ADVERTISEMENT

PV Web Exclusive: ಭವಿಷ್ಯದ ಬೆಲೆ ಸ್ಥಿರತೆಗೆ ಅಡಿಕೆ ಕ್ಷೇತ್ರ ವಿಸ್ತರಣೆಯ ಸವಾಲು

ಚಂದ್ರಹಾಸ ಹಿರೇಮಳಲಿ
Published 27 ನವೆಂಬರ್ 2020, 8:14 IST
Last Updated 27 ನವೆಂಬರ್ 2020, 8:14 IST
ಅಡಿಕೆ ತೋಟ
ಅಡಿಕೆ ತೋಟ   

ಶಿವಮೊಗ್ಗ: ದಶಕದ ಹಿಂದೆ ಸೀಮಿತ ಪ್ರದೇಶಗಳಲ್ಲಷ್ಟೇ ಬೆಳೆಯುತ್ತಿದ್ದ ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆಯನ್ನು ದಶಕದಿಂದ ಈಚೆಗೆ ವಾಣಿಜ್ಯ ಬೆಳೆಯಾಗಿ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಪ್ರತಿ ವರ್ಷವೂ ಬೆಳೆ ಕ್ಷೇತ್ರ ಗಣನೀಯವಾಗಿ ಏರಿಕೆಯಾಗುತ್ತಿರುವುದು ಭವಿಷ್ಯದ ಬೆಲೆ ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನೂ ಸೃಷ್ಟಿಸಿದೆ.

ಐದು ವರ್ಷಗಳ ಹಿಂದೆ ಅಡಿಕೆ ಧಾರಣೆ ಕ್ವಿಂಟಲ್‌ಗೆ ₹ 1 ಲಕ್ಷದ ಗಡಿ ಮುಟ್ಟಿ, ಇಳಿಕೆ ಕಂಡ ನಂತರ ಅಡಿಕೆ ಬೆಳೆ ಕ್ಷೇತ್ರ ಗಣನೀಯವಾಗಿ ಹೆಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 26 ಸಾವಿರ ಹೆಕ್ಟೇರ್ ಇದ್ದದ್ದು ಇಂದು 80 ಸಾವಿರ ಹೆಕ್ಟೇರ್ ದಾಟಿದೆ. ದಟ್ಟ ಅರಣ್ಯ ಪ್ರದೇಶಗಳ ಮಧ್ಯದಲ್ಲೂ ಹೊಸ ಅಡಿಕೆ ಮರಗಳು ತಲೆಎತ್ತಿವೆ. ಜಲಮೂಲಗಳೇ ಇಲ್ಲದ ಗುಡ್ಡಗಳಲ್ಲೂ ಅಂತರ್ಜಲದ ಮೇಲೆ ಅವಲಂಬಿತವಾಗಿ ಅಡಿಕೆ ಸಸಿಗಳನ್ನು ಬೆಳೆಸಲಾಗಿದೆ. ನೆರೆಯ ದಾವಣಗೆರೆ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ ಅಡಿಕೆ ಪ್ರದೇಶವಿದೆ. ಚನ್ನಗಿರಿ ತಾಲ್ಲೂಕಿನಲ್ಲೇ 40 ಸಾವಿರ ಹೆಕ್ಟೇರ್ ಕ್ಷೇತ್ರವಿದೆ. ಈ ಭಾಗದ ಬಹುತೇಕ ತೋಟಗಳು ಕೊಳವೆಬಾವಿಯ ಅಂತರ್ಜಲ ಅವಲಂಬಿಸಿವೆ.

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ. ನಾಲ್ಕು ಜಿಲ್ಲೆಗಳ 95 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಶಿವಮೊಗ್ಗ 10 ಸಾವಿರ, ದಾವಣಗೆರೆ 60 ಸಾವಿರ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 5 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶ. ಅಚ್ಚುಕಟ್ಟು ವ್ಯಾಪ್ತಿಯ ಅತಿದೊಡ್ಡ ಸೂಳೆಕೆರೆಯ ನೀರು ಬಳಸಿಕೊಂಡು ಪ್ರತಿ ವರ್ಷ 2,800 ಹೆಕ್ಟೇರ್ ಭತ್ತ ಬೆಳೆಯಲಾಗುತ್ತಿತ್ತು. ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ಶಿವಮೊಗ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳ 60,800 ಹೆಕ್ಟೇರ್‌ ಅಚ್ಚುಕಟ್ಟಿನಲ್ಲೂ ಭತ್ತವೇ ಪ್ರಧಾನ ಬೆಳೆಯಾಗಿತ್ತು. ಈಗ ಭತ್ತ ಬೆಳೆಯುತ್ತಿದ್ದ ಶೇ 60ರಷ್ಟು ಗದ್ದೆಗಳಲ್ಲಿ ಅಡಿಕೆ ತೋಟಗಳು ತಲೆಎತ್ತಿವೆ. ಕಳೆದ 10 ವರ್ಷಗಳಲ್ಲಿ 5 ಲಕ್ಷ ಟನ್‌ ಭತ್ತದ ಇಳುವರಿ ಕಡಿಮೆಯಾಗಿದೆ.

ADVERTISEMENT

ಅಡಿಕೆ ಬೆಳೆ ಕ್ಷೇತ್ರ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಭವಿಷ್ಯದಲ್ಲಿ ಧಾರಣೆಯ ಕುಸಿತಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಅಡಿಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು, ಕೆಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧ, ವಿದೇಶಿ ಅಡಿಕೆ ಕಳ್ಳ ಸಾಗಣೆ ಮತ್ತಿತರ ಕಾರಣಗಳಿಂದ ಧಾರಣೆ ಹಲವು ಬಾರಿ ಕುಸಿತ ಕಂಡಿದೆ. 2010ರವರೆಗೂ ಕ್ವಿಂಟಲ್‌ಗೆ ₹ 10 ಸಾವಿರದಿಂದ ₹ 15 ಸಾವಿರದ ಆಸುಪಾಸು ಇತ್ತು. 2014–15ರಲ್ಲಿ ಅದು ₹ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ನಂತರ ಮತ್ತೆ ಕುಸಿದತ್ತ ಸಾಗಿತ್ತು. ಆರು ತಿಂಗಳಿಂದ ಈಚೆಗೆ ಕ್ವಿಂಟಲ್‌ಗೆ ₹ 40 ಸಾವಿರ ತಲುಪಿ ಸ್ಥಿರತೆ ಕಂಡಿದೆ. ಅಡಿಕೆ ಬೆಳೆ ಕ್ಷೇತ್ರ ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಮತ್ತೆ ಧಾರಣೆ ಕುಸಿಯುವ ಆತಂಕ ಬೆಳೆಗಾರರಲ್ಲಿ ಮನೆ ಮಾಡಿದೆ. ಜತೆಗೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಅಡಿಕೆ ಅನಿವಾರ್ಯ ಎನ್ನುವ ನಂಬಿಕೆಗೆ ರೈತರು ಒತ್ತು ನೀಡುತ್ತಿದ್ದಾರೆ.

‘ಅಡಿಕೆಗೆ ಗುಟ್ಕಾ, ಪಾನ್‌ ಮಸಾಲ ಬಿಟ್ಟರೆ ದೊಡ್ಡ ಮಾರುಕಟ್ಟೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಉತ್ಪಾದನೆ, ಬಳಕೆ ಸಮ ಪ್ರಮಾಣದಲ್ಲಿದೆ. ಪರ್ಯಾಯ ಬಳಕೆಯ ಸಂಶೋಧನೆಗಳು ಸಫಲವಾಗಿಲ್ಲ. ಪರ್ಯಾಯ ಮಾರ್ಗ ಕಂಡುಕೊಳ್ಳದೇ ಹೋದರೆ ವೆನಿಲಾ, ತಾಳೆ, ರಬ್ಬರ್‌ ಮತ್ತಿತರ ಬೆಳೆಗಳ ಸ್ಥಿತಿ ಅಡಿಕೆಗೂ ಬರಲಿದೆ’ ಎಂದು ಎಚ್ಚರಿಸುತ್ತಾರೆ ಅಡಿಕೆ ಬೆಳೆಗಾರ ರುದ್ರಸ್ವಾಮಿ.

‘ಅಡಿಕೆ ಕ್ಷೇತ್ರ ವಿಸ್ತಾರವಾದರೆ ಬೆಲೆ ಕುಸಿಯುತ್ತದೆ ಎನ್ನುವ ತರ್ಕ ನಿಜ. ಆದರೆ, ಭತ್ತದ ಬೆಳೆ ನಂಬಿಕೊಂಡು ಹಲವು ದಶಕಗಳು ದುಡಿದಿದ್ದೇವೆ. ಪ್ರತಿ ಬಾರಿಯೂ ಭತ್ತಕ್ಕೆ ಮಾಡಿದ ವೆಚ್ಚವೂ ಸಿಗುವುದಿಲ್ಲ. ಭತ್ತಕ್ಕೆ ಕ್ವಿಂಟಲ್‌ಗೆ ಸರಾಸರಿ ₹ 2 ಸಾವಿರವೂ ಸಿಗುವುದಿಲ್ಲ. ಅದೇ ಅಡಿಕೆಯಲ್ಲಿ ಸ್ವಲ್ಪ ಲಾಭವಾದರೂ ಕಾಣಬಹುದು. ಈಗಾಗಲೇ ತೋಟ ಮಾಡಿದವರು ಕ್ಷೇತ್ರ ವಿಸ್ತರಣೆ ಅಪಾಯ ಎನ್ನುತ್ತಾರೆ. ಹಾಗಾದರೆ ಉಳಿದ ರೈತರು ಆರ್ಥಿಕವಾಗಿ ಸಬಲರಾಗುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ರೈತ ನಿರಂಜನಮೂರ್ತಿ.

ಸುಳಿರೋಗ, ಕೊಳೆ ರೋಗ, ಬೆಂಕಿ ರೋಗ ಮತ್ತಿತರ ಸಮಸ್ಯೆಗಳಿಂದ ಅಡಿಕೆ ಮರಗಳ ಆಯುಸ್ಸು ಕಡಿಮೆಯಾಗಿದೆ. ಸಂಪೂರ್ಣ ಫಸಲು ನೀಡಲು 8 ವರ್ಷ ಕಾಯಬೇಕು. ನಂತರ ರೋಗಗಳಿಂದ 25 ವರ್ಷವೂ ಮರಗಳು ಬಾಳುವುದಿಲ್ಲ. ಹಾಗಾಗಿ, ಕ್ಷೇತ್ರ ವಿಸ್ತರಣೆಯಾದಂತೆ ಹಳೆಯ ತೋಟಗಳು ಅವನತಿಯತ್ತ ಸಾಗುತ್ತಿವೆ. ಇದರಿಂದ ಒಟ್ಟಾರೆ ಇಳುವರಿ ಅಷ್ಟೇ ಇದೆ. ಬೆಲೆ ಸ್ಥಿರತೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಇನ್ನಷ್ಟು ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ರೈತರ ಬದುಕು ಹಸನಾಗುತ್ತದೆ’ ಎನ್ನುತ್ತಾರೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡ ವೈ.ಜಿ.ಮಲ್ಲಿಕಾರ್ಜುನ ಯಲವಟ್ಟಿ.

ಕೇಂದ್ರ ಸರ್ಕಾರ ಒಂದು ಕ್ವಿಂಟಲ್ ವಿದೇಶಿ ಅಡಿಕೆಗೆ ₹ 25,100 ಕನಿಷ್ಠ ಬೆಲೆ ನಿಗದಿ ಮಾಡಿತ್ತು.ಆದರೂ, ಕಳ್ಳ ಸಾಗಣೆ ಮೂಲಕ ಸಾಕಷ್ಟು ಅಡಿಕೆ ತರಲಾಗುತ್ತಿತ್ತು. ಕೆಲವು ವರ್ತಕರು ಸಾರ್ಕ್‌ ಒಪ್ಪಂದದ ಅನ್ವಯ ಇದ್ದ ಅವಕಾಶ ಪಡೆದು ₹ 15 ಸಾವಿರಕ್ಕೆ ಒಂದು ಕ್ವಿಂಟಲ್‌ ಅಡಿಕೆ ಸಿಗುವ ವಿದೇಶಿ ಅಡಿಕೆಯನ್ನು ಶ್ರೀಲಂಕಾ ಮೂಲಕ ಆಮದು ಮಾಡಿಕೊಳ್ಳುತ್ತಿದ್ದರು. ನಂತರ ಸ್ಥಳೀಯ ಕೆಂಪಡಿಕೆ ಜತೆ ಮಿಶ್ರಣ ಮಾಡಿ ಗುಟ್ಕಾ, ಪಾನ್‌ ಮಸಾಲ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದರು. ಇದು ದೇಸಿ ಅಡಿಕೆ ಧಾರಣೆ ಕುಸಿಯಲು ಪ್ರಮುಖ ಕಾರಣ. ಆಗ್ನೇಯ ಏಷ್ಯಾದ 16 ದೇಶಗಳ ಮಧ್ಯೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ಒಪ್ಪಂದಕ್ಕೆ ಭಾರತ ಸಹಿ ಹಾಕುತ್ತದೆ ಎಂಬ ಸುದ್ದಿ ಹಬ್ಬಿದಾಗಲೂ ಅಡಿಕೆ ಮಾರುಕಟ್ಟೆ ತಲ್ಲಣಗೊಂಡಿತ್ತು. ಮೊದಲು ಹೊರಗಿನ ಅಡಿಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಸ್ಥಳೀಯ ಬೆಳೆಗಾರರು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.

ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 60ರಷ್ಟಿದೆ. ರಾಜ್ಯದಲ್ಲಿ ಪ್ರತಿ ವರ್ಷ 5 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಕೇರಳದಲ್ಲಿ 30–50 ಸಾವಿರ ಟನ್‌, ಗೋವಾದಲ್ಲಿ 6–8 ಸಾವಿರ ಟನ್‌, ಅಸ್ಸಾಂನಲ್ಲಿ 20–25 ಸಾವಿರ ಟನ್‌ ಹಾಗೂ ಮಹಾರಾಷ್ಟ್ರ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಅಡಿಕೆ ಬೆಳೆಯಲಾಗುತ್ತದೆ.

ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲೇ ಬೆಳೆಯಲಾಗುತ್ತದೆ. ಮಲೆನಾಡಿನ ಕೆಂಪಡಿಕೆ ಗುಣಮಟ್ಟಕ್ಕೆ ಹೆಸರಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.