ಭಾನುವಾರ, ನವೆಂಬರ್ 17, 2019
28 °C
ಸ್ನಾನ ಮಾಡುವ ದೃಶ್ಯ ಚಿತ್ರೀಕರಣ

ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ತಂದೆಗೆ 10 ವರ್ಷ ಶಿಕ್ಷೆ

Published:
Updated:
Prajavani

ಚಿಕ್ಕಬಳ್ಳಾಪುರ: ಮಗಳು ಸ್ನಾನ ಮಾಡುವ ದೃಶ್ಯವನ್ನು ಪದೇ ಪದೇ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತ, ಲೈಂಗಿಕ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾದ ಕಾಮುಕ ತಂದೆಗೆ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಶುಕ್ರವಾರ 10 ವರ್ಷಗಳ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ.

ನಗರದ ನಿವಾಸಿ ಪಾಂಡುರಂಗ (54) ಶಿಕ್ಷೆಗೆ ಗುರಿಯಾದ ಅಪರಾಧಿ. ಆತನ ಪುತ್ರಿ, ನಾಗಾರ್ಜುನ ಕಾಲೇಜಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಗರದ ಎಲೆಪೇಟೆ ಬಾಡಿಗೆ ಮನೆಯೊಂದರಲ್ಲಿ 2013ರ ನವೆಂಬರ್‌ 28 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಪ್ರಕರಣದಲ್ಲಿ ಮಾನಸಿಕ ಸಮಸ್ಯೆಯಿಂದ ವಿದ್ಯಾರ್ಥಿನಿ ಸಾವನ್ನಪ್ಪಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಅದೇ ರೀತಿ ಪೊಲೀಸರು ಕೂಡ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಒಂದು ತಿಂಗಳ ಬಳಿಕ ಪಾಂಡುರಂಗ ಅವರ ಪತ್ನಿ ಶಂಕುಂತಲಾ ಅವರು ಪತಿಯ ವಿರುದ್ಧವೇ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಬಂಧನಕ್ಕೆ ಒತ್ತಾಯಿಸಿದ್ದರು.

‘ತನ್ನ ಪತಿ ಮಗಳು ಸ್ನಾನ ಮಾಡುವಾಗಲೆಲ್ಲಾ ಮೊಬೈಲ್‌ನಲ್ಲಿ ಬೆತ್ತಲೆ ದೃಶ್ಯಗಳ ಚಿತ್ರೀಕರಣ ಮಾಡುತ್ತಿದ್ದ. ಅಲ್ಲದೇ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅನೇಕ ಬಾರಿ ಮನೆಯಲ್ಲಿ ಗಲಾಟೆ ನಡೆದಿತ್ತು. ಗಂಡ ವರ್ತನೆಗೆ ಬೇಸತ್ತು ನಾವು ಮನೆಯಿಂದ ಹೊರಗೆ ಬಂದು ನಗರದ ಎಲೆಪೇಟೆಯಲ್ಲಿ ವಾಸ ಮಾಡುತ್ತಿದ್ದವು. ಆದರೂ ಆತ ಬೆಂಬಿಡದೇ ಬಂದು ಮಗಳಿಗೆ ಕಿರುಕುಳ ಕೊಡುತ್ತಿದ್ದ. ಮಗಳ ಸಾವಿಗೆ ಗಂಡನೇ ಕಾರಣ’ ಎಂದು ಆ ಸಂದರ್ಭದಲ್ಲಿ ಶಂಕುಂತಲಾ ಅವರು ಆರೋಪಿಸಿದ್ದರು.

ಬಳಿಕ ಪೊಲೀಸರು ಆರೋಪಿ ವಿರುದ್ಧ ಆಕ್ಷೇಪಾರ್ಹ ಚಿತ್ರ ತೆಗೆದ (ಐಪಿಸಿ 354ಸಿ) ಮತ್ತು ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಪ್ರಕರಣ ದಾಖಲಿಸಿದ್ದರು. ಐದೂವರೆ ವರ್ಷಗಳ ವಿಚಾರಣೆ ಬಳಿಕ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.

ಪ್ರತಿಕ್ರಿಯಿಸಿ (+)