ಅಯ್ಯೋ ಮರೆವು...

ಬುಧವಾರ, ಮೇ 22, 2019
25 °C

ಅಯ್ಯೋ ಮರೆವು...

Published:
Updated:
Prajavani

‘ಯಾಕೋ ನಿಶಾಂತ್‌ ಹೋಮ್‌ವರ್ಕ್‌ ಮಾಡಿಲ್ಲ..? ಏಳನೇ ತರಗತಿ ಶಿಕ್ಷಕಿ ನಿಶಾಂತ್‌ ಎಂಬ ವಿದ್ಯಾರ್ಥಿಯನ್ನು ವಿಚಾರಿಸುತ್ತಾರೆ. ‘ನೆನಪಿರಲಿಲ್ಲ; ಮರೆತೇ ಹೋಗಿತ್ತು ಮ್ಯಾಮ್‌..’ ಹುಡುಗನ ಉತ್ತರ.

‘ವೈದ್ಯರ ಬಳಿ ಹೋಗಿದ್ದ 50ರ ಹರೆಯದ ಸರೋಜಮ್ಮ, ‘ನನಗೆ ನಿನ್ನೆಯಿಂದ ಹೊಟ್ಟೆ ಉರಿ ಉರಿ.. ಏನನ್ನೂ ತಿನ್ನಲಾಗುತ್ತಿಲ್ಲ.. ಎನ್ನುತ್ತಾರೆ. ನಿನ್ನೆ ಬೇರೇನಾದ್ರೂ ಗುಳಿಗೆ ನುಂಗಿದ್ರಾ..’ ವೈದ್ಯರು ಕೇಳಿದಾಗ ‘ನಿನ್ನೆ ಏನು ತಿಂದೆ ಎಂಬುದೇ ನನಗೆ ನೆನಪಿಲ್ಲ.. ಎಷ್ಟು ಪ್ರಯತ್ನಿಸಿದರೂ ಜ್ಞಾಪಕಕ್ಕೇ ಬರುತ್ತಿಲ್ಲ..’ ಸರೋಜಮ್ಮನ ಅಳಲು.

ಹೌದು, ಇದು ಮರೆಗುಳಿತನ. ಸಣ್ಣ ವಯಸ್ಸಿನವರಿಂದ ಹಿಡಿದು ವಯೋವೃದ್ಧರವರೆಗೆ ಹೆಚ್ಚಿನವರಲ್ಲಿ ಈಗೀಗ ಮರೆಗುಳಿತನ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ವೈದ್ಯಕೀಯ ಪರಿಭಾಷೆಯಲ್ಲಿ ’ಅಲ್ಜೈಮರ್‌’ ಎನಿಸಿಕೊಳ್ಳುವ ಇದು ಮಾನಸಿಕ ಸಮಸ್ಯೆಯಾದರೂ ಇದಕ್ಕೆ ಯಾವುದೇ ಔಷಧಿ ಇಲ್ಲ. ಮಾನಸಿಕ ಒತ್ತಡ ಕಡಿಮೆ ಮಾಡಿ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಂಡರೆ ಈ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಕಂಡುಕೊಳ್ಳಬಹುದು.

‘ಮೇಲ್ನೋಟಕ್ಕೆ ಅಲ್ಜೈಮರ್‌ಗೆ ಯಾವುದೇ ನಿರ್ದಿಷ್ಟವಾದ ಔಷಧಿ ಇಲ್ಲದಿರುವ ಕಾರಣ ಇದನ್ನು ಕಾಯಿಲೆಗೆ ಸಾಲಿಗೆ ಸೇರಿಸದೇ ಮಾನಸಿಕ ಸಮಸ್ಯೆ ಎಂದೇ ಪರಿಗಣಿಸಲಾಗುತ್ತಿದೆ. ಮಾನಸಿಕ ಒತ್ತಡದಂತಹ ಸಮಸ್ಯೆಗಳ ನಿರ್ವಹಣೆ ಮಾಡಿದರೆ ಮರೆವಿನ ಕಾಯಿಲೆ ವಾಸಿಯಾಗಬಹುದು. ಸಾಮಾನ್ಯವಾಗಿ 60 ವರ್ಷ ದಾಟಿದವರಲ್ಲಿ ಬರುವುದಾದರೂ ಇಂದು ಜನರ ಜೀವನಶೈಲಿಯ ಬದಲಾವಣೆ, ಅಸಮತೋಲಿತ ಆಹಾರ ಧೂಮಪಾನ, ಮದ್ಯಪಾನ ಮತ್ತಿತರ ಕಾರಣಗಳಿಂದ 50 ದಾಟಿದವರಲ್ಲೂ ಈ ಮರೆವಿನ ಸಮಸ್ಯೆ ಸಹಜ ಎಂಬಂತಾಗಿದೆ. ಜತೆಗೆ ಚಿಕ್ಕ ವಯಸ್ಸಿನ ಮಕ್ಕಳನ್ನೂ ಮರೆವು ಬಾಧಿಸುತ್ತಿದೆ. ಇದಕ್ಕೆ ಅತಿಯಾಗಿ ಜಂಕ್‌ಫುಡ್‌ ಸೇವನೆ, ಮಕ್ಕಳನ್ನು ಕಾಡುವ ಬೊಜ್ಜು, ಅತಿತೂಕ, ದೈಹಿಕ ವ್ಯಾಯಾಮದ ಕೊರತೆಯೂ ಕಾರಣಗಳಾಗುತ್ತಿವೆ’ ಎಂದು ಕಾರಣ ನೀಡುತ್ತಾರೆ ವೈದ್ಯರು.
ಇತ್ತೀಚೆಗೆ ಜನರಲ್ಲಿ ಮರೆವಿನ ಸಮಸ್ಯೆ ಹೆಚ್ಚುತ್ತಿದೆ. ಈ ಕುರಿತು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಭಾರತೀಯ ಅಲ್ಜೈಮರ್‌ ಸಂಘ ಸಮೀಕ್ಷೆ ನಡೆಸಿತ್ತು. ಇದರಲ್ಲಿ 45 ವರ್ಷ ದಾಟಿದವರನ್ನು ಪರೀಕ್ಷೆಗೊಳಪಡಿಸಲಾಯಿತು. ಸಮೀಕ್ಷೆಯಲ್ಲಿ ಭಾಗವಹಿಸಿದ 300 ಜನರನ್ನು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಇವರಲ್ಲಿ ಶೇ.10ರಷ್ಟು ಜನರಿಗೆ ಅಲ್ಜೈಮರ್‌ ಇದೆ ಎಂಬುದು ಸಾಬೀತಾಗಿದೆ.

‘ಮರೆವಿನ ಸಮಸ್ಯೆ ಜತೆಗೆ ಡಿಮೆನ್ಶಿಯಾಕ್ಕೆ ಒಳಗಾದವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಕೇರಳ ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿದೆ. ಆರೋಗ್ಯದ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವಲ್ಲಿಯೂ ಕೇರಳ ಮುಂದಿದೆ.

ಅಲ್ಜೈಮರ್‌ಗೆ ಕಾರಣಗಳೇನು?

ಜನರ ಜೀವಿತಾವಧಿ ಹೆಚ್ಚಿರುವುದು, ಜೀವನಶೈಲಿ ಬದಲಾವಣೆಯ ಅಂಶಗಳು, ಧೂಮಪಾನ, ಬೊಜ್ಜು, ಅತಿತೂಕ ಮುಂತಾದವು ಕಾರಣ. ಮರೆಗುಳಿತನ ಬಂದವರಲ್ಲಿ ನೆನಪಿನ ಶಕ್ತಿ ಕುಂದುವಿಕೆ ಅಲ್ಲದೆ ನಡವಳಿಕೆಯಲ್ಲೂ ಬದಲಾವಣೆಯಾಗುತ್ತದೆ.

`ಭಾರತದಲ್ಲಿ 2050ರ ಹೊತ್ತಿಗೆ ಹಿರಿಯ ವಯಸ್ಕರ ಸಂಖ್ಯೆ 143 ದಶಲಕ್ಷದಿಂದ 300 ದಶಲಕ್ಷಕ್ಕೆ ಹೆಚ್ಚಲಿದೆ. ಆದ್ದರಿಂದ ವಯಸ್ಸಾಗುತ್ತಿರುವ ಮೆದುಳಿನ ರೋಗಗಳಿಗೆ ಕೊಡುಗೆ ನೀಡುವ ಅಪಾಯ ಮತ್ತು ರಕ್ಷಣಾತ್ಮಕ ಅಂಶಗಳನ್ನು ಗುರುತಿಸಲು ಮತ್ತು ಸಂಶೋಧನೆಗಳಲ್ಲಿ ಹೂಡಿಕೆ ನಡೆಸುವುದು ಭಾರತಕ್ಕೆ ಮುಖ್ಯವಾಗಿದೆ. ನಮ್ಮ ಜ್ಞಾನವನ್ನು ಸಾರ್ವಜನಿಕ ಆರೋಗ್ಯ ನೀತಿಗಳಾಗಿ ನಾವು ಆಗ ಪರಿವರ್ತಿಸಿ ಡಿಮೆನ್ಷಿಯಾದ ಹೊರೆಯನ್ನು ಕಡಿಮೆ ಮಾಡಬಹುದು’ ಎಂದು ಹೇಳುತ್ತಾರೆ ಬೆಂಗಳೂರಿನ ಸೆಂಟರ್ ಫಾರ್ ಬ್ರೈನ್‌ ರಿಸರ್ಚ್‌ ಸೆಂಟರ್‌ನ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ರವೀಂದ್ರನಾಥ್.

‘ಅಲ್ಜೈಮರ್‌ ಮತ್ತು ಡಿಮೆನ್ಷಿಯಾಗಳು ಈಗ ಜಾಗತಿಕವಾಗಿ ಬೆಳೆಯುತ್ತಿರುವ ತೊಂದರೆಗಳು. ವಿಶ್ವದ ಎಲ್ಲೆಡೆ ಈ ಸಮಸ್ಯೆ ಜನರನ್ನು ಕಾಡುತ್ತಿದೆ. ಇದಕ್ಕಾಗಿ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವ ವಿಧಾನದ ಬಗ್ಗೆ ಜಾಗತಿಕ ಅರಿವು ಮೂಡಿಸಬೇಕಾಗಿದೆ’ ಎಂದು ಹೇಳುತ್ತಾರೆ ಅಲ್ಜೈಮರ್‌ ಅಸೋಸಿಯೇಷನ್‌ನ ಮುಖ್ಯ ವಿಜ್ಞಾನಾಧಿಕಾರಿ ಮರಿಯಾ ಸಿ. ಕಾರ್ರಿಲ್ಲೊ.

‘2018ರ ವಿಶ್ವ ಅಲ್ಜೀಮರ್ ವರದಿ ಪ್ರಕಾರ ಜಗತ್ತಿನಲ್ಲಿ ಡಿಮೆನ್ಷಿಯಾದಿಂದ ಬಳಲುತ್ತಿರುವ 50 ದಶಲಕ್ಷ ಜನರು ಇದ್ದಾರೆ. ಪ್ರತಿ ಮೂರು ಸೆಕೆಂಡಿಗೊಮ್ಮೆ ಜಗತ್ತಿನಲ್ಲಿ ಯಾರೊ ಒಬ್ಬರು ಡಿಮೆನ್ಷಿಯಾಗೆ ಒಳಗಾಗುತ್ತಾರೆ ಎಂಬುದು ಆತಂಕದ ವಿಚಾರ’ ಎನ್ನುತ್ತಾರೆ ಅವರು.

‘ಚಿಕಿತ್ಸೆ, ರೋಗ ತಡೆಯುವ ಸಂಶೋಧನೆಯ ಭರವಸೆಯ ಕ್ಷೇತ್ರ ಬಹು ವಿಭಾಗೀಯ ಜೀವನಶೈಲಿ ಮತ್ತು ನಡವಳಿಕೆಗಳಲ್ಲಿನ ಹಸ್ತಕ್ಷೇಪಗಳ ಕಡೆಗೆ ಗಮನ ಕೇಂದ್ರೀಕರಿಸಿದ್ದು, ಇವುಗಳಲ್ಲಿ ಆಹಾರಕ್ರಮ, ವ್ಯಾಯಾಮ, ಮೆದುಳಿನ ಆರೋಗ್ಯವನ್ನು ಸುಧಾರಿಸುವಂತಹ ಧ್ಯಾನ ಮುಂತಾದ ಅಭ್ಯಾಸಗಳು ಸೇರಿವೆ’ ಎಂದು ಹೇಳುತ್ತಾರೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತಜ್ಞರಾಗಿರುವ ಡಾ.ನರೇನ್‌ ರಾವ್‌.
‘ಹಲವಾರು ಪ್ರಮುಖ ವೈದ್ಯಕೀಯ ಪರೀಕ್ಷೆಗಳನ್ನು ಜಗತ್ತಿನ ಎಲ್ಲೆಡೆ ನಡೆಸಲಾಗುತ್ತಿದ್ದು, ಇವುಗಳಲ್ಲಿ ಅಲ್ಜೈಮರ್‌ ಮತ್ತು ಇತರೆ ಡಿಮೆನ್ಷಿಯಾಗಳಲ್ಲಿ ನೆನಪಿನ ಶಕ್ತಿ, ಮತ್ತು ಮೆದುಳಿನ ಕಾರ್ಯ ಸತತವಾಗಿ ಕುಗ್ಗುವುದನ್ನು ತಡೆಯಲು ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳನ್ನು ಅಳವಡಿಸುವುದರ ಪರಿಣಾಮವನ್ನು ಪರೀಕ್ಷಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !