ADVERTISEMENT

ಆರ್ಥಿಕ ಬಲ ತಂದುಕೊಟ್ಟ ಟಗರು ಸಾಕಾಣಿಕೆ

ವಿ.ಎಂ.ನಾಗಭೂಷಣ
Published 28 ಆಗಸ್ಟ್ 2019, 19:45 IST
Last Updated 28 ಆಗಸ್ಟ್ 2019, 19:45 IST
ಟಗರುಗಳೊಂದಿಗೆ ಬಿ.ಜಿ. ಯರಿಸ್ವಾಮಿ
ಟಗರುಗಳೊಂದಿಗೆ ಬಿ.ಜಿ. ಯರಿಸ್ವಾಮಿ   

ಸಂಡೂರು: ಕೃಷಿ ಆಧಾರಿತ ಟಗರು ಸಾಕಾಣಿಕೆ ಉದ್ಯಮ ತಾಲ್ಲೂಕಿನ ಭುಜಂಗನಗರ ಗ್ರಾಮದ ರೈತ ಬಿ.ಜಿ. ಯರಿಸ್ವಾಮಿಯವರಿಗೆ ಆರ್ಥಿಕ ಬಲ ತಂದುಕೊಟ್ಟಿದೆ.

ಮುದ್ರಾ ಯೋಜನೆ ಅಡಿಯಲ್ಲಿ ₹6.50 ಲಕ್ಷ ಸಬ್ಸಿಡಿ ಸಹಿತ ಸಾಲದೊಂದಿಗೆ ತಮ್ಮ ಹೊಲದಲ್ಲಿ ಟಗರು ಸಾಕಾಣಿಕೆ ಆರಂಭಿಸಿರುವ ಅವರು, ಎರಡು ವರ್ಷಗಳಿಂದ ಈ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

‘ಮೊದಲ ವರ್ಷ 150 ಟಗರುಗಳನ್ನು ತಂದು ಸಾಕಿದೆ. ಆಗ ಮೇವಿನ ಕೊರತೆ ಉಂಟಾಗಿ ಹೆಚ್ಚಿನ ಲಾಭ ದೊರೆಯಲಿಲ್ಲ. ಈಗ ಪ್ರತಿಬಾರಿ 50 ಕೆಂದಗುರಿ ತಳಿಯ ಟಗರಿನ ಮರಿಗಳನ್ನು ತಲಾ ₹3,800 ರಿಂದ ₹4,200ಕ್ಕೆ ಒಂದರಂತೆ ಕೊಪ್ಪಳ ಜಿಲ್ಲೆಯ ಕುಂಕುಮಪಾಳ್ಯದಿಂದ ತಂದು ಶೆಡ್‍ನಲ್ಲಿ ಸಾಕಾಣಿಕೆ ಮಾಡುತ್ತಿರುವೆ. ಆರು ತಿಂಗಳು ಸಾಕಾಣಿಕೆ ಮಾಡಿ ತಲಾ ₹8 ರಿಂದ ₹8.50 ಸಾವಿರಕ್ಕೆ ಒಂದರಂತೆ ಮಾರಾಟ ಮಾಡುತ್ತಿರುವೆ’ ಎಂದರು.

ADVERTISEMENT

ಟಗರಿಗೆ ಬೇಕಾದ ಮೇವು ಅವರ ಅಡಿಕೆ ತೋಟದಲ್ಲಿಯೇ ಬೆಳೆಯುತ್ತಾರೆ. ಮೇವು ಕತ್ತರಿಸುವ ಯಂತ್ರವನ್ನು ಕೃಷಿ ಇಲಾಖೆಯಲ್ಲಿ ಸಬ್ಸಿಡಿಯಲ್ಲಿ ಖರೀದಿಸಿದ್ದಾರೆ. ಒಣ ರಾಗಿ, ಹುಲ್ಲು, ಶೇಂಗಾ ಮತ್ತು ಕಡ್ಲಿ ಹೊಟ್ಟು, ಸಜ್ಜೆ, ಮೆಕ್ಕೆಜೋಳದ ಹಿಂಡಿ ಸಹ ಕೊಡುತ್ತಾರೆ. ದಿನಕ್ಕೆ ನಾಲ್ಕು ಸಲ ಆಹಾರ ಕೊಡುತ್ತಾರೆ.

ಟಗರುಗಳಿಂದ ವರ್ಷಕ್ಕೆ 4 ರಿಂದ 5 ಟ್ರ್ಯಾಕ್ಟರ್ ಗೊಬ್ಬರ ಬರುತ್ತದೆ. ಅದನ್ನು ಅವರ ಹೊಲಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ಪತ್ನಿ ಸುಧಾ ಕೂಡ ನೆರವಾಗುತ್ತಿದ್ದಾರೆ. ಟಗರುಗಳನ್ನು ಉತ್ತಮವಾಗಿ ಪೋಷಣೆ ಮಾಡುತ್ತಿರುವುದರಿಂದ ಜನ ಅವರ ಬಳಿಯೇ ಬಂದು ಖರೀದಿಸುತ್ತಿದ್ದಾರೆ.

ಒಂದುವರೆ ಎಕರೆಯಲ್ಲಿ ಟಗರು ಸಾಕುತ್ತಿರುವ ಯರಿಸ್ವಾಮಿಯವರು, ಅದರ ಮಗ್ಗುಲಲ್ಲಿ ಜವಾರಿ ಕೋಳಿ ಸಾಕಾಣಿಕೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಶೆಡ್‌ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.