ADVERTISEMENT

ದೇಸಿ ಗೋವುಗಳ ತಾಣ ಕಪಿಲ ಪಾರ್ಕ್

ಮೇಘಲಕ್ಷ್ಮಿ ಮರುವಾಳ
Published 27 ಮೇ 2019, 19:30 IST
Last Updated 27 ಮೇ 2019, 19:30 IST
ಕಪಿಲಾ ಪಾರ್ಕ್‌ನಲ್ಲಿನ ಗೋವು
ಕಪಿಲಾ ಪಾರ್ಕ್‌ನಲ್ಲಿನ ಗೋವು   

ವಿಶಾಲವಾದ ಭೂಮಿ, ಮಾವಿನ ತೋಪು, ಹಸಿರು ಹುಲ್ಲು, ಪೊದೆಗಳಿರುವ ಜಾಗ. ಪಕ್ಕದಲ್ಲೇ ಹರಿಯುವ ಫಲ್ಗುಣಿ ನದಿ. ಸಂಜೆ 4.30ರ ಸಮಯ. ಸರಸ್ವತಿ, ಲಕ್ಷ್ಮಿ, ಕಾಜಲ್‌ ಆ ಪೊದೆಯಿಂದ ಓಡಿ ಬಂದರು, ಇನ್ನೊಂದು ಕಡೆಯಿಂದ ಬಾಬು, ಗೌರಿ, ಪಾರು ಮೆಲ್ಲನೆ ಹಟ್ಟಿಯತ್ತ ಚೆಂಗನೆ ನೆಗೆಯುತ್ತಾ ಬಂದರು. ಒಬ್ಬೊಬ್ಬರದು ಒಂದೊಂದು ಬಣ್ಣ. ಅವುಗಳನ್ನು ನೋಡುವುದೇ ಚೆಂದ...

ಹೀಗೆಲ್ಲ ಚೆಂದ ಚೆಂದ ಹೆಸರಿಟ್ಟುಕೊಂಡಿರುವವರು ಮನುಷ್ಯರಲ್ಲ. ಗೋವುಗಳು. ಅವುಗಳ ಮೇಲಿನ ಪ್ರೀತಿಯಿಂದ, ಅವುಗಳ ಆಟ, ಚಿನ್ನಾಟ, ಮೈಬಣ್ಣವನ್ನು ನೋಡಿ, ಅವುಗಳನ್ನು ಪಾಲನೆ ಮಾಡುತ್ತಿರುವ ಪ್ರಕಾಶ್ ಶೆಟ್ಟಿ, ಹಾಗೆ ವಿಭಿನ್ನ ಹೆಸರಿಟ್ಟಿದ್ದಾರೆ. ಅಂದ ಹಾಗೆ ಇವೆಲ್ಲ ದೇಸಿ ಗೋವಿನ ತಳಿಗಳು.

ಮಂಗಳೂರಿನ ಕೆಂಜಾರು ಬಳಿಯ ಕಪಿಲ ಪಾರ್ಕ್ನಲ್ಲಿ ಪ್ರಕಾಶ್ ಶೆಟ್ಟಿ ಅವರ ದೇಸಿ ತಳಿ ಗೋವಿನ ಪ್ರಪಂಚವಿದೆ. ಮುಖ್ಯರಸ್ತೆಯಿಂದ ಒಳಮಾರ್ಗದಲ್ಲಿ ತಿರುವು ಪಡೆದುಕೊಂಡರೆ, ಅವರ ಗೋವಿನ ಸಾಮ್ರಾಜ್ಯ ಕಾಣುತ್ತದೆ.

ADVERTISEMENT

ಪ್ರಕಾಶ್ ಮೂಲತಃ ಉದ್ಯಮಿ. ಅವರಿಗೆ ದೇಸಿ ಗೋವುಗಳ ಮೇಲೆ ಅಗಾಧ ಪ್ರೀತಿ. ಅವುಗಳ ರಕ್ಷಣೆಯಾಗಬೇಕೆಂಬುದು ಅವರ ಉದ್ದೇಶ. ಅದಕ್ಕಾಗಿಯೇ ತಮ್ಮ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ಗೋವು ಪೋಷಣೆಗೆ ಮೀಸಲಿಟ್ಟಿದ್ದಾರೆ. ಹಸುಗಳಿಂದ ಹಾಲು ಕರೆದು ಮಾರಾಟ ಮಾಡುವುದಿಲ್ಲ. ಕಸಾಯಿಖಾನೆ ಸೇರುವ, ಅನಾಥವಾಗಿ ಬೀದಿಯಲ್ಲಿ ಉಳಿಯುವ ರಾಸುಗಳನ್ನು ರಕ್ಷಿಸುತ್ತಾರೆ. ಇವರು ರಕ್ಷಿಸುವ ರಾಸುಗಳಲ್ಲಿ ಹಸುಗಳೂ ಇವೆ. ಹೋರಿಗಳೂ ಇವೆ. ಕರುಗಳೂ ಇವೆ.

ಪ್ರಕಾಶ್‌ಶೆಟ್ಟಿ ಅವರು ಈ ಜಾಗದಲ್ಲಿ ಮೊದಲು ಸಿಮೆಂಟ್‌ ಇಟ್ಟಿಗೆ ಫ್ಯಾಕ್ಟರಿ ಆರಂಭಿಸಿದರು. ಜತೆಗೆ ಎರಡು ಜರ್ಸಿ ದನಗಳೊಂದಿಗೆ ಒಂದು ಕೊಟ್ಟಿಗೆ ಮಾಡಿದ್ದರು. ಕಾರಣಾಂತರಗಳಿಂದ ಅಲ್ಪಾವಧಿಯಲ್ಲೇ ಆ ರಾಸುಗಳು ಸಾವನ್ನಪ್ಪಿದ್ದವು. ನೀರುಮಾರ್ಗದ ಗುರೂಜಿಯೊಬ್ಬರು ‘ಜರ್ಸಿ ದನ ಬಿಟ್ಟುಬಿಡಿ, ದೇಸಿ ತಳಿಗಳನ್ನು ಸಾಕಿ. ಅವುಗಳ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ’ ಎಂಬ ಸಲಹೆ ನೀಡಿದರು. ಗುರೂಜಿಯವರ ಸಲಹೆಯಂತೆ ದೇಸಿ ಗೋವುಗಳನ್ನು ಸಾಕಲು ಮುಂದಾದರು.

ಮೊದಲಿಗೆ ಕಸಾಯಿಖಾನೆಯಿಂದ ಒಂದು ಕರುವನ್ನು ಖರೀದಿಸಿ, ಗೋವಿನ ಸಾಕಣೆ ಶುರು ಮಾಡಿದರು. ಈಗ ಅವರ ಗೋವು ಸಾಕಣೆಗೆ ಐದು ವರ್ಷ. ಹಟ್ಟಿಯಲ್ಲಿ 13 ದೇಸಿ ತಳಿಗಳ ಸುಮಾರು 160ಕ್ಕೂ ಹೆಚ್ಚು ರಾಸುಗಳಿವೆ. ಅವುಗಳಲ್ಲಿ ಕಪಿಲ, ಗೀರ್‌, ಕೃಷ್ಣವೇಣಿ, ಜವಾರಿ, ಅಮೃತ್ ಮಹಲ್, ಕಾಸರಗೋಡು ಗಿಡ್ಡ, ಮಲೆನಾಡ ಗಿಡ್ಡ, ವೆಚುರ್‌, ಕಾಂಕ್ರಜ್‌ ಪ್ರಮುಖವಾದವು. ಅವುಗಳ ಜತೆಗೆ ಎರಡು ಎಮ್ಮೆಗಳಿವೆ.

ಆದಾಯಕ್ಕಾಗಿ ಹಸು ಸಾಕಣೆಯಲ್ಲ

ದನಗಳನ್ನು ಸಾಕಿ, ಸಂಪಾದನೆ ಮಾಡುವ ಉದ್ದೇಶ ಇವರದ್ದಲ್ಲ. ಅವರು ಆಕಳಾಗಲಿ, ಹೋರಿಗಳಾಗಲಿ ಯಾವುದನ್ನೂ ಮಾರುವುದಿಲ್ಲ. ಬದಲಾಗಿ ಬೇರೆಯವರು ಸಾಕಲು ಸಾಧ್ಯವಿಲ್ಲ ಎಂದು ಮಾರಾಟ ಮಾಡಲು ಮುಂದಾದರೆ ಅವುಗಳನ್ನು ಖರೀದಿಸಿ ತಂದು ಸಾಕುತ್ತಾರೆ.

ಕಸಾಯಿಖಾನೆಗೆ ಕದ್ದೊಯ್ಯುತ್ತಿದ್ದ ದನಗಳನ್ನು ಪೊಲೀಸರು ಹಿಡಿಯುತ್ತಾರೆ. ಕೋರ್ಟ್‌ ಆರ್ಡರ್‌ ಜಾರಿಯಾಗುವವರೆಗೆ ಅವುಗಳಿಗೆ ಪ್ರಕಾಶ್‌ ಶೆಟ್ಟಿಯವರ ಹಟ್ಟಿಯೇ ಆವಾಸಸ್ಥಾನ. ದನದ ಮಾಲೀಕನಿಗೆ ತಾನು ಮಾರಿದ ದನ ಯಾವುದೇ ಕಸಾಯಿಖಾನೆ ಸೇರಿಲ್ಲ ಎಂದು ಖಚಿತ ಪಡಿಸಿಕೊಳ್ಳಬೇಕೆಂದರೆ, ಆ ಹಸುವನ್ನು ನೋಡಲು ಮನಸ್ಸಾದರೆ ತಕ್ಷಣ ಹೊರಟು ಪ್ರಕಾಶ್‌ ಅವರ ಹಟ್ಟಿಗೆ ಭೇಟಿ ನೀಡಬಹುದು.

ಇಲ್ಲಿರುವ ಯಾವ ಗೋವುಗಳಿಗೂ ಮೂಗುದಾರವಿಲ್ಲ. ಅವುಗಳನ್ನು ಕಟ್ಟಿ ಮೇಯಿಸುವುದಿಲ್ಲ. ಸ್ವತಂತ್ರವಾಗಿ ಓಡಾಡಿಕೊಂಡಿರಲು ಬಿಟ್ಟಿದ್ದಾರೆ. ದನಗಳಿಗೆ ದಿನವಿಡೀ ಮೇಯುವ ಹುಲ್ಲು ಬಿಟ್ಟರೆ ಹಿಂಡಿ ಮತ್ತು ನೀರು ಮಾತ್ರ ಆಹಾರ. ಕಸಾಯಿಖಾನೆಯ ಕತ್ತಿಗೆ ಬಲಿಯಾಗಬೇಕಿದ್ದ ಅದೆಷ್ಟೋ ದನ ಕರುಗಳು ಇವರ ಕೊಟ್ಟಿಗೆಯಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿವೆ. ಹಟ್ಟಿ ನೋಡಿಕೊಳ್ಳಲು ಪ್ರಕಾಶ್‌ಶೆಟ್ಟಿಯವರೊಂದಿಗೆ ಸಂತೋಷ್‌ ಅವರು ಎರಡು ವರ್ಷಗಳಿಂದ ಜತೆಗಿದ್ದಾರೆ. ಆ ರಾಸುಗಳು ಇವರೊಂದಿಗೆ ಎಷ್ಟು ಒಗ್ಗಿ ಹೋಗಿವೆ ಎಂದರೆ, ಪ್ರಕಾಶ್ ಒಮ್ಮೆ ಗುಲಾಬೋ, ಶ್ವೇತಾ, ಅಂಬಿ, ಅಂಬಿಕಾ ಎಂದು ಕೂಗಿದರೆ ಸಾಕು.. ಎಲ್ಲಿದ್ದರೂ ಓಡಿಬಂದುಬಿಡುತ್ತವೆ.

ಒಂದು ಹೊತ್ತು ಹಾಲು ಕರೆಯುವುದು

ಪ್ರತಿ ದಿನ ಒಂದು ಹೊತ್ತು ಅಂದರೆ, ಬೆಳಿಗ್ಗೆ ಮಾತ್ರ ಹಾಲು ಕರೆಯುತ್ತಾರೆ. ನಿತ್ಯ 15ರಿಂದ 20 ಲೀಟರ್‌ ಹಾಲು ದೊರೆಯುತ್ತದೆ. ದೇಸಿ ತಳಿಯ ಹಸುಗಳ ಹಾಲಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಆದರೆ ಇವರು ಹಾಲನ್ನು ಡೇರಿಗೆ ಹಾಕುವುದಿಲ್ಲ. ಕಪಿಲ ತಳಿಯ ಹಾಲನ್ನು ಕರೆದು ಪ್ರತ್ಯೇಕವಾಗಿಡುತ್ತಾರೆ. ಅದನ್ನು ಔಷಧಿಗಾಗಿ ಖರೀದಿಸುವವರಿದ್ದಾರೆ.

‘ಕಪಿಲ ಹಾಲನ್ನು, ಡೇರಿಯವರು ನೀಡುವ ಹಣಕ್ಕಿಂತಲೂ ಹೆಚ್ಚು ದರ ನೀಡಿ ಖರೀದಿಸುತ್ತಾರೆ. ಇದಕ್ಕೆ ಆ ಹಾಲಿನಲ್ಲಿರುವ ರೋಗನಿರೋಧಕ ಶಕ್ತಿ ಹಾಗೂ ಔಷಧೀಯ ಗುಣವೇ ಕಾರಣ. ಸಂಜೆ ಹೊತ್ತು ಹಾಲು ಕರೆಯುವುದಿಲ್ಲ. ಕರುಗಳ ಪೋಷಣೆಯೂ ಮುಖ್ಯವಾಗಿರುವ ಕಾರಣ ಆ ಹಾಲು ಸಂಪೂರ್ಣವಾಗಿ ಕರುವಿಗೆ ನೀಡುತ್ತೇವೆ’ ಎನ್ನುತ್ತಾರೆ ಪ್ರಕಾಶ್. ಈಗೀಗ ದನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ, ಅವುಗಳನ್ನು ನೋಡಿಕೊಳ್ಳಲು ಆಳುಗಳ ಕೊರತೆ ಇದೆಯಂತೆ.

‘160 ದನಗಳಿಂದ ಸಾಕಷ್ಟು ಗಂಜಳ, ಗೋಮೂತ್ರ ದೊರೆಯುತ್ತದೆ. ಯಾರಾದರೂ ಅವುಗಳನ್ನು ಬಳಸಿ ಉಪ ಉತ್ಪನ್ನಗಳನ್ನು ತಯಾರಿಸುವುದಾದರೆ, ಅದಕ್ಕೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ. ಹೀಗೆ ಹಲವರಿಗೆ ಹೇಳಿದ್ದೇವೆ. ಯಾರೂ ಮುಂದೆ ಬಂದಿಲ್ಲ’ ಎಂದು ಪ್ರಕಾಶ್ ಹೇಳಿಕೊಂಡರು.

ಲಕ್ಷ ಲಕ್ಷ ಹಣ ಕೊಟ್ಟು ನಾಯಿ ಸಾಕಲು ಜನ ಮನಸ್ಸು ಮಾಡುತ್ತಾರೆ. ಅದರ ಬದಲು ಒಂದು ಗೋವನ್ನು ಖರೀದಿಸಿ ಸಾಕಿದರೆ, ಆಹಾರಕ್ಕೆ ಹಾಲು, ಕೃಷಿಗೆ ಗಂಜಲ, ಸಗಣಿ ಉಚಿತವಾಗಿ ಲಭ್ಯವಾಗುತ್ತದೆ ಎಂದು ಸಲಹೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.