ಒಳಿತಿಗಾಗಿ ಬಾದಾಮಿ ಯಾವಾಗ? ಎಷ್ಟು?

7

ಒಳಿತಿಗಾಗಿ ಬಾದಾಮಿ ಯಾವಾಗ? ಎಷ್ಟು?

Published:
Updated:
Deccan Herald

ದ್ರಾಕ್ಷಿ, ಗೋಡಂಬಿ, ಬಾದಾಮಿ ಏನಿದ್ದರೂ ಬರೀ ಶ್ರೀಮಂತರಷ್ಟೇ ತಿನ್ನಬೇಕು ಎನ್ನುವ ನಂಬಿಕೆ ಈಗಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಹುತೇಕರು ತಮ್ಮ ಡಯಟ್ ಪಟ್ಟಿಯಲ್ಲಿ ಬಾದಾಮಿಗೆ ಅಗ್ರಸ್ಥಾನ ಕೊಟ್ಟಿರುತ್ತಾರೆ. ಕೂದಲು, ಚರ್ಮ, ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳ ಕಾರಣಕ್ಕಾಗಿ ಬಾದಾಮಿ ಸೇವನೆಯೂ ಹೆಚ್ಚುತ್ತಿದೆ. ಬಾದಾಮಿಯಲ್ಲಿನ ಪ್ರಯೋಜನಗಳ ಕುರಿತು ತಿಳಿಸಲು ಮತ್ತು ಬಾದಾಮಿ ತಿನ್ನಲು ಪ್ರೋತ್ಸಾಹಿಸುವ ಸಲುವಾಗಿಯೇ ಆಲ್ಮಂಡ್ ಬೋರ್ಡ್ ಆಫ್ ಕ್ಯಾಲಿಫೋರ್ನಿಯಾ ರೂಪುಗೊಂಡಿದೆ. ಬಾದಾಮಿ ಆಮದಿನಲ್ಲಿ ಭಾರತಕ್ಕೀಗ ಮುಂಚೂಣಿ ಸ್ಥಾನವೂ ದಕ್ಕಿದೆ.

ಬಾದಾಮಿ ಬಗೆಗಿನ ಪ್ರಯೋಜನಕಾರಿ ಮಾಹಿತಿ ಜತೆಗೆ ಕೆಲವು ಮಿಥ್ಯೆಗಳೂ ಇವೆ. ಈ ಬಗ್ಗೆ ನವದೆಹಲಿಯ ಪೌಷ್ಟಿಕಾಂಶ ತಜ್ಞೆ ಡಾ.ರಿತಿಕಾ ಸಮದ್ಧರ್ ಮಾಹಿತಿ ನೀಡಿದ್ದಾರೆ.

ಬಾದಾಮಿಯಲ್ಲಿ ಕೊಬ್ಬು ಹೆಚ್ಚು ಇರುತ್ತೆ. ತಿಂದರೆ ದಪ್ಪಗಾಗುತ್ತಾರೆ ಅನ್ನುವ ಮಾತು ನಿಜವೇ? 
ತುಂಬಾ ಹಿಂದಿನಿಂದಲೂ ಬಾದಾಮಿಯಲ್ಲಿ ಹೆಚ್ಚು ಕೊಬ್ಬಿನಂಶ ಇದೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಅದು ಹಾಗಲ್ಲ. ಬಾದಾಮಿಯಲ್ಲಿ ಕೊಬ್ಬಿನ ಅಂಶ ಇರುವುದು ನಿಜ. ಆದರೆ, ಅದು ಒಳ್ಳೆಯ ಕೊಬ್ಬು. ತುಂಬಾ ಮಂದಿ ಬಾದಾಮಿಯನ್ನು ತಿಂದರೆ ದಪ್ಪಗಾಗುತ್ತಾರೆ. ಅದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚುತ್ತದೆ ಎಂದೇ ಪರಿಭಾವಿಸಿದ್ದಾರೆ. ಇದರಿಂದ ಹೃದ್ರೋಗ ಬರುವ ಸಾಧ್ಯತೆ ಇದೆ ಎಂದೇ ತಿಳಿದಿದ್ದಾರೆ. ಆದರೆ, ಅದು ಹಾಗಲ್ಲ. ಆರೋಗ್ಯಕರ ಪೌಷ್ಟಿಕ ಆಹಾರ. ಮಕ್ಕಳಿಂದ ಹಿಡಿದು ಮುದುಕರತನಕ ಮತ್ತು ಹೃದ್ರೋಗಪೀಡಿತರು, ಮಧುಮೇಹಿಗಳೂ ಬಾದಾಮಿಯನ್ನು ಯಾವುದೇ ಪೂರ್ವಗ್ರಹ ಪೀಡಿತರಾಗದೇ ಸೇವಿಸಬಹುದು.

ಮಧುಮೇಹಿಗಳೂ ಬಾದಾಮಿಯನ್ನು ತಿನ್ನಬಹುದೇ?
ಹೌದು. ಖಂಡಿತಾ ತಿನ್ನಬಹುದು. ಆದರೆ, ಇನ್ಸುಲಿನ್ ಬಳಸದ ಮಧು ಮೇಹಿಗಳು ಬಾದಾಮಿಯನ್ನು ತಿನ್ನಬಹುದು. ನವದೆಹಲಿಯಲ್ಲಿ ಕಾರ್ಡಿಯೊಲಾಜಿಸ್ಟ್ ಡಾ.ಅನೂಪ್ ಮಿಶ್ರಾ ಅವರು ಈ ಬಗ್ಗೆ ಅಧ್ಯಯನ ಮಾಡಿದ್ದಾರೆ. ಬಾದಾಮಿ ಸೇವಿಸುವ ಮಧುಮೇಹಿಗಳ ಲಿಪಿಡ್ ಪ್ರೊಫೈಲ್ ಮತ್ತು ಹೃದಯದ ಆರೋಗ್ಯ ಚೆನ್ನಾಗಿರುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಕಿಡ್ನಿ ರೋಗಿಗಳಿಗೆ ಹೊರತು ಪಡಿಸಿ ಉಳಿದೆಲ್ಲರೂ ಬಾದಾಮಿಯನ್ನು ಸೇವಿಸಬಹುದು.

ದೇಹದ ತೂಕ ನಿಯಂತ್ರಣಕ್ಕೆ ಬಾದಾಮಿ ತಿನ್ನಬೇಕಂತೆ?
ಹೌದು. ಸಂಜೆ ಹೊತ್ತಿನಲ್ಲಿ ಹೊಟ್ಟೆ ಹಸಿವಿಗೆ ಸಮೋಸ, ಬಿಸ್ಕತ್ ತಿನ್ನುವ ಬದಲು ಮುಷ್ಟಿಯಷ್ಟು ಬಾದಾಮಿಯನ್ನು ತಿನ್ನಿ ಅನ್ನೋದು ನ್ಯೂಟ್ರಿಷಿಯನ್ ಆಗಿ ನನ್ನ ಸಲಹೆ. ಹೊರಗಿನ ಅನಾರೋಗ್ಯಕರ ತಿಂಡಿಗಳನ್ನು ತಿನ್ನುವುದಕ್ಕಿಂತ ಮಧ್ಯಾಹ್ನ ಊಟಕ್ಕೂ ಮುನ್ನ ಮತ್ತು ಸಂಜೆಯ ಬಾಯಿಚಪಲಕ್ಕೆ ಬಾದಾಮಿ ತಿನ್ನುವುದು ಉತ್ತಮ. ಬಾದಾಮಿಯಲ್ಲಿ ನಾರಿನಾಂಶ ಮತ್ತು ಪ್ರೋಟಿನ್ ಎರಡೂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ದೇಹತೂಕ ಇಳಿಸಲು ನೇರವಾಗುತ್ತದೆ.

ಒಂದು ದಿನಕ್ಕೆ ಎಷ್ಟು ಬಾದಾಮಿ ತಿನ್ನಬಹುದು?
 ಒಬ್ಬ ವ್ಯಕ್ತಿ ದಿನಕ್ಕೆ ಒಂದು ಮುಷ್ಟಿಯಷ್ಟು ಅಥವಾ 20ರಿಂದ 30 ಬಾದಾಮಿ ತಿನ್ನಬಹುದು.

ಬೆಳಗಿನ ಉಪಾಹಾರ ಸೇವಿಸದಿದ್ದರೂ ಪರವಾಗಿಲ್ಲ. ಬಾದಾಮಿ ತಿನ್ನಿ ಅಂತಾರಲ್ಲ...
ಹೌದು. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಸ್ಥರ ತನಕ ಬಹುತೇಕರು ಸಮಯದ ಅಭಾವದ ಕಾರಣಕ್ಕಾಗಿ ಬೆಳಗಿನ ತಿಂಡಿಯನ್ನು ತಿನ್ನುವುದಿಲ್ಲ. ಇದಕ್ಕಾಗಿ ಒಂದು ಅಧ್ಯಯನವನ್ನೇ ನಡೆಸಲಾಯಿತು. ಒಂದು ಗುಂಪಿಗೆ ಬಾದಾಮಿ ತಿನ್ನಲು ಹೇಳಲಾಯಿತು. ಮತ್ತೊಂದು ಗುಂಪಿಗೆ ಸಾಧಾರಣ ಬಿಸ್ಕತ್ ನೀಡಲಾಗಿತ್ತು. ಎಂಟು ವಾರಗಳ ಅಧ್ಯಯನ ನಂತರ ಈ ಗುಂಪುಗಳನ್ನು ಪರಿಶೀಲಿಸಿದಾಗ ಬಾದಾಮಿ ತಿಂದ ಗುಂಪಿನವರಲ್ಲಿ ತಿಂಡಿ ತಿಂದ ನಂತರವೂ ‌ಸಕ್ಕರೆಯ ಮಟ್ಟ ಹೆಚ್ಚಿರಲಿಲ್ಲ ಮತ್ತು ಇವರಲ್ಲಿ ಒಳ್ಳೆಯ ಕೊಬ್ಬಿನ ಪ್ರಮಾಣವೂ ಆರೋಗ್ಯಕರ ಸ್ಥಿತಿಯಲ್ಲಿತ್ತು. ಬೆಳಿಗ್ಗೆ ತಿಂಡಿ ತಿನ್ನಲಾಗದವರು ಮುಷ್ಟಿಯಷ್ಟಾದರೂ ಬಾದಾಮಿ ತಿನ್ನಬಹುದು. ರಾತ್ರಿಯಿಂದ ಏಳೆಂಟು ಗಂಟೆಗಳ ಕಾಲ ಹೊಟ್ಟೆ ಖಾಲಿಯಿರುವ ಕಾರಣ ನಿಮಗೆ ಸುಸ್ತು, ನಿಶ್ಯಕ್ತಿ ಕಾಡಬಹುದು. ಆದರೆ, ಬಾದಾಮಿ ತಿಂದಾಗ ತುಸುವಾದರೂ ದೇಹಕ್ಕೆ ಚೈತನ್ಯ ದೊರಕುತ್ತದೆ.

ಪುಟ್ಟ ಮಗುವಿಗೆ ಎಷ್ಟನೇ ವಯಸ್ಸಿನಿಂದ ಬಾದಾಮಿ ತಿನ್ನಲು ಕೊಡಬಹುದು?
ಮಗುವಿಗೆ ಒಂದು ವರ್ಷವಾದ ಮೇಲೆ ಬಾದಾಮಿ ತಿನ್ನಿಸಬಹುದು. ಆದರೆ, ಅದನ್ನು ಇಡಿಯಾಗಿ ಕೊಡದೇ ಬಾದಾಮಿಯನ್ನು ಪುಡಿ ಮಾಡಿ ಕೊಡಿ. ಇಡೀ ಬಾದಾಮಿಯನ್ನು ಹಾಗೇ ತಿಂದರೆ ಗಂಟಲಿನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇರುತ್ತದೆ. ಜ್ವರ, ಕೆಮ್ಮು ಇದ್ದಾಗಲೂ ಬಾದಾಮಿಯನ್ನು ತಿನ್ನಿಸಬಹುದು. ಇದರ ಬಗ್ಗೆ ಭಯ ಬೇಡ. ಬಾದಾಮಿಯಲ್ಲಿ ಎಣ್ಣೆಯ ಅಂಶ ಇರುವುದರಿಂದ ಬಹುತೇಕ ತಾಯಂದಿರು ಮಗುವಿಗೆ ಕೆಮ್ಮು ಆದಾಗ ಬಾದಾಮಿ ತಿನ್ನಲು ಕೊಡುವುದಿಲ್ಲ. ಆದರೆ, ಅದು ತಪ್ಪು ತಿಳಿವಳಿಕೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !