ಪರ್ಯಾಯ ಶೋಧಕರು ಸೋತಿದ್ದೆಲ್ಲಿ?

ಸೋಮವಾರ, ಜೂನ್ 17, 2019
28 °C
ಭ್ರಷ್ಟ ವ್ಯವಸ್ಥೆಗೆ ಪ್ರತಿರೋಧ ಒಡ್ಡಲು ನೈತಿಕ ನೆಲೆಯ ಪ್ರತಿರಾಜಕಾರಣದಿಂದ ಮಾತ್ರ ಸಾಧ್ಯ

ಪರ್ಯಾಯ ಶೋಧಕರು ಸೋತಿದ್ದೆಲ್ಲಿ?

Published:
Updated:
Prajavani

‘ಬಿಜೆಪಿಯು ಕೋಮುವಾದಿ ಪಕ್ಷ, ನರೇಂದ್ರ ಮೋದಿ ಅವರು ಮಹಾ ಸುಳ್ಳುಗಾರ, ದೇಶವು ಸರ್ವಾಧಿಕಾರದತ್ತ ಸಾಗಿದೆ, ಸಂವಿಧಾನಕ್ಕೆ ಅಪಾಯ... ಹಾಗಾಗಿ ಮೋದಿ ಅವರನ್ನು ಸೋಲಿಸಲೇಬೇಕು’. ಲೋಕಸಭಾ ಚುನಾವಣೆ ವೇಳೆ ಈ ಧಾಟಿಯ ಕೂಗು ಕೆಲವರಿಂದ ಬಲವಾಗಿ ಕೇಳಿಬಂದಿತು. ಪ್ರಾಧ್ಯಾಪಕರು, ಪತ್ರಕರ್ತರು, ಬರಹಗಾರರು, ಚಿಂತಕರು, ಹೋರಾಟಗಾರರನ್ನು ಒಳಗೊಂಡಿದ್ದ ಈ ಸಮೂಹದ ಕರೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿರಲಿಲ್ಲ. ಈ ವಾದವನ್ನು ಮುಂದಿಟ್ಟುಕೊಂಡು ಮತದಾರರನ್ನು ಪ್ರಭಾವಿಸಲು ಈ ತಂಡ ತಮ್ಮದೇ ಆದ ರೀತಿ, ವ್ಯಾಪ್ತಿ ಮತ್ತು ಮಿತಿಯಲ್ಲಿ ಶ್ರಮಿಸಿತು. ಇಂತಹ ಪ್ರಯತ್ನಕ್ಕೆ ಮನ್ನಣೆ ಸಿಕ್ಕಿತೇ? ಸಿಗದಿದ್ದರೆ ಕಾರಣಗಳೇನು? ಎಡವಿದ್ದೆಲ್ಲಿ? ಎದ್ದೇಳುವುದು ಹೇಗೆ? ಇಂತಹ ತಳಸ್ಪರ್ಶಿ ಪ್ರಶ್ನೆಗಳನ್ನು ಎತ್ತಿಕೊಂಡು ಉತ್ತರ ಕಂಡುಕೊಳ್ಳುವ ಸ್ವಾವಲೋಕನ ಕ್ರಿಯೆ ಯಾವುದೇ ವ್ಯಕ್ತಿ, ಸಂಘಟನೆ, ಚಿಂತನೆಗೆ ಅತ್ಯಗತ್ಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಸೋಲಿಸುವುದು ಎಂದರೆ ಇನ್ನೊಬ್ಬರನ್ನು ಅಥವಾ ಇನ್ನೊಂದು ಪಕ್ಷವನ್ನು ಗೆಲ್ಲಿಸುವುದು ಎಂದೇ ಅರ್ಥ. ಹಾಗೆಯೇ ಗೆಲ್ಲಬೇಕಾದ ಪಕ್ಷವು ಸೋಲುವ ಪಕ್ಷಕ್ಕಿಂತ ಉತ್ಕೃಷ್ಟವಾಗಿರಬೇಕು, ಭಿನ್ನವಾಗಿರಬೇಕು ಎಂಬುದು ಸರಳ ಪ್ರಾಥಮಿಕ ತಿಳಿವಳಿಕೆ. ನಾವೆಲ್ಲ ಹತ್ತಿರದಿಂದ ಕಂಡಂತೆ ಕರ್ನಾಟಕದಲ್ಲಿ ಕೋಮುವಿರೋಧಿ ನಿಲುವಿನ ಬಹುತೇಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಅಥವಾ ಪ್ರಜ್ಞಾಪೂರ್ವಕವಾಗಿಯೇ ಬದಿಗಿರಿಸಿದರು. ಸೋಲಿಸುವವರ ಬಗ್ಗೆ ಇದ್ದ ಸೈದ್ಧಾಂತಿಕ ಸ್ಪಷ್ಟತೆ ಗೆಲ್ಲಿಸಬೇಕಾದವರನ್ನು ಗುರುತಿಸುವಲ್ಲಿ ಮಸುಕುಮಸುಕಾಗಿತ್ತು; ಕೆಲವರ ಕಣ್ಣೊಳಗೆ ಪಕ್ಷಪಾತ, ಸ್ವಹಿತಾಸಕ್ತಿಯ ಪರದೆಯೂ ಹರಡಿತ್ತು. ಇಂತಹ ನಡೆಗೆ ಅಗತ್ಯವಾದ ಪೂರ್ವಸಿದ್ಧತೆ, ಕಠಿಣ ಪರಿಶ್ರಮ, ಸಂಘಟನಾ ಶಕ್ತಿ-ಆಸಕ್ತಿಗಳ ಕೊರತೆಯಂತೂ ನಿಚ್ಚಳವಾಗಿತ್ತು.

ಈಗಿರುವ ರಾಜಕೀಯ ಪಕ್ಷಗಳಿಗೆ, ವ್ಯಕ್ತಿಗಳಿಗೆ, ಶೈಲಿಗೆ, ಶಕ್ತಿಗೆ ‘ಪರ್ಯಾಯ’ ಎಂಬುದು ಪ್ರಸ್ತುತ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ಅಂತಹದೊಂದು ಪರ್ಯಾಯವನ್ನು ರೂಪಿಸುವ, ಜೊತೆಜೊತೆಗೇ ಜನರನ್ನು ಬದಲಾವಣೆಗೆ ಸಿದ್ಧಗೊಳಿಸುವ ಕಾರ್ಯ ಆಗಬೇಕಿದೆ. ಜನರಿಗೆ ಬೇಕಿರುವುದು ಭ್ರಷ್ಟ ವ್ಯವಸ್ಥೆಗೆ ಪ್ರತಿರೋಧ ಒಡ್ಡುವ ಸಾಚಾ ಪರಿಹಾರವೇ ಹೊರತು ಅಸ್ತಿತ್ವದಲ್ಲಿ ಇರುವ ಸಿದ್ಧ ಮಾದರಿಗೆ ಶುದ್ಧತೆಯ ಬಣ್ಣ ಲೇಪಿಸಿದ ಮತ್ತೊಂದು ಮುಖವಲ್ಲ. ಇದು ಸಾಧ್ಯವಾಗುವುದು ನೈತಿಕ ನೆಲೆಯ ಪ್ರತಿರಾಜ ಕಾರಣದಿಂದ ಮಾತ್ರ. ಪ್ರಚಲಿತ ವ್ಯವಸ್ಥೆಗೆ ಪರ್ಯಾಯ ಕಟ್ಟುವ ಕೆಲಸ ಜಾಲತಾಣಗಳಲ್ಲಿ ತೌಡು ಕುಟ್ಟಿದಷ್ಟು ಸುಲಭವಲ್ಲ. ಈ ಸವಾಲು ಸ್ವೀಕರಿಸುವ ಸಾಮರ್ಥ್ಯ ಬಹುಶಃ ಬಹುಸಂಖ್ಯೆಯ ಭಾಷಣಕಾರರಲ್ಲಿ, ಘೋಷಣೆಕಾರರಲ್ಲಿ ಇರಲಾರದು. ಹಾಗಾಗಿಯೇ ಅವರಿಗೆ ಕುರುಡುಗಣ್ಣಿಗೆ ಬದಲು ಮೆಳ್ಳಗಣ್ಣು ಆರಿಸಿಕೊಳ್ಳುವ ಸುಲಲಿತ ದಾರಿ ಗೋಚರಿಸುತ್ತದೆ. ಈಗ ಆಗಿರುವುದೂ ಅದೇ. 

ಕೋಮುವಾದಿ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಪರ್ಯಾಯ ಪ್ರತಿಪಾದಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಆಯ್ಕೆ ಮಾಡಿ ಮತದಾರರ ಮುಂದಿಟ್ಟರು. ಈ ಆಯ್ಕೆಗೆ ಬಳಸಿದ ಮಾನದಂಡಗಳಾಗಲೀ, ಸಮರ್ಥನೆಯ ಸಾಲುಗಳಾಗಲೀ ಮತದಾರರಿಗೆ ಮನದಟ್ಟಾಗುವಂತಿಲ್ಲ. ಅಷ್ಟಕ್ಕೂ ಆಯ್ಕೆಗೆ ಒದಗಿಸಿರುವ ಪರ್ಯಾಯ ರಾಜಕಾರಣಿಗಳ ವರಸೆಗಳನ್ನು ಕಣ್ಣಾರೆ ಕಂಡು ಅನುಭವಿಸಿರುವ ಜನರು ಇವರೆಲ್ಲರನ್ನೂ ಸಮಾನ ದುಷ್ಟರನ್ನಾಗಿ ಕಾಣುವುದರಲ್ಲಿ ತಪ್ಪೇನಿದೆ?

ಕೋಮುವಾದಿ ಪಕ್ಷವನ್ನು ಹೊರಗಿಡಲೆಂದೇ ರಚಿಸಲಾದ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಎಷ್ಟರಮಟ್ಟಿಗೆ ಪ್ರಗತಿಪರ ಆಗಿವೆ, ಆಗಿದ್ದವು ಎಂಬುದನ್ನು ಒರೆಗೆ ಹಚ್ಚಬೇಕಿದೆ; ಜಾತೀಯತೆ, ಭ್ರಷ್ಟತೆ, ಮೌಢ್ಯಾಚರಣೆ, ಅಧಿಕಾರದಾಹ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಕಾರ್ಪೊರೇಟ್ ವಲಯದ ಬಗೆಗಿನ ಒಲವು, ಆಡಳಿತದ ದುರ್ಬಳಕೆ...ಯಾವುದರಲ್ಲಿ ಹಿಂದಿವೆ? ಇತ್ತೀಚೆಗಿನ ಚುನಾವಣೆಯಲ್ಲಿ ಹರಿದ ಹಣದ ಹೊಳೆ, ಸುಳ್ಳುಗಳ ಮಳೆ, ಜಾತಿ ಗಣಿತ, ದಬ್ಬಾಳಿಕೆ ವಿಷಯದಲ್ಲಿ ಯಾರು ಅಗ್ರಗಣ್ಯರು ಎಂದು ನಿರ್ಣಯಿಸುವುದು ಕಡುಕಷ್ಟ. ಇಂದು ಇಲ್ಲಿ, ನಾಳೆ ಅಲ್ಲಿ ತಂಗಬಲ್ಲ ಲಾಭಬಡುಕರ ಹಿಂಡೇ ಇದೆ. ಇಂತಹವರನ್ನು ಯಾವ ಪಕ್ಷ ಅಥವಾ ತತ್ವದ ಚೌಕಟ್ಟಿನಲ್ಲಿ ಬೆಂಬಲಿಸಲು, ಸ್ವೀಕರಿಸಲು ಸಾಧ್ಯ?

ಒಂದು ಪಕ್ಷವನ್ನೋ, ರಾಜಕೀಯ ನಾಯಕತ್ವವನ್ನೋ ಚುನಾವಣೆ ಸಮಯದಲ್ಲಿ ಬೆಂಬಲಿಸಿದರೆ ಅಥವಾ ಅವರ ಪರ ವಾದ ಮಂಡಿಸಿದ ಮಾತ್ರಕ್ಕೆ ಪರ್ಯಾಯ ಸೂಚಕರ ಹೊಣೆ ಮುಗಿಯುವುದಿಲ್ಲ. ತಾವು ಬೆಂಬಲಿಸಿದ ಸರ್ಕಾರದ ನೀತಿನಿಲುವು, ನಡೆನುಡಿಗಳ ಬಗ್ಗೆ ಅನಧಿಕೃತ ವಿರೋಧಪಕ್ಷದಂತೆ ನಿಗಾ ವಹಿಸಬೇಕಾಗುತ್ತದೆ. ಆದರೆ ಈಗಿನ ರಾಜ್ಯ ಸರ್ಕಾರವನ್ನು ಬಹಿರಂಗವಾಗಿ ವಿಮರ್ಶೆಗೆ ಒಳಪಡಿಸುವ ವಿಷಯದಲ್ಲಿ ನಾಡಿನ ‘ಸಾಕ್ಷಿಪ್ರಜ್ಞೆ’ ಇನ್ನಷ್ಟೇ ಜಾಗೃತವಾಗಬೇಕಿದೆ!

ಹಾಗೆ ನೋಡಿದರೆ ಇದ್ದುದರಲ್ಲೇ ತಕ್ಕ ಪರ್ಯಾಯ ಒದಗಿಸಬಹುದಾದ ತಾತ್ವಿಕ ಸಾಮರ್ಥ್ಯ, ಶುಚಿತ್ವವು ಎಡಪಂಥೀಯ ಪಕ್ಷಗಳಿಗಿದೆ. ಆಮ್ ಆದ್ಮಿ ಪಕ್ಷ ನಗಣ್ಯವೇನಲ್ಲ. ಸ್ವರಾಜ್ ಇಂಡಿಯಾ ಕೂಡ ರಾಜ್ಯದಲ್ಲಿ ಕಾಲಿರಿಸಿದೆ. ಪ್ರಕಾಶ್ ರೈ, ರವಿ ಕೃಷ್ಣಾರೆಡ್ಡಿ ಅಂತಹವರ ಬಿಡಿ ಪ್ರಯತ್ನಗಳೂ ಜಾರಿಯಲ್ಲಿವೆ. ಆದಾಗ್ಯೂ ಪರ್ಯಾಯ ಶೋಧಕರಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳೇ ಅನಿವಾರ್ಯ ಆಗುವುದು ಸೋಜಿಗ ಮತ್ತು ಅನುಮಾನದ ಸಂಗತಿ. ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳುವ ಇಂತಹ ಅವಸರದ ನಿಲುವುಗಳಿಗೆ ಇನ್ನೊಂದು ಅಪಾಯಕಾರಿ ಮುಖವಿದೆ. ಇವು ಪರ್ಯಾಯ ಸೃಷ್ಟಿಯ ತೀವ್ರತೆ, ನಿರ್ವಾತವನ್ನು ತಾತ್ಕಾಲಿಕವಾಗಿ ತಗ್ಗಿಸಿ ಪ್ರಬಲ ಪರಿಹಾರದ ಮುಂದೂಡಿಕೆಗೆ ಕಾರಣವಾಗುತ್ತವೆ.

ಇನ್ನು, ಚುನಾವಣೆ ಸಂದರ್ಭದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ತರ್ಕಬದ್ಧವಾಗಿ ಜನರೆದುರು ಮಂಡಿಸುವ ವ್ಯವಸ್ಥಿತ ಪ್ರಯತ್ನ ಆಗಲೇ ಇಲ್ಲ. ಜನರ ಸಂಕಷ್ಟಗಳಿಗೆ ನೇರವಾಗಿ ಸಂಬಂಧಿಸಿದ ವಿಷಯಗಳನ್ನು ಕೈಗೆತ್ತಿಕೊಂಡು ಸಾರ್ವಜನಿಕ ಚರ್ಚೆಗೆ ಒಳಪಡಿಸುವ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಬದಲಾಗಿ ಮೋದಿ ವಿರೋಧಿ ಅಭಿಯಾನವನ್ನು ನಿರಂತರ ವ್ಯಕ್ತಿಗತ ಗೇಲಿಗೆ ಸೀಮಿತಗೊಳಿಸಿದ್ದರಿಂದ ಟೀಕೆಗಳ ಗಾಂಭೀರ್ಯ ಅಳಿಸಿಹೋಯಿತು.

ಸಾಮಾಜಿಕ ಮಾಧ್ಯಮವಂತೂ ಮೋದಿ ಅವರ ಪರ ಮತ್ತು ವಿರೋಧಿ ಟ್ರೋಲುಗಳಿಂದ ತುಂಬಿ ತುಳುಕಿತು. ರಾಜಕೀಯ ಪಕ್ಷಗಳು ಇಂತಹ ನಿರರ್ಥಕ ಮನರಂಜನೆ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ದೈನಂದಿನ ಅಪಹಾಸ್ಯಗಳ ಸೃಷ್ಟಿ, ಲೈಕು, ಶೇರು, ಕಾಮೆಂಟುಗಳಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನೂ ಒಳಗೊಂಡಂತೆ ಗಣ್ಯಾತಿಗಣ್ಯರು ಮುಳುಗಿದ್ದರು. ಇವರ ಅತಿರೇಕದ, ವ್ಯಸನ ಸ್ವರೂಪಿ ಟೀಕೆಟಿಪ್ಪಣಿಗಳು ಎಷ್ಟು ಏಕಮುಖಿಯಾಗಿದ್ದವು ಎಂದರೆ, ಇವರನ್ನು ಅಭಿಮಾನದಿಂದ ಕಾಣುವವರಲ್ಲೂ ಅನುಮಾನ ಹುಟ್ಟಿಸಿದವು. ಇವರು ಲೇವಡಿಗೆ ಆರಿಸಿಕೊಂಡ ದೇಶದ ಸುರಕ್ಷತೆಯಂತಹ ಭಾವನಾತ್ಮಕ ಸಂಗತಿಗಳಂತೂ ಮೋದಿ ಪರ ಅಭಿಪ್ರಾಯ ಕ್ರೋಡೀಕರಣಕ್ಕೆ ನೆರವಾದವು. ಆಡಳಿತದಲ್ಲಿರುವ ಪಕ್ಷಕ್ಕೆ ಸಹಜವಾಗಿಯೇ ತನ್ನ ಸಾಧನೆಯನ್ನು ಅಳೆಯುವ, ವೈಫಲ್ಯಗಳನ್ನು ಎತ್ತಿ ಹೇಳುವ ಕ್ರಿಯೆ ಅಪಥ್ಯ. ಚುನಾವಣೆಯ ಚರ್ಚೆ ಪರಸ್ಪರ ವ್ಯಂಗ್ಯ, ವಿಡಂಬನೆ, ಅಪಹಾಸ್ಯಗಳಲ್ಲಿ ತೇಲಿಹೋಗಿದ್ದರಿಂದ ಲಾಭವಾಗಿದ್ದು ಯಾರಿಗೆ ಎಂದು ಬಿಡಿಸಿ ಹೇಳಬೇಕಿಲ್ಲ.

ಪರ್ಯಾಯ ಶೋಧಕರ ಇಂತಹ ವರ್ತನೆಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವೈಫಲ್ಯ, ಕೋಮುವಾದಿ ಪಕ್ಷದ ಅಪಾಯ ಮತದಾರರ ಪರಿಗಣನೆಗೆ ಬಾರದಂತಾಯಿತು. ಅಷ್ಟೇ ಅಲ್ಲ, ಇದರಿಂದ ಜನ ಬಹುವಾಗಿ ಗೌರವಿಸುವ ಬುದ್ಧಿಜೀವಿಗಳ ವಿಶ್ವಾಸಾರ್ಹತೆಗೆ, ವಜನಕ್ಕೆ ಕುಂದುಂಟಾಗಿದ್ದನ್ನು ಗಮನಿಸಲೇಬೇಕು.ಜನರನ್ನು ಪರಿಣಾಮಕಾರಿಯಾಗಿ ತಲುಪುವ ಪ್ರಾಮಾಣಿಕ ಮಾರ್ಗವನ್ನೇ ಅರಿಯದವರು ಕೇವಲ ಜನಪರ, ಜೀವಪರ ಘೋಷಣೆಗಳನ್ನು ತಾವೇ ಕೂಗಿ, ತಾವೇ ಕೇಳಿಸಿಕೊಳ್ಳುವ ವಿಪರ್ಯಾಸಕ್ಕೆ ಈಡಾಗುವುದು ಅನಿವಾರ್ಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !