಿಗಳಿಗೆ ಕೋಳಿಗಳನ್ನು ವಿತರಣೆ ಮಾಡಿದ್ದೇನೆ. ಎಲ್ಲ ಸದಸ್ಯರು 200 ಕೋಳಿಗಳನ್ನು ವಿತರಣೆ ಮಾಡಿದ್ದರೂ 4,300 ಕೋಳಿಗಳು ಆಗುತ್ತವೆ. ಉಳಿದ ಕೋಳಿಗಳು ಎಲ್ಲಿ ಹೋದವು’ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಪದ್ಮನಾಭ್‌, ‘ಜಿಲ್ಲಾ ಪಂಚಾಯಿತಿ ಸದಸ್ಯರ ಮೂಲಕವೇ ವಿತರಿಸಲಾಗಿದೆ. ಎಲ್ಲದಕ್ಕೂ ‌ಲೆಕ್ಕ ಇದೆ. ನೀಡುತ್ತೇನೆ’ ಎಂದರು.

ಇನ್ನೊಬ್ಬ ಸದಸ್ಯ ಸಿ.ಎನ್‌. ಬಾಲರಾಜು ಮಾತನಾಡಿ, ‘ಕೋಳಿ ನೀಡುವ ಬದಲಿಗೆ ‌ಫಲಾನುಭವಿಗಳಿಗೆ ದುಡ್ಡನ್ನೇ ವಿತರಿಸಬಹುದಲ್ಲವೇ’ ಎಂದು ಪ್ರಶ್ನಿಸಿದರು. ಸದಸ್ಯೆ ಇಶ್ರತ್‌ ಭಾನು ಮಾತನಾಡಿ, ‘ಕೋಳಿಯ ಬದಲು ಕುರಿಗಳನ್ನು ನೀಡಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದರು.

ಕೆರೆಹಳ್ಳಿ ನವೀನ್‌ ಮಾತನಾಡಿ, ‘₹12 ಲಕ್ಷದಲ್ಲಿ 14 ಸಾವಿರ ಕೋಳಿ ಅಂದರೆ ಒಂದು ಕೋಳಿಗೆ ₹85.71 ಆಯಿತು. ಒಂದು ಮೊಟ್ಟೆ ₹4ರಿಂದ ₹5 ಸಿಗುತ್ತದೆ. ಮಾರುಕಟ್ಟೆಯಲ್ಲಿ ಮರಿಗೆ ₹45ಕ್ಕಿಂತ ಹೆಚ್ಚಿಲ್ಲ. ಕೋಳಿಸಾಕಣೆ ಯೋಜನೆಯೇ ಬೋಗಸ್‌. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಹರೀಶ್‌ ಕುಮಾರ್‌ ಮಾತನಾಡಿ, ‘ಸದಸ್ಯರು ಹೇಳುವುದರಲ್ಲಿ ಅರ್ಥ ಇದೆ. 14 ಸಾವಿರ ಕೋಳಿಗಳನ್ನು ಯಾರ ಮೂಲಕ, ಯಾರಿಗೆಲ್ಲ ವಿತರಿಸಲಾಗಿದೆ ಎಂಬ ಬಗ್ಗೆ ತಕ್ಷಣ ಲೆಕ್ಕ ಕೊಡಿ. ಇಲ್ಲದಿದ್ದರೆ ಈ ಪ್ರಕರಣದ ತನಿಖೆಗೆ ಆದೇಶಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ. ಯೋಗೇಶ್‌ ಅವರು, ಸಂಪೂರ್ಣ ವಿವರಗಳನ್ನು ಸಭೆಯ ಮುಂದಿಡುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.

ಅಂಕಿ ಅಂಶ

* ₹12 ಲಕ್ಷ ಯೋಜನಾ ವೆಚ್ಚ

* 14 ಸಾವಿರ ವಿತರಣೆ ಮಾಡಿರುವ ಗಿರಿರಾಜ ಕೋಳಿಗಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !