‘ರಾಜಕಾರಣಿಗಳಿಗೆ ಕೋಟಿ ಕೋಟಿ ಸಂದಾಯ’

7
ಆ್ಯಂಬಿಡೆಂಟ್: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಪ್ರತಿಭಟನೆ

‘ರಾಜಕಾರಣಿಗಳಿಗೆ ಕೋಟಿ ಕೋಟಿ ಸಂದಾಯ’

Published:
Updated:

ಬೆಂಗಳೂರು: ‘ಆ್ಯಂಬಿಡೆಂಟ್‌ ಕಂಪನಿ ಮಾಲೀಕ ಸಯ್ಯದ್ ಫರೀದ್, ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಕೋಟಿ ಕೋಟಿ ಹಣ ಕೊಟ್ಟಿದ್ದಾನೆ. ಅವರೆಲ್ಲರೂ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಉಸ್ತುವಾರಿಯಲ್ಲಿ ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ‘ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ’ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪುತ್ಥಳಿ ಎದುರು ಸೇರಿದ್ದ ಕಾರ್ಯಕರ್ತರು, ಕಂಪನಿಯಿಂದ ಹಣ ಪಡೆದಿದ್ದಾರೆ ಎನ್ನಲಾದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ‘ಪ್ರಕರಣದ ಆರೋಪಿ ಫರೀದ್, ರಾಜಕಾರಣಿಗಳಿಗೆ ₹60 ಕೋಟಿ ಹಾಗೂ ಕಂಪನಿ ಮೇಲೆ ತನಿಖೆ ನಡೆಸದಂತೆ ಕೆಲ ಪೊಲೀಸ್ ಅಧಿಕಾರಿಗಳಿಗೆ ₹30 ಕೋಟಿ ಕೊಟ್ಟಿರುವ ಬಗ್ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಇದೆ. ಆ ಹಣವನ್ನೆಲ್ಲ ವಸೂಲಿ ಮಾಡಿ ಸಂತ್ರಸ್ತ ಜನರಿಗೆ ವಿತರಿಸಬೇಕು’ ಎಂದು ಒತ್ತಾಯಿಸಿದರು.

‘ಪೊಲೀಸ್ ಅಧಿಕಾರಿಗಳ ಮೇಲೆ ಇರುವ ಆರೋಪ ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆ ಗೃಹ ಇಲಾಖೆಯೇ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು, ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಬೇಕು’ ಎಂದು ಆಗ್ರಹಿಸಿದರು.

‘ರಿಯಲ್ ಎಸ್ಟೇಟ್ ಉದ್ಯಮಿಯಾದ ವಿಜಯ್ ತಾತಾ ವಿರುದ್ಧ ರೇರಾ ಆಯೋಗದಲ್ಲಿ 24 ದೂರುಗಳು ದಾಖಲಾಗಿವೆ. 2,800ಕ್ಕೂ ಹೆಚ್ಚು ಜನರಿಗೆ ಆತ ವಂಚಿಸಿದ್ದಾನೆ. ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಆತನ ಪಾತ್ರವಿರುವುದು ನಿಜವಿದ್ದರೆ, ಕೂಡಲೇ ಬಂಧಿಸಿ’ ಎಂದು ಒತ್ತಾಯಿಸಿದರು.

ರಾಜಕಾರಣಿ, ಪೊಲೀಸ್‌ ಅಧಿಕಾರಿಗಳಿಗೂ ಹಣ: ಎಸಿಪಿ
‘ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್, ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು, ಹಿರಿಯ, ಕಿರಿಯ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿಗಳಿಗೂ ಹಣ ನೀಡಿರುವುದಾಗಿ ಹೇಳಿದ್ದಾನೆ. ಆತನ ಹೇಳಿಕೆಯನ್ನೆಲ್ಲ ವಿಡಿಯೊ ರೆಕಾರ್ಡ್‌ ಮಾಡಲಾಗಿದೆ’ ಎಂದು ಎಸಿಪಿ ಎಚ್‌.ಎನ್‌. ವೆಂಕಟೇಶ್ ಪ್ರಸನ್ನ, ರಾಜ್ಯ ಪೊಲೀಸ್‌ ಮಹಾನಿರೀಕ್ಷಕಿ ನೀಲಮಣಿ ರಾಜು ಅವರಿಗೆ ಪತ್ರ ಬರೆದಿದ್ದಾರೆ.

‘ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಒತ್ತಾಯಿಸುತ್ತಿರುವ ಎಸಿಪಿ ವೆಂಕಟೇಶ್, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ವಿಜಯ್‌, ನೀಲಮಣಿ ಅವರಿಗೆ ಇತ್ತೀಚೆಗಷ್ಟೇ ದೂರು ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ವೆಂಕಟೇಶ್, ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿದ್ದಾರೆ.

‘ಹಲವು ಪ್ರಕರಣಗಳ ಆರೋಪಿ ವಿಜಯ್ ತಾತಾ ನೀಡಿದ ದೂರಿನ ಪ್ರಾಥಮಿಕ ತನಿಖೆ ನಡೆಸದೇ, ನನ್ನನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಆ್ಯಂಬಿಡೆಂಟ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿದೆ’ ಎಂದಿದ್ದಾರೆ.

‘ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾದ ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದ ತನಿಖೆಯನ್ನು ನನಗೆ ವಹಿಸಲಾಗಿತ್ತು. ಕಂಪನಿಯ ಫರೀದ್‌ನನ್ನು ವಿಚಾರಣೆಗೆ ಒಳಪಡಿಸಿದ್ದೆ. ‘2017ರಲ್ಲಿ ನನ್ನ ವಿರುದ್ಧ ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರವಾಗಿತ್ತು. ಸ್ನೇಹಿತರ ಮೂಲಕ ಭೇಟಿಯಾದ ವಾಹಿನಿಯ ಮಾಲೀಕ ವಿಜಯ್ ತಾತಾ, ₹200 ಕೋಟಿಗೆ ಬೇಡಿಕೆ ಇಟ್ಟಿದ್ದರು. ₹2 ಕೋಟಿ ಕೊಡುವುದಾಗಿ ಹೇಳಿದ್ದೆ. ಆದರೆ ಆತ, ತನ್ನ 100 ಫ್ಲಾಟ್‌ ಖರೀದಿಸುವಂತೆ ಹೇಳಿದ್ದ. 83 ಫ್ಲಾಟ್‌ ಖರೀದಿಸಿದ್ದೆ’ ಎಂದು ಫರೀದ್‌ ಹೇಳಿದ್ದ. ಅವರಿಬ್ಬರ ನಡುವೆ ₹36 ಕೋಟಿ ಹಣ ವರ್ಗಾವಣೆ ಆಗಿದೆ’ ಎಂದು ವೆಂಕಟೇಶ್‌, ಪತ್ರದಲ್ಲಿ ತಿಳಿಸಿದ್ದಾರೆ.

‘ಐಟಿ ಅಧಿಕಾರಿಗಳಾದ ಸುನೀಲ್ ಗೌತಮ್, ಸಮರಿಕ್ ಸ್ಪೇನ್ ಹಾಗೂ ಬಾಲಕೃಷ್ಣ ಎಂಬುವರ ವಿರುದ್ಧವೂ ವಿಜಯ್‌, ಸುಳ್ಳು ದೂರು ನೀಡಿದ್ದ. ಆ ಅಧಿಕಾರಿಗಳು, ಆತನ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ’ ಎಂದು ಹೇಳಿದ್ದಾರೆ.

‘ವಿಜಯ್, ಸುಳ್ಳು ದೂರು ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾನೆ. ಕಂಪನಿಯಿಂದ ವಂಚನೆಗೀಡಾದ 15 ಸಾವಿರ ಜನರಿಗೆ ನ್ಯಾಯ ಸಿಗಬೇಕಾದರೆ ಆತನನ್ನು ಬಂಧಿಸಬೇಕು. ಇಲ್ಲದಿದ್ದರೆ, ಸಮಾಜಕ್ಕೆ ಪೊಲೀಸರ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !