ಶನಿವಾರ, ಡಿಸೆಂಬರ್ 7, 2019
22 °C

ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ; ಗೌರವ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಗುರುವಾರ ಬೆಳಿಗ್ಗೆಯೇ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಿಲ್ಲಾಡಳಿತ, ಸಂಘ–ಸಂಸ್ಥೆಗಳು, ಗಣ್ಯರು ಗೌರವ ನಮನ ಸಲ್ಲಿಸಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಉಪ ಮೇಯರ್ ಗೋಪಾಲ ಘಟಕಾಂಬಳೆ, ಪಾಲಿಕೆ ಸದಸ್ಯ ಶಂಕರ ಕುಂಬಾರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇನ್ನಿತರರು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಅರ್ಪಿಸಿದರು.

ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್‌ ಸುರಳಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಎಂ.ದೊಡಮನಿ, ಡಿಎಚ್‌ಒ ಮಹೇಂದ್ರ ಕಾಪಸೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎನ್.ಸಿಂಧೂರ ಸಹ ಸಂವಿಧಾನ ಶಿಲ್ಪಿಗೆ ಗೌರವ ನಮನ ಸಲ್ಲಿಸಿದರು.

ದಲಿತ ಸಂಘಟನೆಗಳ ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ರಮೇಶ ಆಸಂಗಿ, ಚಿದಾನಂದ ಛಲವಾದಿ, ಶಾಸ್ತ್ರಿ ಹೊಸಮನಿ. ಯಮನಪ್ಪ ಸಿದ್ದರಡ್ಡಿ, ಸುರೇಂದ್ರ ಬಾವಿಮನಿ, ಸಿದ್ದು ರಾಯಣ್ಣವರ, ಸಂತೋಷ ಶಹಾಪುರ, ವೆಂಕಟೇಶ ವಗ್ಗೇನವರ, ಸುಖದೇವ ಕಾಂಬಳೆ, ದಲಿತ ನೌಕರರ ಸಂಘದ ಅಧ್ಯಕ್ಷ ನಾಡಿಗೇರ, ಬಸವಂತ ಗುಣದಾಳ, ಮನೋಹರ ಕಾಂಬಳೆ, ಹನುಮಂತ ಬಿರಾದಾರ, ಶಿವಾನಂದ ಮಖಣಾಪುರ, ವಿವಿಧ ಸಂಘಟನೆಗಳ ಮುಖಂಡರಾದ ಶರಣು ಸಬರದ, ರಾಜು ಕಂಬಾಗಿ ಅಂಬೇಡ್ಕರ್‌ ವೃತ್ತದಲ್ಲಿ ನೆರೆದು, ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

‘ಭಾವುಕರಾಗದೆ ವಿಚಾರವಂತರಾಗಿ’
‘ರಾಷ್ಟ್ರೀಯ ನಾಯಕರ ದಿನಾಚರಣೆ ಮಾಡುವಾಗ ಹೆಚ್ಚು ಭಾವುಕರಾಗದೇ ವಿಚಾರವಂತರಾಗಬೇಕು. ಅಂಬೇಡ್ಕರ್‌ ಅವರನ್ನು ದಲಿತರಿಗೆ ಮಾತ್ರ ಮೀಸಲಿರಿಸಬೇಡಿ. ಅಂಬೇಡ್ಕರ್‌ ದಲಿತ ನಾಯಕರಲ್ಲ, ರಾಷ್ಟ್ರೀಯ ನಾಯಕ ಎಂಬುದನ್ನು ಅರಿಯಬೇಕು’ ಎಂದು ಕಲಬುರ್ಗಿಯ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಮಹಾ ವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಐ.ಎಸ್.ವಿದ್ಯಾಸಾಗರ ಅಭಿಪ್ರಾಯಪಟ್ಟರು.

ಮಹಿಳಾ ವಿ.ವಿ.ಯ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್‌ ಸಭಾಂಗಣದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಪ.ಜಾ./ಪ.ಪಂ. ಘಟಕ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ 62ನೇ ಮಹಾ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಂಡ ಪ್ರಬುದ್ಧ ಭಾರತ ನಿರ್ಮಾಣ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ನೀರಾವರಿ ಯೋಜನೆಯ ಜನಕ, ವಿದ್ಯುತ್‌ಶಕ್ತಿಯ ಹರಿಕಾರ, ರಿಜರ್ವ್‌ ಬ್ಯಾಂಕ್‌ನ ಸ್ಥಾಪನೆಯ ಮೂಲ ಪುರಷರಲ್ಲಿ ಅಂಬೇಡ್ಕರ್ ಅವರೂ ಸಹ ಒಬ್ಬರಾದವರು ಎಂಬುದನ್ನು ನಾವೆಲ್ಲರೂ ತಿಳಿದಿರಬೇಕು’ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

‘ರಾಷ್ಟ್ರೀಯ ನಾಯಕರನ್ನು ಯಥಾಸ್ಥಿತಿಯಲ್ಲಿ ಸ್ವೀಕರಿಸದಿದ್ದರೆ, ಇಡೀ ದೇಶಕ್ಕೆ ಹಾನಿಯಾಗುತ್ತದೆ’ ಎಂದು ಇದೇ ಸಂದರ್ಭ ಎಚ್ಚರಿಕೆ ನೀಡಿದರು.

‘ಈ ದೇಶದಲ್ಲಿ ಹುಟ್ಟಿದವನಿಗೆ ನೋವಿನ ಅನುಭವ ಆಗುವುದು, ದಲಿತನಾಗಿ ಹುಟ್ಟಿದ ಮೇಲೆಯೇ’ ಎಂದು ವಿಷಾದಿಸಿದ ಅವರು, ‘ಅಂಬೇಡ್ಕರ್ ಮಹಿಳಾ ಸಮಾನತೆ ಮತ್ತು ಸಬಲೀಕರಣಕ್ಕಾಗಿ ಶ್ರಮಿಸಿದವರು. ನಮ್ಮ ದೇಶದಲ್ಲಿ ಪೂಜಿಸಲ್ಪಡುವ ಜೀವ ಎಂದರೆ ಹೆಣ್ಣು. ಆ ಹೆಣ್ಣಿನ ಘನತೆ ಮತ್ತು ಗೌರವವನ್ನು ಕಾಪಾಡುವ ಜವಾಬ್ದಾರಿ ಸಮಾಜದ ಮೇಲಿದೆ’ ಎಂದು ಹೇಳಿದರು.

ಮಹಿಳಾ ವಿ.ವಿ.ಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಬಿ.ಮಾಡಗಿ ಮಾತನಾಡಿ ‘ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನಾಚರಣೆ ಕೇವಲ ಆಚರಣೆಯಾಗಬಾರದು. ಬದಲಾಗಿ ಅವರು ಸಮಾಜಕ್ಕೆ ನೀಡಿದ ಆದರ್ಶಗಳನ್ನು ಪಾಲಿಸುವಂತಾಗಬೇಕು’ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ತಿಳಿಸಿದರು.

ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎ.ಖಾಜಿ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಎಂ.ಜ್ಯೋತಿ ಉಪಸ್ಥಿತರಿದ್ದರು. ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತರ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ.ಜಾ./ಪ.ಪಂ. ಘಟಕದ ನಿರ್ದೇಶಕ ಡಾ.ಸಕ್ಪಾಲ ಹೂವಣ್ಣ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಹನುಮಂತಯ್ಯ ಪೂಜಾರಿ ನಿರೂಪಿಸಿದರು. ಪ್ರತಿಭಾ ಯಲಿಬಳ್ಳಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು