ADVERTISEMENT

ರಾಸುಗಳನ್ನು ಬಾಧಿಸುವ ಚರ್ಮಗಂಟು ರೋಗ

ಪ್ರಜಾವಾಣಿ ವಿಶೇಷ
Published 29 ಜೂನ್ 2020, 19:30 IST
Last Updated 29 ಜೂನ್ 2020, 19:30 IST
ಚರ್ಮದ ಗಂತಿಗಳಲ್ಲಿ ರಂಧ್ರವಾಗಿರುವುದು
ಚರ್ಮದ ಗಂತಿಗಳಲ್ಲಿ ರಂಧ್ರವಾಗಿರುವುದು   

ಜಾನುವಾರುಗಳಿಗೆ ತಗಲುವ ಕಾಲುಬಾಯಿ ಜ್ವರದ ಬಗ್ಗೆ ಪರಿಶೀಲನೆಗೆಂದು ಕನಕಪುರ ತಾಲ್ಲೂಕಿಗೆ ಹೋಗುತ್ತಿದ್ದಾಗ, ಪಕ್ಕದಲ್ಲೇ ಇರುವ ಕಬ್ಬಾಳ ಹೊಸಳ್ಳಿಯಲ್ಲಿ ಜಾನುವಾರುಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ ಎಂಬ ಮಾಹಿತಿ ಸಿಕ್ಕಿತು.

ವಿಷಯ ತಿಳಿದ ಮೇಲೆ, ನಾವು ಆ ಊರಿನತ್ತ ಹೊರಟೆವು. ಊರು ತಲುಪುವ ಮುನ್ನವೇ ಎದುರಿಗೆ ಸಿಕ್ಕ ರೈತ ನಿಂಗೇಗೌಡರು, ‘ನೋಡಿ ಸಾ, ನಮ್ಮ ಹಸಿಗೆ ಏನೂ ಹುಳ ಮುಟ್ಟಿ ಅಲರ್ಜಿ ಆಗೈತೆ. ನಾಲ್ಕೈದು ದಿನಗಳಿಂದ ಮೇವು ತಿನ್ನಕಿಲ್ಲ. ಹಾಲು ಕಡಿಮೆ ಆಗೈತೆ’ ಅಂತ ಆತಂಕ ವ್ಯಕ್ತಪಡಿಸಿದರು. ಅವರ ಜತೆಗಿದ್ದ ಕೃಷ್ಣಪ್ಪ ಕೂಡ ತನ್ನ ಎಚ್‌.ಎಫ್‌ ತಳಿಯ ಹಸು ತೋರಿಸಿ ‘ಇಲ್ಲಿ ನೋಡಿ ಸಾ.. ಈ ಹಸಿವಿನ ಮೇಲೆ ಶಾನೆ ಕುದುರೆ ನೊಣ ಅಂಟ್ಕಳ್ತಾವೆ. ಅವು ಕಚ್ಚಿದ ಮೇಲೆ ಹಂಗೇ ರಕ್ತ ಸೋರ್ತದೆ’ ಎಂದು ವಿವರಿಸಿದರು. ಕುರುಬರಹಳ್ಳಿಯ ಮಹದೇವಮ್ಮ, ತಮ್ಮ ಎರಡು ಹಳ್ಳಿಕಾರ್‌ ಕರುಗಳ ಚರ್ಮದ ಗಂತಿ(Nodule)ಗಳು ಒಡೆದು ಹೋಗಿ ರಕ್ತ ಸೋರುತ್ತಿರುವುದನ್ನು ತೋರಿಸಿದರು. ಆ ಕರುಗಳ ಚರ್ಮದ ಗಂತಿಗಳು ಒಡೆದು, ಆಳವಾದ ರಂಧ್ರಗಳಾಗಿದ್ದವು.

ಅವರು ಹೇಳಿದ ಎಲ್ಲ ರಾಸುಗಳ ಮೇಲ್ಮೈ ಪರೀಕ್ಷಿಸಿದೆವು. ಇದೊಂದು ರೀತಿಯ ಅಚ್ಚರಿಯ ರೋಗ ಎನ್ನಿಸಿತು. ಈ ರೋಗ ಲಕ್ಷಣಗಳನ್ನು ಗಮನಿಸಿದಾಗ, ಮೇಲ್ನೋಟಕ್ಕೆ ಇದು ‘ಚರ್ಮಗಂಟು ರೋಗ’ ಎಂದು ಗೊತ್ತಾಯಿತು. ರೋಗ ಪರೀಕ್ಷಿಸಿ, ದೃಢಪಡಿಸಿಕೊಳ್ಳಲು ಆ ರಾಸುಗಳ ಗಂತಿ/ಹಕ್ಕಳೆ ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯದಲ್ಲಿ ಪರೀಕ್ಷಿಸಿದೆವು. ಅದು ‘ಚರ್ಮಗಂಟು ರೋಗ’ (ಲಂಫಿ ಸ್ಕಿನ್ ಡಿಸೀಸ್– Lumpy Skin Disease) ಎಂದು ಖಚಿತವಾಯಿತು.

ADVERTISEMENT

ಏನಿದು ಚರ್ಮಗಂಟು ರೋಗ?

ಇದು ವೈರಸ್‌ನಿಂದ ದನ ಮತ್ತು ಎಮ್ಮೆಗಳಿಗೆ ಬರುವ ಕಾಯಿಲೆ. ಸಿಡುಬು ರೋಗ ಹರಡುವ ವೈರಸ್ ಕುಟುಂಬದ ‘ಮೇಕೆ ಸಿಡುಬು’ ಜಾತಿಗೆ ಸೇರುತ್ತದೆ. ಕುರಿಗೆ ಹರಡುವ ಸಿಡುಬು ಸಹ ಇದೇ ಜಾತಿಯದ್ದು. ಈ ರೋಗವು ಮೂಲತಃ ಆಫ್ರಿಕಾ ದೇಶದ್ದು. ನಂತರ ಮಧ್ಯ ಪ್ರಾಚ್ಯ, ದಕ್ಷಿಣ-ಪೂರ್ವ ಯೂರೋಪ್, ರಷ್ಯಾ ಮತ್ತು ಕಜಕಿಸ್ಥಾನಗಳಲ್ಲಿ ಕ೦ಡುಬ೦ದಿತ್ತು. ಇತ್ತೀಚೆಗೆ, ನಮ್ಮ ದೇಶದ ಕೇರಳ ಮತ್ತು ಒಡಿಶಾದಲ್ಲಿ ಕಾಣಿಸಿಕೊಂಡಿತು. ಈಗ ನಮ್ಮ ರಾಜ್ಯದ ಚನ್ನರಾಯಪಟ್ಟಣ, ಕಲಬುರ್ಗಿ ವ್ಯಾಪ್ತಿಯಲ್ಲಿ ವಿರಳವಾಗಿ ಕ೦ಡುಬ೦ದಿದೆ. ವಿಶ್ವ ಪ್ರಾಣಿ ಆರೋಗ್ಯ ಸ೦ಸ್ಥೆಯ ಕೈಪಿಡಿಯ ಪ್ರಕಾರ, ಇದೊಂದು ಅಧಿಸೂಚಿತ ಕಾಯಿಲೆ.

ಈ ರೋಗ ಪ್ರಮುಖವಾಗಿ ಆರ್ದ್ರ ಬೇಸಿಗೆ(ಬೇಸಿಗೆ ಮುಗಿಯುವ – ಮುಂಗಾರು ಆರಂಭದ ಸಮಯ)ಯಲ್ಲಿ ರೋಗಗಳನ್ನು ಹರಡುವ ಸೊಳ್ಳೆಗಳಿಂದ (ಕ್ಯುಲೆಕ್ಸ್‌, ಏಡಿಸ್‌); ಕಚ್ಚುವ ನೊಣಗಳಿಂದ (ಸ್ಟೊಮಾಕ್ಸಿಸ್‌, ಸ್ಟೆಬಲ್(ಕುದುರೆ), ಬಯೋಮಿಯ) ಹಾಗೂ ಉಣ್ಣೆಗಳಿಂದ (ರೆಫಿಸೆಲಫಲಸ್ ಹಾಗೂ ಆಂಬ್ಲಿಯೋಮ) ಹರಡುತ್ತದೆ. ಈ ರೋಗವಿರುವ ಪ್ರಾಣಿಗಳ ನೇರ ಸಂಪರ್ಕದಿಂದಲೂ ಬರುತ್ತದೆ. ಕೆಲವೊಮ್ಮೆ ಕಲುಷಿತ ನೀರಿನಿಂದ, ಮೇವಿನಿಂದಲೂ ಹರಡುವ ಸಾಧ್ಯತೆ ಇದೆ. ಈ ವೈರಾಣು ಸದೃಢವಾಗಿದ್ದು, 55 ಡಿಗ್ರಿಯಲ್ಲಿ ಎರಡು ಗಂಟೆಯವರೆಗೂ, 65 ಡಿಗ್ರಿ ಉಷ್ಣತೆಯನ್ನು ಸುಮಾರು 30 ನಿಮಿಷಗಳವರೆಗೂ ತಡೆಯಬಲ್ಲದು. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲವೆಂದು ವಿಶ್ವ ಪ್ರಾಣಿ ಆರೋಗ್ಯ ಸ೦ಸ್ಥೆಯ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ.

ರೋಗ ಲಕ್ಷಣಗಳು

ಚರ್ಮಗಂಟು ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ, ಒಂದು ವಾರದ ನಂತರ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳು ತ್ತವೆ. ಅವು ಚರ್ಮ ಗಂತಿ/ಹಕ್ಕಳೆ/ತುರಿಗಳಾಗುತ್ತವೆ. ಇವುಗಳಲ್ಲಿ ವೈರಸ್‌ 35 ದಿನಗಳ ಕಾಲ ಉಳಿದಿರುತ್ತದೆ. ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಗಳಲ್ಲಿ ಈ ವೈರಾಣುಗಳು ಇರುತ್ತವೆ. ರೋಗಗ್ರಸ್ತ ದನಗಳಲ್ಲಿ ಅತಿಯಾದ ಜ್ವರವಿದ್ದು, ಮ೦ಕಾಗಿ, ಮೂಗು, ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವಂತಹ ಲಕ್ಷಣಗಳು ಗೋಚರಿಸುತ್ತವೆ. ಜತೆಗೆ, ದುಗ್ದರಸಗ೦ತಿಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.

ಈ ಚರ್ಮಗಂಟು ರೋಗ ಬೇರೆ ಬೇರೆ ರೀತಿಯಲ್ಲೂ ಪ್ರಾಣಿಗಳಿಗೆ ಘಾಸಿ ಮಾಡುತ್ತದೆ ಎನ್ನುವುದಕ್ಕೆ ಕುರುಬರಹಳ್ಳಿಯ ಮಹದೇವಮ್ಮ ಅವರ ರಾಸುಗಳಿಗೆ ತಗುಲಿರುವ ರೋಗವೇ ಉದಾಹರಣೆ.

ಈ ರೋಗದಿಂದ ತೊಂದರೆ ಏನು?

ಆಕಳುಗಳಾದರೆ ಹಾಲು ಕೊಡುವ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತದೆ. ಕೆಲವು ರಾಸುಗಳು ಮೇವು ತಿನ್ನದೆ ಕ್ರಮೇಣವಾಗಿ ಬಡಕಲಾಗುತ್ತವೆ. ಇದು ಆಕಳು ಪೋಷಿಸುವವರಿಗಷ್ಟೇ ಅಲ್ಲದೇ, ಈ ಜಾನುವಾರುಗಳ ಚರ್ಮದ್ಯೋಮದರಿಗೂ ಭಾರಿ ನಷ್ಟವನ್ನು ಉಂಟುಮಾಡುತ್ತವೆ. ತಳಿ ಸ೦ವರ್ಧನೆ ಹೋರಿಗಳು ಬ೦ಜೆಯಾಗಬಹುದು. ಗರ್ಭ ಧರಿಸಿದ ಆಕಳುಗಳಲ್ಲಿ ಗರ್ಭಪಾತವಾಗಿ ಬಹುಕಾಲದವರಿಗೆ ಬೆದೆಗೆ ಬಾರದೇ ಉಳಿಯಬಹುದು. ಅಲ್ಲದೆ ಮಾಸು ಚೀಲದ ಮೂಲಕ ರೋಗಪ್ರಸರಣದ ಸಾಧ್ಯತೆಯೂ ಇದೆ.

ತುರ್ತಾಗಿ ಚಿಕಿತ್ಸೆ ಮಾಡಿಸದಿದ್ದರೆ ರೋಗ ಪೀಡಿತ ರಾಸುಗಳು ಬಡಕಲಾಗಿ, ಚರ್ಮದ ಗ೦ತಿಗಳು ಕೊಳೆತು, ನೊಣಗಳ ಉಪಟಳದಿ೦ದ ಚರ್ಮದಲ್ಲಿ ಆಳವಾದ ರ೦ಧ್ರಗಳಾಗುತ್ತವೆ. ಗುಂಪಿನಲ್ಲಿರುವ ಶೇ10 ರಿ೦ದ 20 ರಷ್ಟು ರಾಸುಗಳು ರೋಗಕ್ಕೆ ತುತ್ತಾಗಬಹುದು. ಅವುಗಳಲ್ಲಿ ಶೇ 1 ರಿ೦ದ 5 ರಷ್ಟು ರಾಸುಗಳು ಸಾವನ್ನಪ್ಪಬಹುದು.

ನಿಯ೦ತ್ರಣ ಮತ್ತು ತಡೆಗಟ್ಟುವಿಕೆ

ರೋಗ ಪೀಡಿತ ರಾಸುಗಳನ್ನು ಆರೋಗ್ಯವ೦ತ ಪ್ರಾಣಿಗಳಿ೦ದ ಬೇರ್ಪಡಿಸಿ ಕೂಡಲೆ ಚಿಕಿತ್ಸೆಗೆ ಒಳಪಡಿಸಬೇಕು. ವೈದ್ಯರ ಸೂಚನೆಯ ಮೇರೆಗೆ ಆ್ಯಂಟಿಬಯೋಟಿಕ್, ನೋವು ನಿವಾರಕ, ಆ್ಯಂಟಿಹಿಸ್ಟಮೈನ್‌ಗಳ (ಅಲರ್ಜಿ ನಿವಾರಕ ಔಷಧ) ಜೊತೆಗೆ ನೊಣನಿವಾರಕ ಮುಲಾಮು ಹಚ್ಚಿ ಸೊಳ್ಳೆ/ ನೊಣಗಳ ಹಾವ ಳಿಯನ್ನು ಹತೋಟಿಯಲ್ಲಿಡಬೇಕು. ರಾಸುಗಳನ್ನು ಸಾಕುವವರು ಸಾಧ್ಯವಾದಲ್ಲಿ ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ರೋಗ ಕಾಣಿಸಿಕೊಳ್ಳುವ ಪ್ರದೇಶದಲ್ಲಿ ರಾಸುಗಳ ಸಾಗಾಣಿಕೆ, ಜಾತ್ರೆ, ಪಶು ಮೇಳಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

ಪಶುವೈದ್ಯರ ಸಲಹೆ ಮೇರೆಗೆ ದನದ ಕೊಟ್ಟಿಗೆಗಳನ್ನು ಸ್ವಚ್ಚಗೊಳಿಸಿ ಸೂಕ್ತವಾದ ಅ೦ಟುಜಾಡ್ಯ ನಿವಾರಕಗಳಾದ ಸೋಡಿಯಂ ಹೈಪೊಕ್ಲೋರೇಟ್ (ಶೇ 2 ರಿಂದ 3ರಷ್ಟು), ಶೇ 2ರಷ್ಟು ವಿರ್ಕಾನ್, 1:33 ಅನುಪಾತದಲ್ಲಿ ಅಯೋಡಿನ್‌, ಶೇ 20ರಷ್ಟು ಈಥರ್‌, ಶೇ 1 ರಷ್ಟು ಕ್ಲೋರೋಫಾರ್ಮ್‌ ಫಾರ್ಮುಲಿನ್‌ಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸಿ೦ಪಡಿಸಬೇಕು.

ರೋಗಗ್ರಸ್ಥ ರಾಸುಗಳು ಚೇತರಿಸಿಕೊಳ್ಳಲು ಕನಿಷ್ಠ ಎರಡರಿಂದ ಮೂರು ವಾರಗಳ ಚಿಕಿತ್ಸೆ ಅಗತ್ಯ. ಒಂದು ಪಕ್ಷ ಈ ರೋಗದಿಂದ ರಾಸುಗಳು ಸಾವನ್ನಪ್ಪಿದರೆ, ಅವುಗಳ ಕಳೇಬರಕ್ಕೆ ಅ೦ಟುಜಾಡ್ಯ ನಿವಾರಕವನ್ನು ಸಿ೦ಪಡಿಸಿ, ಆಳವಾಗಿ ಗುಂಡಿ ತೆಗೆದು ಹೂಳಬೇಕು. ಹೊರದೇಶದಲ್ಲಿ ಲಸಿಕೆಗಳು ಲಭ್ಯವಿದ್ದು; ಉಳಿದ ದೇಶಗಳಲ್ಲಿ ರೋಗ ತೀವ್ರಗೊಂಡ ಸ೦ದರ್ಭಗಳಲ್ಲಿ, ಮೇಕೆ /ಕುರಿ ಸಿಡುಬಿನ ಲಸಿಕೆಯನ್ನೇ ಉಪಯೋಗಿಸಿ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯ೦ತ್ರಿಸಿದ ನಿದರ್ಶನಗಳಿವೆ. ಮುಖ್ಯವಾಗಿ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ. ಹೆಚ್ಚಿನ ಮಾಹಿತಿ ಗಾಗಿದೂರವಾಣಿಯನ್ನು ಸಂಪರ್ಕಿಸಿ ಫೋನ್‌ – 99809 14554.

ಡಾ. ಬಿ.ಎ೦. ವೀರೇಗೌಡ, ಡಾ.ಟಿ. ಚ೦ದ್ರಶೇಖರ್ ಮತ್ತು ಡಾ. ಎಸ್. ಎಂ. ಬೈರೇಗೌಡ

(ಲೇಖಕರು: ಪ್ರಾಧ್ಯಾಪಕರು, ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯ, ಬೆ೦ಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.