ADVERTISEMENT

ಅಡಿಕೆ ಬೆಳೆಗಾರರ ಕಡೆಗಣನೆ ಆರೋಪ: ಕೇಂದ್ರ, ರಾಜ್ಯದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 9:42 IST
Last Updated 6 ಮಾರ್ಚ್ 2021, 9:42 IST
ಅಡಕೆ ಒಣಗಿಸುತ್ತಿರುವ ರೈತ (ಸಂಗ್ರಹ ಚಿತ್ರ- ಪ್ರಜಾವಾಣಿ ಚಿತ್ರ )
ಅಡಕೆ ಒಣಗಿಸುತ್ತಿರುವ ರೈತ (ಸಂಗ್ರಹ ಚಿತ್ರ- ಪ್ರಜಾವಾಣಿ ಚಿತ್ರ )   

ಶಿವಮೊಗ್ಗ: ಕೇಂದ್ರ, ರಾಜ್ಯ ಸರ್ಕಾರಗಳು ಅಡಿಕೆ ಬೆಳೆಗಾರರನ್ನು ಕಡೆಗಣಿಸುತ್ತಿವೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಆರೋಪಿಸಿದರು.

2020–2021ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ಅಡಿಕೆ ಬೆಳೆ ಕೈಬಿಟ್ಟಿದೆ. ಇದು ಭವಿಷ್ಯದಲ್ಲಿ ಅಡಿಕೆ ನಿಷೇಧಕ್ಕೆ ಒಳಗಾಗುವ ಸೂಚನೆ ಎಂದು ಆತಂಕ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. 2ನೇ ಬಾರಿಗೆ ಅಧಿಕಾರಕ್ಕೆ ಬಂದರೂ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. 7 ವರ್ಷಗಳಿಂದ ಕೇಂದ್ರದಲ್ಲಿ ಬೆಳೆಗಾರರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಚುನಾವಣೆ ನಂತರ ಉದಾಸೀನ ಧೋರಣೆ ತಾಳಿದೆ ಎಂದು ದೂರಿದರು.

ADVERTISEMENT

2014ರಲ್ಲಿ ನರೇಂದ್ರ ಮೋದಿ ಅವರು ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಅಡಿಕೆಗೆ ಗೌರವ ತಂದುಕೊಡಲಾಗುವುದು, ಅಡಿಕೆ ಬೆಳೆಗಾರರು ಹಿತ ಕಾಪಾಡಲಾಗುವುದು ಎಂದು ಭರವಸೆ ನೀಡಿದ್ದರು. 2017–18ರ ಸಂಸತ್ ಅಧಿವೇಶನದಲ್ಲಿ ಆರೋಗ್ಯ ಸಚಿವರು ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್ ಬರುತ್ತದೆ ಎಂದು ಹೇಳಿಕೆ ನೀಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಇದುವರೆಗೂ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿಲ್ಲ. ಹೊಸ ತಜ್ಞರ ಸಮಿತಿ ನೇಮಕ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಅಡಿಕೆ ಬೆಳೆಗಾರರನ್ನು ನೆನಪಿಸಿಕೊಳ್ಳುತ್ತದೆ. ರಾಜ್ಯದ 10 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದರೂ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ಸೇರಿಸಿಲ್ಲ. ರಾಜ್ಯದ ಅಡಿಕೆ ಕಾರ್ಯಪಡೆಯೂ ನಾಮಕಾವಾಸ್ತೆ ಎನ್ನುವಂತಿದೆ. ರಾಜ್ಯದ ಸಂಸದರು ಬಜೆಟ್ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರಾದ ಇಕ್ಕೇರಿ ರಮೇಶ್, ಹೊಳೆಮಡಿಲು ವೆಂಕಟೇಶ್, ಡಿ.ಸಿ.ನಿರಂಜನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.